ಜೇನುತುಪ್ಪ ಪ್ರಾಕೃತಿಕವಾಗಿ ಮನುಷ್ಯರಿಗೆಲ್ಲ ದಕ್ಕುವ ಔಷಧಿಗಳ ಕಣಜ. ಅದು ಬಾಯಿರುಚಿಯನ್ನು ತಣಿಸುತ್ತೆ. ಎಲ್ಲ ವಯೋಮಾನದವರೂ ಚಪ್ಪರಿಸಿ ತಿನ್ನುವಂತೆ ಪ್ರೇರೇಪಿಸುತ್ತೆ. ಅದುವೇ ಒಂದಷ್ಟು ಖಾದ್ಯಗಳ ರುಚಿಯನ್ನೂ ಹೆಚ್ಚಿಸುತ್ತೆ. ಹಾಗೆ ಯಾವ ಥರದ ರೂಪಾಂತರ ಹೊಂದಿ ಜೇನುತುಪ್ಪ ನಮ್ಮ ದೇಹದ ಒಳ ಸೇರಿದರೂ ಕೂಡಾ ನಮಗೆ ಅಪಾರ ಪ್ರಮಾಣದಲ್ಲಿ ಲಾಭವಿದೆ. ಈ ಜೇನಿನ ಗುಣ ಲಕ್ಷಣಗಳು ಅದರ ಹುಟ್ಟಿನ ಮೂಲದಷ್ಟೇ ಸಂಕೀರ್ಣ. ಆದರೆ ತಡಕುತ್ತ ಹೋದಷ್ಟೂ ಅಚ್ಚರಿ ಮೆತ್ತಿದ ಜೇನ ಹನಿಗಳು ಸೋಕುತ್ತಲೇ ಇರುತ್ತವೆ.
ಕುತೂಹಲವಿರೋ ಮಂದಿಗೆ ಜೇನು ಗೂಡಿನ ರಚನೆ ಮತ್ತು ಜೇನು ನೊಣಗಳ ಜೀವನ ಕ್ರಮವೇ ಒಂದು ಅಚ್ಚರಿ. ಅದು ಜೀವ ಜಗತ್ತಿನ ಸೃಷ್ಟಿಯ ಪರಮಾದ್ಭುತವೂ ಹೌದು. ಇಂಥಾ ಜೇನುಗಳ ಬಗ್ಗೆ ಮತ್ತು ಜೇನು ತುಪ್ಪದ ಬಗ್ಗೆ ನಮಗೆ ಗೊತ್ತಿಲ್ಲದಿರೋ ಅನೇಕಾನೇಕ ಅಂಶಗಳಿವೆ. ಸಾಮಾನ್ಯವಾಗಿ ನಾವು ಹಸುವಿನ ತುಪ್ಪ ಬಳಸುತ್ತೇವೆ. ಅಬ್ಬಬ್ಬಾ ಅಂದ್ರೆ ತಿಂಗಳೊಪ್ಪತ್ತಿನಲ್ಲಿಯೇ ಅದೆಷ್ಟೇ ಚೆಂದಗೆ ಕಾಯಿಸಿ ಶೇಖರಿಸಿಟ್ಟ ತುಪ್ಪವಾದರೂ ಸ್ವಾದ ಕಳೆದುಕೊಳ್ಳುತ್ತೆ. ಆದರೆ ಜೇನು ತುಪ್ಪ ಮಾತ್ರ ನೂರೇನು ಸಾವಿರ ವರ್ಷ ಕಳೆದರೂ ತಿನ್ನಲು ಯೋಗ್ಯವಾಗೇ ಇರುತ್ತದಂತೆ.
ಒಂದು ಅಧ್ಯಯನದ ಪ್ರಕಾರ ಮೂರು ಸಾವಿರ ವರ್ಷದಷ್ಟು ಹಳೇಯ ಜೇನು ತುಪ್ಪವೂ ಧಾರಳವಾಗಿ ತಿನ್ನುವಷ್ಟು ತಾಜಾತನ ಹೊಂದಿರುತ್ತದೆಯಂತೆ. ಈ ಕಾರಣದಿಂದಲೇ ಈಜಿಪ್ಟಿಯನ್ನರು ಜೇನನ್ನು ಬಹುವಾಗಿ ಮೆಚ್ಚಿ ಹಚ್ಚಿಕೊಂಡಿದ್ದಾರೆ. ಈಜಿಪ್ಟ್ ಅಂದರೇನೇ ಮಮ್ಮಿಗಳು ನೆನಪಾಗ್ತಾವೆ. ಆ ಜನ ಸತ್ತ ನಂತರ ಮತ್ತೊಂದು ಬದುಕಿದೆ ಅಂತ ನಂಬುತ್ತಾರೆ. ಆದ್ದರಿಂದಲೇ ಶವಗಳನ್ನು ಸಂಸ್ಕರಿಸಿ ಇಡೋ ಪರಿಪಾಠವಿದೆ. ಅದರ ಭಾಗವಾದ ಮಮ್ಮಿಗಳ ಪಕ್ಕದಲ್ಲಿ ಜೇನುತುಪ್ಪದ ಡಬ್ಬಿಗಳನ್ನು ಜೋಡಿಸಿಡಲಾಗುತ್ತಂತೆ. ಎಷ್ಟು ವರ್ಷವಾದರೂ ಹಳಸಿ ಹೋಗದ ಜೇನನ್ನು ಸತ್ತ ಮಂದಿ ಮತ್ತೊಂದು ಜನ್ಮದಲ್ಲಿ ಚಪ್ಪರಿಸಲೆಂಬುದು ಅದರ ಉದ್ದೇಶ!