ಕನ್ನಡ ಚಿತ್ರರಂಗದಲ್ಲೀಗ ಹೊಸತನದ ತರಂಗಗಳ ಮಾರ್ಧನಿ ಶುರುವಾಗಿದೆ. ಅದರ ಭಾಗವಾಗಿಯೇ ಒಂದಷ್ಟು ಭಿನ್ನ ಪ್ರಯತ್ನಗಳು ನಡೆಯುತ್ತಿವೆ; ಜನಮಾನಸವನ್ನು ಗೆಲ್ಲುತ್ತಿವೆ. ಸದ್ಯದ ಮಟ್ಟಿಗೆ ಅದೇ ಹಾದಿಯಲ್ಲಿರುವ ಚಿತ್ರ `ಪೆಂಟಗನ್’. ಈಗಾಗಲೇ ಈ ಸನಿಮಾ ಅದೆಂಥಾ ಪ್ರಯೋಗಾತ್ಮಕ ಗುಣಗಳನ್ನು ಹೊಂದಿದೆ ಎಂಬ ವಿಚಾರ ಸ್ಪಷ್ಟವಾಗಿಯೇ ಜಾಹೀರಾಗಿದೆ. ಒಂದಷ್ಟು ಹೊಸಾ ಸಾಹಸಗಳನ್ನು ಮಾಡುತ್ತಾ, ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸಬರಿಗೆ ಅವಕಾಶ ಮಾಡಿ ಕೊಡುತ್ತಿರುವ ನಿರ್ದೇಶಕ ಗುರು ದೇಶಪಾಂಡೆ, ಆ ಪರಂಪರೆಯನ್ನು ಪೆಂಟಗನ್ ಮೂಲಕ ಮುಂದುವರೆಸಿದ್ದಾರೆ. ನಿರ್ಮಾಣದ ಜೊತೆಗೆ ಐದು ಕಥೆಗಳಲ್ಲಿ ಒಂದನ್ನು ಖುದ್ದು ತಾವೇ ನಿರ್ದೇಶನ ಮಾಡಿದ್ದಾರೆ.
ಈಗಾಗಲೇ ನಾನಾ ದಿಕ್ಕುಗಳಲ್ಲಿ ಕುತೂಹಲದ ದೊಂದಿ ಹಚ್ಚಿರುವ ಪೆಂಟಗನ್, ಈಗಾಗಲೇ ಟೀಸರ್ ಮತ್ತು ಟ್ರೈಲರ್, ಹಾಡುಗಳ ಮೂಲಕ ಸಖತ್ ಸದ್ದು ಮಾಡಿದೆ. ತಾನೇತಾನಾಗಿ ಬಿಡುಗಡೆಯ ನಿರೀಕ್ಷೆ ನಿಗಿನಿಗಿಸುವಂತೆ ಮಾಡಿಬಿಟ್ಟಿದೆ. ಅದರ ಭಾಗವಾಗಿಯೇ ಪೆಂಟಗನ್ ಯಾವಾಗ ರಿರೀಸಾಗುತ್ತೆ ಅಂತೊಂದು ಕುತೂಹಲ ಮೂಡಿಕೊಂಡಿತ್ತಲ್ಲಾ? ಅದಕ್ಕೀಗ ಉತ್ತರ ಸಿಕ್ಕಿದೆ. ಈ ಚಿತ್ರ ಇದೇ ಏಪ್ರಿಲ್ ಏಳನೇ ತಾರೀಕಿನಂದು ಅದ್ದೂರಿಯಾಗಿ ತೆರೆಗಾಣಲಿದೆ. ಅತ್ಯಂತ ವ್ಯಸ್ಥಿತವಾಗಿ ತಯಾರಾಗುತ್ತಾ ಬಂದಿರುವ ಚಿತ್ರತಂಡ, ಬಿಡುಗಡೆಯ ಅಂಚಿನಲ್ಲಿ ಮತ್ತೊಂದಷ್ಟು ಅಚ್ಚರಿಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡಲು ತಯಾರಿ ಮಾಡಿಕೊಂಡಿದೆ.
ಅದಾಗಲೇ ತಿಳಿದಿರುವಂತೆ ಈ ಚಿತ್ರದಲ್ಲಿ ಐದು ಕಥಾನಕಗಳಿದ್ದಾವೆ. ಅವೆಲ್ಲವೂ ಭಿನ್ನವಾಗಿವೆ ಎಂಬುದು ಈಗಾಗಲೇ ಸಾಬೀತಾಗಿದೆ. ಮತ್ತೊಂದಷ್ಟು ಪ್ರಶ್ನೆಗಳಿಗೆ ಉತ್ತರ ಮಾತ್ರ ನಿಗೂಢವಾಗಿದೆ. ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ತಲಾ ಒಂದೊಂದು ಕಥಾನಕಗಳನ್ನು ನಿರ್ದೇಶನ ಮಾಡಿದ್ದಾರೆ. ಇಲ್ಲಿನ ಐದೂ ಕಥೆಗಳು ಹೇಗೆ ತೆರೆದುಕೊಂಡಿವೆ? ಒಂದೇ ಫ್ರೇಮಿನಲ್ಲಿ ಆ ಐದೂ ಕಥನಗಳು ಹೇಗೆ ಸಂಗಮಿಸಲಿವೆ? ಎಂಬಿತ್ಯಾದಿ ಕುತೂಹಲ ಸಹಜ. ಅದಕ್ಕೆ ಇನ್ನು ವಾರದೊಪ್ಪತ್ತಿನಲ್ಲಿಯೇ ಥ್ರಿಲ್ಲಿಂಗ್ ಉತ್ತರಗಳು ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾವೆ.