ಕಳೆದ ಎರಡ್ಮೂರು ವರ್ಷಗಳಿಂದ ಪ್ರಿಯಾಂಕಾ ಉಪೇಂದ್ರ ತಮ್ಮ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮಮ್ಮಿ ಚಿತ್ರದ ಮೂಲಕ ಮತ್ತೆ ಹೆಸರು ಮಾಡಿದ ಪ್ರಿಯಾಂಕಾ, ಆ ನಂತರದಲ್ಲಿ ತಿರುಗಿ ನೋಡದೆ ಹೊಸಾ ಬಗೆಯ ಪಾತ್ರಗಳಲ್ಲಿ ನಟಿಸುತ್ತಾ ಮತ್ತೆ ಪ್ರೇಕ್ಷಕರನ್ನು ಮೋಡಿಗೀಡು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎರಡನೇ ಇನ್ನಿಂಗ್ಸ್ ಅನ್ನು ಹೀಗೆ ತಾನಿಷ್ಟ ಪಟ್ಟಂತೆಯೇ ಮುಂದುವರೆಸೋ ಭಾಗ್ಯ ಬಹಳಷ್ಟು ಕಲಾವಿದರಿಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ನೋಡ ಹೋದರೆ ಪ್ರಿಯಾಂಕಾ ನಿಜಕ್ಕೂ ಲಕ್ಕಿ. ಹೀಗೆ ಮುಂದುವರೆಯುತ್ತಿರುವ ಅವರೀಗ ಮತ್ತೊಮ್ಮೆ ಪೊಲೀಸ್ ಗೆಟಪ್ಪಿನಲ್ಲಿ, ಡಿಫರೆಂಟಾದೊಂದು ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿಯಿಂದಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಈ ಹಿಂದೊಂದು ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಣಿಯಾಗಿ ಕಾಣಿಸಿಕೊಂಡಿದ್ದರು. ಅದುವರೆಗೂ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು ಉಗ್ರಾವತಾರಕ್ಕೈ ಸೈ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದರು. ಆ ಚಿತ್ರದಲ್ಲಿ ಅವರು ಅಭಿನಯಿಸಿದ್ದ ರೀತಿಯೇ ಇದೀಗ ಅವರಿಗೆ ಮತ್ತೊಮ್ಮೆ ಪೊಲೀಸ್ ಆಗುವ ಅವಕಾಶವನ್ನು ಒದಗಿಸಿದೆ. ಬಹುಶಃ ಖುದ್ದು ಪ್ರಿಯಾಂಕಾ ಅವರೇ ಇಂಥಾದ್ದೊಂದು ಪಾತ್ರ ಮತ್ತ ತಮಗೆ ಸಿಗುತ್ತದೆ ಅಂದುಕೊಂಡಿರಲಿಕ್ಕಿಲ್ಲವೇನೋ. ಅಂಥಾದ್ದೊಂದು ಅಪರೂಪದ ಅವಕಾಶ ಕತ್ರು ಕರ್ಮ ಕ್ರಿಯಾ ಎಂಬ ವಿಭಿನ್ನ ಚಿತ್ರದ ಮೂಲಕ ಅವರ ಪಾಲಿಗೆ ಒದಗಿ ಬಂದಿದೆ.
ಈ ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದೆ. ಹಾಗಿದ್ದ ಮೇಲೆ ಕಥೆಯೂ ಭಿನ್ನವಾಗಿಯೇ ಇರಲಿದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಪ್ರಿಯಾಂಕಾರ ಪಾತ್ರದ ಚಹರೆಗಳನ್ನು ಗಮನಿಸಿದರೇನೇ ಒಟ್ಟಾರೆ ಕಥೆಯಲ್ಲಿರೋ ಹೊಸತನ ಎಂಥಾದ್ದೆಂಬುದರ ಅರಿವಾಗದಿರೋದಿಲ್ಲ. ಪೊಲೀಸ್ ಪಾತ್ರವೆಂದರೆ ಖಾಕಿ ಧರಿಸಿದ ಅಧಿಕಾರಿಯ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಈ ಚಿತ್ರದುದ್ದಕ್ಕೂ ಪ್ರಿಯಾಂಕಾ ಪೊಲೀಸ್ ದಿರಿಸು ಧರಿಸೋದಿಲ್ಲವಂತೆ. ಮತ್ತೂ ವಿಶೇಷವೆಂದರೆ, ಅವರಿಲ್ಲಿ ಯಾವುದೇ ಥರದ ಮೇಕಪ್ ಇಲ್ಲದೆಯೇ ಕಾಣಿಸಿಕೊಳ್ಳಲಿದ್ದಾರೆ. ಅವರೇ ಹೇಳಿರುವ ಪ್ರಕಾರ ಈಗಾಗಲೇ ಸದರಿ ಪಾತ್ರಕ್ಕಾಗಿ ತಾಲೀಮು ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಗೆಗಿನ ಮತ್ತಷ್ಟು ಮಾಹಿತಿಗಳು ಜಾಹೀರಾಗಲಿದ್ದಾವೆ.