ಸಂಸದ ಪ್ರತಾಪ್ ಸಿಂಹ ಅಭಿವೃದ್ಧಿ ಕಾರ್ಯಗಳಿಗಿಂತಲೂ ನಾನಾ ವಿವಾದಗಳ ಮೂಲಕವೇ ಆಗಾಗ ಸದ್ದು ಮಾಡುತ್ತಿರುತ್ತಾರೆ. ಈ ಭರದಲ್ಲಿ ಆಗಾಗ ಎಡವಟ್ಟು ಹೇಳಿಕೆಗಳು ಕೂಡಾ ಅವರ ಕಡೆಯಿಂದ ಧಾರಾಳವಾಗಿಯೇ ಹೊರಬರುತ್ತಿರುತ್ತವೆ. ಇದೀಗ ಆತ ಬೀದಿನಾಯಿಗಳ ಸಮಸ್ಯೆಯ ಬಗ್ಗೆ ತನ್ನದೇ ಆದೊಂದು ವಾದವನ್ನು ಮಂಡಿಸಿದ್ದಾರೆ. ಬೀದಿ ನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದೊಂದೇ ಆ ಸಮಸ್ಯೆಗಿರುವ ಏಕೈಕ ಪರಿಹಾರವೆಂಬುದು ಪ್ರತಾಪ್ ಮಾತಿನ ಸಾರಾಂಶ.
ಬೆಂಗಳೂರು ಸೇರಿದಂತೆ ಅಲಲ್ಲಿ ಆಗಾಗ ಬೀದಿನಾಯಿಗಳ ಉಪಟಳ ಅತಿಯಾಗುತ್ತದೆ. ಒಮ್ಮೊಮ್ಮೆ ಪುಟ್ಟ ಮಕ್ಕಳ ಮೇಲೆ ದಾಳಿ ನಡೆಸುತ್ತಾ, ಕಂಡವರನ್ನು ಕಚ್ಚುತ್ತಾ ಇಂಥಾ ಶ್ವಾನಗಳು ಅಟಾಟೋಪ ಶುರುವಿಡುತ್ತವೆ. ಹಾಗೆ ಕಚ್ಚುವ ಬೀದಿನಾಯಿಗಳನ್ನು ಕನಿಕರವಿಲ್ಲದೆ ಕೊಲ್ಲಬೇಕೆಂಬುದು ಸಂಸದನ ಮಾತು. ಪ್ರಾಣಿ ದಯಾ ಸಂಘಗಳು ಮತ್ತು ಪ್ರಾಣಿ ಪ್ರೇಮಿಗಳ ದೆಸೆಯಿಂದ ಈವರೆಗೂ ಅಂಥಾ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದಿರುವ ಸಿಂಹ, ಅಂಥಾ ಪ್ರಾಣಿ ಪ್ರೇಮಿಗಳ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿದರೆ ಗೊತ್ತಾಗುತ್ತೆ ಅಂತಲೂ ವ್ಯಗ್ಯವಾಡಿದ್ದಾರೆ.
ಅಷ್ಟಕ್ಕೂ ಈ ಬೀದಿ ನಾಯಿಗಳ ಸಮಸ್ಯೆಗೊಂದು ಸುಧೀರ್ಘವಾದ ಇತಿಹಾಸವೇ ಇದೆ. ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ಬಿಬಿಎಂಪಿ ಕೂಡಾ ಆ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ಆಗಾಗ ವಿಫಲವಾಗುತ್ತಿದೆ. ಹಾಗಂತ ಆ ಬಡಪಾಯಿ ನಾಯಿಗಳನ್ನು ಕೊಲ್ಲೋದೊಂದೇ ಪರಿಹಾರ ಅಂದರೆ ಅದು ನಿಜಕ್ಕೂ ದುಷ್ಟತನವಾಗುತ್ತದೆ. ಗೋಮಾತೆ ಅಂತೆಲ್ಲ ಭಳಾಂಗು ಬಿಡುತ್ತಾ ಅದರ ಹತ್ಯೆಯ ನಿಷೇಧವನ್ನೂ ಇದೇ ಸಿಂಹನ ಪಕ್ಷ ಮಾಡಿದೆ. ಆ ಪಕ್ಷದ ನಾಯಕರನೇಕರು ಅದನ್ನೇ ಮುಂದಿಟ್ಟುಕೊಂಡು ತಮ್ಮನ್ನು ತಾವು ಪ್ರಾಣಿ ಪ್ರೇಮಿಗಳಂತೆ ಬಿಂಬಿಸಿಕೊಳ್ಳುತ್ತಾರೆ. ಆ ಗೋವಿನದ್ದೂ ಜೀವವೇ. ಶ್ವಾನಗಳ ದೇಹದಲ್ಲಿ ದೇವಾನುದೇವತೆಗಳು ಬೀಡು ಬಿಡದಿರೋದು ಶ್ವಾನಗಳ ತಪ್ಪಲ್ಲ. ಇದೆಲ್ಲದರಾಚೆ ನಾಯಿಗಳದ್ದೂ ಜೀವವೇ. ಅವುಗಳ ಉಪಟಳಕ್ಕೆ ಬ್ರೇಕ್ ಹಾಕಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಷ್ಟೆ. ಇದನ್ನು ತಿಳಿದುಕೊಳ್ಳುವ ಕನಿಷ್ಟ ಸೌಜನ್ಯವೂ ಈ ಸಂಸದನಿಗಿಲ್ಲದಿರೋದು ವಿಪರ್ಯಾಸ.