ಸುಚೇಂದ್ರ ಪ್ರಸಾದ್ (suchendra prasad) ನಿರ್ದೇಶನದ `ಮಾವು ಬೇವು’ (maavu bevu) ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಒಂದೊಳ್ಳೆ ಕಂಟೆಂಟು ಹೊಂದಿರುವ ಚಿತ್ರ ಪ್ರಚಾರದ ಪಟ್ಟುಗಳಾಚೆಗೂ ಪ್ರೇಕ್ಷಕರನ್ನು ಸೆಳೆಯುತ್ತದೆ, ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ ಎಂಬುದಕ್ಕೆ ಬಹುಶಃ ಮಾವು ಬೇವು ಚಿತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ತನ್ನ ಆಂತರ್ಯ ಕಸುವಿನ ಕಾರಣದಿಂದಲೇ ಹೀಗೆ ಸದ್ದು ಮಾಡುತ್ತಿರುವ `ಮಾವು ಬೇವು’ (maavu bevu) ಹಲವಾರು ವಿಶೇಷತೆಗಳನ್ನೊಳಗೊಂಡಿದೆ. ಇಲ್ಲಿ ಈ ಕಾಲಮಾನಕ್ಕೆ ಕನ್ನಡಿ ಹಿಡಿಯುವಂಥಾ ಅದ್ಭುತ ಕಥಾನಕವಿದೆ. ನಮ್ಮ ಜೊತೆಯಲ್ಲೇ ಹೆಜ್ಜೆ ಹಾಕುವಂತೆ ಭಾಸವಾಗೋ ಪಾತ್ರಗಳಿವೆ. ಅಂಥಾದ್ದೊಂದು ವಿಶಿಷ್ಟವಾದ ಪಾತ್ರಕ್ಕೆ ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಪ್ರತಿಭಾನ್ವಿತ ನಟ ನೀನಾಸಂ ಸಂದೀಪ್ (neenasam sandeep) ಜೀವ ತುಂಬಿದ್ದಾರೆ. ಈ ಮೂಲಕ ಎಸ್. ರಾಜಶೇಖರ್ ನಿರ್ಮಾಣ ಮಾಡಿರುವ ##ಮಾವು ಬೇವು ಚಿತ್ರದ ನಾಯಕನಾಗಿ ನಟಿಸಿರುವ ತುಂಬು ತೃಪ್ತಿಯೊಂದು ಸಂದೀಪ್ ಅವರಲ್ಲಿದೆ.
ನೀನಾಸಂ ಸಂದೀಪ್ ರಂಗಭೂಮಿಯಿಂದ ಬಂದ ಗಟ್ಟಿ ಪ್ರತಿಭೆ. ಯಾವ ಪಾತ್ರವಾದರೂ ಸೈ ಎಂಬಂಥಾ ಛಾತಿ ಹೊಂದಿರುವ ಅಪರೂಪದ ನಟ. ಕಿರುತೆರೆಯಲ್ಲಿ ಥರ ಥರದ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಚಿರಪರಿಚಿತರಾಗಿರುವ ಸಂದೀಪ್, ಹಿರಿತೆರೆಯಲ್ಲಿಯೂ ಅಂಥಾದ್ದೇ ಛಾಪು ಮೂಡಿಸಿದ್ದಾರೆ. ಸಿನಿಮಾಗಳ ಸಂಖ್ಯೆಗಿಂತಲೂ ಪಾತ್ರದ ವೈಶಿಷ್ಟ್ಯ, ಗುಣಮಟ್ಟದತ್ತ ಪ್ರಧಾನವಾಗಿ ಗಮನ ಹರಿಸುವ ವಿರಳ ನಟರ ಸಾಲಿನಲ್ಲಿ ಸಂದೀಪ್ ನಿಸ್ಸಂದೇಹವಾಗಿ ಸೇರಿಕೊಳ್ಳುತ್ತಾರೆ. ಯಾವ ಬಗೆಯ ಪಾತ್ರಗಳಿಗಾದರೂ ಜೀವ ತುಂಬುವ ಶಕ್ತಿ ಇರುವ ಸಂದೀಪ್ ಪಾಲಿಗೆ ಕಂಟೆಂಟ್ ಓರಿಯಂಟೆಂಡ್ ಸಿನಿಮಾಗಳದ್ದೇ ಧ್ಯಾನ. ಹೊಸ ಹೊಸಾ ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡು ನಟನಾಗಿ ಮಿರುಗಬೇಕೆಂಬ ಅದಮ್ಯ ತುಡಿತ…
ಇಂಥಾ ಮನಃಸ್ಥಿತಿ ಹೊಂದಿರುವ ಸಂದೀಪ್ ಅವರ ಪಾಲಿಗೆ ಅದೆಲ್ಲವೂ ಒಟ್ಟೊಟ್ಟಿಗೇ ಸಾಕಾರಗೊಂಡಂತಿದ್ದ ಮಾವು ಬೇವು ಚಿತ್ರದ ನಾಯಕನಾಗೋ ಅವಕಾಶ ತಾನೇ ತಾನಾಗಿ ಕೂಡಿ ಬಂದಿದೆ. ನಿರ್ದೇಶಕ ಸುಚೇಂದ್ರ ಪ್ರಸಾದ್ ಇದರಲ್ಲಿನ ಪ್ರತೀ ಪಾತ್ರಗಳಿಗೂ ಕೂಡಾ ಅಳೆದೂ ತೂಗಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರೇ ಅತ್ಯಂತ ಪ್ರೀತಿಯಿಂದ, ಭರವಸೆಯಿಂದ ಪ್ರಧಾನ ಪಾತ್ರಕ್ಕೆ ನೀನಾಸಂ ಸಂದೀಪ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದಾ ಹೊಸತರತ್ತ ತೆರೆದುಕೊಳ್ಳುವ ಗುಣ ಹೊಂದಿರುವ ಸಂದೀಪ್ ಪಾಲಿಗಂತೂ ಈ ಸಿನಿಮಾ ಆರಂಭದಿಂದ ಹಿಡಿದು, ಕಡೇಯವರೆಗೂ ರೋಮಾಂಚಕ ಅನುಭವವನ್ನು ಕೊಡಮಾಡಿದೆ. ಸುಚೇಂದ್ರ ಪ್ರಸಾದ್ ಅವರ ಸಾಂಗತ್ಯ, ಗ್ರಂಥ ಭಂಡಾರ, ಅನುಭವದ ಕಣಜದೊಂದಿಗೆ ಕಲೆತು ಕೆಲಸ ಮಾಡುವ ಅವಕಾಶ ದಕ್ಕಿಸಿದೆಯೆಂಬ ಧನ್ಯತಾ ಭಾವವೂ ಅವರಲ್ಲಿದೆ.
ಸಾಮಾನ್ಯವಾಗಿ ಆಕಾಂಕ್ಷೆಗಳು ಉತ್ಕಟವಾಗಿದ್ದರೆ, ಅದಕ್ಕಾಗಿ ಬೇಕಾದ ಪರಿಶ್ರಮ ಪ್ರಾಮಾಣಿಕವಾಗಿದ್ದರೆ ಕೊಂಚ ತಡವಾದರೂ ಅಂಥಾದ್ದೇ ಅವಕಾಶಗಳು ಸಾಲುಗಟ್ಟಿ ನಿಲ್ಲುತ್ತವೆ. ನೀನಾಸಂ ಸಂದೀಪ್ ಅವರ ವಿಚಾರದಲ್ಲಿಯೂ ಆ ಮಾತು ಅಕ್ಷರಶಃ ಸತ್ಯ. ಯಾಕೆಂದರೆ, ಸಿನಿಮಾ ವಿಚಾರದಲ್ಲಿ ಅವರೊಳಗಿನ ತುಡಿತಕ್ಕೆ ಪೂರಕವಾದ ಪಾತ್ರಗಳೇ ಅವರಿಗೆ ಸಾಲು ಸಾಲಾಗಿ ಸಿಗುತ್ತಾ ಸಾಗುತ್ತಿವೆ. ಇತ್ತೀಚೆಗೆ ಬಿಡುಗಡೆಗೊಂಡು ಜನಮೆಚ್ಚುಗೆ ಪಡೆದಿರುವ 19 20 21 ಚಿತ್ರದಲ್ಲಿಯೂ ಸಂದೀಪ್ ಮುಖ್ಯವಾದೊಂದು ಪಾತ್ರ ಮಾಡಿದ್ದರು. ಇನ್ನೊಂದಷ್ಟು ಗಟ್ಟಿ ಕಂಟೆಂಟಿನ ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಆ ಸಾಲಿನಲ್ಲಿ ಮಾವು ಬೇವು ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ.
ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಕಾರ್ಯನಿರ್ವಹಿಸಿರುವುದು ಸಂದೀಪ್ ಅವರ ಪಾಲಿಗೆ ಹಲವಾರು ನೆನಪಿಟ್ಟುಕೊಳ್ಳುವಂಥಾ, ಇದುವರಗಿನ ಯಾನ ಸಾರ್ಥಕಗೊಂಡಿತೆಂಬಂಥಾ ಅದೆಷ್ಟೋ ಅನುಭೂತಿಯನ್ನು ಸಂದೀಪ್ ಅವರಿಗೆ ಕೊಡಮಾಡಿದೆ. ಒಂದಷ್ಟು ಆಸೆಗಳೂ ಕೂಡಾ ಮಾವು ಬೇವು ಮೂಲಕ ಈಡೇರಿವೆ. ಡೈಲಾಗುಗಳೇ ಇಲ್ಲದೆ, ಕೇವಲ ಭಾವನೆಗಳ ಮೂಲಕವೇ ಎಲ್ಲವನ್ನೂ ಅಭಿವ್ಯಕ್ತಗೊಳಿಸುವಂಥಾ ಪಾತ್ರದಲ್ಲಿ ನಟಿಸಬೇಕೆಂಬುದು ಸಂದೀಪ್ ಅವರ ಬಹುಕಾಲದ ಕನಸಾಗಿತ್ತು. ಅದು ಈ ಸಿನಿಮಾದ ಹಾಡುಗಳ ಮೂಲಕ ಸಾಧ್ಯವಾಗಿದೆ. ಶಕ್ತಿ ಮೀರಿ ಈ ಹಾಡುಗಳಲ್ಲಿ ಅಭಿನಯಿಸಿದ ಆತ್ಮತೃಪ್ತಿಯೂ ಅವರಲ್ಲಿದೆ.
ಹೀಗೆ ಮಾವು ಬೇವು ಚಿತ್ರದ ಮೂಲಕ ಸದ್ಯ ಸುದ್ದಿಯಲ್ಲಿರುವ ನೀನಾಸಂ ಸಂದೀಪ್ ಹಂಪಿಯ ಹೊಸಪೇಟೆಯವರು. ಹೊಸಪೇಟೆಯ ರೈತಾಪಿ ಕುಟುಂಬದಲ್ಲಿ ಹುಟ್ಟಿ, ಅಲ್ಲಿಯೇ ಡಿಪ್ಲೊಮೋ ಇನ್ ಮೆಕ್ಯಾನಿಕಲ್ ಇಂಜಿನೀರಿಂಗ್ ಪದವಿ ಪಡೆದುಕೊಂಡಿದ್ದ ಅವರು, ಶಾಲಾ ಕಾಲೇಜು ದಿನಗಳಿಂದಲೇ ನಟನೆಯೆಡೆಗೊಂದು ವ್ಯಾಮೋಹ ಬೆಳೆಸಿಕೊಂಡಿದ್ದವರು. ಬದುಕು ಬೇರೆ ಬೇರೆ ತೀರಗಳತ್ತ ಹೊಯಾಡಿಸಿದರೂ ತಾನು ಸೇರಬೇಕಾದ ಗಮ್ಯ ಕಲಾ ಜಗತ್ತೆಂಬುದನ್ನು ತೀರಾ ಚಿಕ್ಕ ವಯಸ್ಸಿನಲ್ಲಿಯೇ ನಿರ್ಧರಿಸಿಕೊಂಡಿದ್ದವರು ಸಂದೀಪ್. ಕಾಲೇಜು ವ್ಯಾಸಂಗದ ಸಮಯದಲ್ಲಿಯೆ `ಕನ್ನಡ ಕಲಾ ಸಂಘ’ ಎಂಬ ನಾಟಕ ತಂಡದಲ್ಲಿ ಗುರುತಿಸಿಕೊಂಡಿದ್ದ ಸಂದೀಪ್ ಪಾಲಿಗೆ ತನ್ನಿಷ್ಟದ ಹಾದಿಯಲ್ಲಿ ಗಟ್ಟಿಯಾಗಿ ಹೆಜ್ಜೆಯೂರೋ ಅವಕಾಶ ಕೂಡಿ ಬಂದಿದ್ದು ಕೂಡಾ ಅಲ್ಲಿಂದಲೇ…
ಕನ್ನಡ ಕಲಾ ಸಂಘದ ಕಡೆಯಿಂದಲೇ ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಅವರು ನಾಟಕ ಶಿಬಿರವೊಂದನ್ನು ನಡೆಸಿಕೊಟ್ಟಿದ್ದರು. ಹೆಜ್ಜೆ ಹೆಜ್ಜೆಗೂ ಬೆರಗುಗಣ್ಣಾಗುತ್ತಾ, ಅದಕ್ಕೆ ತಕ್ಕುದಾದ ಪ್ರಶ್ನೆಗಳನ್ನು ಕೇಳುತ್ತಿದ್ದ ಚುರುಕು ಸ್ವಭಾವದ ಸಂದೀಪ್ರೊಳಗಿನ ಕಲಾವಿದನನ್ನು ಪ್ರಸನ್ನ ಸರಿಯಾಗಿಯೇ ಗುರುತಿಸಿದ್ದರು. ಆ ಕಾರಣದಿಂದಲೇ ಸಂದೀಪ್ಗೆ ನೀನಾಸಂ ಅನ್ನು ಪರಿಚಯಿಸಿ, ಅಲ್ಲಿಗೆ ತೆರಳಿ ತರಬೇತಿ ಪಡೆದು ಪಳಗಿಕೊಳ್ಳುವಂತೆ ಸಲಹೆ ನೀಡಿದ್ದರು. ಅದಾದೇಟಿಗೆ ಸೀದಾ ಹೆಗ್ಗೋಡಿಗೆ ತೆರಳಿ ನೀನಾಸಂನಲ್ಲಿ ಒಂದು ವರ್ಷದ ಕೋರ್ಸ್ ಪೂರೈಸಿಕೊಂಡಿದ್ದ ಸಂದೀಪ್ ನಟನಾಗಿ ನೆಲೆ ಕಂಡುಕೊಳ್ಳುವ ಅದಮ್ಯ ಉತ್ಸಾಹದೊಂದಿಗೆ ಗಾಂಧಿನಗರದತ್ತ ಹೆಜ್ಜೆಯಿಟ್ಟಿದ್ದರು.
ಹಾಗೆ ನೀನಾಸಂನಿಂದ ಹೊರ ಬಂದ ಸಂದೀಪ್ ಪಾಲಿಗೆ ತೆಲುಗು ಚಿತ್ರವೊಂದರ ಭಾಗವಾಗುವ ಅವಕಾಶವೂ ಕೂಡಿ ಬಂದಿತ್ತು. ತೇಜ ನಿರ್ದಶನದ ಚಿರವೊಂದ್ಕೆ ಆಡಿಷನ್ನಿನಲ್ಲಿ ಪಾಲ್ಗೊಂಡು ನಟನೆಯಲ್ಲಿ ಸೈ ಅನ್ನಿಸಿಕೊಂಡಿದ್ದರೂ ಬಾಷೆಯ ಸಮಸ್ಯೆಯಿಂದಾಗಿ ದೂರ ಸರಿಯುವಂತಾಗಿತ್ತು. ಆ ಬಳಿಕ ಕನ್ನಡ ಕಿರುತೆರೆಯತ್ತ ಸಾಗಿ, ಅಲ್ಲಿ ಒಂದಷ್ಟು ಅವಕಾಶ ಪಡೆದುಕೊಂಡಿದ್ದ ಸಂದೀಪ್, ನೀನಾಸಂ ಸಂದೀಪ್ ಆಗಿ ಖ್ಯಾತಿ ಪಡೆದುಕೊಂಡಿದ್ದರು. ಅದಾದ ನಂತರ ಒಂದು ತೆಲುಗು ಸೀರಿಯಲ್ಲಿನಲ್ಲಿ ನಟಿಸಿ, ತೆಲುಗರೇ ನಾಚುವಂತೆ ಅದಕ್ಕೆ ಸ್ವತಃ ತಾವೇ ಡಬ್ಬಿಂಗ್ ನಡೆಸೋ ಮೂಲಕ, ಆರಂಭಿಕ ಹಿನ್ನಡೆಯ ವಿರುದ್ಧ ಸೇಡು ತೀರಿಸಿಕೊಂಡಿದ್ದರಂತೆ. ಅದು ನೀನಾಸಂ ಸಂದೀಪ್ ಅವರ ಕಲಿಕಾ ಗುಣ, ಓರ್ವ ನಟನಾಗಿ ಅವುಡುಗಚ್ಚಿ ಸಾಧಿಸಿ ತೋರಿಸುವ ಸಂಕಲ್ಪಕ್ಕೊಂದು ಸೂಕ್ತ ಉದಾಹರಣೆ!
ಅಂದಹಾಗೆ, ನೀನಾಸಂ ಸಂದೀಪ್ ಮೊದಲ ಸಲ ನಟನಾಗಿ ಬಣ್ಣ ಹಚ್ಚಿದ್ದದ್ದು ಬಿದಿಗೆ ಚಂದ್ರಮ ಎಂಬ ಧಾರಾವಾಹಿಯ ಮೂಲಕ. ಅದು ಆ ಕಾಲದಲ್ಲಿ ಈ ಟೀವಿಯಲ್ಲಿ ಪ್ರಸಾರವಾಗಿದ್ದ ಅತ್ಯಂತ ಜನಪ್ರಿಯ ಧಾರಾವಾಹಿ. ಹಾಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ ನಂತರ ಅವರ ಚಿತ್ರ ಚಿತ್ರರಂಗದತ್ತ ಹೊರಳಿಕೊಂಡಿತ್ತು. ಬಾಯ್ ಫ್ರೆಂಡ್, ಅಂಬಾರಿ, ಸೈನೈಡ್, ಉಗ್ರಂ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಬಹುಮುಖ್ಯವಾದ ಪಾತ್ರಗಳನ್ನು ನಿರ್ವಹಿಸಿದ್ದರು. ಆ ಮೂಲಕ ಹಿರಿತೆರೆಯಲ್ಲಿಯೂ ಗೆದ್ದು ತೋರಿಸಿದ್ದರು.
ಇದೀಗ ಅವರು ಕಲಾ ಜಗತ್ತಿಗೆ ಪಾದಾರ್ಪಣೆ ಮಾಡಿ ಇಪ್ಪತ್ತೆರಡು ವಸಂತಗಳು ಕಳೆದಿವೆ. ಈಗಾಗಲೇ ಅವರು ನೂರಾ ಇಪ್ಪತ್ತಕ್ಕೂ ಹೆಚ್ಚು ಧಾರಾವಾಹಿ ಮತ್ತು ಇಪ್ಪತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಯಾನ ಮಾವು ಬೇವು ಎಂಬ ಸಮ್ಮೋಹಕ ಮೈಲಿಗಲ್ಲಿನ ಮೂಲಕ ಮತ್ತಷ್ಟು ಕಳೆಗಟ್ಟಿಕೊಳ್ಳುತ್ತದೆಂಬ ತುಂಬು ನಂಬಿಕೆ, ಇದಕ್ಕೆಲ್ಲ ಕಾರಣವಾಗಿರೋದು ರಂಗಕರ್ಮಿ ಪ್ರಸನ್ನ ಎಂಬ ಸಾರ್ವಕಾಲಿಕ ನೆನಕೆ ನೀನಾಸಂ ಸಂದೀಪ್ ಅವರದ್ದು. ಮಾವು ಬೇವು ಚಿತ್ರ ದೊಡ್ಡ ಮಟ್ಟದಲ್ಲಿ ಯಶ ಕಾಣಲಿ, ಸಂದೀಪ್ ಅವರ ಪಾತ್ರ ಪ್ರೇಕ್ಷಕರನ್ನೆಲ್ಲ ಆವರಿಸಿಕೊಳ್ಳಲಿ, ಅವರ ವೃತ್ತಿಬದುಕು ಮತ್ತೊಂದಷ್ಟು ಚೆಂದದ ಪಾತ್ರಗಳ ಮೂಲಕ ಕಳೆಗಟ್ಟಿಕೊಳ್ಳಲೆಂಬುದು ಹಾರೈಕೆ…