ಇದೀಗ ಕನ್ನಡ ಚಿತ್ರರಂಗ ಹೊಸಬರ ಆಗಮದಿಂದ, ಹೊಸಾ ಬಗೆಯ ಕಥಾನಕಗಳಿಂದ ಕಳೆಗಟ್ಟಿಕೊಳ್ಳುತ್ತಿದೆ. ಹೀಗೆ ಆಗಮಿಸುವ ಹೊಸಾ ತಂಡಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲಿಯೂ ಅನೂಹ್ಯವಾದೊಂದು ಪ್ರೀತಿ ಇದ್ದೇ ಇದೆ. ಹೆಚ್ಚೇನೂ ಅಬ್ಬರವಿಲ್ಲದೆ, ಕೇಲವ ಕಂಟೆಂಟಿನ ಕಸುವಿನಿಂದಲೇ ಇಂಥಾ ಒಂದಷ್ಟು ಸಿನಿಮಾಗಳು ಪ್ರೇಕ್ಕರಿಗೆ ಹಿಡಿಸುತ್ತಿವೆ. ಒಂದಿ ಮಟ್ಟಿನ ಗೆಲುವನ್ನೂ ದಾಖಲಿಸುತ್ತಿವೆ. ಆರಂಭದಿಂದಲೂ ಇಂಥಾದ್ದೊಂದು ಪಾಸಿಟಿವ್ ವಾತಾವರಣದಲ್ಲಿ ಸಾಗಿ ಬಂದಿದ್ದ ಚಿತ್ರ ಒಂದು ರಾಬರಿ ಕಥೆ. ಗೋಪಾಲ್ ಹಳ್ಳೇರ ಹೊನ್ನಾವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಅಲ್ಲಲ್ಲಿ ಮೆಚ್ಚುಗೆ ಗಳಿಸುತ್ತಾ, ಮತ್ತೆ ಕೆಲವೊಂದು ಬಿಂದುಗಳಲ್ಲಿ ರೇಜಿಗೆ ಹುಟ್ಟಿಸುವಂಥಾ ಮಿಶ್ರ ಭಾವವೊಂದು ನೋಡುಗರನ್ನು ಆವರಿಸಿಕೊಂಡಿದೆ!
ನಿರ್ದೇಶಕರು ಅತ್ಯಂತ ನಾಜೂಕಿನಿಂದ, ಜಾಣ್ಮೆಯಿಂದ ಈ ಸಿನಿಮಾವನ್ನು ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಟಾಪಿಸಿದ್ದರು. ಆ ನಂತರ ಒಂದಷ್ಟು ರೀತಿಯಲ್ಲಿ ನಾನಾ ಹೊಳಹುಗಳನ್ನು ಹೊಮ್ಮಿಸುತ್ತಾ, ಈ ಚಿತ್ರ ತಾನೇತಾನಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಅದರಲ್ಲಿಯೂ ಇದೊಂದು ಸತ್ಯ ಘಟನೆಯಾಧಾರಿತ ಚಿತ್ರ ಎಂಬ ಅಂಶ ಜಾಹೀರಾಗುತ್ತಲೇ ರೋಚಕ ಕೌತುಕವೊಂದು ಎಲ್ಲರ ಎದೆತಬ್ಬಿಕೊಂಡಿತ್ತು. ಇಂಥಾ ಒಂದು ರಾಬರಿಯ ಕಥೆ ಅಚ್ಚರಿದಾಯಕವಾಗಿ ತೆರೆದುಕೊಳ್ಳುತ್ತದೆ. ಇಂಥಾ ಕಥನವನ್ನು ಕೈಗೆತ್ತಿಕೊಂಡ ಹೊಸಬರ ತಂಡಕ್ಕೆ ಮೆಚ್ಚುಗೆ ಸೂಚಿಸುವಂತೆ ಪ್ರೇರೇಪಿಸುತ್ತದೆ. ಒಂದೊಂದು ಬಿಂದುವಿನಲ್ಲಿ ಗಾಢ ಗೊಂಡಲ ಹುಟ್ಟಿಸಿ, ಅದಕ್ಕೆಲ್ಲ ಉತ್ತರ ಸಿಗದೆ ತತ್ತರಿಸುವ ಸ್ಥಿತಿಯೂ ನಿರ್ಮಾಣವಾಗುತ್ತದೆ!
ಒಂದಷ್ಟು ಪಾತ್ರಗಳನ್ನು ಸುತ್ತ ಹರವಿಕೊಂಡಂತಿರುವ ಕೃಷ್ಣ ಈ ಚಿತ್ರ ಹೀರೋ. ಅದಕ್ಕೆ ಧನ್ವೀರ್ ಗೌಡ ಬಣ್ಣ ಹಚ್ಚಿದ್ದಾರೆ. ಎಳವೆಯಲ್ಲಿಯೇ ಅಮ್ಮನನ್ನು ಕಳೆದುಕೊಂಡ ಕೃಷ್ಣ, ಹಣ ಮಾಡೋದನ್ನೇ ತನ್ನ ಜೀವಿತದ ಏಕಮಾತ್ರ ಗುರಿಯಾಗಿಸಿಕೊಳ್ಳುತ್ತಾನೆ. ಅಂಥಾ ಮನಃಸ್ಥಿತಿಯ ಪ್ರತಿಫಲವೆಂಬಂತೆ ಬುದ್ಧಿ ಬಲಿಯುತ್ತಲೇ ಜೈಲು ಪಾಲಾಗುತ್ತಾನೆ. ಹಾಗೆ ಜೈಲೂಟ ಉಂಡು ಹೊರ ಬಂದವನಲ್ಲಿ ಯಾವ ಪರಿವರ್ತನೆಯೂ ಆಗುವುದಿಲ್ಲಿ. ಬದಲಾಗಿ ದೊಡ್ಡ ಸಂಪತ್ತೊಂದರ ಬೆನ್ನು ಬೀಳುತ್ತಾನೆ. ಆ ನಂತರ ಆತ ಅದರಲ್ಲಿ ಯಶ ಕಾಣುತ್ತಾನಾ? ಕಥೆಯ ದಿಕ್ಕು ಎತ್ತೆತ್ತ ಚಲಿಸುತ್ತೆ? ಅನ್ನೋದು ಮುಂದಿನ ಭಾಗದ ಒಟ್ಟಾರೆ ಕಥೆಯ ಆತ್ಮ. ಆದರೆ, ಹೊಸತೇನನ್ನೋ ಪ್ರಯೋಗಿಸಲು ಹೋಗಿ, ಅಸಲೀ ಕಥೆಯ ಸೂತ್ರ ತಪ್ಪಿದಂತಾಗಿರುವ ನಿರ್ದೇಶನವೆಂಬುದು, ಆ ಕಥನವನ್ನು ಪರಿಣಾಮಕಾರಿಯಾಗಿಸುವಲ್ಲಿ ಸೋತಿದೆ.
ರಾಬರಿಯ ರೋಚಕತೆಯನ್ನೇ ಪ್ರಧಾನವಾಗಿಸುವ ಭರದಲ್ಲಿ ನಿರ್ದೇಶಕರು ಮಿಕ್ಕ ವಿಚಾರಗಳನ್ನು ಅಪೂರ್ಣವಾಗಿಸಿದ್ದಾರೆ. ಹಳ್ಳಿ, ಉತ್ತರ ಕರ್ನಾಟಕದ ಭಾಷೆಯೆಲ್ಲ ಹಿತವೆನಿಸುತ್ತಲೇ, ಅಂದನವಾಡಿ ಟೀಚರ್ ಮತ್ತು ನಾಯಕನ ಸರಸ ಸಲ್ಲಾಪವೇ ಮೇಳೈಸುತ್ತದೆ. ಆ ಅಬ್ಬರದ ನಡುವೆ ಆ ಹಳ್ಳಿಯನ್ನು ಕಾಡುತ್ತಿರುವ ಸಮಸ್ಯೆ ಯಾವುದೆಂಬುದೇ ನಿರ್ದೇಶಕರಿಗೆ ಮರೆತು ಹೋಗುತ್ತೆ. ಇದರ ನಡುವೆ ಒಂದಷ್ಟು ಪಾತ್ರಗಳು ಸೃಷ್ಟಿಯಾಗಿರೋದಕ್ಕೆ ಕಾರಣಗಳೇ ಗೊತ್ತಾಗುವುದಿಲ್ಲ. ಬರಡು ಭೂಮಿಯಲ್ಲಿ ಅದೇನೋ ಕ್ರಾಂತಿ ಮಾಡಲು ಹೊರಡೋ ಅಜ್ಜಯ್ಯ, ಆರಂಭದಲ್ಲಿ ಹೋರಾಟಗಾರನಂತೆ ಕಾಣಿಸುತ್ತಾನೆ. ಅಂಥಾ ಅಜ್ಜಯ್ಯ ಆ ನಂತರ ಕಾಣಿಸೋದು ಹೆಣವಾಗಿಯಷ್ಟೇ. ಆದರೆ ಅದಕ್ಕೆ ಕಾರಣವೇನೆಂಬುದು ಯಾರಿಗೂ ಗೊತ್ತಾಗುವುದಿಲ್ಲ. ಈ ಪ್ರಶ್ನೆ ತಲೆಯಲ್ಲಿ ಮಿಜಿಗುಡುವಾಗಲೇ ಅಜ್ಜಯ್ಯನ ಸಮಾಧಿ ಗೋಚರಿಸಿ, ಎಲ್ಲ ಪ್ರಶ್ನೆಗಳೂ ಅದರೊಳಗೆ ತೂರಿಕೊಳ್ಳುತ್ತವೆ.
ಈ ಚಿತ್ರದ ಹೀರೋ ರಣಧೀರ್ ಗೌಡ ಹೊಸಬ. ಆತನಿಗೆ ವಿಪರೀತ ಬಿಲ್ಡಪ್ ಮತ್ತು ಮಾಸ್ ಡೈಲಾಗುಗಳಿವೆ. ಚಿತ್ರದುದ್ದಕ್ಕೂ ಆತ ಆ ಭಾರವನ್ನು ತಡೆಯಲಾರದೆ ಕಂಗಾಲಾದಂತೆ ಕಾಣಿಸುತ್ತೆ. ಡೈಲಾಗ್ ಡೆಲಿವರಿ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ರಣಧೀರ್ ಇನ್ನಷ್ಟು ಪಳಗಬೇಕಿದೆ. ಈತನಿಗೆ ಸರಿಯಾಗಿ ನಾಯಕಿ ರಿಶ್ವಿ ಭಟ್ ಕೂಡಾ ಅಷ್ಟಕ್ಕಷ್ಟೇ. ನಟನೆಯೆಂಬುದನ್ನು ಆಕೆ ಇನ್ನೂ ಪಳಗಿಸಿಕೊಳ್ಳಬೇಕಿದೆ. ಇದೆಲ್ಲದರಾಚೆಗೆ ಒಂದು ರಾಬರಿ ಕಥೆಯನ್ನು ಸಹ್ಯವಾಗಿಸೋದು ಕಾಮಿಡಿ ಕಚಗುಳಿ. ಶಿವರಾಜ್ ಕೆಆರ್ ಪೇಟೆ, ಸಂಜು ಬಸಯ್ಯ, ತಬಲಾ ನಾಣಿ, ಜಹಾಂಗೀರ್ ಮುಂತಾದವರ ಕಾಮಿಡಿ ಗ್ಯಾಂಗೇ ಇಲ್ಲಿದೆ. ಅವರೆಲ್ಲರ ಪಾತ್ರಗಳೂ ಮಜವಾಗಿವೆ. ಅದರಲ್ಲಿಯೂ ಶಿವರಾಜ್ ಕೆಆರ್ ಪೇಟೆ ಪಾತ್ರ ಮಸ್ತಾಗಿದೆ. ಆ ಪಾತ್ರವೇ ಪೇಲವ ಹೀರೋಗೆ ಒಂದಷ್ಟು ರಂಗು ತುಂಬುತ್ತದೆ. ಒಟ್ಟಾರೆಯಾಗಿ ಪರಿಣಾಮಕಾರಿಯಾಗಬಹುದಾಗಿದ್ದ ರಾಬರಿ ಕಥೆ ಒಂದರ್ಥದಲ್ಲಿ ಗಾಬರಿ ಹುಟ್ಟಿಸುತ್ತೆ!