ನಾವು ಆಗಾಗ ಸುಂದರವಾದ ಪ್ರದೇಶಗಳು, ಭೂಲೋಕದ ಸ್ವರ್ಗದಂಥ ಸ್ಥಳಗಳು ಯಾವ್ಯಾವ ದೇಶದಲ್ಲಿದ್ದಾವೆ ಅಂತ ದುರ್ಬೀನು ಹಾಕಿಕೊಂಡು ಹುಡುಕುತ್ತೇವೆ. ನಮ್ಮ ನಿರೀಕ್ಷೆಯ ಆಸುಪಾಸಲ್ಲಿರೋ ಒಂದು ಪ್ರದೇಶ ಕಣ್ಣಿಗೆ ಬಿದ್ದರೂ ಅದರ ವಿವರಗಳನ್ನು ಜಾಲಾಡಿ ಒಂದೇ ಒಂದು ಸಲ ಅಲ್ಲಿಗೆ ಹೋಗಬೇಕೆಂದು ಹಂಬಲಿಸುತ್ತೇವೆ. ಆದರೆ ನಿಜವಾಗಿಯೂ ಸ್ವರ್ಗವೇ ಧರೆಗಿಳಿದಂಥಾ ದೇಶಗಳೇ ಸಾಕಷ್ಟಿವೆ. ಆ ಸಾಲಿನಲ್ಲಿ ಮೊದಲಿಗೆ ನಿಲ್ಲುವಂಥ ಎಲ್ಲ ಲಕ್ಷಣಗಳನ್ನೂ ಒಳಗೊಂಡಿರೋ ದೇಶ ನ್ಯೂಜಿಲ್ಯಾಂಡ್. ಅದು ನಿಜಕ್ಕೂ ಧರೆಗಿಳಿದ ಸ್ವರ್ಗ. ಈ ಮಾತಿಗೆ ತಕ್ಕುದಾದ ಚಹರೆಗಳನ್ನ ಅದು ತನ್ನೊಡಲ ತುಂಬೆಲ್ಲ ಬಚ್ಚಿಟ್ಟುಕೊಂಡಿದೆ. ಹಾಗಂತ ನ್ಯೂಜಿಲ್ಯಾಂಡಿನ ಯಾವುದೋ ಪ್ರದೇಶದಲ್ಲಿ ಸ್ವರ್ಗದಂಥ ವಾತಾವರಣ ಇದೆ ಅಂದುಕೊಳ್ಳಬೇಕಿಲ್ಲ.
ಆ ಇಡೀ ದೇಶವೇ ಸ್ವರ್ಗದಂತಿದೆ. ಕೇವಲ ಅದರ ಅಂದ ಚೆಂದ, ವಾತಾವರಣ, ಪ್ರಾಕೃತಿಕ ಸಿರಿವಂತಿಕೆ ಮಾತ್ರವಲ್ಲ; ಜನಜೀವನ, ಸಮಾಜಿಕ, ರಾಜಕೀಯ ವಿಚಾರಗಳೂ ಕೂಡಾ ಅದಕ್ಕೆ ಪೂರಕವಾಗಿವೆ. ಈ ಕಾರಣದಿಂದಲೇ ಅಲ್ಲಿನ ಜನ ನೆಮ್ಮದಿಯಿಂದಿದ್ದಾರೆ. ಇದೆಲ್ಲ ಅಂಶಗಳೊಂದಿಗೆ ಅದು ಎಲ್ಲ ರೀತಿಯಿಂದಲೂ ಇತರೇ ದೇಶಗಳಿಗೆ ಮಾದರಿಯಂತಿದೆ. ಅದು ಪ್ರಾಕೃತಿಕವಾಗಿಯೇ ಹಲವಾರು ಉಡುಗೊರೆಗಳನ್ನು ಪಡೆದುಕೊಂಡಿರೋ ದೇವಭೂಮಿಯಂಥಾ ದೇಶ. ಸೂರ್ಯೋದಯವನ್ನು ಪ್ರಪಂಚದ ಇತರೆ ಭಾಗಗಳಿಗಿಂತ ಮೊದಲು ನೋಡೋ ಸೌಭಾಗ್ಯವೂ ಅಲ್ಲಿನ ಜನರಿಗಿದೆ. ಹೊಸಾ ವರ್ಷಾಚರಣೆ ಮೊದಲು ನಡೆಯೋದೂ ಕೂಡಾ ಅಲ್ಲಿಯೇ. ಭಾರತಕ್ಕೆ ಹೋಲಿಸಿದರೆ ಅದೊಂದು ಚಿಕ್ಕ ದೇಶ. ಅದನ್ನು ಕಿವೀಸ್ ಅಂತಲೂ ಕರೆಯುತ್ತಾರೆ. ಅಲ್ಲಿ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳೇ ಇದ್ದಾವೆ. ಅದು ಪ್ರಕೃತಿಯನ್ನು ಅಲ್ಲಿನ ಜನ ಅದೆಷ್ಟು ಜತನದಿಂದ ಕಾಯ್ದುಕೊಂಡು, ಸಹಜವಾಗಿ ಇರಲು ಬಿಟ್ಟಿದ್ದಾರೆಂಬುದಕ್ಕೊಂದು ಉದಾಹರಣೆ.
ಇನ್ನುಳಿದಂತೆ ಸಾಮಾಜಿಕವಾಗಿಯೂ ಅದು ಅನೇಕ ಅಚ್ಚರಿಗಳ ಕಣಜ. ಅದು ಹೆಣ್ಣು ಮಕ್ಕಳ ಪಾಲಿಗೆ ಸೇಫ್ ಆಗಿರೋ ದೇಶ. ಅಲ್ಲಿ ಹೆಣ್ಣು ಗಂಡಿನ ನಡುವೆ ಯಾವ ತಾರತಮ್ಯವೂ ಇಲ್ಲ. ಇಡೀ ಜಗತ್ತಿನಲ್ಲಿಯೇ ಮೊದಲ ಬಾರಿ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಡಮಾಡಿರೋ ದೇಶವೆಂಬ ಹೆಗ್ಗಳಿಕೆಯೂ ನ್ಯೂಜಿಲ್ಯಾಂಡಿಗಿದೆ. ಅಂದಹಾಗೆ ನ್ಯೂಜಿಲ್ಯಾಂಡಿಗೆ ಕಿವೀಸ್ ಅಂತ ಹೆಸರು ಬರೋದಕ್ಕೂ ಕಾರಣವಿದೆ. ಅಲ್ಲಿ ಕಿವಿ ಎಂಬ ಹೆಸರಿನ ಪಕ್ಷಿಯೊಂದಿದೆ. ಅದು ಆ ದೇಶದಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗುತ್ತದೆ. ಅದರ ಗಾತ್ರ ತೀರಾ ಚಿಕ್ಕದು. ಆದರೆ ಅದರ ಮುದ್ದು ಮುದ್ದಾದ ಗುಣ ಲಕ್ಷಣಕ್ಕೆ ಯಾವ ಸಾಟಿಯೂ ಇಲ್ಲ. ಅದ ಆ ದೇಶದ ರಾಷ್ಟ್ರ ಪಕ್ಷಿಯೂ ಹೌದು. ಈ ಕಾರಣದಿಂದಲೇ ನ್ಯೂಜಿಲ್ಯಾಂಡಿಗೆ ಕಿವೀಸ್ ಎಂಬ ಹೆಸರು ಬಂದಿದೆ. ಇನ್ನೂ ವಿಶೇಷ ಅಂದರೆ ಕೃಷಿಯೇ ಆ ದೇಶದ ಜನರ ಪ್ರಧಾನ ಕಸುಬು. ಕೃಷಿಯನ್ನು ಹೈಟೆಕ್ ಆಗಿಯೇ ನಡೆಸೋ ಅವರು ತಮ್ಮ ಆಹಾರವನ್ನು ತಾವೇ ಬೆಳೆದು ತಿಂತಾರೆ ಮತ್ತದು ಗುಣ ಮಟ್ಟದಿಂದ ಇರುವಂತೆ ಸದಾ ಕಾಲವೂ ಎಚ್ಚರಿಕೆ ವಹಿಸುತ್ತಾರೆ.