ಆನ್ಲೈನ್ ಜಮಾನ ಶುರುವಾದ ಮೇಲೆ ಮನುಷ್ಯರೊಳಗಿನ ವಿಕೃತಿಗಳೂ ಮೇರೆ ಮೀರಿ ವಿಜೃಂಭಿಸುತ್ತಿರುವಂತಿದೆ. ಎಲ್ಲ ಆವಿಷ್ಕಾರಗಳೂ ಮೊಬೈಲಿನ ಮೂಲಕ ಬೆರಳ ಮೊನೆಗೆ ಬಂದು ಕೂತಿರುವ ಈ ಘಳಿಗೆಯಲ್ಲಿ, ಅದನ್ನೇ ತಮ್ಮ ಮನೋವಿಕಾರಗಳನ್ನು ತಣಿಸಿಕೊಳ್ಳಲು ಬಳಸಿಕೊಳ್ಳುತ್ತಿರುವ ಜನರ ಸಂಖ್ಯೆಯೂ ಹೆಚ್ಚಿಕೊಳ್ಳುತ್ತಿದೆ. ಈವತ್ತಿಗೆ ಸೈಬರ್ ಕ್ರೈಮುಗಳು ನಡೆದಾಗ, ಅದರ ತನಿಖೆ ನಿಧಾನಗತಿಯಲ್ಲಿದ್ದಾಗೆಲ್ಲಾ ನಾವೆಲ್ಲ ಬೈದುಕೊಳ್ಳುತ್ತೇವಲ್ಲಾ? ಆದರೆ ಸೈಬರ್ ಕ್ರೈಮಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು, ಅದರ ಸುತ್ತ ಹಬ್ಬಿಕೊಂಡಿರುವ ದಂಧೆಗಳನ್ನು ನೋಡಿದರೆ ಎಲ್ಲರೂ ಅವಾಕ್ಕಾಗುವಂತಾಗುತ್ತದೆ.
ಓರ್ವ ಸಾಮಾನ್ಯ ಟ್ರಕ್ ಡ್ರೈವರ್, ತನ್ನ ಕೈಲಿದ್ದ ಮೊಬೈಲಿನ ಮೂಲಕವೇ ಸಮಾಜ ಕಂಟಕನಾಗುತ್ತಾನೆಂದರೆ, ಆಸುಪಾಸಿನ ಮಹಿಳೆಯರ ಫೋಟೋಗಳನ್ನು ಕಲೆ ಹಾಕಿ ಅದಕ್ಕೆ ಬೆತ್ತಲೆ ದೇಹ ಜೋಡಿಸಿ ಬದ್ಲಾಕ್ಮೇಲ್ ಮಾಡುತ್ತಾನೆಂದರೆ ಪರಿಸ್ಥಿತಿ ಹೇಗಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತೆ. ಉತ್ತರಪ್ರದೇಶದ ಫರಿದಾಬಾದ್ ಪೊಲೀಸರು ಟ್ರಕ್ ಡ್ರೈವರ್ ಒಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಲೇ, ಆತ ಕಾರಿಕೊಂಡ ಸತ್ಯಗಳನ್ನು ಕೇಳಿ ತ್ತರಿಸಿ ಹೋಗಿದ್ದಾರೆ. ಆ ವಿವರಗಳೆಲ್ಲವೂ ಮೊಬೈಲು ಮತ್ತು ಅದರ ಒಡಲಿನಲ್ಲಿರುವ ಸೌಕರ್ಯಗಳು ಅದೆಷ್ಟು ಅನಾಹುತಕಾರಿ ಎಂಬುದಕ್ಕೆ ತಾಜಾ ಉದಾಹರಣೆಯಂತಿದೆ.
ನಲವತ್ತೆರಡು ವರ್ಷಗಳ ಆ ಟ್ರಕ್ ಡ್ರೈವರ್, ಒಂದಷ್ಟು ಮಹಿಳೆಯರ ಫೋಟೋಗಳನ್ನು ಮಾರ್ಫಿಂಗ್ ಮೂಲಕ ಅಶ್ಲೀಲವಾಗಿ ಬಿಂಬಿಸುತ್ತಾ ಬ್ಲಾಕ್ ಮೇಲ್ ಮಾಡುತ್ತಿದ್ದ. ಕಾಸು ಕೊಡದಿದ್ದರೆ ಅಂಥಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಮಾನ ಕಳೆಯೋದಾಗಿ ಬೆದರಿಕೆ ಹಾಕುತ್ತಿದ್ದ. ಅದೆಷ್ಟೋ ಮಹಿಳೆಯರು ಮಾಡದ ತಪ್ಪಿಗೆ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ಇನ್ನೂ ಕೆಲ ಮಂದಿ ಹೇಗೋ ಕಾಸು ಹೊಂದಿಸಿ ಒಂದಷ್ಟನ್ನು ಈ ಕಿರಾತಕನ ಕೈಗಿಟ್ಟು ಬಚಾವಾಗಲು ನೋಡಿದ್ದರು. ಕಡೆಗೂ ಗಟ್ಟಿಗಿತ್ತಿಯರೊಂದಷ್ಟು ಮಂದಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದನ್ನಾಧರಿಸಿ ಈತನನ್ನು ಬಂಧಿಸಿ, ಮೊಬೈಲು ಪರಿಶೀಲಿಸಿದರೆ, ಅದರಲ್ಲಿ ನಾನೂರ ಎಂಬತ್ತಕ್ಕೂ ಹೆಚ್ಚು ಮಹಿಳೆಯರ ಫೋಟೋಗಳಿಗೆ ಅಶ್ಲೀಲ ಟಚ್ ಕೊಟ್ಟು ರೆಡಿಯಾಗಿದ್ದ ವಿಚಾರ ಜಾಹೀರಾಗಿದೆ. ಸದ್ಯ ಈ ವಿಕೃತ ಆಸಾಮಿಯ ಬಂಧನವಾಗಿರೋದರಿಂದ ಮಹಿಳೆಯರೆಲ್ಲ ನಿರಾಳವಾಗಿದ್ದಾರೆ.