ಕಡಲ ತೀರದ ಭಾರ್ಗವ ಚಿತ್ರ ತೆರೆಗಾಣಲು ಕ್ಷಣಗಣನೆ ಆರಂಭವಾಗಿದೆ. ಒಂದಿಡೀ ಚಿತ್ರತಂಡದ ಪರಿಶ್ರಮ ಸಾರ್ಥಕಗೊಳ್ಳುವ ಘಳಿಗೆಯೂ ಹತ್ತಿರಾಗುತ್ತಿದೆ. ಈ ಹೊತ್ತಿನಲ್ಲಿ ಕಡಲ ತೀರದ ಭಾರ್ಗವನ ಒಡಲಲ್ಲಿರಬಹುದಾದ ಕಥೆಗಳು, ಆ ಬಿಂದುವಿನಿಂದ ಗರಿಗೆದರಿಕೊಳ್ಳಲಿರೋ ಪಾತ್ರಗಳ ಸುತ್ತಾ ಒಂದಷ್ಟು ಚರ್ಚೆಗಳಾಗುತ್ತಿವೆ. ಐದು ಬಹುಮುಖ್ಯ ಪಾತ್ರಗಳ ಸುತ್ತ ಸುತ್ತುವ, ರೋಚಕ ತಿರುವುಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ರಂಗಭೂಮಿಯಲ್ಲಿ ಹದಗೊಂಡಿರುವ ಅಪರೂಪದ ಪ್ರತಿಭೆ ರಾಘವ್ ನಾಗರಾಜ್ ಕೂಡಾ ಒಂದು ಪಾತ್ರವಾಗಿದ್ದಾರೆ. ಆ ಪಾತ್ರವೇ ತನ್ನ ವೃತ್ತಿ ಬದುಕಿಗೆ ಹೊಸಾ ದಿಕ್ಕು ತೋರಲಿದೆಯೆಂಬಂಥಾ ಗಾಢ ನಂಬುಗೆಯೂ ಅವರಲ್ಲಿದೆ.
ಇದು ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈಗಾಗಲೇ ಟೀಸರ್, ಟ್ರೈಲರ್ ಮೂಲಕ ಇದರ ಕಸುವೇನೆಂಬುದರ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಅದರ ಮೂಲಕವೇ ಒಂದಷ್ಟು ಪಾತ್ರಗಳ ಚಹರೆಗಳೂ ಗೋಚರಿಸಿವೆ. ಅದರಲ್ಲಿ ರಾಘವ್ ನಾಗರಾಜ್ ನಟಿಸಿರುವ ಪಾತ್ರವೂ ಸೇರಿಕೊಂಡಿದೆ. ಈಗಾಗಲೇ ಹಲವಾರು ಸೀರಿಯಲ್ಲುಗಳಲ್ಲಿ ನಟಿಸಿ, ನಾಯಕರಾಗಿಯೂ ನೆಲೆ ಕಂಡುಕೊಳ್ಳುವ ಸನ್ನಾಹದಲ್ಲಿರುವವರು ರಾಘವ್. ಸಾಮಾನ್ಯವಾಗಿ, ರಂಗಭೂಮಿಯ ಹಿನ್ನೆಲೆಯಿಂದ ಬಂದವರಿಗೆ ಎಂಥಾ ಪಾತ್ರವನ್ನಾದರೂ ಆವಾಹಿಸಿಕೊಳ್ಳುವ ಸಾಮಥ್ರ್ಯ ದಕ್ಕಿರುತ್ತದೆಂಬ ನಂಬಿಕೆ ಇದೆ. ಅಂಥಾ ರಂಗಭೂಮಿಯ ಸಾಹಚರ್ಯವನ್ನೇ ತನ್ನ ನಟನೆಯ ಶಕ್ತಿಯಾಗಿಸಿಕೊಂಡವರು ರಾಘವ್ ನಾಗರಾಜ್!
ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕವನ್ನೊಳಗೊಂಡಿರುವ ಚಿತ್ರ. ನಿಮಗೆಲ್ಲ ಗೊತ್ತಿಲ್ಲದಿರುವಂಥಾದ್ದೇನಲ್ಲ; ಈ ಮನಸಿಗೆ ಸಂಬಂಧಿಸಿದ ವ್ಯಾಧಿಗಳು ಅಕ್ಷರಶಃ ಸಮುದ್ರವಿದ್ದಂತೆ. ಅಂಥಾ ಸಮುದ್ರದಾಳಕ್ಕೆ ಇಳಿದು, ಎಲ್ಲರಿಗೂ ಹೊಸತೆನ್ನಿಸುವ ಅಚ್ಚರಿಗಳೊಂದಿಗೆ ನಿರ್ದೇಶಕರು ಈ ಸಿನಿಮಾದ ಕಥೆ ಹೆಣೆದಿದ್ದಾರೆ. ಹಾಗಿರುವಾಗ, ಅದರ ಪಾತ್ರಗಳೂ ಕೂಡಾ ವಿಶೇಷವಾಗಿರದಿರಲು ಸಾಧ್ಯವೇ? ರಾಘವ್ ನಿರ್ವಹಿಸುವ ಪಾತ್ರವೂ ನಾನಾ ಶೇಡುಗಳನ್ನು, ನಿಗೂಢಗಳನ್ನು ಒಂದಿದೆಯಂತೆ. ಪ್ರತೀ ಪಾತ್ರಗಳೂ ಸವಾಲಿನದ್ದಾಗಿರಬೇಕೆಂಬ ಇಂಗಿತವೊಂದು ರಾಘವ್ರೊಳಗಿತ್ತಲ್ಲಾ? ಅದಕ್ಕೆ ಸಿಕ್ಕಿದ ವರದಂಥಾ ಅಂಶಗಳನ್ನು ಸದರಿ ಪಾತ್ರ ಒಳಗೊಂಡಿದೆಯಂತೆ. ಮೂರು ಭಿನ್ನ ಶೇಡುಗಳ ಈ ಪಾತ್ರವನ್ನು ಜೀವಿಸಿ ನಟಿಸಿದ ಆತ್ಮತೃಪ್ತಿ ರಾಘವ್ರಲ್ಲಿದೆ.
ಹೀಗೆ ಕಡಲ ತೀರದ ಭಾರ್ಗವನ ಭಾಗವಾಗಿರುವ ರಾಘವ್ ನಾಗರಾಜ್ ಮೂಲತಃ ಮಲೆನಾಡಿನ ಹೆಬ್ಬಾಗಿಲಿನಂಥಾ ಶಿವಮೊಗ್ಗೆಯ ಆಯನೂರಿನವರು. ಅಲ್ಲಿ ಹುಟ್ಟಿ ಬೆಂಗಳೂರಿನೇ ಬೆಳೆದಿದ್ದರೂ ಊರ ಕಡೆಗಿನ ನಂಟನ್ನು ಇನ್ನೂ ಕಾಪಿಟ್ಟುಕೊಂಡಿರುವವರು. ಶಾಲಾ ಕಾಲೇಜು ದಿನಗಳಲ್ಲಿಯೇ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಮುಂದಿದ್ದ ರಾಘವ್, ತಾವೇ ಬರೆದು, ನಿರ್ದೇಶನ ಮಾಡಿ ನಾನಾ ನಾಟಕಗಳಲ್ಲಿ ಅಭಿನಯಿಸುತ್ತಾ ಸಹಪಾಠಿಗಳ ನಡುವೆ ಶೈನಪ್ ಆಗಿದ್ದರು. ಹಾಗೆ ಸಾಗಿ ಬಂದು, ಓದು ಮುಗಿಸುವ ಹೊತ್ತಿಗೆಲ್ಲ ನಟನಾಗಬೇಕೆಂಬ ಗುರಿಯನ್ನೇ ನೆಚ್ಚಿಕೊಂಡಿದ್ದರು. ಹಾಗೊಂದು ಅಚಲ ನಿರ್ಧಾರ ತಳೆದ ಬಳಿಕ ಅವರಿಗೆ ಸಿಕ್ಕಿದ್ದು ರಂಗಭೂಮಿಯ ನಂಟು.
ರಂಗ ದೇಗುಲ, ನಾಟಕ ಮನೆ ಮುಂತಾದ ತಂಡಗಳಲ್ಲಿ ಸಕ್ರಿಯರಾಗಿದ್ದ ರಾಘವ್, ನಟನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪಳಗಿಕೊಂಡಿದ್ದರು. ಆ ನಂತರ ಶುರುವಾದದ್ದು ಅವಕಾಶಗಳ ಬೇಟೆ. ಈ ಹಾದಿಯಲ್ಲಿ ಸಾಕಷ್ಟು ಕಷ್ಟ, ನಿರಾಸೆಗಳನ್ನು ಕಂಡುಂಡರೂ ಕೂಡಾ, ನಟನೆಯ ಶಕ್ತಿ ಎಂಬುದು ಅವರ ಕೈ ಹಿಡಿದಿತ್ತು. ಅದರ ಫಲವಾಗಿಯೇ ಮಾಸ್ಟರ್ ಆನಂದ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಎಸ್ಎಸ್ಎಲ್ಸಿ ನನ್ಮಕ್ಳು ಎಂಬ ಧಾರಾವಾಹಿಯ ಪುಟ್ಟ ಪಾತ್ರವೊಂದು ಅವರಿಗೆ ಸಿಕ್ಕಿತ್ತು. ಅದರಲ್ಲಿಯೇ ಚೆಂದಗೆ ನಟಿಸುತ್ತಾ, ಗಮನ ಸೆಳೆಯುತ್ತಾ ಮುಂದುವರೆದಿದ್ದ ರಾಘವ್ ಏನಿಲ್ಲವೆಂದರೂ ಮೂವತ್ತಕ್ಕೂ ಹೆಚ್ಚ ಧಾರಾವಾಹಿಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.
ಧಾರಾವಾಹಿಯ ನಟನೆಯ ಯಾನವನ್ನೂ ಕೂಡಾ, ನಾಯಕನಾಗೋ ಹಾದಿಯ ಪಯಣವನ್ನಾಗಿ ಪರಿಗಣಿಸಿದ್ದ ರಾಘವ್, ಆ ನಂತರ ನಾಯಕ ನಟನಾಗುವ ನಿಟ್ಟಿನಲ್ಲಿ ನಿರ್ಣಾಯಕವಾಗಿ ಪ್ರಯತ್ನಿಸಲಾರಂಭಿಸಿದ್ದರು. ಕಡೆಗೂ ಶ್ರೀನಾಥ್ ವಸಿಷ್ಟ ನಿರ್ದೇಶನದ ಮಂಥನ ಎಂಬ ಚಿತ್ರದಲ್ಲಿ ನಾಯಕನ ಗೆಳೆಯನ ಪಾತ್ರ ಸಿಕ್ಕಿತ್ತು. ಆ ಚಿತ್ರದಲ್ಲಿ ದಿಲೀಪ್ ರಾಜ್ ನಾಯಕನಾಗಿ ನಟಿಸಿದ್ದರು. ಅದಾದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಕೂಲ್ ಚಿತ್ರದಲ್ಲಿ ಪುಟ್ಟದೊಂದು ಪಾತ್ರ ಸಿಕ್ಕಿತ್ತು. ಪ್ರಜ್ವಲ್ ದೇವರಾಜ್ ನಟನೆಯ ಗೋಕುಲ ಕೃಷ್ಟ, ಭದ್ರ ಮುಂತಾದ ಚಿತ್ರಗಳಲ್ಲಿ ಒಂದಷ್ಟು ಪ್ರಾಧಾನ್ಯತೆ ಇರುವ ಪಾತ್ರಗಳೂ ರಾಘವ್ಗೆ ಸಿಕ್ಕಿದ್ದವು.
ನಂತರ ಗೂಳಿಹಟ್ಟಿ ಎಂಬ ಚಿತ್ರದ ಐದು ಮಂದಿ ನಾಯಕರಲ್ಲೊಬ್ಬರಾಗಿ ರಾಘವ್ ನಟಿಸಿದ್ದರು. ಡಯಾನಾ ಹೌಸ್ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿದ್ದ ರಾಘವ್, ತರುವಾಯಹಫ್ತಾ ಚಿತ್ರದಲ್ಲಿಯೂ ನಾಯಕರಲ್ಲೊಬ್ಬರಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೀಗ ಐಯಾಮ್ ಪ್ರೆಗ್ನೆಂಟ್ ಎಂಬ ಚಿತ್ರದಲ್ಲಿಯೂ ರಾಘವ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ನಡುವೆ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು, ನಾಯಕನಾಗಿ ನಟಿಸುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣವೀಗ ಚಾಲ್ತಿಯಲ್ಲಿದೆ. ಇದೆಲ್ಲದರಾಚೆಗೆ ಕಡಲ ತೀರದ ಭಾರ್ಗವ ರಾಘವ್ ಬದುಕಿನ ಬಹುಮುಖ್ಯ ಚಿತ್ರ. ಅದು ಗೆಲಲುವ ಮೂಲಕ ರಾಘವ್ ಅವರಿಗೂ ಗೆಲುವಾಗಲೆಂಬುದು ಹಾರೈಕೆ!