ಮೀನು ಅಂದ್ರೆ ಬಾಯಲ್ಲಿ ನೀರೂರಿಸಿಕೊಳ್ಳೋರು ವಿಶ್ವದ ತುಂಬೆಲ್ಲ ತುಂಬಿಕೊಂಡಿದ್ದಾರೆ. ನಮಗೆ ಗೊತ್ತಿರೋ ಒಂದಷ್ಟು ಮೀನುಗಳನ್ನು ಹೊರತು ಪಡಿಸಿಯೂ ರುಚಿಕಟ್ಟಾದ ಇನ್ನೆಷ್ಟೋ ಮೀನುಗಳಿದ್ದಾವೆ. ಅದನ್ನು ರುಚಿಕಟ್ಟಾಗಿ ಮತ್ತೆ ಮತ್ತೆ ತಿನ್ನುವಂತೆ ಮಾಡಬಲ್ಲಂಥಾ ನಾನಾ ಪಾಕ ವಿಧಾನಗಳೂ ಇದ್ದಾವೆ. ಅಷ್ಟಕ್ಕೂ ಇಂಥಾ ಮೀನುಗಳು ಬರೀ ಬಾಯಿ ರುಚಿಗೆ ಮಾತ್ರವಲ್ಲದೆ ನಾನಾ ಔಷದೀಯ ಗುಣಗಳನ್ನೂ ಹೊಂದಿವೆ. ಆದರೆ ಕೆಲ ಮೀನುಗಳು ಕಾರ್ಕೋಟಕ ವಿಷವನ್ನೇ ಮೈ ತುಂಬಾ ತುಂಬಿಕೊಂಡಿವೆ. ಆ ಮೀನನ್ನು ತಿಂದರೆ ಮರಣ ಖಚಿತ!
ನಾವು ಪ್ರತೀ ಮೀನುಗಳೂ ತಿನ್ನಲು ಯೋಗ್ಯವಾದವುಗಳೇ ಅಂದುಕೊಂಡಿರುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಕೊಂಚ ಯಾಮಾರಿದರೂ ಕೆಲ ಮೀನುಗಳು ಜೀವವನ್ನೇ ಕಿತ್ತುಕೊಂಡು ಬಿಡುತ್ತವೆ. ಅದಕ್ಕೆ ತಾಜಾ ಉದಾಹರಣೆಯಂತಿರೋದು ಪಫರ್ ಫಿಶ್. ಇಂಥಾ ಮೀನುಗಳು ಆಗಾಗ ಮೀನುಗಾರರ ಬಲೆಗೆ ಸಿಕ್ಕಿ ಸುದ್ದಿಯಲ್ಲಿರುತ್ತವೆ. ಬಾಲ್ನಂಥಾ ಆಕಾರದಲ್ಲಿ ಮೈ ತುಂಬಾ ಮುಳ್ಳುಗಳನ್ನ ಹೊಂದಿರೋ ಈ ಮೀನುಗಳನ್ನ ನೋಡಿದರೇನೇ ಭಯವಾಗುತ್ತೆ. ಒಂದು ವೇಳೆ ಯಾರಾದರೂ ಮೂರ್ಖತನದಿಂದ ಅದನ್ನು ಸಾಂಬಾರು ಮಾಡಿಒಕೊಂಡು ತಿಂದರೆ ಸಾಯೋದು ಗ್ಯಾರೆಂಟಿ.
ಯಾಕಂದ್ರೆ ಪಫರ್ ಪಿಶ್ ಮೈ ತುಂಬಾ ಕಾರ್ಕೋಟಕ ವಿಷವನ್ನಿಟ್ಟುಕೊಂಡಿದೆ. ಆ ವಿಷ ಎಷ್ಟು ಡೇಂಜರಸ್ ಅಂದ್ರೆ ಅದು ಏಕಕಾಲದಲ್ಲಿಯೇ ಮೂವತ್ತು ಮಂದಿಯನ್ನು ಬಲಿ ತೆಗೆದುಕೊಂಡು ಬಿಡಬಲ್ಲುದು. ಆದ್ದರಿಂದಲೇ ಈ ಮೀನನ್ನು ಯಾರೂ ಕೂಡಾ ಖಾದ್ಯ ಮಾಡಿಕೊಂಡು ಮೆಲ್ಲುವಂಥಾ ದುಸ್ಸಾಹಸಕ್ಕಿಳಿಯೋದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ತಿಂದವರನ್ನು ಯಾವ ಐಷಧಿಯೂ ಬದುಕಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಮೀನುಗಾರರು ಅಕಸ್ಮಾತಾಗಿ ಈ ಮೀನು ಸಿಕ್ಕರೆ ಅದನ್ನು ತಕ್ಷಣವೇ ವಿಲೇವಾರಿ ಮಾಡಿ ಬಿಡ್ತಾರೆ.