ಆನ್ಲೈನ್ ಯುಗ ಶುರುವಾದಾಕ್ಷಣ ಇಡೀ ಬದುಕು ಬೆರಳ ಮೊನೆಗೆ ಬಂದು ಕುಣಿದಾಡಿದಂತೆಯೇ ಬಹುತೇಕರಿಗೆ ಭಾಸವಾಗಿತ್ತು. ಒಂದು ಕಾಲದಲ್ಲಿ ಗಂಟೆಗಟ್ಟಲೆ ಕಾದು, ಬ್ಯಾಂಕ್ ಸಿಬ್ಬಮದಿಯೊಂದಿಗೆ ಕಾದಾಡಿ ಸುಸ್ತಾದವರ ಪಾಲಿಗಂತೂ, ನೆಟ್ ಬ್ಯಾಂಕಿಂಗ್ ಅನ್ನೋದು ಸಾಕ್ಷಾತ್ತು ಭಗವಂತನೇ ಕರುಣಿಸಿದ ವರವೆಂಬಂತೆ ಕಂಡಿತ್ತು. ಯಾವಾಗ ಹೀಗೆ ಜನರ ಹಣಕಾಸಿನ ವ್ಯವಹಾರವೆಲ್ಲ ಆನ್ಲೈನಿಗೆ ಶಿಫ್ಟಾಯಿತೋ, ಆಗ ವಂಚಕರ ಹಿಂಡೊಂದು ಅಲ್ಲಿಗೇ ಬಂದು ಹೊಂಚಿ ಕೂತು ಬಿಟ್ಟಿದೆ. ಅದರ ಫಲವಾಗಿಯೇ ಈಗ ನಾವು ಕಷ್ಟಪಟ್ಟು ಕೂಡಿಟ್ಟುಕೊಂಡ ಕಾಸಿಗೆ ಕಂಟಕ ಬಂದೆರಗಿದೆ. ಅಕೌಂಟಿನಲ್ಲಿದ್ದ ಕಾಸು ಯಾವ ಮಾಯಕದಲ್ಲಿ ಬೇಕಾದರೂ ಮತ್ಯಾರದ್ದೋ ಅಕೌಂಟಿಗೆ ಎಗರಿಕೊಳ್ಳುವ ಆತಂಕದಲ್ಲಿಯೇ ಬಹುತೇಕರು ಬದುಕುವಂತಾಗಿಬಿಟ್ಟಿದೆ!
ಮೇಲ್ಕಂಡ ವಿವರಗಳಿಗೆ ಪಕ್ಕಾ ಸಾಕ್ಷಿಯಂಥಾ ವಿದ್ಯಮಾನಗಳು ದೇಶಾದ್ಯಂತ ಮಾಮೂಲಿಯಾಗಿ ಬಿಟ್ಟಿದೆ. ಇದೀಗ ಅಂಥಾದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. ಇಲ್ಲಿನ ಕಾಪೆಂಟರ್ ಒಬ್ಬ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಮೂರು ಲಕ್ಷಕ್ಕೆ ಆನ್ಲೈನ್ ಚೋರರು ಕನ್ನ ಹಾಕಿದ್ದಾರೆ. ಆರಂಭದಲ್ಲಿ ತನ್ನ ಅಕೌಂಟಿನಿಂದ ಒಂದು ಲಕ್ಷದಷ್ಟು ಹಣ ಮಾಯವಾಗಿದ್ದನ್ನು ಕಂಡು ಕಾಪೆಂಟರ್ ಕಂಗಾಲಾಗಿದ್ದು. ತದ ನಂತರ ಮೂರು ಲಕ್ಷದಷ್ಟು ಹಣ ಮಾಯವಾಗುವ ಮೂಲಕ ತನ್ನ ಅಕೌಂಟು ಖಾಲಿಯಾಗಿದ್ದನ್ನು ಕಂಡು ಅಕ್ಷರಶಃ ಶಾಕ್ ಆಗಿ ಬಿಟ್ಟಿದ್ದ. ತಕ್ಷಣವೇ ಟೋಲ್ ಫ್ರೀ ನಂಬರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ಸಂಬಂಧಿಸಿದ ಬ್ಯಾಂಕಿನವರೂ ಈ ಬಗ್ಗೆ ಸ್ಪಂದಿಸುತ್ತಿಲ್ಲ ಅಂತ ಆ ಕಾಪೆಂಟರ್ ಆರೋಪಿಸಿದ್ದಾನೆ.
ಮುಂಬೈನ ಈ ಕಾರ್ಪೆಂಟರ್ ಈ ರೀತಿ ಹಣ ಕಳೆದುಕೊಳ್ಳಲು ಕಾರಣವಾಗಿದ್ದು ಒಂದು ಬ್ಯಾಂಕಿಂಗ್ ಆಪ್. ಈಗಂತೂ ಇಂಥಾ ಆಪ್ಗಳು ಮಾಮೂಲಿ. ಥರ ಥರದ ಆಮಿಷವೊಡ್ಡಿ ವಂಚಕರು ಇದನ್ನು ಹರಿಯ ಬಿಡುತ್ತಾರೆ. ಜಾಗಹಿರಾತಿನ ರೂಪದಲ್ಲಿ, ಮೆಸೇಜುಗಳ ಮೂಲಕ ಬರುವ ಇಂಥಾ ಆಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಂತೆ ಮಾಡಲಾಗುತ್ತೆ. ಹಾಗೆ ಇನ್ಸ್ಟಾಲ್ ಮಾಡಿಕೊಳ್ಳುವಾಗ ಕೊಡುವ ಬ್ಯಾಂಕಿನ ಡೀಟೇಲುಗಳನ್ನಿಟ್ಟುಕೊಂಡು ವಂಚಕರು ಅಕೌಂಟಿನ ಹಣವನ್ನು ಬಸಿದುಕೊಳ್ಳುತ್ತಾರೆ. ಬ್ಯಾಂಕಿಂಗಿಗೆ ಸಂಬಂಧಿಸಿದ ಇಂಥಾ ಯಾವುದೇ ಆಪ್ಗಳನ್ನು, ಮೆಸೇಜುಗಳನ್ನು ನಿರ್ಲಕ್ಷ್ಯ ಮಾಡಿ ಮುಂದುವರೆಯೋದು ಜಾಣತನದ ಲಕ್ಷಣ. ಅವುಗಳನ್ನು ಮುಟ್ಟಲು ಹೋದರೆ ಮುಟ್ಟಿ ನೋಡಿಕೊಳ್ಳುವಂಥಾ ಆಘಾತವಾಗೋದು ಗ್ಯಾರೆಂಟಿ!