ರಾಗಿಣಿ ಎಂಬ ಹೆಸರು ಕೇಳಿದಾಕ್ಷಣವೇ ಆಕೆ ನಟಿಸಿರುವ ಒಂದಷ್ಟು ಪಾತ್ರಗಳು ಕಣ್ಣ ಮುಂದೆ ಬರುವ ಕಾಲವೊಂದಿತ್ತು. ಆದರೆ ಯಾವಾಗ ಕೊರೋನಾ ಕಾಲಘಟ್ಟ ಆರಂಭವಾಯ್ತೋ, ಅಲ್ಲಿಂದೀಚೆಗೆ ಆಕೆಯ ಇಮೇಜು ಪಟ್ಟಂಪೂರಾ ಬದಲಾಗಿ ಬಿಟ್ಟಿದೆ. ಅದು ಡ್ರಗ್ಸ್ ಕೇಸಲ್ಲಿ ರಾಗಿಣಿ ತಗುಲಿಕೊಂಡು ಜೈಲು ಪಾಲಾಗಿದ್ದರ ಪರಿಣಾಮ. ಅ ನಂತರದಲ್ಲಿ ರಾಗಿಣಿಯ ಒಂದೊಂದೇ ಕಲ್ಯಾಣ ಗುಣಗಳು ಜಾಹೀರಾಗಿ, ಅಭಿಮಾನದ ಜಾಗವನ್ನು ಅನುಮಾನ ಆವರಿಸಿಕೊಂಡಿತ್ತು. ಪೊಲೀಸ್, ಕೇಸು, ವಿಚಾರಣೆ ಅಂತೆಲ್ಲ ಬೇರೆಯದ್ದೇ ಲೋಕದಲ್ಲಿದ್ದ ಆಕೆಯೀಗ ಮತ್ತೆ ನಟನೆಗೆ ಮರಳಿದ್ದಾಳೆ.
ಈಗಾಗಲೇ ರಾಗಿಣಿ ಕಿಕ್ ಎಂಬೊಂದು ಕನ್ನಡ ಚಿತ್ರ ಮತ್ತು ತಮಿಳಿನ ಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಳೆ. ಅದಾಗಲೇ ಆಕೆ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಈ ಬಗೆಗಿನ ಒಂದಷ್ಟು ವಿವರಗಳೂ ಕೂಡಾ ಜಾಹೀರಾಗಿವೆ. ಅದರನ್ವಯ ಹೇಳೋದಾದರೆ, ಆ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಈಗ ಶಂಭೋ ಶಿವ ಶಂಕರ ಎಂಬ ಚಿತ್ರ ನಿರ್ದೇಶನ ಮಾಡಿರೋ ಶಂಕರ್ ಕೋನಮಾನಹಳ್ಳಿ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಈ ತಿಂಗಳಿನಿಂದಲೇ ಸದರಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇದರ ಕಥೆ ಎಂಥಾದ್ದು? ರಾಗಿಣಿಯ ಪಾತ್ರ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲಿಯೇ ಉತ್ತರ ಸಿಗಲಿದೆ. ಆದರೆ ರಾಗಿಣಿಯಂತೂ ಬಲು ಖುಷಿಯಿಂದ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾಳೆ. ಅತ್ತ ಡ್ರಗ್ಸ್ ಕೇಸಿನ ತೂಗುಗತ್ತಿ ಲಂಬೂ ರಾಗಿಣಿಯ ನೆತ್ತಿ ಮೇಲೆ ತೂಗುತ್ತಿದೆ. ಆಕೆಯ ಗೆಣೆಕಾರನೇ ಡ್ರಗ್ ಕೇಸಿನಲ್ಲಿ ಬಂಧಿಯಾಗಿದ್ದಾನೆ. ಇಷ್ಟೆಲ್ಲ ಕಂಟಕಗಳ ನಡುವೆಯೂ ರಾಗಿಣಿ ಬಣ್ಣ ಹಚ್ಚುತ್ತಿದ್ದಾಳೆ.