ಇದು ದಿನದ ಇಪ್ಪತ್ನಾಲಕ್ಕು ಗಂಟೆಯೂ ಸುದ್ದಿಗಳ ಗಿರಣಿ ಚಾಲೂ ಇರುವ ದಿನಮಾನ. ಲೆಕ್ಕವಿರದಷ್ಟು ಟೀವಿ ಚಾನೆಲ್ಗಳು ದಂಡಿ ದಂಡಿ ಸುದ್ದಿಗಳನ್ನ ಹೆಕ್ಕಿ ತೆಗೆಯುತ್ತವೆ. ಪತ್ರಿಕೆಗಳೂ ಕೂಡಾ ಅನಾದಿ ಕಾಲದಿಂದಲೂ ಆ ಕೆಲಸ ಮಾಡ್ತಾನೇ ಬಂದಿವೆ. ಅದೂ ಸಾಲದೆಂಬಂತೆ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿಯೂ ಸುದ್ದಿಗಳ ಭರಾಟೆ ಮೇರೆ ಮೀರಿದೆ. ಒಟ್ಟಾರೆಯಾಗಿ ಈಗ ಸುದ್ದಿಗಳದ್ದೇ ಗೌಜು ಗದ್ದಲ. ಇಂಥಾ ಸುದ್ದಿಗಳ ಭರಾಟೆಯಲ್ಲಿ ಒಂದು ದಿನ ಸುದ್ದಿಗಳು ಕಡಿಮೆಯಿದ್ದರೆ ಮಾಧ್ಯಮಗಳ ಪಾಡೇನು ಅನ್ನೋ ಕ್ಯೂರಿಯಾಸಿಟಿ ಕಾಡುತ್ತೆ. ಒಂದಷ್ಟು ಮಂದಿಯಾದ್ರೂ ಅದರ ಬಗ್ಗೆ ಆಲೋಚಿಸಿರ್ತಾರೆ. ಒಂದು ವೇಳೆ ಯಾವ ಸುದ್ದಿಯೂ ಇಲ್ಲದೇ `ಇಂದು ಸುದ್ದಿಗಳಿಲ್ಲ’ ಅಂತ ಅನೌನ್ಸ್ ಮಾಡಬೇಕಾಗಿ ಬಂದರೆ ಹೇಗಿರಬಹುದನ್ನೋದು ಕಲ್ಪನೆಗೂ ನಿಲುಕೋದಿಲ್ಲ.
ಆದರೆ ತಂತ್ರಜ್ಞಾನ ತುಂಬಾನೇ ಹಿಂದುಳಿದಿದ್ದ ಕಾಲದಲ್ಲಿ ಒಂದೇ ಒಂದು ಸಲ ಅಂಥಾ ಕಲ್ಪನೆ ನಿಜವಾಗಿತ್ತಂತೆ. ಅದು ಕಳೆದ ಶತಮಾನದ ಆರಂಭಿಕ ದಿನಗಳು. ರೇಡಿಯೋಗಳೇ ಆಗಿನ ಸುದ್ದಿ ಸಂಗಾತಿಗಳು. ಆ ಕಾಲಕ್ಕೆ ಬಿಬಿಸಿ ರೇಡಿಯೋ ಜಗದ್ವಿಖ್ಯಾತಿ ಗಳಿಸಿತ್ತು. 1930ರ ಏಪ್ರಿಲ್ ಹದಿನೆಂಟನೇ ತಾರೀಕಿನಂದು ನಿಜಕ್ಕೂ ಎಲ್ಲ ರೇಡಿಯೋ ಸಿಬ್ಬಂದಿಗೂ ಪೀಕಲಾಟಕ್ಕಿಟ್ಟುಕೊಂಡಿತ್ತು.
ಯಾಕಂದ್ರೆ ಆ ದಿನ ಸುದ್ದಿಗಳೆಲ್ಲ ಮಂದಗತಿಯಲ್ಲಿ ಸರಿದಾಡ್ತಿದ್ದವು. ಅದ್ಯಾವ ಪರಿ ಮಂದಗತಿ ಅಂದ್ರೆ ವಾಚಕರು ಇದ್ದ ಸುದ್ದಿಯನ್ನೇ ಎಳೆದಾಡಿ ಹೇಳುವಷ್ಟು. ಹೇಗೋ ಮ್ಧ್ಯಾನದ ವರೆಗೆ ಕಷ್ಟಪಟ್ಟು ಮ್ಯಾನೇಜ್ ಮಾಡಲಾಗಿತ್ತು. ಆದ್ರೆ ಸಂಜೆಯ ಹೊತ್ತಿಗೆ ಜಗತ್ತೆಲ್ಲ ಸದ್ದಿಲ್ಲದೆ, ಸುದ್ದಿಗಳೂ ಇಲ್ಲದೆ ನಿಂತಂಥಾ ಅನುಭವ. ಕಡೆಗೂ ಸಂಜೆ ಆರು ಗಂಟೆಗೆ ಬಿಬಿಸಿ ರೇಡಿಯೋದ ವಾರ್ತಾ ವಾಚಕ `ಯಾವುದೇ ಸುದ್ದಿಗಳು ಇಲ್ಲ’ ಅಂತ ಅನೌನ್ಸ್ ಮಾಡಿದ್ದನಂತೆ!