ವೈಯಕ್ತಿಕ ಬದುಕಿನ ತಿಕ್ಕಾಟವೊಂದರ ವಿಚಾರದಲ್ಲಿ ನಟಿ ಪವಿತ್ರಾ ಲೋಕೇಶ್ ವಿವಾದದ ಕೇಮದ್ರಬಿಂದುವಾಗಿದ್ದಾರೆ. ತೆಲುಗು ನಟ ನರೇಶ್ರೊಂದಿಗಿನಿ ಅಫೇರ್ ಸಂಬಂಧವಾಗಿ ಪವಿತ್ರಾ ಲೋಕೇಶ್ರನ್ನು ಮೀಡಿಯಾ ಮಂದಿ ಹೋದಲ್ಲಿ ಬಂದಲ್ಲಿ ಕಾಡುತ್ತಿದ್ದಾರೆ. ಇತ್ತ ಸಭ್ಯ ನಟ, ಪವಿತ್ರಾರ ಮಾಜೀ ಪತಿ ಸುಚೇಂದ್ರ ಪ್ರಸಾದ್ ಕೂಡಾ ಮಾಧ್ಯಮಗಳ ಮೂಲಕ ಪುಂಖಾನುಪುಂಖವಾಗಿ ಬಿತ್ತರವಾಗುತ್ತಿರುವ ಸುದ್ದಿಗಳನ್ನು ನೋಡಿ ಪೆಚ್ಚಾಗಿದ್ದಾರೆ. ಇದೆಲ್ಲದರ ನಡುವೆ ಅವನ್ಯಾರೋ ಬುರುಡೆ ವಾಸ್ತು ತಜ್ಞನೊಬ್ಬ ಬರ್ಬರವಾಗಿ ಹತನಾಗುವುದರೊಂದಿಗೆ ಪವಿತ್ರಾ ಲೋಕೇಶ್ ಪ್ರಕರಣಕ್ಕೆ ಒಂದಷ್ಟು ವಿರಾಮ ಬಿದ್ದಿದೆ. ಎಲ್ಲ ತಣ್ಣಗಾದಂತೆ ಕಾಣುತ್ತಿರುವ ಈ ಹೊತ್ತಿನಲ್ಲಿ ಹರಿದಾಡುತ್ತಿರುವ ಒಂದಷ್ಟು ಫೋಟೋಗಳನ್ನು ನೋಡಿದರೆ, ಅರೇ ನಟಿ ಪವಿತ್ರಾ ಲೋಕೇಶ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆಯಾ? ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆಯಾ ಅಂತೆಲ್ಲ ಪ್ರಶ್ನೆಗಳು ಮೂಡಿಕೊಳ್ಳುತ್ತವೆ.
ಅಷ್ಟಕ್ಕೂ ಪವಿತ್ರಾ ಲೋಕೇಶ್ ಪ್ರಕರಣದ ಬಗ್ಗೆ ಮೀಡಿಯಾ ಮಂದಿ ಅದೇನೇ ಬಾಯಿ ಬಡಿದುಕೊಂಡರೂ, ಅದು ಪವಿತ್ರಾರ ಖಾಸಗೀ ವಿಚಾರವಷ್ಟೇ. ಯಾರಿಂದ ದೂರಾಗಬೇಕು, ಯಾರೊಂದಿಗೆ ಬದುಕಬೇಕೆಂಬುದೆಲ್ಲ ಅವರವರ ವೈಯಕ್ತಿಕ ಆಯ್ಕೆ. ಈ ಸೆಲೆಬ್ರಿಟಿಗಳ ವಿಚಾರದಲ್ಲಿಯೂ ಅದು ಅನ್ವಯಿಸುತ್ತೆ. ಆದ್ದರಿಂದ ಪವಿತ್ರಾ ಲೋಕೇಶ್ರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸುವಂಥಾ ಯಾವ ಪ್ರಮೇಯವೂ ಇಲ್ಲ. ಹಾಗಾದರೆ ಈಗ ಹರಿದಾಡುತ್ತಿರೋ ಫೋಟೋಗಳು ಎಲ್ಲಿಂದ ಬಂದವು? ಅದರ ಹಿಂದಿರೋದು ಯಾರೆಂಬ ವಿಚಾರ ನಿಮ್ಮ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದರೆ ಅದಕ್ಕುತ್ತರವಾಗಿ ನಿಲ್ಲೋದು ವೆಡ್ಡಿಂಗ್ ಗಿಫ್ಟ್ ಚಿತ್ರ!
ವಿಕ್ರಂ ಪ್ರಭು ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರ ವೆಡ್ಡಿಂಗ್ ಗಿಫ್ಟ್. ಈ ಚಿತ್ರದಲ್ಲಿ ಪವಿತ್ರಾ ಲೋಕೇಶ್ ಕೂಡಾ ಪ್ರಧಾನವಾದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಕಾಕತಾಳೀಯವೆಂಬಂತೆ ಈ ಚಿತ್ರವೂ ಕೂಡಾ ಕೌಟುಂಬಿಕ ಕಲಹಗಳ, ವಾಸ್ತವಿಕ ನೆಲೆಗಟದ್ಟಿನ ಕಥೆಯನ್ನೊಳಗೊಂಡಿದೆ. ಅದರಲ್ಲಿಯೂ ಕೂಡಾ ನಟಿ ಪವಿತ್ರಾ ಲೋಕೇಶ್ ಪಾತ್ರ ಪೊಲೀಸ್ ಠಾಣಾ ಮೆಟ್ಟಿಲು ಹತ್ತಿ, ವಿಚಾರಣೆಗೆ ಮುಖಾಮುಖಿಯಾಗುವಂಥಾ ಸನ್ನಿವೇಶಗಳಿದ್ದಾವೆ. ಸದರಿ ಚಿತ್ರದ ಸ್ಟಿಲ್ಲುಗಳಿಗೂ, ಸದ್ಯ ಪವಿತ್ರಾ ಲೋಕೇಶ್ ವೈಯಕ್ತಿಕ ಬದುಕಿನಲ್ಲಿ ಬೀಸುತ್ತಿರುವ ಬಿರುಗಾಳಿಗೂ ಸಾಮ್ಯತೆಗಳಿದ್ದಾವೆ. ಅವುಗಳನ್ನು ನೋಡಿದವರೆಲ್ಲ ಸಹಜವಾಗಿಯೇ ಆ ಫೋಟೋಗಳನ್ನು ಪ್ರಸ್ತುತ ವಿದ್ಯಮಾನಗಳಿಗೆ ಕನೆಕ್ಟ್ ಮಾಡಿ ನೋಡುವಂತಿದೆ.
ಆದರೆ, ಅದು ವೆಡ್ಡಿಂಗ್ ಗಿಫ್ಟ್ಗೆ ಮಾತ್ರವೇ ಸೀಮಿತವಾಗಿರೋ ಫೋಟೋಗಳು. ಅದಕ್ಕೂ ಪವಿತ್ರಾರ ಖಾಸಗೀ ಬದುಕಿನ ವಿವಾದಗಳಿಗೂ ಸಂಬಂಧವಿಲ್ಲ. ಇದೆಲ್ಲದರಾಚೆ ನಿಂತು ನಾಳೆ ಬಿಡುಗಡೆಯಾಗಲಿರೋ ವೆಡ್ಡಿಂಗ್ ಗಿಫ್ಟ್ ಚಿತ್ರದ ಬಗ್ಗೆ ಹೇಳೋದಾದರೆ, ಇದು ಈಗಿನ ವಾತಾವರಣದಲ್ಲಿ ಹಲವಾರು ಕುಟುಂಬಗಳ ನೆಮ್ಮದಿಗೆ ಎರವಾಗಿರುವ ನೈಜ ಘಟನೆಗಳನ್ನಾಧರಿಸಿರೋ ಚಿತ್ರ. ಹೆಣ್ಣುಮಕ್ಕಳನ್ನು ಕೌಟುಂಬಿಕ ದೌರ್ಜನ್ಯಗಳಿಂದ ಪಾರುಗಾಣಿಸಲು ಒಂದಷ್ಟು ಕಠಿಣವಾದ ಕಾನೂನುಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಸ್ವಾರ್ಥದಿಂದ ಕೆಲ ಹೆಣ್ಣು ಮಕ್ಕಳೇ ಅದನ್ನು ದುರುಪಯೋಗ ಪಡಿಸಿಕೊಂಡು ಗಂಡು ಜನ್ಮವನ್ನು ಕಷ್ಟದ ಕೂಪಕ್ಕೆ ತಳ್ಳುತ್ತಿದ್ದಾರೆ. ಇದರಲ್ಲಿ ಎಲ್ಲರಿಗೂ ತಾಕುವಂಥಾ ಪಾತ್ರವೊಂದಕ್ಕೆ ಪವಿತ್ರಾ ಲೋಕೇಶ್ ಜೀವ ತುಂಬಿದ್ದಾರೆ. ಆದರೆ ಆ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಚಿತ್ರತಂಡ ಜಾಹೀರು ಮಾಡಿಲ್ಲ. ನಾಳೆ ವೆಡ್ಡಿಂಗ್ ಗಿಫ್ಟ್ ಬಿಡುಗಡೆಯಾಗಲಿರೋದರಿಂದ ಪವಿತ್ರಾ ಲೋಕೇಶ್ರಿಗೆ ಸಂಬಂಧಿಸಿದ ಫೋಟೋಗಳ ಅಸಲೀಯತ್ತು ನಾಳೆಯೇ ಎಲ್ಲರೆದುರು ತೆರೆದುಕೊಳ್ಳಲಿದೆ.