ಕರ್ನಾಟಕವೀಗ ವಿಧಾನಸಭಾ ಚುನಾವೆಯ ಹೊಸ್ತಿಲಿನಲ್ಲಿ ನಿಂತಿದೆ. ಇದರ ಭಾಗವಾಗಿಯೇ ಜನಸಾಮಾನ್ಯರ ಆ ಕ್ಷಣದ ಅನಿವಾರ್ಯತೆಗಳನ್ನು ಬಳಸಿಕೊಂಡು, ಮುಲಾಜಿಗೆ ಕೆಡವಿಕೊಳ್ಳುವ ರಾಜಕಾರಣದ ಮೇಲಾಟಗಳೂ ಕೂಡಾ ಜೋರಾಗಿಯೇ ನಡೆಯುತ್ತಿವೆ. ಜನಸಾಮಾನ್ಯರೇ ಹೀಗೆ ಆಮಿಷಗಳಿಗೆ ಗುರಿಯಾಗಿಬಿಟ್ಟರೆ, ಪ್ರಜಾಪ್ರಭತ್ವದ ಹೆಸರಲ್ಲಿ ಲೂಟಿ ಹೊಡೆಯುತ್ತಿರುವ ಖದೀಮರಿಗೆಲ್ಲ ಪರವಾನಗಿ ಸಿಕ್ಕಂತಾಗುತ್ತದೆ. ಇಂಥಾ ಘಳಿಗೆಯಲ್ಲಿ ಪ್ರಭಾವಶಾಲಿ ಮಾಧ್ಯಮವಾದ ಸಿನಿಮಾ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡೋದಿದೆಯಲ್ಲಾ? ಅದು ನಿಜಕ್ಕೂ ಪ್ರಜಾಪ್ರಭುತ್ವದ ಅಸಲೀ ಮೌಲ್ಯ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ದಾಖಲಾಗುತ್ತದೆ. ಅದೇ ಆಶಯಗಳನ್ನು ಹೊಂದಿರುವ `ಪ್ರಭುತ್ವ’ ಚಿತ್ರದ ಟ್ರೈಲರ್ ಇದೀಗ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ!
ಅಂದಹಾಗೆ, ಇದು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ಚಿತ್ರ. ಇತ್ತೀಚಿನ ದಿನಗಳಲ್ಲಿ ಗಟ್ಟಿ ಕಂಟೆಂಟಿನ ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ಅದರ ಮುಂದುವರೆದ ಭಾಗವಾಗಿಯೇ, ಭಿನ್ನ ಕಥಾನಕವನ್ನೊಳಗೊಂಡಿರುವ ಚಿತ್ರ ಪ್ರಭುತ್ವ. ರವಿರಾಜ್ ಎಸ್ ಕುಮಾರ್ ಪ್ರಭುತ್ವವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ರವಿರಾಜ್ ಅವರ ತಂದೆ ಡಾ.ಮೇಘಡಹಳ್ಳಿ ಶಿವಕುಮಾರ್ ಇದಕ್ಕೆ ಕಥೆ ಬರೆದಿದ್ದಾರೆ. ಪಕ್ಕಾ ಸಾಮಾಜಿಕ ಕಳಕಳಿ ಹೊಂದಿರುವ ಈ ಕಥೆಯನ್ನು ಕಮರ್ಷಿಯಲ್ ಚೌಕಟ್ಟಿಗೆ ಒಗ್ಗುವಂತೆ ಆರ್. ರಂಗನಾಥ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ನಡೆದ ಅರ್ಥಪೂರ್ಣವಾದ ಸಮಾರಂಭವೊಂದರಲ್ಲಿ ಪ್ರಭುತ್ವದ ಟ್ರೈಲರ್ ಅನ್ನು ರಾಜಕೀಯ ಮುಖಂಡರಾದ ರವೀಂದ್ರ ಅನಾವರಣಗೊಳಿಸಿದ್ದಾರೆ.
ಹಾಗೆ ಬಿಡುಗಡೆಗೊಂಡಿರುವ ಪ್ರಭುತ್ವ ಚಿತ್ರದ ಟ್ರೈಲರ್ ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಇದರಲ್ಲಿ ಮಹತ್ವದ, ವಿಶಿಷ್ಟವಾದ ಕಂಟೆಂಟ್ ಇದೆ ಎಂಬ ಸುಳಿವು ಸ್ಪಷ್ಟವಾಗಿಯೇ ಎಲ್ಲರಿಗೂ ಸಿಕ್ಕಿ ಹೋಗಿದೆ. ಯಶಸ್ವೀ ಟ್ರೈಲರ್ ಒಂದರ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿರುವ ಪ್ರಭುತ್ವದ ಟ್ರೈಲರ್ ಒಂದೇ ಏಟಿಗೆ ಸರ್ವರನ್ನೂ ಸೆಳೆದುಕೊಂಡಿದೆ. ಈ ಚಿತ್ರದಲ್ಲಿ ಚೇತನ್ ಚಂದ್ರರ ಪಾತ್ರ ಅದೆಷ್ಟು ಭಿನ್ನವಾಗಿದೆ ಎಂಬುದನ್ನೂ ಕೂಡಾ ಸದರಿ ಟ್ರೈಲರ್ ಜಾಹೀರು ಮಾಡಿದೆ. ಗೌಳಿ ಮೂಲಕ ಭರ್ಜರಿ ಗೆಲುವಿನ ಖುಷಿಯಲ್ಲಿರುವ ಪಾವನಾ ಗೌಡ ಇಲ್ಲಿ ಅನು ಎಂಬ ಪಾತ್ರದ ಮೂಲಕ ಚೇತನ್ ಚಂದ್ರ ಅವರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.
ನಿರ್ದೇಶಕ ರಂಗನಾಥ್ ಕೂಡಾ ಈ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಪಳಗಿಕೊಂಡಿರುವವರು. ಪ್ರಭುತ್ವ ಅವರು ನಿರ್ದೇಶನ ಮಾಡಿರೋ ಹನ್ನೆರಡನೇ ಚಿತ್ರ. ವಿಭಿನ್ನವಾಗಿದ್ದ ಈ ಕಥೆಯನ್ನು ಕಮರ್ಷಿಯಲ್ ಚೌಕಟ್ಟಿಗೆ ಒಗ್ಗಿಸುವ ಸವಾಲನ್ನು ಅವರು ಸಮರ್ಥವಾಗಿಯೇ ಸ್ವೀಕರಿಸಿದಂತಿದೆ. ಅದು ಸದರಿ ಟ್ರೈಲರ್ನಲ್ಲಿ ನಿಖರವಾಗಿಯೇ ಗೋಚರಿಸುತ್ತಿದೆ. ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನವಿರುವ ಈ ಚಿತ್ರದಲ್ಲಿ ಚೇತನ್ ಚಂದ್ರ, ಪಾವನಾ, ಶರತ್ ಲೋಹಿತಾಶ್ವ, ಆದಿ ಲೋಕೇಶ್, ನಾಸರ್, ಹರೀಶ್ ರಾಯ್, ಅನಿತಾ ಭಟ್, ವೀಣಾ ಸುಂದರ್, ಅರವಿಂದ ರಾವ್, ವಿಜಯ್ ಚೆಂಡೂರ್, ರಾಜೇಶ್ ನಟರಂಗ ಮುಂತಾದವರು ನಟಿಸಿದ್ದಾರೆ. ಈ ಚುನಾವಣಾ ಪೂರ್ವದಲ್ಲಿಯೇ ಪ್ರಭುತ್ವವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಪ್ರಯತ್ನಿಸುತ್ತಿದೆ…