ಇದು ಒಂದಕ್ಕಿಂತ ಒಂದು ಭಿನ್ನವಾದ, ಒಂದೊಂದೂ ವಿಸ್ಮಯಕಾರಿಯಾಗ ಕೋಟ್ಯಾನುಕೋಟಿ ಜೀವ ಸಂಕುಲವಿರೋ ಜಗತ್ತು. ಅಮೇಜಾನಿನಂತ ಕಾಡಿನಲ್ಲಿ ವಾಸಿಸೋ ಪ್ರಾಣಿ, ಪಕ್ಷಿ, ಜೀವ ಸಂಕುಲದ ಬಗ್ಗೆ ಈ ಕ್ಷಣಕ್ಕೂ ತಲಾಶು ನಡೆಯುತ್ತಿದೆ. ಆದರೆ ಅದು ಯಾವತ್ತಿಗೂ ಪೂರ್ಣವಾಗೋದು ಸಾಧ್ಯವಿಲ್ಲವೇನೋ. ಯಾಕಂದ್ರೆ ಅದರ ಅಗಾಧತೆಯೇ ಅಂಥಾದ್ದಿದೆ. ಹೀಗೆ ನಮಗೆ ಪರಿಚಯವಿಲ್ಲದ ಜೀವಿಗಳ ಕಥೆಯನ್ನ ಪಕ್ಕಕ್ಕಿಡೋಣ. ಆದ್ರೆ ನಮಗೆ ಪರಿಚಿತವಾಗಿರೋ ಜೀವಿಗಳ ಬಗ್ಗೆ ನಮಗೆ ಗೊತ್ತೇ ಇಲ್ಲದ ಅಸಂಖ್ಯಾತ ಸಂಗತಿಗಳಿದ್ದಾವೆ.
ಮುಳ್ಳು ಹಂದಿ ಅನ್ನೋ ಜೀವಿ ಕಾಡಂಚಿನ ಪ್ರದೇಶದಲ್ಲಿರುವವರಿಗೆಲ್ಲ ಪರಿಚಿತ. ಬೇರೆ ಭಾಗಗಳ ಜನ ಕೂಡಾ ಅದರ ಬಗ್ಗೆ ಒಂದಷ್ಟು ಕೇಳಿರಬಹುದು. ದೊಡ್ಡ ಕಾಡು ಹಂದಿಗಳಿರುತ್ತವಲ್ಲಾ? ಅದುಗಳಿಗಿಂತ ತೀರಾ ಚಿಕ್ಕ ದೇಹ ಮುಳ್ಳುಹಂದಿಗಳದ್ದಾಗಿರುತ್ತೆ. ಇವುಗಳಲ್ಲಿನ ವ್ಯತ್ಯಾಸ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮಾಮೂಲಿ ಕಾಡು ಹಂದಿಗಳಿಗೆ ಮೈ ತುಂಬಾ ಒರಟಾದ ಕೂದಲುಗಳಿದ್ದರೆ, ಈ ಮುಳ್ಳು ಹಂದಿಗಳಿಗೆ ಮಾತ್ರ ಮೈ ತುಂಬಾ ಚೂಪಾದ ಮುಳ್ಳುಗಳಿರುತ್ತವೆ. ಅವು ಶತ್ರುಗಳಿಂದ ತಮ್ಮನ್ನು ಕಾಪಾಡಿಕೊಳ್ಳಲು ಆ ಮುಳ್ಳುಗಳನ್ನ ರಕ್ಷಾ ಕವಚದಂತೆ ಬಳಸಿಕೊಳ್ಳುತ್ತವೆ.
ಈ ಮುಳ್ಳು ಹಂದಿಗಳೇನಾದರೂ ಮುಳ್ಳು ಚಿಮ್ಮಿಸಿದರೆ, ಅದು ನಮ್ಮ ದೇಹದ ಆಯಕಟ್ಟಿನ ಜಾಗಕ್ಕೆ ಚುಚ್ಚಿಕೊಂಡರೆ ನಂಜೇರಿ ಸಾಯಬೇಕಾದೀತು. ಅಂಥಾ ಶಾರ್ಪ್ ಮತ್ತು ವಿಷಯುಕ್ತವಾದ ಮುಳ್ಳುಗಳವು. ಈ ಕಾರಣದಿಂದಲೇ ಬೇಟೆಗಾರರು ಕೂಡಾ ಮುಳ್ಳುಹಂದಿಯನ್ನು ಬಲಿ ಹಾಕಲು ಹಿಂದೆ ಮುಂದೆ ನೋಡ್ತಾರೆ. ಆದ್ರೆ ಈ ಮುಳ್ಳು ಹಂದಿಗಳ ದೇಹದಲ್ಲಿ ಸರಿಸುಮಾರು ಎಷ್ಟು ಮುಳ್ಳುಗಳಿದ್ದಿರಬಹುದು ಅಂತ ಹೆಚ್ಚಿನವರು ಆಲೋಚಿಸಿರಲಿಕ್ಕಿಲ್ಲ. ಒಂದು ಅಧ್ಯಯನದ ಪ್ರಕಾರ ಹೇಳೋದಾದ್ರೆ ಮುಳ್ಳು ಹಂದಿಗಳ ಮೈಯಲ್ಲಿ ಕನಿಷ್ಠ ಮೂವತ್ತು ಸಾವಿರಕ್ಕೂ ಹೆಚ್ಚು ಮುಳ್ಳುಗಳಿರುತ್ತವಂತೆ!