ಈ ಜೀವಜಗತ್ತಿನ ಅಚ್ಚರಿಗಳು ಮೊಗೆದಷ್ಟೂ ಮತ್ತೆ ಮತ್ತೆ ಉತ್ಪತ್ತಿಯಾಗುತ್ತಿರುತ್ತವೆ. ಇದುವರೆಗೂ ಹಲವಾರು ಮಂದಿ ಇಂಥಾ ಅಚ್ಚರಿಗಳನ್ನು ತಡಕಾಡೋದನ್ನೇ ಧ್ಯೇಯವಾಗಿಸಿಕೊಂಡು ಬದುಕಿದ್ದಾರೆ. ಜೀವ ಸಂಕುಲದ ನಾನಾ ಅಚ್ಚರಿಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಒಂದು ಜೀವಿಯ ಸೂಕ್ಷ್ಮ ಕದಲಿಕೆಗಳಿಗೂ ಕಣ್ಣಾಗುತ್ತಾ, ಅದರ ಜೀವನ ಕ್ರಮವನ್ನು ಅಭ್ಯಸಿಸೋದೆಂದರೆ ಅದೇನು ಸಾಮಾನ್ಯದ ಸಂಗತಿಯಾ? ಈ ನಿಟ್ಟಿನಲ್ಲಿ ಹೇಳುವುದಾದರೆ ಜೀವ ಜಗತ್ತಿನ ಬಗ್ಗೆ ಈಗ ಆಗಿರುವಂಥಾ ಸಂಶೋಧನೆಗಳನ್ನು ವಿಶಾಲ ಸಮುದ್ರದ ಒಂದಷ್ಟು ಹನಿಗಳಿಗಷ್ಟೇ ಹೋಲಿಸಬಹುದೇನೋ…
ಸಮುದ್ರ ಜೀವಿಯಾದ ಆಕ್ಟೋಪಸ್ ಅನ್ನೇ ತೆಗೆದುಕೊಳ್ಳಿ… ಅದು ಮೊಟ್ಟೆಯಿಟ್ಟು ಮರಿ ಮಾಡೋದರಿಂದ ಹಿಡಿದು ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಹಾಗಂತ ಇದಿಷ್ಟೇ ಆಕ್ಟೋಪಸ್ಸಿನ ಜೀವನ ಕ್ರಮ ಅಂತ ಷರಾ ಬರೆಯಲು ಸಾಧ್ಯವಿಲ್ಲ. ಯಾಕೆಂದರೆ, ಆಕ್ಟೋಪಸ್ ಜೀವನ ಕ್ರಮದಲ್ಲಿ ಮನುಷ್ಯನ ಕಣ್ಣಿಗೆ ನಿಲುಕದ ಅದೆಷ್ಟೋ ವಿಚಾರಗಳು ಬಾಕಿ ಉಳಿದುಕೊಂಡಿವಿ. ಇದೀಗ ಯಾರಿಗೇ ಆದರೂ ಅಚ್ಚರಿಯಾಗುವಂಥಾ ಮತ್ತೊಂದು ವಿಚಾರ ಅನಾವರಣಗೊಂಡಿದೆ.
ಅದರನ್ವಯ ಹೇಳೋದಾದರೆ, ಒಂದು ಹಂತದಲ್ಲಿ ಈ ಆಕ್ಟೋಪಸ್ಸಿನ ದೇಹದ ತುಂಬೆಲ್ಲ ವಿಷಕಾರಕ ಅಂಶ ಹೆಚ್ಚಾಗುತ್ತದೆ. ಆ ಹೊತ್ತಿನಲ್ಲಿ ಆಕ್ಟೋಪಸ್ ಬಂಡೆಗಳಿಗೆ ತನ್ನ ದೇಹದ ಭಾಗಗಳನ್ನು ಹೊಡೆದು ಗಾಯ ಮಾಡಿಕೊಳ್ಳುತ್ತದೆ. ಮೊಟ್ಟೆಗಳನ್ನು ಇಟ್ಟ ನಂತರ ಅದರ ದೇಹದಲ್ಲಿ ಮೂರು ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ವಿಶಕಾರಿ ಸಂಯುಕ್ತಗಳ ಮಟ್ಟವೂ ಹೆಚ್ಚಾಗುತ್ತದೆ. ಈ ಹಂತದಲ್ಲಿ ಆಕ್ಟೋಪಸ್ ತನಗೆ ತಾನೇ ಹಿಂಸೆ ಕೊಟ್ಟುಕೊಳ್ಳಲಾರಂಭಿಸುತ್ತದೆ. ತನ್ನ ದೇಹದ ಭಾಗಗಳನ್ನು ತಾನೇ ತಿನ್ನುತ್ತದೆಂಬ ವಿಚಾರವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.