ಈ ಜಗತ್ತಿನ ಅಷ್ಟೂ ಪ್ರೇಕ್ಷಣೀಯ ಸ್ಥಳಗಳನ್ನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಿ ಬಿಡಬೇಕೆಂಬುದು ಹಲವರ ಮಹಾ ಕನಸು. ಈಗಿನ ಯುವ ಸಮೂಹವಂತೂ ಗಂಡು ಹೆಣ್ಣೆಂಬ ಬೇಧವಿಲ್ಲದೆ ಇಂಥಾ ಆಸೆಯನ್ನು ಬಚ್ಚಿಟ್ಟುಕೊಳ್ತಾರೆ. ಅದಕ್ಕೆಂದೇ ಸಾಕಷ್ಟು ಹಣವನ್ನೂ ಕೂಡಾ ಪ್ರತೀ ತಿಂಗಳು ಕೂಡಿಸಿಟ್ಟುಕೊಂಡು ಕಾಯುವವರೂ ಇದ್ದಾರೆ. ಆದರೆ ಅವರ ಅಂದಾಜಿಗೇ ನಿಲುಕದಂಥಾ ಅನೇಕ ಅಚ್ಚರಿದಾಯಕ ತಾಣಗಳು ಈ ಭೂಮಿಯ ಮೇಲೆ, ಸಾಗರಗಳ ಮೇಲಿದೆ. ಅದರಲ್ಲೊಂದಿಷ್ಟು ನೈಸಗೀಕ. ಮತ್ತೊಂದಷ್ಟು ಮಾನವ ನಿರ್ಮಿತ.
ಈಗ ಹೇಳ ಹೊರಟಿರೋದು ಅಂಥಾದ್ದೇ ಒಂದು ಅಚ್ಚರಿದಾಯಕ ದ್ವೀಪ ಸಮೂಹದ ಬಗ್ಗೆ. ದ್ವೀಪ ಸಮೂಹಗಳೆಂದರೇನೇ ಭೂಲೋಕದ ಸ್ವರ್ಗದಂಥವುಗಳು. ಸುತ್ತಲೂ ಕಣ್ಣ ನಿಲುಕಿಗೆ ಮೀರಿದಷ್ಟು ಜಲರಾಶಿ. ಅದರ ಮಧ್ಯೆ ಭೂಮಿಯ ತುಣುಕು. ಅದರ ಮೇಲೊಂದು ಸುಂದರ, ಸಮೃದ್ಧವಾದ ಊರು… ಇಂಥಾ ಗುಣ ಲಕ್ಷಣಗಳಿರೋ ದ್ವೀಪ ಅಂದ್ರೆ ಯಾರಿಗೇ ಆದರೂ ಇಷ್ಟವಾಗದಿರಲು ಸಾಧ್ಯವೇ ಇಲ್ಲ. ಆದರೆ ಅವು ಹೆಚ್ಚಾಗಿ ಸಿಂಗಲ್ ಆಗಿರುತ್ತವೆ. ಒಂದೇ ಕಡೆ ಒಂದಷ್ಟು ದ್ವೀಪಗಳು ಕಾಣೋದು ವಿರಳ.
ಆದ್ರೆ ಪೆರು ದೇಶದಲ್ಲಿ ನಿಜಕ್ಕೂ ಅಚ್ಚರಿ ಅನ್ನಿಸುವಂಥಾ, ಕಣ್ಣಿಗೆ ಹಬ್ಬವಾದಂಥಾ ದ್ವೀಪ ಸಮೂಹವೊಂದಿದೆ. ಅಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ನೂರಾ ಇಪ್ಪತ್ತರಷ್ಟು ದ್ವೀಪಗಳ ಸಮೂಹವೇ ಇದೆ. ಅವೆಲ್ಲವೂ ನೀರ ಮೇಲೆ ತೇಲಾಡುತ್ತಿರುತ್ತವೆ. ಆ ದ್ವೀಪದಲ್ಲಿಯೇ ಅಂಗಡಿ ಸೇರಿದಂತೆ ಒಂದಷ್ಟು ಸವಲತ್ತುಗಳಿದ್ದಾವೆ. ಬೇಕಂದಾಗಲೆಲ್ಲ ಮೀನು ಹಿಡಿಯುತ್ತಾ ಅದನ್ನು ತಮ್ಮ ತಮ್ಮಲ್ಲೇ ಮಾರಾಟ ಮಾಡಿಕೊಳ್ಳುತ್ತಾ ಅಲ್ಲಿನ ಜನ ಸ್ವರ್ಗದಂಥಾ ಬದುಕನ್ನು ತಮ್ಮದಾಗಿಸಿಕೊಡಿದ್ದಾರೆ.