ಇದು ನಂಬಲು ಕಷ್ಟವಾದ್ರೂ ನಂಬಲೇ ಬೇಕಾದ ವಿಚಾರ. ನೀರು ಸಂಜೀವಿನಿ. ಮನುಷ್ಯರು, ಪ್ರಾಣಿಗಳು ಸೇರಿದಂತೆ ಸಕಲ ಜೀವಿಗಳೂ ನೀರಿನಿಂದ ಬದುಕಿಕೊಳ್ಳುತ್ವೆ. ಒಂದು ವೇಳೆ ಒಂದಷ್ಟು ಹೊತ್ತು ಆಹಾರವಿಲ್ಲದಿದ್ದರೂ ನೀರು ಕುಡಿದೇ ಉಸಿರುಳಿಸಿಕೊಳ್ಳೋ ಸಾಧ್ಯತೆಗಳಿವೆ. ಆದ್ರೆ ಅತಿಯಾದ್ರೆ ಅಮೃತವೂ ವಿಷವಾಗಬಲ್ಲುದೆಂಬ ಗಾದೆಯೇ ಇದೆ. ಹಾಗಿರೋವಾಗ ಅತಿಯಾಗಿ ಕುಡಿದ್ರೆ ನೀರೂ ಕೂಡಾ ನಮ್ಮ ದೇಹಕ್ಕೆ ವಿಷವಾಗೋದ್ರಲ್ಲಿ ಅಷ್ಟೇನೂ ಅಚ್ಚರಿ ಕಾಣೋದಿಲ್ಲ.
ಆದ್ರೆ ನಾವೆಲ್ಲರೂ ಎಷ್ಟು ನೀರು ಕುಡಿದ್ರೂ ಒಳ್ಳೇದೆಂಬ ಸೂತ್ರಕ್ಕೆ ಕಟ್ಟು ಬಿದ್ದಿರುತ್ತೇವೆ. ಕಡಿಮೆ ನೀರು ಕುಡಿದ್ರೆ ಮನೆ ಮಂದಿಯೇ ಗದರ್ತಾರೆ. ಆರೋಗ್ಯದ ಬಗ್ಗೆ, ನೀರಿನಿಂದಾಗೋ ಪ್ರವಚನಗಳ ಬಗ್ಗೆ ಭಾಷಣ ಬಜಾಯಿಸ್ತಾರೆ. ಆದ್ರೆ ಹೆಚ್ಚಿನವ್ರಿಗೆ ಅತಿಯಾಗಿ ಕುಡಿದ್ರೆ ನೀರೂ ಕೂಡಾ ಡೇಂಜರಸ್ ಅನ್ನೋ ವಿಚಾರ ಗೊತ್ತಿರಲಿಕ್ಕಿಲ್ಲ. ಅದು ಎಷ್ಟು ಅಪಾಯಕಾರಿ ಅಂದ್ರೆ ಪ್ರಾಣವನ್ನೇ ತೆಗೆದು ಬಿಡುವಷ್ಟು.
ಪ್ರತಿಯೊಬ್ಬರೂ ದಿನನಿತ್ಯ ಒಂದಷ್ಟು ನೀರು ಕುಡಿಯೋದು ಉತ್ತಮ ಅನ್ನೋದು ಗೊತ್ತಿರುವಂಥಾದ್ದೇ. ದಿನಕ್ಕೆ ಐದಾರು ಲೀಟರ್ ನೀರು ಕುಡಿದ್ರೂ ಒಳ್ಳೇದೇ. ಜೀರ್ಣ ಕ್ರಿಯೆಯೂ ಸೇರಿದಂತೆ ಎಲ್ಲ ಕ್ರಿಯೆಗಳನ್ನೂ ನೀರು ಸರಾಗವಾಗಿಸುತ್ತೆ. ಆದ್ರೆ ಅದಕ್ಕಿಂತಲೂ ಹೆಚ್ಚಿನ ನೀರು ಕುಡಿದ್ರೆ ಓವರ್ ಹೈದ್ರೇಷನ್ ಆಗೋ ಸಾಧ್ಯತೆಗಳಿವೆ. ಅದರಿಂದ ಸತ್ತೇ ಹೋಗೋ ಸಾಧ್ಯತೆಗಳೂ ಇದ್ದಾವೆ. 2002ರಲ್ಲಿ ಬೋಸ್ಟನ್ ಮ್ಯಾರಥಾನ್ನಲ್ಲಿ ಸ್ಪರ್ಧಿಯಾಗಿದ್ದ ಸಿಂಥಿಯಾ ಲ್ಯುಸೇರೋ ಕೂಡಾ ಈ ರೀತಿಯಾದ ಓವರ್ ಹೈಡ್ರೇಷನ್ಗೆ ಬಲಿಯಾಗಿದ್ರು.