ಇಡೀ ಜಗತ್ತು ಕೊರೋನಾ ವೈರಸ್ಸಿನ ಮುಂದೆ ಮಂಡಿಯೂರಿದ್ದಾಗ, ಜನ ಹುಳಗಳಿಗಿಂತಲೂ ಕಡೆಯಾಗಿ ಹಾದಿ ಬೀದಿಯಲ್ಲಿ ಜೀವ ಬಿಡುತ್ತಿದ್ದಾಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬೆಚ್ಚಗೆ ಮಲಗಿಕೊಂಡಿದ್ದ. ಹೇಳಿಕೇಳಿ ಅದು ಸರ್ವಾಧಿಕಾರದ ಕಪಿಮುಷ್ಠಿಯಲ್ಲಿರುವ ದೇಶ. ಯಾರೆಂದರೆ ಯಾರೂ ಕೂಡಾ ಕಿಮ್ ಜಾಂಗ್ ಹಾಕಿದ ಗೆರೆಯನ್ನು ದಾಟುವಂತಿಲ್ಲ. ಯಾವಾಗ ಇಡೀ ವಿಶ್ವದ ತುಂಬೆಲ್ಲ ಕೊರೋನಾ ಛಾಯೆ ಆವರಿಸಿಕೊಂಡಿತ್ತೋ ಆಗ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಕಿಮ್, ವೈರಸ್ಸು ತನ್ನ ದೇಶದ ಗಡಿ ದಾಟದಂತೆ ನೋಡಿಕೊಂಡಿದ್ದ.
ಇದೀಗ ವಿಶ್ವದ ನಾನಾ ದೇಶಗಳಲ್ಲಿ ಕೊರೋನಾ ನಾಲಕ್ಕನೇ ಅಲೆಯ ಮುನ್ಸೂಚನೆ ಸಿಗಲಾರಂಭಿಸಿದೆ. ಕೊರೋನಾ ಜನ್ಮ ಸ್ಥಳ ಚೀನಾ ನಾಲಕ್ಕನೇ ಸುತ್ತಿನಲ್ಲಿ ಪಡಿಪಾಟಲು ಪಡುತ್ತಿದೆ. ನಮ್ಮದೇ ಭಾರತದಲ್ಲಿನ ನಾನಾ ಭಾಗಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ ಅಂತ ಮಾಧ್ಯಮಗಳು ಬೊಂಬಡ ಬಜಾಯಿಸುತ್ತಿವೆ. ಇಂಥಾ ಹೊತ್ತಿನಲ್ಲಿ ಉತ್ತರ ಕೊರಿಯಾದ ಸ್ಥಿತಿ ಹೇಗಿದೆ? ಅಲ್ಲಿನ ಮಂದಿ ಈ ಬಾರಿಯೂ ಸೇಫ್ ಜೋನಿನಲ್ಲಿದ್ದಾರಾ ಅಂತ ನೋಡಹೋದರೆ, ವಾತಾವರಣ ಖುಲ್ಲಂಖುಲ್ಲ ಪ್ರತಿಕೂಲವಾಗಿ ಬಿಟ್ಟಿದೆ!
ಯಾಕೆಂದರೆ, ಈ ಬಾರಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ನನ ಬುಡದಲ್ಲಿಯೇ ಕೊರೋನಾ ಬಾಂಬು ಭಡಾರಂದಿದೆ. ತಾನು ಸರ್ವಾಧಿಕಾರಿ, ತನ್ನನ್ನು ಕೊರೋನಾ ವೈರಸ್ಸು ಏನೂ ಮಾಡಿಕೊಳ್ಳಲಾಗೋದಿಲ್ಲ ಎಂಬಂತೆ ಮೆರೆಯುತ್ತಾ ಬಂದಿದ್ದ ಕಿಮ್ ಈ ಬಾರಿ ಭೀತನಾಗಿದ್ದಾನೆ. ಈಗಾಗಲೇ ಕೊರೋನಾ ಉತ್ತರ ಕೋರಿಯಾದ ನರನಾಡಿಗಳಿಗೂ ಹಬ್ಬಿಕೊಂಡಿದೆ. ತಾನು ಯಾರಿಗೂ, ಯಾವ ದೇಶಗಳಿಗೂ ಕೇರು ಮಾಡೋದಿಲ್ಲ ಎಂಬಂತೆ ಮೆರೆದಾಡುತ್ತಿದ್ದ ಕಿಮ್, ಕೊಂಚ ಯಾಮಾರಿದರೂ ಬೇರೆ ದೇಶಗಳ ಮುಂದೆ ಕೈ ಚಾಚಿ ನಿಲ್ಲುವಂಥಾ ವಿಷಮ ವಾತಾವರಣವಿದೆ.
ಕಿಮ್ ಅಧಿಕೃತ ಮಾಹಿತಿಗಳನ್ನು ಅದುಮಿಟ್ಟುಕೊಂಡಿದ್ದಾನಾದರೂ ಈಗಾಗಲೇ ಅಂದಾಜು ನಲವತ್ತೆರಡಕ್ಕೂ ಹೆಚ್ಚು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾ ಈಗ ಯಾವ ಪರಿಯಾಗಿ ವ್ಯಾಪಿಸಿಕೊಂಡಿದೆಯೆಂದರೆ, ಉತ್ತರ ಕೊರಿಯಾದ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೊಂಚ ಯಾಮಾರಿದರೂ ಈ ಬಾರಿ ಉತ್ತರ ಕೋರಿಯಾ ಅಕ್ಷರಶಃ ಸ್ಮಶಾನವಾಗಲಿದೆ!