ಒಂದು ಸಿನಿಮಾವನ್ನು ಆರಂಭಿಸಿ, ಪ್ರತೀ ಹಂತದಲ್ಲಿಯೂ ಅದರತ್ತ ಪ್ರೇಕ್ಷಕರು ಆಷರ್ಶಿತರಾಗುವಂತೆ ನೋಡಿಕೊಳ್ಳೋದೇ ಒಂದು ಕಲೆ. ಅದಕ್ಕಾಗಿಯೇ ನಾನಾ ಪ್ರಚಾರ ತಂತ್ರಗಳು ಚಾಲ್ತಿಯಲ್ಲಿವೆ; ಆ ಸಾಲಿಗೆ ಹೊಸ ಹೊಸಾ ಪಟ್ಟುಗಳು ಸೇರ್ಪಡೆಯಾಗುತ್ತಲೇ ಸಾಗುತ್ತಿವೆ. ಅಂಥಾ ಸಾಲಿಗೆ ಮತ್ತೊಂದಷ್ಟು ರೋಚಕ ಅಂಶಗಳನ್ನು ಸೇರಿಸಿದ ಖ್ಯಾತಿ ಪ್ರೇಮ್ಗೆ ಸಲ್ಲುತ್ತದೆ. ಈ ಕಾರಣಕ್ಕಾಗಿಯೇ ಆತ ಶೋಮ್ಯಾನ್ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ಆದರೆ ಇತ್ತೀಚೆಗೆ ಬದಲಾದಂತಿರುವ ಪ್ರೇಮ್ಸ್ ಇದೀಗ ಕೆಡಿ ಎಂಬ ಚಿತ್ರವನ್ನು ಆರಂಭಿಸಿದ್ದಾರೆ. ಅದು ನಿಜಕ್ಕೂ ಒಂದಷ್ಟು ಸಂಚಲನ ಸೃಷ್ಟಿಸುತ್ತಿದೆ.
ಕೆಡಿ ಧ್ರುವ ಸರ್ಜಾ ನಾಯಕನಾಗಿ ನಟಿಸಲಿರೋ ಪ್ಯಾನಿಂಡಿಯಾ ಚಿತ್ರ. ವಾರದ ಹಿಂದಷ್ಟೇ ಅದರ ಟೈಟಲ್ ಲಾಂಚ್ ಆಗಿತ್ತು. ಆ ನಂತರದಲ್ಲಿ ಕೆಡಿಯ ಕ್ರೇಜ್ ಅದ್ಯಾವ ಪರಿಯಾಗಿ ಹಬ್ಬಿಕೊಂಡಿದೆ ಎಂದರೆ, ಬೇರೆ ಬೇರೆ ಭಾಷೆಗಳಲ್ಲಿ ವಿತರಣಾ ಹಕ್ಕ ಖರೀದಿಗಾಗಿ ಪೈಪೋಟಿ ಆರಂಭವಾಗಿದೆಯಂತೆ. ಈ ಸುದ್ದಿಯೂ ಪ್ರೇಮ್ ಪ್ರಚಾರದ ಪಟ್ಟಿನ ಭಾಗವಾಗಿರಬಹುದಾ ಎಂಬಂಥಾ ಸಂದೇಹ ಮೂಡಿಕೊಳ್ಳೋದು ಸಹಜ. ಆದರೆ ಅದರಲ್ಲಿಯೂ ಸತ್ಯಾಂಶವಿದ್ದಂತಿದೆ.
ಈ ಬಾರಿ ಕೆಡಿ ಮೂಲಕ ಪ್ರೇಮ್ಸ್ ಮೋಡಿ ಮಾಡುತ್ತಾರೆಂಬ ನಂಬಿಕೆ ಗಟ್ಟಿಗೊಂಡಿದೆ. ಆತ ತನ್ನ ಬೂಟಾಟಿಕೆಯ ಸ್ವಭಾವ ಬಿಟ್ಟು ಗಂಭೀರವಾಗಿ ಮುನ್ನಡೆದರೆ, ಖಂಡಿತಾ ಒಂದೊಳ್ಳೆ ಫಲಿತಾಂಶ ಸಿಕ್ಕೇ ಸಿಗುತ್ತದೆ. ಇನ್ನೂ ಈ ಸಿನಿಮಾದ ಚಿತ್ರೀಕರಣವೇ ಆರಂಭವಾಗಿಲ್ಲ. ಅದಾಗಲೇ ಕೆಡಿ ಸೃಷ್ಟಿಸಿರುವ ಕ್ರೇಜ್ ಮಾತ್ರ ಎಂಥವರನ್ನೂ ಅವಾಕ್ಕಾಗಿಸುವಂತಿದೆ. ಇದಕ್ಕೂ ಮುನ್ನ ದಿ ವಿಲನ್ ಕಾಲದಲ್ಲಿ ಪ್ರೇಮ್ ಬಹಳಷ್ಟು ಮೂದಲಿಕೆಗೀಡಾಗಿದ್ದರು. ಥರ ಥರದ ಅವಮಾನಗಳನ್ನು ಅನುಭವಿಸಿದ್ದರು. ಅದೆಲ್ಲವನ್ನು ಒಳಗಿಟ್ಟುಕೊಂಡೇ ಅವರು ಕೆಡಿ ಮೂಲಕ ಸ್ಫೋಟಗೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ!