ಸಿನಿಮಾ ರಂಗದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬುದು ಹಲವರ ಕನಸು. ಅದಕ್ಕಾಗಿ ಪಡುವ ಪರಿಶ್ರಮ, ಆ ಹಾದಿ ತಂದೊಡ್ಡುವ ಸವಾಲುಗಳು ಸಲೀಸಾದುವೇನಲ್ಲ; ಅದನ್ನು ಎದುರಿಸಿ ದಾಟಿಕೊಳ್ಳದಿದ್ದರೆ ಗೆಲುವೆಂಬುದು ದಕ್ಕುವುದು ಕನಸಿನ ಮಾತು. ಆದರೆ, ಅಷ್ಟೆಲ್ಲವನ್ನೂ ಮೀರಿಕೊಂಡು ಬಣ್ಣದ ಜಗತ್ತಿಗೆ ಬಂದ ಹೆಣ್ಣುಮಕ್ಕಳ ಪಾಲಿಗೆ ಮತ್ತೊಂದು ಆಯಾಮದ ಕಂಟಕಗಳು ಹೆಜ್ಜೆ ಹೆಜ್ಜೆಗೂ ಎದುರಾಗುತ್ತಲೇ ಹೋಗುತ್ತವೆ. ಅದರಲ್ಲಿಯೂ ಸಿನಿಮಾ ರಂಗದ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಕೆಲ ಮಂದಿ, ಅವಕಾಶ ಕೇಳಿ ಬಂದ ಹುಡುಗೀರನ್ನು ಮಂಚ ಹತ್ತಿಸಿಕೊಳ್ಳುವ ಖಯಾಲಿ ಇಟ್ಟುಕೊಂಡಿರುತ್ತಾರೆ. ಇಂಥಾ ಹೀನ ಮನಃಸ್ಥಿತಿಯ ವಿರುದ್ಧ ವರ್ಷಗಳ ಹಿಂದೆ ಕಾಸ್ಟಿಂಗ್ ಕೌಚ್ ಅಂತೊಂದು ವಿಚಾರ ಮುನ್ನೆಲೆಗೆ ಬಂದಿತ್ತು. ಕೊರೋನಾ ಕಾಲಘಟ್ಟದಲ್ಲಿ ತಣ್ಣಗಾದಂತಿದ್ದ ಕಾಸ್ಟಿಂಗ್ ಕೌಚ್ಗೀಗ ಮತ್ತೆ ಜೀವ ಬಂದಿದೆ.
ಇದೀಗ ಕನ್ನಡವೂ ಸೇರಿದಂತೆ ನಾನಾ ಚಿತ್ರರಂಗಗಳಲ್ಲಿ ಮತ್ತೆ ಕಾಸ್ಟಿಂಗ್ ಕೌಚ್ ವೃತ್ತಾಂತ ಗರಿಬಿಚ್ಚಿಕೊಳ್ಳಲಾರಂಭಿಸಿದೆ. ಅದರ ಭಾಗವಾಗಿಯೇ ಮಧ್ಯಪ್ರದೇಶ ಮೂಲದ ಬಾಲಿವುಡ್ ನಟಿ ಹಾಗೂ ರಂಗಭೂಮಿಯ ಪ್ರತಿಭಾನ್ವಿತ ಕಲಾವಿದೆ ಪೂಜಾ ಪಾಂಡೆ ಕಾಸ್ಟಿಂಗ್ ಕೌಚ್ ಅನುಭವಗಳನ್ನು ತೆರೆದಿಟ್ಟಿದ್ದಾಳೆ. ಆಕೆಯ ಪ್ರಕಾರವಾಗಿ ಹೇಳೋದಾದರೆ ಚಿತ್ರರಂಗದಲ್ಲಿ ಮಂಚ ಹತ್ತಿಸಿಕೊಳ್ಳುವ ಖಯಾಲಿಯ ಮಂದಿ ಹೆಚ್ಚಿಕೊಂಡಿದ್ದಾರೆ. ಇದುವರೆಗೂ ಆಕೆಗೆ ಸಾಕಷ್ಟು ಸಲ ಇಂಥಾ ಅನುಭವಗಳಾಗಿವೆಯಂತೆ. ಹೀಗೆ ಕಾಟ ಕೊಡುವ ಮಂದಿಯ ನಂಬರ್ಗಳನ್ನು ಬ್ಲಾಕ್ ಲಿಸ್ಟಿಗೆ ಹಾಕಿ ಪೂಜಾ ಪಾರಾಗುತ್ತಾ ಬರುತ್ತಿದ್ದಾಳಂತೆ. ಇದೀಗ ಆಕೆಯ ಮೊಬೈಲಿನಲ್ಲಿ ಬ್ಲಾಕ್ ಲಿಸ್ಟಿಗೆ ಸೇರಿಕೊಂಡಿರುವ ಫೋನ್ ನಂಬರುಗಳ ಸಂಖ್ಯೆ ನೂರರ ಗಡಿ ದಾಟಿದೆಯೆಂದರೆ, ಯಾರಿಗಾದರೂ ಪೂಜಾ ಅನುಭವಿಸುತ್ತಿರುವ ಮಾನಸಿ ಯಾತನೆ ಎಂಥಾದ್ದೆಂಬುದರ ಸ್ಪಷ್ಟ ದರ್ಶನವಾಗುತ್ತದೆ.
ಹೀಗೆ ಕಾಮುಕರಿಂದ ನಾನಾ ಪೀಡನೆಗೊಳಗಾಗಿರುವ ಪೂಜಾ ಪಾಂಡೆ ಈಗಾಗಲೇ ನಟಿಯಾಗಿ ಒಂದಷ್ಟು ಹೆಸರು ಮಾಡಿದ್ದಾಳೆ. ರಂಗಭೂಮಿ ತಂಡಗಳೊಂದಿಗೆ ಪಳಗಿಕೊಂಡು, ಯಕ್ಷಗಾನ ಕಲೆಯಲ್ಲಿಯೂ ಪರಿಣಿತಿ ಹೊಂದಿರುವ ಪೂಜಾ, ಇದೀಗ ಒಂದಷ್ಟು ಭಿನ್ನ ಬಗೆಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾಳೆ. ಸದ್ಯಕ್ಕೆ ಮನೀಶ್ ಮುಂದ್ರಾ ಅವರ ಚಿತ್ರವೊಂದರಲ್ಲಿ ನಟಿಸಲು ತಯಾರಾಗುತ್ತಿದ್ದಾಳೆ. ಅದರಲ್ಲಿ ಪೂಜಾ ಅತ್ಯಾಚಾರ ಸಂತ್ರಸ್ತೆಯ ಪಾತ್ರವನ್ನು ನಿಭಾಯಿಸಲಿದ್ದಾಳಂತೆ. ತನ್ನ ಪಾಲಿಗಿದು ಚಾಲೆಂಜಿಂಗ್ ಪಾತ್ರ ಎಂಬ ಖುಷಿಯಲ್ಲಿರುವ ಪೂಜಾ, ಇದೀಗ ಅದಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿದ್ದಾಳೆ. ಯಾವಾಗ ಪೂಜಾ ಪಾಂಡೆ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿಯೆತ್ತಿದಳೋ, ಅದರರ ದೆಸಯಿಂದಲೇ ಈಗ ಬಾಲಿವುಡ್ಡಿನಲ್ಲಿ ಮತ್ತೆ ಆ ದಿಕ್ಕಿನಲ್ಲಿ ಚರ್ಚೆಗಳು ನಡೆಯಲಾರಂಭಿಸಿದ್ದಾವೆ.