ಭಹಿರಂಗವಾಗಿ ಅಸ್ಪೃಶ್ಯತೆ ಆಚರಿಸಿದ ಫಟಿಂಗ ಪಂಡಿತ!
ದೇಶಾದ್ಯಂತ ಜಾತಿ ಧರ್ಮಗಳ ಅಮಲಿನಲ್ಲಿ ಜನಸಾಮಾನ್ಯರಿಗೆ ನಶೆಯೇರಿಸೋ ಕೆಲಸ ನಡೆಯುತ್ತಿವೆ. ಈ ಮೂಲಕ ಜನರನ್ನು ರೊಚ್ಚಿಗೆಬ್ಬಿಸಿ ಆಡಳಿತ ವೈಫಲ್ಯಗಳನ್ನು ಬಚ್ಚಿಟ್ಟುಕೊಳ್ಳುವ ಹುನ್ನಾರವೂ ಇದೆ. ರಾಜಕಾರಣಿಗಳು ಒಂದು ಕಡೆಯಿಂದ ಧರ್ಮ ಧರ್ಮಗಳ ನಡುವೆ ಬೆಂಕಿ ಇಡುತ್ತಿದ್ದರೆ, ಸ್ವಾಮೀಜಿಗಳೆನ್ನಿಸಿಕೊಂಡವರು, ಪುಸಟ್ಟೆ ಧರ್ಮ ಬೋಧಕರು, ಮತೀಯ ಹೋರಾಟಗಾರರೆಲ್ಲ ಆ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿಯೂ ಕೆಲ ಸನಾತನ ವಾದಿಗಳಂತೂ ಭಾರತವನ್ನು ಮತ್ತೆ ಶಿಲಾಯುಗಕ್ಕೆ ಕೊಂಡೊಯ್ದು ಬಿಡಲು ಟೊಂಕ ಕಟ್ಟಿ ನಿಂತಿದ್ದಾರೆ. ಇಂಥಾ ದುಷ್ಟರಿಗೆಲ್ಲ ಯಾರೊಂದಿಗೋ ಎತ್ತಿಕಟ್ಟಿ ಬಡಿದಾಡುವುದಕ್ಕೆ ಶೂದ್ರರ, ದಲಿತರ ಮಕ್ಕಳು ಬೇಕು. ಆಗೆಲ್ಲ ಹಿಂದೂ ನಾವೆಲ್ಲ ಒಂದು ಅನ್ನುತ್ತಾರೆ. ಆದರೆ ಅದರ ಮರೆಯಲ್ಲಿ ಇಂಥವರ ಮನಸು ಜಾತಿವ್ಯಾಧಿಯಿಂದ, ಶ್ರೇಷ್ಠತೆಯ ವ್ಯಸನದಿಂದ ಪಿತಗುಡುತ್ತಿರುತ್ತದೆ.
ಹೀಗೆ ಹಿಂದೂ ನಾವೆಲ್ಲ ಒಂದು ಅನ್ನುವವರ ಅಸಲಿ ಅಜೆಂಡಾ ಮತ್ತು ಮನಸ್ಥಿತಿ ಹೇಗಿರುತ್ತದೆಂಬುದಕ್ಕೆ ತಾಜಾ ಉದಾಹರಣೆಯಂಥವನು ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ. ಈತ ಧಾರ್ಮಿಕ ಬೋಧಕನಾಗಿ, ಪ್ರವಚನಾಕಾರನಾಗಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದಾನೆ. ಕೆಲ ಸಂದರ್ಭಗಳಲ್ಲಿ ಹಿಂದೂಗಳೇ ಏಳಿ ಎದ್ದೇಳಿ ಎಂಬಂತೆ ಕರೆ ಕೊಡುತ್ತಾ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನೂ ಮಾಡುತ್ತಾ ಬಂದಿದ್ದಾನೆ. ದುರಂತವೆಂದರೆ ಸಾಲು ಸಾಲಾಗಿ ಈತನ ಪ್ರವಚನಗಳ ಪ್ರವರ ನಡೆಯುತ್ತಲೇ ಇರುತ್ತದೆ. ಹಿಂದೂ ಧರ್ಮದ ವಕ್ತಾರನಂತೆ ಪೋಸು ಕೊಡುವ ಈತನ ಪ್ರವಚನಕ್ಕೆ ಎಲ್ಲಾ ವರ್ಗದವರೂ ಹೋಗುತ್ತಾರೆ. ಅಂಥಾದ್ದೇ ಒಂದು ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿಯೇ ಇವನ ಅಸಲೀಯತ್ತು ಬಯಲಾಗಿದೆ.
ದೆಹಲಿಯಲ್ಲಿ ಇತ್ತೀಚೆಗೆ ಈ ಪಂಡಿತನ ಧಾರ್ಮಿಕ ಪ್ರವಚನ ಕಾರ್ಯವೊಂದು ನಡೆಯುತ್ತಿತ್ತು. ತನ್ನ ವಿಕ್ಷಿಪ್ತ ಶೈಲಿಯಲ್ಲಿ ಏನೇನೋ ಒದರುತ್ತಿದ್ದ ಈತನನ್ನು ಮಾತಾಡಿಸಲು ಮೂಢ ಭಕ್ತನೊಬ್ಬ ಆಗಮಿಸಿದ್ದಾನೆ. ಆತ ಪಾದ ಮುಟ್ಟಿ ನಮಸ್ಕರಿಸಲು ತೆರಳುತ್ತಿದ್ದಂತೆಯೇ ಪಂಡಿತ ಹಾವು ಮೆಟ್ಟಿದವನಂತಾಡಿ ಕಾಲು ಮೇಲೆತ್ತಿ ಕೊಸರಿದ್ದಾನೆ. ನೀನು ನನ್ನನ್ನು ಮುಟ್ಟಬಾರದು, ನೀನು ಕೀಳು ಜಾತಿಯವನೆಂದು ಬಡ ಬಡಿಸಿದ್ದಾನೆ. ಆತ ಹಾಗೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ.
ಇದು ಇಂಥವರ ನಿಜವಾದ ಆಂತರ್ಯ. ಇಂಥವರು ಹಿಂದೂ ಧರ್ಮದ ಪ್ರವರ್ತಕರಂತೆ ಪೋಸು ಕೊಡುತ್ತಾರೆ. ಮತಾಂತರವನ್ನು ವಿರೋಧಿಸುತ್ತಾರೆ. ಹಿಂದೂಗಳೆಲ್ಲ ಒಂದೇ ಅಂತ ಪುರಸೊತ್ತು ಸಿಕ್ಕಾಗೆಲ್ಲ ಪುಂಗುತ್ತಾರೆ. ಆದರೆ ಜಾತಿ ಪದ್ಧತಿ, ಮೇಲು ಕೀಳೆಂಬ ಅನಿಷ್ಟವನ್ನು ಚಾಚೂ ತಪ್ಪದೆ ಆರಾಧಿಸುತ್ತಾರೆ. ಇಂಥವರಿಗೆಲ್ಲ ಜಾತಿ ಪದ್ಧತಿಯೂ ಕೂಡಾ ತಮ್ಮ ಆಚರಣೆಯ ಭಾಗ. ಇಂಥಾ ಅನಿಷ್ಟದಿಂದ ಈ ಸಮಾಜವನ್ನು ಮುಕ್ತಗೊಳಿಸಲು ಮಹಾನ್ ಸಂಘರ್ಷವೇ ನಡೆದು ಹೋಗಿದೆ. ಆದರೆ ಇಂಥಾ ಖೊಟ್ಟಿ ಪ್ರವಚನಕಾರರು ಮತ್ತು ಈ ಸಮಾಜವನ್ನು ಮೂಲ ಬಿಂದುವಿಗೇ ಕೊಂಡೊಯ್ಯಲು ಅವಿರತವಾಗಿ ಶ್ರಮಿಸುತ್ತಲೇ ಇದ್ದಾರೆ. ಆಗಾಗ ಇವರ ಆಂತರ್ಯ ಹೀಗೆ ಬೆತ್ತಲಾಗುತ್ತದೆ.
pandit,panditdhirendrkrishna,shsthri