ಕೆದಕಿ ನೋಡುವ ಉತ್ಸಾಹ ಒಳಗಿರದಿದ್ದರೆ ಕಣ್ಣೆದುರು ಕಾಣೋದು ಮಾತ್ರವೇ ಸತ್ಯವಾಗಿ ಬಿಡೋ ಅಪಾಯವಿರುತ್ತೆ. ನಮ್ಮೆಲ್ಲ ಹತಾಶೆ, ಒತ್ತಡಗಳನ್ನೆಲ್ಲ ಒತ್ತಟ್ಟಿಗಿಟ್ಟು ಒಂದೇ ಒಂದು ಸಲ ಕಣ್ಣರಳಿಸಿದರೂ ಈ ಜಗತ್ತಿನ ನಾನಾ ಅಚ್ಚರಿಗಳ ಪರಾಗ ತಂತಾನೇ ಮನಸಿನ ಮಿದುವಿಗೆ ಮೆತ್ತಿಕೊಳ್ಳುತ್ತೆ. ಬೇರೇನೂ ಬೇಡ; ನಿಮ್ಮೆಲ್ಲ ಜಡತ್ವ ಇಳಿದು ಹೋಗಬೇಕಂದ್ರೆ ನಮ್ಮ ಸುತ್ತ ಹಬ್ಬಿಕೊಂಡಿರೋ ಜೀವ ಜಾಲದತ್ತ ಕುತೂಹಲ ಬೆಳೆಸಿಕೊಳ್ಳಿ. ಅಲ್ಲಿಂದ ಹೊಮ್ಮಿಕೊಳ್ಳೋ ಒಂದೊಂದು ಅಚ್ಚರಿಗಳೂ ನಿಮ್ಮೊಳಗೆ ನವೋಲ್ಲಾಸ ತುಂಬುತ್ತವೆ. ಅಚ್ಚರಿಯೆಂಬುದು ಚೈತನ್ಯವಾಗಿ ನಿಮ್ಮ ನರನಾಡಿಗಳನ್ನೆಲ್ಲ ಆವರಿಸಿಕೊಳ್ಳುತ್ತೆ.
ಈಗ ಹೇಳ ಹೊರಟಿರೋದು ಜೀವ ಜಗತ್ತಿನ ಅಂಥಾದ್ದೇ ಒಂದು ವಿಸ್ಮಯದ ಬಗ್ಗೆ. ಇದರ ಕೇಂದ್ರಬಿಂದು ಆಕ್ಟೋಪಸ್. ಸಮುದ್ರದ ನಾನಾ ಭಾಗಗಳಲ್ಲಿ ಹಾಗೂ ಹವಳ ದಂಡೆಗಳ ಸಾಮಿಪ್ಯದಲ್ಲಿ ಬದುಕೋ ಜೀವಿಗಳಿವು. ಸೆಫಲಾಫೋಡಾ ಪ್ರಬೇಧಕ್ಕೆ ಸೇರಿರುವ ಆಕ್ಟೋಪಸ್ಗಳು ಅಸ್ಥಿಪಂಜರವಿಲ್ಲದ ಜೀವಿಗಳು. ಆಕಾರಕ್ಕಿಂತ ಪುಟ್ಟ ಪ್ರದೇಶದಲ್ಲಿಯೂ ತೂರಿಕೊಳ್ಳುವ ಇವುಗಳನ್ನು ಕಂಡರೆ ಭಯ ಬೀಳುವವರಿದ್ದಾರೆ. ಬಾಯಿ ಚಪ್ಪರಿಸಿಕೊಂಡು ತಿನ್ನುವವರೂ ಸಾಕಷ್ಟಿದ್ದಾರೆ. ಜೆಲ್ನಂಥಾ ತನ್ನ ದೇಹದ ಆಕ್ಟೋಪಸ್ಗಳು ತನ್ನ ಎಂಟು ಬಾಹುಗಳನ್ನು ಹಿಂದೆ ತೇಲಿಸಿಕೊಂಡು ಈಜುತ್ತವೆ. ಅಂದಹಾಗೆ ಇವುಗಳು ಅತ್ಯಂತ ಬುದ್ಧಿಶಾಲಿ ಜಲಚರಗಳೆಂದೂ ಹೆಸರಾಗಿವೆ. ತನ್ನ ಮೇಲಾಗೋ ದಾಳಿಗಳಿಂದ ಇವು ಬುದ್ಧಿವಂತಿಕೆಯಿಂದಲೇ ಬಚಾವಾಗುತ್ತವೆ. ಅಂಥಾ ಸಂದಿಗ್ಧ ಕಾಲದಲ್ಲಿ ಇವು ಇಂಕಿನಂಥಾ ದ್ರವವನ್ನು ಉಗುಳಿ ಬಣ್ಣ ಬದಲಾಯಿಸಿಕೊಂಡು ತಪ್ಪಿಸಿಕೊಳ್ತಾವಂತೆ.