ಎಲ್ಲವನ್ನೂ ಪ್ರಾಂಜಲ ನಗುವಿನಿಂದಲೇ ಎದುರುಗೊಳ್ಳುತ್ತಾ, ಬಾಗಿ ನಡೆಯೋದನ್ನೇ ವ್ಯಕ್ತಿತ್ವದ ಶಕ್ತಿಯಾಗಿಸಿಕೊಂಡಿದ್ದವರು ಪುನೀತ್ ರಾಜ್ ಕುಮಾರ್. ತಂದೆಯ ಗುಣಗಳನ್ನೆಲ್ಲ ಎರಕ ಹೊಯ್ದುಕೊಂಡಂತಿದ್ದ ಅಪ್ಪು, ಅಭಿಮಾನದಾಚೆಗೂ ಒಂದಿಡೀ ಕರುನಾಡನ್ನು ಆವರಿಸಿಕೊಂಡಿದ್ದ ದೈತ್ಯ ಶಕ್ತಿ. ಸದಾ ಉತ್ಸಾಹದ ಚಿಲುಮೆಯಂತಿರುತ್ತಿದ್ದ ಅಪ್ಪು ಸಣ್ಣದೊಂದು ಸುಳಿವೂ ನೀಡದೆ ನಿಶ್ಚಲವಾಗಿ ಒಂದು ವರ್ಷ ಕಳೆದಿದೆ. ಬಹುಶಃ ಇನ್ನೊಂದಷ್ಟು ವರ್ಷಗಳು ಕಳೆದರೂ ಕೂಡಾ ನಮ್ಮೆಲ್ಲರ ಮನಸುಗಳಲ್ಲಿ ಆ ಆಘಾತ ಹಸಿಯಾಗಿರುತ್ತದೇನೋ… ಎಲ್ಲವೂ ಕಣ್ಣೆದುರಲ್ಲಿಯೇ ನಡೆದು ಹೋದರೂ ಯಾವುದನ್ನೂ ನಂಬದ ಸ್ಥಿತಿಯೊಂದು ಎಲ್ಲರೊಳಗಿದೆ. ಸಾಮಾನ್ಯವಾಗಿ ಸಾವೊಂದು ಶೂನ್ಯ ವಾತಾವರಣ ಸೃಷ್ಟಿಸುತ್ತೆ. ಇಷ್ಟದ ಜೀವವೊಂದು ಇನ್ನಿಲ್ಲವಾದಾಗ, ಎಂದೂ ತುಂಬಲಾರದಂಥಾ ಖಾಲಿತನವೊಂದು ಎದೆತಬ್ಬಿಕೊಳ್ಳುತ್ತೆ. ಆದರೆ, ಪುನೀತ್ ರಾಜ್ಕುಮಾರ್ ಅಗಲಿಕೆಯ ವಿಚಾರದಲ್ಲಿ ಅದೆಲ್ಲವೂ ಅದಲು ಬದಲಾಗಿದೆ!
ಯಾಕೆಂದರೆ, ಅಪ್ಪು ನಮ್ಮ ನಡುವಲ್ಲಿಲ್ಲ ಅನ್ನೋದನ್ನ ಈ ಕ್ಷಣಕ್ಕೂ ಯಾರಿಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲೇ ಎಲ್ಲೋ ಸಂಚಾರ ತೆರಳಿರೋ ಅಪ್ಪು ಬ್ಯುಸಿಯಾಗಿಬಿಟ್ಟಿದ್ದಾರೆಂಬ ಭಾವವೇ ಎಲ್ಲರೊಳಗೂ ನೆಲೆ ನಿಂತು ಬಿಟ್ಟಿದೆ. ಆ ನಂಬಿಕೆ ಯಾವ ಘಳಿಗೆಯಲ್ಲಿಯೂ ಕದಲಲು ಸಾಧ್ಯವೇ ಇಲ್ಲ. ಬದುಕಿದ್ದಷ್ಟೂ ದಿನ, ಪ್ರತೀ ಕ್ಷಣಗಳನ್ನೂ ಸಂಭ್ರಮಿಸುತ್ತಾ ಉಸಿರಾಡಿದ್ದವರು ಪುನೀತ್. ಸ್ಟಾರ್ವಾರ್ ಮುಂತಾದ ಭ್ರಮೆಯ ಬಡಿದಾಟಗಳಾಚೆಗೆ, ಪ್ರೀತಿಯನ್ನು ಮಾತ್ರವೇ ಹಂಚುತ್ತಾ ಸಾಗಿದ್ದು ಅಪ್ಪು ಸ್ಪೆಷಾಲಿಟಿ. ತಾನಿರುವಲ್ಲೆಲ್ಲ ದೈವಿಕ ನಗುವಿನ ಗಂಧ ಹರಡುತ್ತಿದ್ದ ಅಪ್ಪು ಅಂದರೆ ಇಷ್ಟಪಡದವರೇ ಇರಲಿಲ್ಲ. ಇಂಥಾ ವ್ಯಕ್ತಿತ್ವದಿಂದಲೇ ಅಭಿಮಾನದಾಚೆಗೂ ಆಪ್ತರಾಗಿದ್ದವರು ಪುನೀತ್ ರಾಜ್ಕುಮಾರ್.
ಓರ್ವ ನಟ ಸಿನಿಮಾಗಳ ಮೂಲಕ ಒಂದಷ್ಟು ಅಭಿಮಾನಿ ಬಳಗ ಹೊಂದಿರೋದು, ಅವರ ಪಾಲಿಗೆ ದೇವರೆನ್ನಿಸಿಕೊಳ್ಳೋದೆಲ್ಲ ಮಾಮೂಲು. ಆದರೆ, ಓರ್ವ ನಟ ಸಿನಿಮಾದಾಗೆಗೆ ತನ್ನ ವ್ಯಕ್ತಿತ್ವದಿಂದಾಗಿ ಇಡೀ ನಾಡನ್ನೇ ಆವರಿಸಿಕೊಳ್ಳೋದಿದೆಯಲ್ಲಾ? ಅದು ನಿಜಕ್ಕೂ ಅದ್ಭುತ. ಅಂಥಾದ್ದೊಂದು ಅದ್ಭುತಕ್ಕೆ ಸಾರ್ವಕಾಲಿಕ ಸಾಕ್ಷಿಯಂತಿರುವವರು ಅಪ್ಪು. ಕೆಲ ಮಂದಿ ಸಣ್ಣಪುಟ್ಟ ಸಹಾಯ ಮಾಡಿ ಬೆಟ್ಟದಷ್ಟು ಪೋಸು ಕೊಡುತ್ತಾರೆ. ಆದರೆ ಬೆಟ್ಟದಷ್ಟು ಸಾಮಾಜಿಕ ಕೆಲಸ ಕಾರ್ಯ ಮಾಡಿದರೂ ಚಿಟಿಕೆಯಷ್ಟನ್ನೂ ತೋರ್ಪಡಿಸಿಕೊಳ್ಳದೇ ಮುಂದುವರೆದದ್ದು ಅಪ್ಪು ಉಳಿಸಿ ಹೋದ ಬಹುದೊಡ್ಡ ಆದರ್ಶ ಅಂದರೂ ತಪ್ಪೇನಲ್ಲ.
ಪುನೀತ್ರಂಥಾ ಸ್ಟಾರ್ ನಟರ ಸುತ್ತ ಅಭಿಮಾನದ ಪ್ರಭೆ ಇರುತ್ತೆ. ಹಾಗೆ ಆರಾಧಿಸುವ ಪ್ರತೀ ಜೀವಗಳ ಪಾಲಿಗೂ ಅಪ್ಪು ಒಂಥಾರಾ ಆದರ್ಶ. ಸದಾ ಜೊತೆಗಿರುವ ಶಕ್ತಿ. ಅಂಥಾ ಶಕ್ತಿಯೇ ಏಕಾಏಕಿ ಮಾಯವಾಗಿ ಬಿಡುತ್ತದೆಯೆಂದರೆ, ಅದನ್ನು ಅರಗಿಸಿಕೊಳ್ಳೋದು ಅಷ್ಟು ಸಲೀಸಿನ ಸಂಗತಿಯಲ್ಲ. ಅಂಥಾದ್ದೊಂದು ಆಘಾತ ಅಪ್ಪು ಅಭಿಮಾನಿಗಳನ್ನೆಲ್ಲ ಕಾಡುತ್ತದೆ. ಸದಾ ಕಾಲವೂ ಕಾಡುತ್ತಲೇ ಇರುತ್ತದೆ. ಅದು ಈಗ ಕರ್ನಾಟಕದ ಪ್ರತೀ ಮನಸುಗಳಿದಾ ಡಾಟಿಕೊಂಡಿದೆ. ವಿಶೇಷವೆಂದರೆ, ಎಲ್ಲರೊಳಗಿನ ದುಃಖವೀಗ ಅಪ್ಪು ಮುಖದಲ್ಲಿ ಮಿನುಗುತ್ತಿದ್ದ ಮಂದಹಾಸವಾಗಿ ರೂಪಾಂತರಗೊಂಡಿದೆ. ಹಿಂದಿಗಿಂತಲೂ ತೀವ್ರವಾಗಿ ಆ ಮಂದಹಾಸವನ್ನು ಧ್ಯಾನಿಸುತ್ತಾ, ಅಪ್ಪು ಎಲ್ಲೂ ಹೋಗಿಲ್ಲ ಎಂಬ ಸುಳ್ಳನ್ನೇ ಮನಸಾರೆ ನಂಬುತ್ತಾ ಮುಂದುವರೆಯುತ್ತಿದ್ದಾರೆ. ಇಂಥಾದ್ದೊಂದು ಸಂಕಟ ಹುಟ್ಟಿಕೊಂಡ ಈ ದಿನ, ಆ ಕ್ಷಣಗಳು ಮಾತ್ರ ಪ್ರತೀ ವರ್ಷವೂ ಹೀಗೆ ಸಣ್ಣ ಕರುಳಿಗೆ ಸೂಜಿ ಚುಚ್ಚಿದಂಥಾ ಭಾವ ಮೂಡಿಸುತ್ತಲೇ ಇರುತ್ತೆ. ಎಲ್ಲರ ಎದೆಗಿಳಿದಿರೋ ಆ ನಗುವಿಗೆ ಎಂದಿಗೂ ಸಾವಿಲ್ಲ.
ಇಂಥಾ ಹಠಾತ್ ನಿರ್ಗಮನವನ್ನು ತಡೆದುಕೊಳ್ಳೋದು ಕಷ್ಟವೇ. ಸಾವೆಂಬುದು ಯಾವ ದಿಕ್ಕಿನಲ್ಲಿ, ಹೇಗೆಲ್ಲ ಹಿಂಡಿ ಹಾಕುತ್ತದೆಂದು ಹೇಳಲು ಬರುವುದಿಲ್ಲ. ಅದು ಅವುಡುಗಚ್ಚಿ ನಡೆದಷ್ಟೂ ದುಃಖ ಒತ್ತರಿಸುವಂತೆ ಮಾಡುತ್ತೆ. ಮರೆತು ಮುನ್ನಡೆಯುತ್ತೇಂದರೂ ಮತ್ತೆ ಕರುಳು ಹಿಂಡಿ ಕಾಡಿಸುತ್ತೆ. ಆದರೆ, ಒಂದು ಅಗಾಧ ಅನುಭವದ ಮೂಸೆಯಲ್ಲಿ ಮಾತ್ರವೇ ಇಂಥಾ ನಿರ್ಗಮನವನ್ನು ಭರಿಸಿಕೊಳ್ಳುವ ಶಕ್ತಿ ದಕ್ಕಬಹುದೇನೋ. ಈವರೆಗೂ ಒಂದಷ್ಟು ಮಹಾನುಭಾವರು, ಕವಿಗಳು, ಸಾವನ್ನು ದಿಟ್ಟಿಸುವ ದೃಷ್ಟಿಕೋನ ಬದಲಾಯಿಸುವಂಥಾ, ಒಂದು ಸಮಾಧಾನವನ್ನು ಎದೆತುಂಬುವಂಥಾ ಪ್ರಯತ್ನಗಳನ್ನು ಮಾಡಿದ್ದಾರೆ. ಅಂಥವರ ಕಾಲಿನಲ್ಲಿ ಕವಿ, ದಾರ್ಶನಿಕ ಜಲಾಲುದ್ದೀನ್ ರೂಮಿ ಕೂಡಾ ಪ್ರಮುಖ ಕವಿ. ತನ್ನ ಕವಿತೆಗಳ ಮೂಲಕವೇ ಬದುಕಿನ ನಾನಾ ಮಜಲುಗಳನ್ನು ಅಚ್ಚರಿದಾಯಕವಾಗಿ ಬೊಗಸೆಗಿಡಬಲ್ಲ ರೂಮಿ, ಸಾವಿನ ಬಗ್ಗೆಯೂ ಅರ್ಥವತ್ತಾಗಿ ಬರೆದಿದ್ದಾನೆ. ಅದನ್ನು ಕನ್ನಡದ ಪ್ರತಿಭಾನ್ವಿತ ಹಿರಿಯ ಕವಿಗಳಲ್ಲೊಬ್ಬರಾಗಿರುವ ಚಿದಂಬರ ನರೇಂದ್ರ ಸೊಗಸಾಗಿ ಅನುವಾದಿಸಿದ್ದಾರೆ. ಅಪ್ಪು ಇಲ್ಲದ ನಿರ್ವಾತವನ್ನು ಅಪ್ಪಿಕೊಂಡ ಮನಸುಗಳು ಇದನ್ನೊಮ್ಮೆ ಓದಿದರೆ ಸಮಾಧಾನವೊಂದು ತಾನೇತಾನಾಗಿ ಸ್ಫುರಿಸೀತೇನೋ…