ಅತ್ತ ದರ್ಶನ್ ನಿಂತರೂ, ಕುಂತರೂ ವಿವಾದವೇಳುತ್ತಿದೆ. ಹಾಗೆ ನೋಡಿದರೆ, ಕ್ರಾಂತಿ ಚಿತ್ರದ ಶುರುವಾತಿನಿಂದ ಹಿಡಿದು ಇಲ್ಲಿಯವರೆಗೂ ವಿವಾದಗಳ ಮೆರವಣಿಗೆಯೇ ಮೂಡಿಕೊಂಡಿದೆ. ಇದೀಗ ಇಂಥಾ ವಿವಾದವೆಂಬುದು ಕ್ರಾಂತಿಯ ನಾಯಕಿ ರಚಿತಾ ರಾಮ್ ಹೆಗಲೇರಿಕೊಂಡಿದೆ. ಒಂದು ವಿನಮ್ರವಾದ ತಪ್ಪೊಪ್ಪಿಗೆಯ ಮೂಲಕ ರಚಿತಾ ಇದೊಂದು ವಿವಾದದ ಸ್ವರೂಪ ಪಡೆಯೋದನ್ನು ತಡೆಯೋ ದಾರಿಗಳಿದ್ದವು. ಆದರಾಕೆ, ಹೆಗಲೇರಿದ್ದ ವಿವಾದವನ್ನು ಮೊಂಡು ಮಾತುಗಳ ಮೂಲಕ ಕೊಡವಿಕೊಳ್ಳಲು ನೋಡಿದಳು. ಅದರ ಫಲವಾಗಿಯೇ ಅದೀಗ ರಚಿತಾಳ ನೆತ್ತಿಗೇರಿ ಕೂರುವಂತಾಗಿದೆ!
ಸಾಮಾನ್ಯವಾಗಿ, ಸೆಲೆಬ್ರಿಟಿ ಅಂದುಕೊಂಡವರಿಗೆ ಸಾಮಾನ್ಯ ಜ್ಞಾನವಿರುವುದು ಕಡಿಮೆ. ಆದರೆ, ಪ್ರಸ್ತುತ ವಿದ್ಯಮಾನಗಳನ್ನು ಅರಿತುಕೊಂಡು, ಇತಿಹಾಸ, ದೇಶ, ಸಂವಿಧಾನ, ಕಾನೂನುಗಳ ಬಗ್ಗೆ ತೆಳುವಾಗಿಯಾದರೂ ಒಂದಷ್ಟು ತಿಳುವಳಿಕೆ ಹೊಂದಿರೋದು ಅವಶ್ಯಕ. ಅದರಲ್ಲಿಯೂ ಸಾರ್ವಜನಿಕವಾಗಿ ಮಾತಾಡುವಾಗ ಮೈ ತುಂಬಾ ಕಣ್ಣಾಗಿರುವ ಎಚ್ಚರ ಸಾಮಾಜಿಕ ಬದುಕಿನಲ್ಲಿ ಅತಿ ಮುಖ್ಯ. ಗ್ಲಾಮರ್ನತ್ತ ಮಾತ್ರವೇ ಗಮನ ಹರಿಸುವ ರಚಿತಾ ರಾಮ್ಗೆ ಅಂಥಾದ್ದರ ಗಂಧ ಗಾಳಿ ಇರುವಂತಿಲ್ಲ. ಇದ್ದಿದ್ದರೆ ಗಣರಾಜ್ಯೋತ್ಸವವನ್ನು ಮರೆತುಬಿಡಿ, ಕ್ರಾಂತಿ ನೋಡಿ ಎಂಬಂಥಾ ದಡ್ಡ ಹೇಳಿಕೆ ಆಕೆಯ ಕಡೆಯಿಂದ ತೂರಿ ಬರುತ್ತಿರಲಿಲ್ಲ.
ಸಾರ್ವಜನಿಕ ಸಮಾರಂಭದಲ್ಲಿ, ಅಭಿಮಾನಿಗಳ ಒಡ್ಡೋಲಗದಲ್ಲಿ ಮಾತಾಡುವಾಗ ನಾಲಗೆ ತೊಡರೋದು ಮಾಮೂಲು. ಆದರೆ ಸಂವಿಧಾನಕ್ಕೇ ಅಪಮಾನವಾಗುವಂಥಾ ಹೇಳಿಕೆಗಳು ಹೊರಬೀಳದಂತೆ ನೋಡಿಕೊಳ್ಳೋ ಎಚ್ಚರ ಅಪೇಕ್ಷಣೀಯ. ಯಾವಾಗ ರಚಿತಾ ಇಂಥಾದ್ದೊಂದು ಎಡವಟ್ಟು ಮಾಡಿಕೊಂಡಳೋ, ಆವಾಗಿನಿಂದಲೇ ಅದರ ವಿರುದ್ಧದ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿತ್ತು. ಹಾಗಾದೇಟಿಗೆ ರಚಿತಾ ಆದ ತಪ್ಪಿಗೆ ಕ್ಷಮೆ ಕೇಳಿದ್ದರೆ ಅದು ಮುಂದುವರೆಯುತ್ತಿರಲಿಲ್ಲ. ಆದರಾಕೆ ನುಣುಚಿಕೊಳ್ಳಲು ನೋಡಿ, ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಒದರಾಡಿದಳೇ ಹೊರತು, ಕ್ಷಮೆ ಯಾಚಿಸಲು ಮುಂದಾಗಿರಲಿಲ್ಲ.
ಅದರ ಫಲವಾಗಿಯೇ ಇದೀಗ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗುಳಿಕೆನ್ನೆಯ ಮೇಲೊಂದು ಕೇಸು ಜಡಿದುಕೊಂಡಿದೆ. ಸಂವಿಧಾನಕ್ಕೆ ಅಪಮಾನವೆಸಗಿರೋ ರಚಿತಾಳನ್ನು ಗಡಿಪಾರು ಮಾಡಬ ಏಕು ಅಂತೆಲ್ಲ ದೂರುದಾರರು ಆಗ್ರಹಿಸಿದ್ದಾರೆ. ನಿಜ, ರಚಿತಾ ಮಾಡಿರೋದು ತಪ್ಪು. ಆಕೆಗೆ ಈ ಬಗ್ಗೆ ತಿಳಿ ಹೇಳಿ, ಇನ್ಯಾರೂ ಅಂಥಾ ತಪ್ಪು ಮಾಡದಂತೆ ನೋಡಿಕೊಳ್ಳುವ ಜರೂರತ್ತಿದೆ. ಹಾಗಂತ, ಇದನ್ನೇ ಮುಂದಿಟ್ಟುಕೊಂಡು ಆಕೆಯನ್ನು ಗಡಿಪಾರು ಮಾಡಬೇಕೆಂಬ ಆಗ್ರಹವಿದೆಯಲ್ಲಾ? ಅದು ಯಾಕೋ ಅತಿರೇಕವೆನ್ನಿಸುತ್ತದೆ.
ಇದೆಲ್ಲ ಏನೇ ಇದ್ದರೂ ಇಂಥಾ ಸೆಲೆಬ್ರಿಟಿಗಳು ಸಾಮಾಜಿಕ ಜವಾಬ್ದಾರಿಯನ್ನು ತುರ್ತಾಗಿ ಕಲಿಯಬೇಕಿದೆ. ತಾವು ಸೀಮೆಗಿಲ್ಲದ ಸೆಲೆಬ್ರಿಟಿಗಳೆಂಬ ಹಮ್ಮನ್ನು ನೆತ್ತಿಗೇರಿಸಿಕೊಳ್ಳುವ ಮುನ್ನ, ಈ ನೆಲದ ಕಾನೂನು ಕಟ್ಟಳೆಗಳ ಅಡಿಯಲ್ಲಿ ತಾವೂ ಸಾಮಾನ್ಯರೆಂಬ ಕನಿಷ್ಟ ಖಬರನ್ನಾದರೂ ಇಟ್ಟುಕೊಳ್ಳಬೇಕಿದೆ. ತಾವೇನು ಹೇಳಿದರೂ ನಡೆಯುತ್ತೆ. ಸಮರ್ಥಿಸಿಕೊಳ್ಳಲು ಅಭಿಮಾನಿಗಳಿದ್ದಾರೆಂಬ ಅಹಂಕಾರವನ್ನ ಧರಿಸಿಕೊಂಡರೆ, ಅದುವೇ ಜೈಲಿನ ಹಾದಿ ತೋರಿಸಿದರೂ ಅಚ್ಚರಿಯೇನಿಲ್ಲ. ರಚಿತಾ ರಾಮ್ ಒಂದಷ್ಟು ಅವಕಾಶಗಳನ್ನು ಪಡೆದುಕೊಂಡು ಮುಂದುವರೆಯುತ್ತಿದ್ದಾಳೆ. ಆಕೆಗೊಂದಷ್ಟು ಅಭಿಮಾನಿ ಬಳಗವಿದೆ. ಇದೆಲ್ಲವೂ ಮೆರೆದಾಟದ ಪರವಾನಗಿಯಲ್ಲ; ಜವಾಬ್ದಾರಿ ಹೆಚ್ಚಾದುದರ ಸಂಕೇತ ಎಂಬ ಪ್ರೌಢಿಮೆ ರಚಿತಾಗೆ ಲಭಿಸಲೆಂಬುದು ಹಾರೈಕೆ!