ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಹತ್ತಿರಾಗಿದೆ. ತಮ್ಮ ಆರಾಧ್ಯ ನಟನ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಬೇಕಾದ ಸಂಕಟವನ್ನು ಎದೆಯಲ್ಲಿಟ್ಟುಕೊಂಡೇ ಅಭಿಮಾನಿಗಳೆಲ ಪುನೀತ್ ಬರ್ತ್ಡೇಗೆ ಅಣಿಗೊಳ್ಳುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಅಪ್ಪು ಕನಸಿನ ಕೂಸಿನಂತಿದ್ದ, ಅವರ ಭಿನ್ನ ಅಭಿರುಚಿಗಳ ಧ್ಯೋತಕದಂತಿದ್ದ ಗಂಧದ ಗುಡಿ ಸಾಕ್ಷ್ಯ ಚಿತ್ರ ಓಟಿಟಿಗೆ ಆಗಮಿಸೋ ಕ್ಷಣಗಳೂ ಹತ್ತಿರಾಗುತ್ತಿವೆ. ಅಪ್ಪು ಹುಟ್ಟಿದ ದಿನದಂದು ಅಂದರೆ, ಇದೇ ತಿಂಗಳ ಹದಿನೇಳರಿಂದ ಗಂಧದ ಗುಡಿ ಓಟಿಟಿ ಪ್ಲಾಟ್ ಫಾರ್ಮಿಗೆ ಎಂಟರಿ ಕೊಡಲಿದೆ. ಇನ್ನು ಮುಂದೆ ಕಣ್ಣಂಚು ದಾಟಿ ಗಂಧದ ಗುಡಿಯ ಕಾಡಿನಲ್ಲಿ ಲೀನವಾದ ಅಪ್ಪು ನೆನಪುಗಳನ್ನು ಬೆರಳ ಮೊನೆಯಲ್ಲಿಯೇ ನೇವರಿಸಬಹುದು; ಪದೇ ಪದೆ ಸಂಭ್ರಮಿಸಬಹುದು!
ಇದು ಆಧುನೀಕರಣದ ಭರಾಟೆಗೆ ಸಿಕ್ಕು ಕಾಡುಗಳೆಲ್ಲ ನಾಮಾವಶೇಷ ಹೊಂದುತ್ತಿರುವ ಕಾಲಮಾನ. ಮತ್ತೊಂದೆಡೆಯಿಂದ, ಅಳಿದುಳಿದ ಕಾಡುಗಳೂ ಕೂಡಾ ಮೋಜು ಮಸ್ತಿಯ ಕೇಂದ್ರವಾಗಿ, ಟ್ರಕ್ಕಿಂಗಿನ ಹೆಸರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಡಂಪಿಂಗ್ ಯಾರ್ಡಿನಂತಾಗಿವೆ. ಇಂಥಾ ವಾತಾವರಣದಲ್ಲಿ, ಕರ್ನಾಟಕದ ಕಾಡು, ಮೇಡು ಪ್ರಾಕೃತಿಕ ಸೌಂದರ್ಯದತ್ತ ಫೋಕಸ್ಸು ಮಾಡುತ್ತಾ, ನಿರ್ದೇಶಕ ಅಮೋಘವರ್ಷರ ಜೊತೆ ಸಹಜವಾಗಿ ಹೆಜ್ಜೆ ಹಾಕುತ್ತಾ, ಕರುನಾಡ ಮಂದಿಗೆ ಬೇರೆಯದ್ದೇ ಜಗತ್ತೊಂದನ್ನು ಪರಿಚಯಿಸಿದ್ದವರು ಪುನೀತ್ ರಾಜ್ಕುಮಾರ್.
ಬಹುಶಃ ಸ್ಟಾರ್ ನಟನೊಬ್ಬ ಇಂಥಾ ಭಿನ್ನ ಪ್ರಯೋಗಗಳಿಗೆ ಒಡ್ಡಿಕೊಳ್ಳೋದೇ ಅಪರೂಪ. ಅಂಥಾದ್ದರಲ್ಲಿ ಪುನೀತ್ ಕಮರ್ಶಿಯಲ್ ಚೌಕಟ್ಟಿನಾಚೆ, ಸಾಮಾಜಿಕ ಕಳಕಳಿಯ ಭಾಗವಾಗಿದ್ದದ್ದು ಅಭಿಮಾನದಾಚೆಗೂ ಮೆಚ್ಚುಗೆ ಪಡೆದುಕೊಂಡಿತ್ತು. ದುರಂತವೆಂದರೆ, ಸಾಕ್ಷ್ಯಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಪುನೀತ್ ರಾಜ್ ಕುಮಾರ್ ನಿಧನ ಹೊಂದಿದ್ದರು. ಬಹುವಾಗಿ ಇಷ್ಟಪಟ್ಟು ಭಾಗಿಯಾಗಿದ್ದ ಗಂಧದ ಗುಡಿಯೇ ಅಪ್ಪುವಿನ ಕೊನೇಯ ಸಿನಿಮಾ ಪಯಣವಾಗಿ ದಾಖಲಾಗಿತ್ತು. ಅಂಥಾದ್ದೊಂದು ಸೆಂಟಿಮೆಂಟಿನ ಕಾರಣಕ್ಕೇ ಗಂಧದಗುಡಿ ದೊಡ್ಡ ಮಟ್ಟದಲ್ಲಿ ಗೆದ್ದಿತ್ತು ಅಂದುಕೊಳ್ಳಬೇಕಿಲ್ಲ. ಅಪ್ಪು ನಮ್ಮ ಜೊತೆ ಇದ್ದಿದ್ದರೂ ಆ ಕ್ರೇಜ್ ಇದೇ ರೀತಿ ಇರುತ್ತಿತ್ತು. ಅಪ್ಪು ಇಲ್ಲದ ಈ ಘಳಿಗೆಯಲ್ಲಿ ಓಟಿಟಿಗೆ ಆಗಮಿಸುತ್ತಿರುವ ಗಂಧದಗುಡಿ ಒಂದು ಥ್ರಿಲ್ ಮೂಡಿಸಿರೋದಂತೂ ಸತ್ಯ!