ಕೆಲ ಮಂದಿಗೆ ಅದ್ಯಾತರ ತೆವಲುಗಳು ಮೆತ್ತಿಕೊಂಡಿರುತ್ತವೋ ಗೊತ್ತಿಲ್ಲ; ಒಂದಾದ ಮೇಲೊಂದರಂತೆ ಸಂಬಂಧಗಳಿಗಾಗಿ ಕೈ ಚಾಚುತ್ತಾರೆ. ತಮ್ಮ ವಿಕೃತಿಗಳ ಮೂಲಕವೇ ಹತ್ತಿರದ ಬಂಧಗಳನ್ನು ಎಡಗಾಲಿನಲ್ಲಿ ಒದ್ದು ದೂರ ಸರಿಸುತ್ತಾರೆ. ತೆಲುಗು ಚಿತ್ರರಂಗದ ತುಂಬಾ ಚೂಲು ಆಸಾಮಿಯೆಂದೇ ಜನಜನಿತವಾಗಿರುವಾತ ನರೇಶ್ ಮೇಲ್ಕಂಡ ಕಾಯಿಲೆಯ ಬ್ರಾಂಡ್ ಅಂಬಾಸಡರ್ ಇದ್ದಂತೆ. ಕೈ ತುಂಬಾ ಕಾಸು, ಮೈತುಂಬಾ ಖಯಾಲಿಗಳನ್ನು ಅಂಟಿಸಿಕೊಂಡಿರುವ ಈ ಆಸಾಮಿಗೆ ಕನ್ನಡದ ನಟಿ ಪವಿತ್ರಾ ಅದೇಕೆ ಆಕರ್ಷಿತರಾದರೋ ಭಗವಂತನೇ ಬಲ್ಲ. ಈ ಸಂಬಂಧದ ವಿಚಾರವಾಗಿ ಹಾದಿರಂಪ ಬೀದಿರಂಪವಾಗಿ, ಕಡೆಗೂ ಇದೀಗ ನರೇಶ್ ಮತ್ತು ಪವಿತ್ರಾ ಕಲ್ಯಾಣ ಸುಸೂತ್ರವಾಗಿ ನೆರವೇರಿದೆ!
ಇಂದು ನರೇಶ್ ತನ್ನ ಟ್ವಿಟ್ಟರ್ ಅಕೌಂಟಿನ ಮೂಲಕ ಮದುವೆಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಮದುವೆ ವೀಡಿಯೋವನ್ನು ಹಂಚಿಕೊಂಡಿರುವ ನರೇಶ್ ಆಶೀರ್ವದಿಸುವಂತೆ ಕೇಳಿಕೊಂಡಿದ್ದಾನೆ. ಈ ಮೂಲಕ ಸಾಕಷ್ಟು ಸಮಯಗಳಿಂದ ರಂಪ ರಾಮಾಯಣಗಳಿಗೆ ಕಾರಣವಾಗಿದ್ದ, ಎರಡು ಕುಟುಂಬಗಳ ನಂಬಿಕೆಗೆ ಎರವಾಗಿದ್ದ ಈ ಪ್ರಕರಣ ನಿರ್ಣಾಯಕ ಘಟ್ಟ ತಲುಪಿಕೊಂಡಂತಾಗಿದೆ. ಕುಹಕಗಳು, ಮೂದಲಿಕೆಗಳು ಏನೇ ಇದ್ದರೂ, ಆರಂಭದಲ್ಲಿಯೇ ಈ ಜೋಡಿ ಇಂಥಾದ್ದೊಂದು ನಿರ್ಧಾರಕ್ಕೆ ಬಂದಿದ್ದರೆ ಈ ಪರಿಯಾಗಿ ಮಾನ ಮರ್ಯಾದೆ ಹರಾಜಾಗುತ್ತಿರಲಿಲ್ಲ ಎಂಬಂಥಾ ಅಭಿಪ್ರಾಯಗಳೂ ವ್ಯಾಪಕವಾಗಿ ಕೇಳಿ ಬರುತ್ತಿವೆ.
ನರೇಶ್ ಮತ್ತು ಪವಿತ್ರಾ ನಡುವಿನ ಅಫೇರಿನ ವಿಚಾರ ಕಳೆದ ವರ್ಷ ಜಾಹೀರಾಗಿತ್ತು. ಒಟ್ಟೊಟ್ಟಿಗೆ ಹಲವಾರು ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಮಾಧ್ಯಮಗಳ ಸುದ್ದಿಗಳಿಗೂ ಆಹಾರವಾಗಿತ್ತು. ಕಡೆಗೆ ಮೈಸೂರಿನ ಲಾಡ್ಜೊಂದರಲ್ಲಿ ಈ ಜೋಡಿ ಬೀಡು ಬಿಟ್ಟಿರುವಾಗಲೇ, ನರೇಶನ ಹೆಂಡತಿ ಆಗಮಿಸಿದಾಗ ಈ ಪ್ರಕರಣ ಹಾದಿ ರಂಪದ ಸ್ಥಿತಿ ತಲುಪಿಕೊಂಡಿತ್ತು. ಇದೆಲ್ಲದರಾಚೆಗೂ ಒಟ್ಟಾಗಿದ್ದ ಈ ಜೋಡಿ, ಈ ವರ್ಷದ ಆರಂಭದಲ್ಲಿ ಲಿಪ್ಲಾಕ್ ಫೋಟೋ ಹಂಚಿಕೊಳ್ಳುವ ಮೂಲಕ ಪರ್ಮನೆಂಟಾಗಿ ಒಂದಾಗುವ ಸೂಚನೆ ನೀಡಿತ್ತು. ಕಡೆಗೂ ನರೇಶ್ ಮತ್ತು ಪವಿತ್ರಾ ಸಂಬಂಧ ಮದುವೆಯ ಮೂಲಕ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ!