ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಇದೇ ೧೫ರಂದು ಬಿಡುಗಡೆಗೊಳ್ಳಲಿದೆ. ಯುಎಫ್ಒ ಮೂಲಕ ದೇಶಾದ್ಯಂತ ತಲುಪಿಕೊಳ್ಳಲಿದೆ. ಯಾವುದೇ ಒಂದು ಚಿತ್ರ ಎರಡ್ಮೂರು ವರ್ಷಗಳ ಸುದೀರ್ಘಾವಧಿಯಲ್ಲಿ ಕುತೂಹಲವನ್ನು ಕಾಪಿಟ್ಟುಕೊಂಡು ಸಾಗೋದು ನಿಜಕ್ಕೂ ಸಾಹಸ. ಅದಕ್ಕೆ ಗಟ್ಟಿಯಾದ ಕಂಟೆಂಟು ಮತ್ತು ಹಂತ ಹಂತವಾಗಿ ಅದನ್ನು ಪ್ರೇಕ್ಷಕರಿಗೆ ದಾಟಿಸುವ ಜಾಣ್ಮೆ ಇರಬೇಕಾಗುತ್ತದೆ. ನಿರ್ದೇಶಕ ವಿಲೋಕ್ ಶೆಟ್ಟಿಗೆ ಆ ಕಲೆ ಸಿದ್ಧಿಸಿದೆ. ಅದಿಲ್ಲದೇ ಹೋಗಿದ್ದರೆ, ಕೊರೋನಾ ಕರಿನೆರಳಿನಲ್ಲಿಯೂ ನಿರೀಕ್ಷೆಯನ್ನು ನಿಗಿನಿಗಿಸುವಂತೆ ಕಾಯ್ದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೀಗ ತನ್ನೊಳಗಿನ ಕಥೆ, ತಾರಾಗಣ ಸೇರಿದಂತೆ ನಾನಾ ದಿಕ್ಕಿನಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲಿಯೂ ನಾಯಕಿಯಾಗಿ ನಟಿಸಿರೋ ರಾಧಿಕಾ ನಾರಾಯಣ್ ಪಾತ್ರದ ಸುತ್ತಾ ಹತ್ತಾರು ಪ್ರಶ್ನೆಗಳು ಹರಳುಗಟ್ಟಿಕೊಂಡಿವೆ.
ರಂಗಿತರಂಗ ಚಿತ್ರದ ಗೆಲುವಿನ ಒಡ್ಡೋಲಗದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವವರು ರಾಧಿಕಾ ನಾರಾಯಣ್. ಓರ್ವ ಯಶಸ್ವೀ ನಟಿ ಆಯ್ಕೆಯಲ್ಲಿ ಎಂಥಾ ಗುಣಮಟ್ಟ ಕಾಯ್ದುಕೊಳ್ಳಬೇಕಾಗುತ್ತದೋ ಅದೆಲ್ಲವನ್ನೂ ಮೈಗೂಡಿಸಿಕೊಂಡು ರಾಧಿಕಾ ಮುಂದುವರೆಯುತ್ತಿದ್ದಾರೆ. ಸಂಖ್ಯೆಗಳಿಗಿಂತಲೂ ಗುಣಮಟ್ಟ ಮುಖ್ಯ ಎಂಬ ಧ್ಯೇಯ ರೂಢಿಸಿಕೊಂಡಿರುವ ಅವರು, ಅದರ ನೆರಳಿನಲ್ಲಿಯೇ ಇಷ್ಟಪಟ್ಟು ಚೇಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಾತ್ರ ತನ್ನ ವೃತ್ತಿ ಬದುಕಿನ ಮೈಲಿಗಲ್ಲಾಗುತ್ತದೆ ಎಂಬ ಗಾಢ ನಂಬಿಕೆ ಇಟ್ಟುಕೊಂಡಿರುವ ಅವರು, ಆ ಪಾತ್ರಕ್ಕಾಗಿ ಅಷ್ಟೇ ಕಷ್ಟ ಪಟ್ಟು ತಯಾರಾಗಿದ್ದಾರೆ. ಆ ಬಗೆಗಿನ ಒಂದಷ್ಟು ವಿಚಾರಗಳನ್ನು ರಾಧಿಕಾ ಸಿನಿಶೋಧದೊಂದಿಗೆ ಹಂಚಿಕೊಂಡಿದ್ದಾರೆ.
ಯುವ ನಿರ್ದೇಶಕ ವಿಲೋಕ್ ಶೆಟ್ಟಿ ಆರಂಭಿಕವಾಗಿ ಕಥೆ ಹೇಳಿದಾಗಲೇ ರಾಧಿಕಾ ಥ್ರಿಲ್ ಆಗಿದ್ದರಂತೆ. ಅದರ ಜೊತೆಗೊಂದು ಅಳುಕೂ ಕೂಡಾ ಇದ್ದೇ ಇತ್ತು. ಆ ಪಾತ್ರಕ್ಕಿರೋ ನಾನಾ ಚಹರೆಗಳೇ ಅದಕ್ಕೆ ಕಾರಣ. ಪಾತ್ರವನ್ನು ಒಳಗಿಳಿಸಿಕೊಂಡು, ಸೀದಾ ಬಂದು ಕ್ಯಾಮೆರಾ ಮುಂದೆ ನಿಲ್ಲುವ ಅವಕಾಶ ಖಂಡಿತಾ ಇರಲಿಲ್ಲ. ಈ ಕಾರಣದಿಂದಲೇ ಚಿತ್ರೀಕರಣಕ್ಕೂ ಮುಂಚೆಯೇ ಒಂದಷ್ಟು ವರ್ಕ್ಶಾಪ್ ನಡೆದಿತ್ತು. ಅದರಲ್ಲಿ ಪಾಲ್ಗೊಳ್ಳುವ ಮೂಲಕ ರಾಧಿಕಾ ಆ ಪಾತ್ರದ ಎಲ್ಲಾ ಶೇಡುಗಳನ್ನೂ ಪರಿಣಾಮಕಾರಿಯಾಗಿ ಒಳಗಿಳಿಸಿಕೊಂಡಿದ್ದರು. ಆದರೆ, ತಮ್ಮ ಪಾತ್ರದ ಬಗ್ಗೆ ಸಂಪೂರ್ಣವಾದ ಅಂಶಗಳನ್ನು ಬಿಟ್ಟುಕೊಡೋದಿಲ್ಲ. ಅದರಲ್ಲಿಯೇ ಇಡೀ ಚಿತ್ರದ ನಿಗೂಢ ಅಡಗಿರೋದರಿಂದ ಒಂದಷ್ಟು ಗೌಪ್ಯ ಕಾಪಾಡಿಕೊಳ್ಳುತ್ತಾರೆ.
ಒಂದು ಮಟ್ಟಿಗೆ ಹೇಳೋದಾದರೆ, ರಾಧಿಕಾ ನಾರಾಯಣ್ ಇಲ್ಲಿ ಪೊಲೀಸ್ ಟ್ರೈನಿ ಪಾತ್ರ ನಿರ್ವಹಿಸಿದ್ದಾರೆ. ಈ ಹಂತದಲ್ಲಿ ಎರಡು ಅಪರಿಚಿತ ಕ್ಯಾರೆಕ್ಟರುಗಳು ಮುಖಾಮುಖಿಯಾದಾಗ ಅಲ್ಲೇನೋ ಘಟಿಸುತ್ತದೆ. ಅದಕ್ಕೆ ಹತ್ತಾರು ಪಾತ್ರಗಳು ಸೇರಿಕೊಳ್ಳುತ್ತಾ ನಾನಾ ದಿಕ್ಕಿನತ್ತ ಕಥೆ ಚಲಿಸುತ್ತದೆ. ಈ ಚಲನೆಯಲ್ಲಿ ರಾಧಿಕಾರ ಪಾತ್ರ ನಾನಾ ಪಲ್ಲಟಗಳಿಗೆ ಒಡ್ಡಿಕೊಳ್ಳುತ್ತದೆ. ಅದರಲ್ಲೊಂದಕ್ಕಾಗಿ ಮಾರ್ಷಲ್ ಆರ್ಟ್ಸ್ ಅನ್ನು ಕಲಿಯಬೇಕಾದ ಸಂದರ್ಭವೂ ಅವರಿಗೆ ಒದಗಿ ಬಂದಿತ್ತು. ಹೊಸಾ ಕಲಿಕೆಯತ್ತ ಆಸಕ್ತಿ ಹೊಂದಿರುವ ರಾಧಿಕಾ, ಫೈಟ್ ಮಾಸ್ಟರ್ ಚೇತನ್ ಡಿಸೋಜಾರ ದೇಖಾರೇಖಿಯಲ್ಲಿ ಮಾರ್ಷಲ್ ಆರ್ಟ್ಸ್ ಕಲೆಯನ್ನು ತಕ್ಕ ಮಟ್ಟಿಗೆ ಕಲಿತುಕೊಂಡಿದ್ದರು. ಸಿನಿಮಾ ನೋಡಿದ ಮಂದಿಯೊಳಗೆ ರಾಧಿಕಾ ನಿಜವಾಗಿಯೂ ಮಾರ್ಷಲ್ ಆರ್ಟ್ ಪಟುವೇನೋ ಎಂಬ ಭಾವ ಮೂಡಿಸುವಂತೆ ಆ ಪಾತ್ರ ಮೂಡಿ ಬಂದಿದೆಯೆಂಬ ಭರವಸೆ ರಾಧಿಕಾರಲ್ಲಿದೆ.
ಇದೆಲ್ಲವನ್ನೂ ಆಸ್ಥೆಯಿಂದ ನಿರ್ವಹಿಸಿದ ರಾಧಿಕಾರಿಗೆ ಮತ್ತೊಂದು ಮಹಾನ್ ಸಮಸ್ಯೆ ಎದುರಾಗಿ ಬಿಟ್ಟಿತ್ತಂತೆ. ಅದು ಶ್ವಾನ ಸಂಬಂಧಿ ಸಮಸ್ಯೆ. ಸಾಮಾನ್ಯವಾಗಿ ಬಹುತೇಕರು ಶ್ವಾನ ಪ್ರೇಮಿಗಳಾಗಿರುತ್ತಾರೆ. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಮುದ್ದಾದ ನಾಯಿಗಳ ಮೇಲಿನ ಪ್ರೀತಿ ಒಂದು ಹಿಡಿ ಹೆಚ್ಚೇ ಇರುತ್ತದೆ. ಆದರೆ ಆ ವಿಚಾರದಲ್ಲಿ ರಾಧಿಕಾ ತದ್ವಿರುದ್ಧ. ನಿಜ ಜೀವನದಲ್ಲಿ ನಾಯಿಗಳ ಮೇಲೆ ಪ್ರೀತಿಯಿರೋ ಜಾಗವನ್ನು ಅವರ ಪಾಲಿಗೆ ಭಯ ಆವರಿಸಿಕೊಂಡಿತ್ತಂತೆ. ಅಂಥಾ ರಾಧಿಕಾ ಈ ಸಿನಿಮಾದುದ್ದಕ್ಕೂ ನಾಯಿಯ ಸಾಹಚರ್ಯದಲ್ಲಿರಬೇಕೆಂದಾಗ ಬೆಚ್ಚಿಬೀಳದಿರಲು ಸಾಧ್ಯವೇ? ಅಂಥಾ ಭಯವೆಲ್ಲವನ್ನೂ ಈ ಚಿತ್ರದಲ್ಲಿ ನಟಿಸಿರುವ ಮುದ್ದಾದ ನಾಯಿಯೇ ಪರಿಹರಿಸಿತ್ತಂತೆ. ಚಿತ್ರೀಕರಣ ಮುಗಿಯುವ ಹೊತ್ತಿಗೆಲ್ಲಾ ರಾಧಿಕಾರೊಳಗೂ ನಾಯಿಪ್ರೇಮ ಸ್ಫುರಿಸಿ, ಭಯವೆಂಬುದು ಮಾಯವಾಗಿತ್ತಂತೆ.
ರಾಧಿಕಾರ ಮಟ್ಟಿಗೆ ಈ ಚಿತ್ರ ಒಂದು ವಿಶಷ್ಟವಾದ ಅನುಭವ ನೀಡಿದೆ, ನಿರ್ದೇಶಕ ವಿಲೋಕ್ ಶೆಟ್ಟಿ ಎಲ್ಲರನ್ನೂ ಒಳಗೊಂಡು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಒಟ್ಟಾರೆ ಚಿತ್ರ ಚೆಂದಗಾಣಬೇಕೆಂಬ ಮನಸ್ಥಿತಿಯಿಂದ ಕಾರ್ಯ ನಿರ್ವಹಿಸಿದ್ದ ಭಗೆ ಅವರಿಗೆ ಹಿಡಿಸಿದೆ. ಇಡೀ ತಾರಾಗಣವೇ ಒಂದು ಕುಟುಂಬದಂತಿದ್ದ ಕ್ಷಣಗಳು ಅವರನ್ನು ಹಿಡಿದಿಟ್ಟುಕೊಂಡಿದೆ. ಒಟ್ಟಾರೆಯಾಗಿ ಚೇಸ್ ಒಂದು ಭಿನ್ನ ಬಗೆಯ ಚಿತ್ರವಾಗಿ, ಅಪ್ಪಟ ಎಂಟರ್ಟೈನರ್ ಆಗಿ ಪ್ರೇಕ್ಷಕರಿಗೆ ಖಮಡಿತವಾಗಿಯೂ ಹಿಡಿಸಲಿದೆ ಎಂಬ ನಂಬಿಕೆಯೂ ಅವರಲ್ಲಿದೆ. ಹಲವಾರು ವರ್ಷಗಳ ನಂತರ ರಂಗಿತರಂಗದಂಥಾದ್ದೇ ಮತ್ತೊಂದು ಗೆಲುವು ಚೇಸ್ ಮೂಲಕ ಸಿಗಲಿದೆ ಎಂಬ ನಿರೀಕ್ಷೆ ರಾಧಿಕಾರದ್ದಾಗಿದೆ. ಈ ಚಿತ್ರ ತೆರೆಗಾಣಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ.