ಪಾದರಸದಂಥಾ ಹುಡುಗಿಗೆ ರಫ್ ಆಂಡ್ ಟಫ್ ಪಾತ್ರ ಸಿಕ್ಕ ಖುಷಿ!
ಒಂದು ಆಸೆ ಉತ್ಕಟ ವ್ಯಾಮೋಹವಾಗಿ, ಬದುಕಿನ ಪರಮೋಚ್ಛ ಗುರಿಯಾಗಿ ಎದೆಗಿಳಿದು ಬೇರು ಬಿಟ್ಟರೆ ಖಂಡಿತಾ ಮುಂದೊಂದು ದಿನ ಅದು ಚಿಗುರಿ, ಕನಸೆಲ್ಲವೂ ಸಾಕಾರಗೊಳ್ಳುತ್ತವೆ. ಎಲ್ಲೆಲ್ಲಿಯೋ ಚದುರಿ ಹೋಗ ಬೇಕಿದ್ದ ಬದುಕು ತಂತಾನೇ ಗುರಿಯ ನೇರಕ್ಕೆ ಬಂದು ನಿಲ್ಲುತ್ತದೆ. ಸದ್ಯ ಸಿನಿಮಾ ರಂಗದಲ್ಲಿ ಈ ಮಾತಿಗೆ ಅನ್ವರ್ಥ ಎಂಬಂಥಾ ಅನೇಕ ಸಜೀವ ಸಾಕ್ಷಿಗಳಿದ್ದಾವೆ. ಆ ಸಾಲಿನಲ್ಲಿ ಸೇರ್ಪಡೆಯಾಗುವಂಥಾ ನವ ಪ್ರತಿಭೆ ರಚನಾ ಇಂದರ್. ರಚನಾ ಲವ್ ಮಾಕ್ಟೈಲ್ ಎಂಬ ಸೂಪರ್ ಹಿಟ್ ಮೂವಿಯ ಮೂಲಕವೇ ಕರುನಾಡ ತುಂಬೆಲ್ಲ ಮನೆಮಾತಾದವರು. ಹೆಂಗೆ ನಾವೂ ಅನ್ನುತ್ತಲೇ ಕನ್ನಡದ ಚಿತ್ರಪ್ರೇಮಿಗಳ ಮನಸನ್ನಾವರಿಸಿಕೊಂಡಿದ್ದ ರಚನಾ ಇದೀಗ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ಎರಡನೇ ಹೆಜ್ಜೆ ಎತ್ತಿಟ್ಟಿದ್ದಾರೆ. ಈ ಚಿತ್ರದಲ್ಲಿಯೂ ಬಯಸದೇ ಬಂದ ಭಾಗ್ಯವೆಂಬಂತೆ ಡಿಫರೆಂಟ್ ಆದೊಂದು ಪಾತ್ರ ಸಿಕ್ಕಿರುವ ಖುಷಿ ರಚನಾರಲ್ಲಿದೆ.
ಭಾಗಮಂಡಲದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು ಅಲ್ಲಿಯೇ ವಿದ್ಯಾಭ್ಯಾಸವನ್ನೂ ಮುಂದುವರೆಸುತ್ತಿರುವ ರಚನಾ ಇದೀಗ ಎಂಬಿಎ ವಿದ್ಯಾರ್ಥಿನಿ. ಈ ಘಳಿಗೆಯಲ್ಲಿ ತನ್ನ ಬದುಕು ಅರಳೋದೇನಿದ್ದರೂ ಸಿನಿಮಾದಲ್ಲಿಯೇ ಎಂಬ ವಿಚಾರ ರಚನಾಗೆ ಪಕ್ಕಾ ಆಗಿದೆ. ಮನೆಯಲ್ಲಿ ಕಲಾಸಕ್ತಿ ಇದ್ದರೂ ಮಗಳು ಚೆಂದಗೆ ಓದಿ, ಆ ಆಧಾರದಲ್ಲಿಯೇ ಒಂದು ಕೆಲಸ ಗಿಟ್ಟಿಸಿಕೊಂಡು ನೆಲೆ ಕಂಡುಕೊಳ್ಳಲೆಂಬ ಮಾಮೂಲಿ ಇರಾದೆಯಿತ್ತು. ಅದಕ್ಕೆ ತಕ್ಕುದಾದ ವಾತಾವರಣವೇ ರಚನಾರ ಮನೆಯಲ್ಲಿತ್ತು. ಆರಂಭದಿಂದ ಇತ್ತೀಚಿನ ವರ್ಷದ ವರೆಗೂ ಓದು ಬಿಟ್ಟು ಬೇರೇನೂ ಯೋಚಿಸದಂಥಾ ಸ್ಥಿತಿ. ಅದರ ನಡುವೆಯೇ ನಟಿಯಾಗಬೇಕೆಂಬ ಆಸೆ ರಚನಾರೊಳಗೆ ಮೊಳೆತುಕೊಂಡಿದ್ದು, ಅಚಾನಕ್ಕಾಗಿ ತಾಯಿಯ ಕಡೆಯಿಂದಲೂ ಅದಕ್ಕೆ ಪ್ರೋತ್ಸಾಹ ಸಿಕ್ಕು ನಟನಾ ತರಬೇತಿ ಕೇಂದ್ರಕ್ಕೆ ಸೇರಿಸಿದ್ದ ಮತ್ತು ಒಂದರ ಹಿಂದೊಂದರಂತೆ ಅದ್ಭುತ ಅವಕಾಶಗಳು ಸಿಕ್ಕಿದ್ದೆಲ್ಲವೂ ಈ ಹುಡುಗಿಯ ಬದುಕಿನಲ್ಲಿ ಘಟಿಸಿದ ಪವಾಡಗಳೇ!
ರಚನಾ ಇಂದರ್ ಸಾಗಿ ಬಂದ ಹಾದಿಯ ಬಗ್ಗೆ ಹೇಳೋದಕ್ಕಿಂತ ಮೊದಲು, ಖುದ್ದು ಅವರೇ ಥ್ರಿಲ್ ಆಗಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಪಾತ್ರದ ಬಗ್ಗೆ ಹೇಳುವುದೊಳಿತು. ಲವ್ ಮಾಕ್ಟೈಲ್ ರಚನಾ ಪಾಲಿಗೆ ಮೊದಲ ಚಿತ್ರ. ಅದಾದ ನಂತರ ಅದೇ ಜನಪ್ರಿಯತೆಯನ್ನು ಮುಂದುವರೆಸಿಕೊಂಡು ಹೋಗುವಂಥಾ ಇರಾದೆ, ಅನಿವಾರ್ಯತೆ ಸಹಜವಾಗಿಯೇ ಇತ್ತು. ಆ ಹೊತ್ತಿಗೆಲ್ಲ ರಿಶಬ್ ಶೆಟ್ಟರ ಟೀಮು ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ರೆಡಿಯಾಗಿ ನಾಯಕಿಯ ಪಾತ್ರಕ್ಕೆ ಪ್ರತಿಭೆಯ ಶೋಧದಲ್ಲಿ ನಿರತವಾಗಿತ್ತು. ಸೋಶಿಯಲ್ ಮೀಡಿಯಾ ಹಾಗೂ ಆಕ್ಟಿಂಗ್ ಅಕಾಡೆಮಿಯ ಕಡೆಯಿಂದ ರಚನಾಗೂ ಆ ಬಗ್ಗೆ ತಿಳಿದಿತ್ತು. ಇನ್ನೇನು ಹೋಗಿ ಆಡಿಷನ್ನಲ್ಲಿ ಪಾಲ್ಗೊಳ್ಳಬೇಕೆಂಬ ಹೊತ್ತಿನಲ್ಲಿ ಸಿನಿಮಾ ತಂಡದಿಂದಲೇ ರಚನಾಗೆ ಕರೆ ಬಂದಿತ್ತು.
ಅದಾದ ನಂತರ ರಚನಾ ಆಡಿಷನ್ನಿನಲ್ಲಿ ಪಾಲ್ಗೊಂಡು ಆಯ್ಕೆಯಾಗಿದ್ದರು. ಅವರ ಪಾಲಿಗೆ ಅಸಲೀ ಥ್ರಿಲ್ ಒಂದು ಎದುರುಗೊಂಡಿದ್ದು ತಾನು ನಿರ್ವಹಿಸಲಿರೋ ಪಾತ್ರದ ಚಹರೆಗಳ ಬಗ್ಗೆ ವಿವರಿಸಿ ಹೇಳಿದಾಗಲೇ. ಆ ವಿವರಣೆಯಲ್ಲಿಯೇ ಇದು ಪಕ್ಕಾ ಡಿಫರೆಂಟಾಗಿರೋ ಪಾತ್ರವೆಂಬ ಕುರುಹು ಸ್ಪಷ್ಟವಾಗಿತ್ತು. ರಚನಾರನ್ನು ಹಾಗೆ ಥ್ರಿಲ್ಗೀಡು ಮಾಡಿದ್ದು ಗಿರಿಜಾ ಎಂಬ ಮಧ್ಯಮ ವರ್ಗದ ರಫ್ ಆಂಡ್ ಟಫ್ ಪಾತ್ರ. ಅದನ್ನು ತಾನು ಆವಾಹಿಸಕೊಳ್ಳಬೇಕೆಂಬುದೇ ರಚನಾರೊಳಗೆ ಖುಷಿ ಮೂಡಿಸಿತ್ತು. ಆರಂಭಿಕವಾಗಿಯೇ ಆ ಪಾತ್ರ ಡಿಫರೆಂಟಾಗಿದ್ದರೂ ಆ ನಂತರದಲ್ಲಿಯೂ ಅದಕ್ಕೊಂದಷ್ಟು ಹೊಸಾ ಆಯಾಮಗಳನ್ನು ಕೊಡಲಾಗಿತ್ತು. ಅಂದಹಾಗೆ ಗಿರಿಜೆ ಮಧ್ಯಮ ವರ್ಗದಲ್ಲಿ ಹುಟ್ಟಿದ ತಾಯಿಲ್ಲದ ಕೂಸು. ಅಪ್ಪ ಮತ್ತು ಅಣ್ಣನ ನೆರಳಲ್ಲಿ ಬಿಂದಾಸ್ ಆಗಿ ಬೆಳೆದ ಹುಡುಗಿ. ಹೆಣ್ತನದ ಭಾವಗಳು ಬಾಹ್ಯವಾಗಿ ಹೊಮ್ಮದ ಆ ಪಾತ್ರದ ಮಟ್ಟಿಗೆ ಹೆಣ್ತನವೆಂಬುದು ಗುಪ್ತಗಾಮಿನಿ. ಒಂದಷ್ಟು ತಯಾರಿಯೊಂಗೆ ಆ ಪಾತ್ರಕ್ಕೆ ಜೀವ ತುಂಬಿದ ತೃಪ್ತಿ ರಚನಾರಲ್ಲಿದೆ.
ಹೀಗೆ ಈವತ್ತಿಗೆ ರಿಶಭ್ ಶೆಟ್ಟಿ ನಾಯಕನಾಗಿ ನಟಿಸಿರುವ, ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಗಿರಿಜೆಯಾಗಿ ಸದ್ದು ಮಾಡುತ್ತಿರುವ ರಚನಾ ಇಂದರ್ ಚಿತ್ರರಂಗದಲ್ಲಿ ನೆಲೆಯೂರಿ ನಿಲ್ಲಬಹುದಾದ ಗಟ್ಟಿ ಪ್ರತಿಭೆ. ಇಂಗ್ಲಿಷ್ ಮೀಡಿಯಂನಲ್ಲಿ ಕೇಂದ್ರ ಪಠ್ಯ ಪರಿಕ್ರಮದಲ್ಲಿ ಓದುತ್ತಾ ಬಂದಿದ್ದ ರಚನಾ ಪಾಲಿಗೆ ಬೇರ್ಯಾವುದರತ್ತಲೂ ಗಮನ ಹರಿಸುವಂಥಾ ಅವಕಾಶವೇ ಇರಲಿಲ್ಲ. ಓದು ಮತ್ತು ಓದು ಮಾತ್ರವೇ ಅವರ ಪಾಲಿನ ಪ್ರಪಂಚ. ಅಂಥಾ ವಾತಾವರಣದಲ್ಲಿಯೂ ರಚನಾರ ಮನಸು ಬಣ್ಣದ ಲೋಕದ ಸುತ್ತಾ ಗಿರಕಿ ಹೊಡೆದು, ಅವರೊಳಗೆ ನಟಿಯಾಗಬೇಕೆಂಬ ಕನಸೊಂದು ಪರ್ಮನೆಂಟಾಗಿ ಪ್ರತಿಷ್ಠಾಪಿತಗೊಂಡಿದ್ದೊಂದು ಅಚ್ಚರಿಯೇ!
ಹೆತ್ತರಿಗೆ ತಮ್ಮ ಮಗಳು ಓದಿನ ದಿಕ್ಕಿನಲ್ಲಿಯೇ ನೆಲೆ ಕಂಡುಕೊಳ್ಳಬೇಕೆಂಬ ಆಸೆ. ಸಾಮಾನ್ಯವಾಗಿ ಮನೆ ಮಂದಿಗೆ ಇಂಥಾ ಆಕಾಂಕ್ಷೆ ಇದ್ದರೂ ಶಾಲಾ ಕಾಲೇಜು ವಾತಾವರಣದಲ್ಲಿಯಾದರೂ ಒಂದಷ್ಟು ಸಾಂಸ್ಕೃತಿಕ ಚಟುವಟಿಕೆಯ ವಾತಾವರಣವಿರುತ್ತದೆ. ಆದರೆ ರಚನಾ ಪಾಲಿಗೆ ಅದೂ ಕೂಡಾ ಮರೀಚಿಕೆಯಾಗಿತ್ತು. ಅಂತೂ ಕಾಲೇಜು ದಿನಗಳಲ್ಲಿ ಶೇಕ್ಸ್ಪಿಯರನ ಇಂಗ್ಲಿಷ್ ನಾಟಕವೊಂದರಲ್ಲಿ ಲೀಡ್ ರೋಲ್ ಮಾಡುವ ಅವಕಾಶವೊಂದು ರಚನಾ ಪಾಲಿಗೆ ಒಲಿದು ಬಂದಿತ್ತು. ತಾನು ನಟಿಯಾಗಬೇಕೆಂಬ ಆಸೆ ಅವರೊಳಗೆ ಆಳವಾಗಿ ಬೇರೂರಿದ್ದು ಆವಾಗಿನಿಂದಲೇ. ಈ ವಿಚಾರವನ್ನು ಆಕೆ ಅಮ್ಮನ ಬಳಿ ಹೇಳಿಕೊಂಡಿದ್ದರು. ತನ್ನಾಸೆ ಬೇರೆಯದ್ದೇ ಇದ್ದರೂ ಮಗಳ ಇಚ್ಛೆಗೆ ಅಡ್ಡಗಾಲಾಗಬಾರದೆಂಬ ಕಾರಣದಿಂದ ಅಮ್ಮ ರಚನಾರನ್ನು ನಟನಾ ತರಬೇತಿ ಶಾಲೆಯೊಂದಕ್ಕೆ ಸೇರಿಸಿದ್ದರು.
ಬಹುಶಃ ಹಾಗೆ ನವರಸ ನಟನಾ ಅಕಾಡೆಮಿಗೆ ಸೇರಿಕೊಳ್ಳದೇ ಹೋಗಿದ್ದರೆ ನಟಿಯಾಗಬೇಕೆಂಬ ಕನಸು ಕನಸಾಗಿಯೇ ಉಳಿದು ಬಿಡುತ್ತಿತ್ತೇನೋ. ಹಾಗೆ ಒಂದಷ್ಟು ಕಾಲ ನಟನಾ ತರಬೇತಿಯಿಂದ ನಟನೆಯ ನಾನಾ ಪಟ್ಟುಗಳನ್ನು ಕಲಿತುಕೊಂಡಿದ್ದ ರಚನಾಗೆ ಬಯಸದೆಯೇ ಅಚ್ಚರಿಯೊಂದು ಕಾದಿತ್ತು. ಆ ನಟನಾ ತರಬೇತಿ ಶಾಲೆಯ ಸಾಮಾಜಿಕ ಜಾಲತಾಣದ ಗ್ರೂಪ್ ಒಂದಿತ್ತು. ಅದರಲ್ಲಿ ಅದೊಂದು ದಿನ ಲವ್ ಮಾಕ್ಟೈ.ಲ್ ಚಿತ್ರದ ಆಡಿಷನ್ ಬಗೆಗಿನ ವಿವರಗಳು ಕಾಣಿಸಿದ್ದವು. ಖ್ಯಾತ ಕೊರಿಯೋಗ್ರಾಫರ್ ಮಾಲೂರು ಶ್ರೀನಿವಾಸ್ ಮಾರ್ಗದರ್ಶನದಂತೆ ರಚನಾ ಆ ಆಡಿಷನ್ನಿನಲ್ಲಿ ಪಾಲ್ಗೊಂಡಿದ್ದರು. ಆ ಮೂಲಕವೇ ಚೆಂದದ ಪಾತ್ರವೊಂದು ಅವರ ಪಾಲಿಗೆ ಒಲಿದು ಬಂದಿತ್ತು. ಹೆಂಗೆ ನಾವೂ ಅನ್ನುತ್ತಲೇ ಭಾರೀ ಪಬ್ಲಿಸಿಟಿ ಪಡೆದುಕೊಂಡಿದ್ದ ರಚನಾ ಇದೀಗ ಅಚ್ಚರಿದಾಯಕವಾಗಿಯೇ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಗಿರಿಜೆಯಾಗಿ ಮಿಂಚಲಣಿಯಾಗಿದ್ದಾರೆ.
ಹೀಗೆ ಒಂದರ ಹಿಂದೊಂದರಂತೆ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ರಚನಾ ಮುಖ್ಯ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳಿದ್ದಾವೆ. ಹರಿಕಥೆ ಅಲ್ಲ ಗಿರಿಕಥೆಯ ಪಾತ್ರ ತನ್ನ ವೃತ್ತಿ ಬದುಕಿನ ದಿಕ್ಕು ಬದಲಾಯಿಸುತ್ತದೆಂಬ ಗಾಢ ನಂಬಿಕೆಯೂ ಅವರಲ್ಲಿದೆ. ಈ ಹೊತ್ತಿನಲ್ಲಿಯೇ ಅವರ ಮುಂದೆ ಮತ್ತೊಂದಷ್ಟು ಅವಕಾಶಗಳಿವೆ. ಈಗಾಗಲೇ ಅವರು ಶಶಾಂಕ್ ನಿರ್ದೇಶನದ ಲವ್ ೩೬೦ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರ ಇನ್ನೇನು ತೆರೆಗಾಣಲಿದೆ. ಕಿಸ್ ಚಿತ್ರದ ಪ್ರೊಡ್ಯೂಸರ್ ನಿರ್ಮಾಣ ಮಾಡುತ್ತಿರುವ ಚಿತ್ರವನ್ನೂ ಅವರು ಒಪ್ಪಿಕೊಂಡಿದ್ದಾರೆ. ಹೆಚ್ಚೇನು ತಲೆ ಕೆಡಿಸಿಕೊಳ್ಳದೆ ಸಿಕ್ಕ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬೇಕು, ಆ ಮೂಲಕ ವೃತ್ತಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬ ಸ್ಪಷ್ಟ ನಿಲುವಿನ ರಚಾನಾಗೆ ಒಳಿತಾಗಲೆಂದು ಹಾರೈಸೋಣ…