ಈವತ್ತು ಇಡೀ ಜಗತ್ತು ಅಂಗೈಲಿರುವಂತೆಯೇ ಫೀಲ್ ಆಗುವಂಥಾ ವಾತಾವರಣವಿದೆ. ಈ ಆಧುನಿಕ ಜಗತ್ತಿನಲ್ಲೀಗ ಯಾವುದೂ ನಿಗೂಢವಾಗುಳಿದಿಲ್ಲ. ನಮಗೆಲ್ಲ ಯಾವ ವಿಚಾರಗಳೂ ವಿಸ್ಮಯ ಅನ್ನಿಸೋದಿಲ್ಲ. ಹೀಗೆ ಎಲ್ಲ ತಂತ್ರಜ್ಞಾನಗಳೂ ಖುಲ್ಲಂಖುಲ್ಲ ಆಗಿರೋ ಈ ಘಳಿಗೆಯಲ್ಲಿಯೂ ಕೆಲವೊಂದು ವಿಚಾರಗಳು ಮಾತ್ರ ಯಥಾಪ್ರಕಾರ ಆಕರ್ಷಣೆ ಉಳಿಸಿಕೊಂಡಿವೆ. ಅದರಲ್ಲಿ ಇದೀಗ ವಿಶ್ವದ ತುಂಬೆಲ್ಲ ಹಾರಾಡಿಕೊಂಡಿರೋ ವಿಮಾನಗಳದ್ದು ಅಗ್ರ ಸ್ಥಾನ.
ಆಕಾಶದಲ್ಲಿ ವಿಮಾನದ ಸೌಂಡು ಕೇಳಿದರೆ ಪುಟ್ಟ ಮಕ್ಕಳಂತೆ ಅದರತ್ತ ನೋಡುವಂಥ ಬೆರಗು ಈಗಲೂ ಉಳಿದು ಹೋಗಿದೆ. ಮೋಡದ ಮುದ್ದೆ ಸೀಳಿಕೊಂಡು ಪುಟ್ಟ ಹಕ್ಕಿಯಂತೆ ಹಾರಾಡೋ ದೈತ್ಯ ವಿಮಾನ ಎವರ್ಗ್ರೀನ್ ಆಕರ್ಷಣೆ. ಅದೆಷ್ಟೋ ಸಾವಿರ ಮೈಲಿಗಳಷ್ಟು ಎತ್ತರದಲ್ಲಿ ವಿಮಾನ ಚಲಾಯಿಸೋ ಪೈಲಟ್ ಅಂತೂ ದೇವಮಾನವನಂತೆಯೇ ಕಾಣ್ತಾನೆ. ಹಾಗೆ ವಿಮಾನಗಳು ಹೇಗೆ ಹಾರಾಡ್ತಾವೆ, ಅವುಗಳನ್ನ ಪೈಲಟ್ ಹೇಗೆ ಗಮ್ಯ ಸೇರಿಸ್ತಾನನ್ನೋದೆಲ್ಲ ಕುತೂಹಲದ ಸಂಗತಿಗಳೇ.
ಹಾಗೆ ಆ ಪಾಟಿ ಗಾತ್ರದ ವಿಮಾನವನ್ನು ವಿಶ್ವದ ನಾನಾ ದೇಶಗಳಿಗೆ ಮುಟ್ಟಿಸ್ತಾನಲ್ಲಾ ಪೈಲಟ್? ಅದರ ಹಿಂದೆ ಮುನ್ನೂರು ಪದಗಳದ್ದೊಂದು ಸಪರೇಟ್ ಆದ ಭಾಷೆಯ ಪಾತ್ರವೂ ಇದೆ. ಪ್ರತೀ ಪೈಲಟ್ಗಳೂ ಅದನ್ನು ಕರತಲಾಮಲಕ ಮಾಡಿಕೊಂಡಿರ್ತಾರೆ. ಪೈಲಟ್ಗಳು ಮತ್ತು ತಾಂತ್ರಿಕ ವರ್ಗದ ಸಂಭಾಷಣೆ ಅದೇ ಭಾಚೆಯಲ್ಲಿ ನಡೆಯುತ್ತೆ. ಅದರಿಂದಲೇ ವಿಮಾನಗಳು ಯಾವುದೇ ಅವಘಡಗಳಾಗದಂತೆ ಯಶಸ್ವಿಯಾಗಿ ಹಾರಾಡ್ತಾವೆ. ಆ ಮುನ್ನೂರು ಪದಗಳಿರೋ ವಿಶೇಷ ಭಾಷೆಗೆ ಆವಿಯೇಷನ್ ಇಂಗ್ಲೀಷ್ ಅಂತಾರೆ.