ಸದಾ ಕಾಲವೂ ಹಿಮದ ಚಾದರ ಹೊದ್ದ ಹಿಮಾಲಯ ಯಾವತ್ತಿದ್ದರೂ ಸಾಹಸಿಗಳ ಪಾಲಿಗೆ ಫೇವರಿಟ್ ಸ್ಥಳ. ಕೇವಲ ಸಾಹಸಿಗರಿಗೆ, ಚಾರಣಿಗರಿಗೆ ಮಾತ್ರವಲ್ಲದೆ ದೈವೀಕ ನಂಬಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೂ ಕೂಡಾ ಆಕರ್ಷಣೆಯ ಕೇಂದ್ರ. ಅಲ್ಲಿ ನಡೆಯೋ ಅಧ್ಯಾತ್ಮಿಕ ಸಾಧನೆಗಳು ಜಗತ್ತಿನ ಬೇರೆಲ್ಲಿಯೂ ಕಾಣಲು ಸಾಧ್ಯವೇ ಇಲ್ಲ. ಈ ವಿಚಾರವೇ ಅದೊಂದು ಪವಿತ್ರವಾದ ಸ್ಥಳ ಎಂಬುದನ್ನ ಬಿಂಬಿಸುತ್ತೆ. ಆದರೆ ಸಾಹಸಪ್ರಿಯದ ಉನ್ಮಾದವೇ ಅದಕ್ಕೊಂದು ಹಾರರ್ ಇಮೇಜನ್ನೂ ಕೂಡಾ ಕಟ್ಟಿ ಕೊಟ್ಟಿದೆ. ಈ ಪರ್ವತದ ಚಾರಣದ ಹಾದಿಗೆ ಶವಗಳೇ ಮೈಲಿಗಲ್ಲುಗಳಂತಿವೆ ಅಂದಮೇಲೆ ಹಿಮಾಲಯದ ಮತ್ತೊಂದು ಭೀಕರ ಮುಖದ ಪರಿಚಯ ಖಂಡಿತವಾಗಿಯೂ ಆಗುತ್ತೆ.
ಮೌಂಟ್ ಎವರೆಸ್ಟ್ ಅನ್ನು ಜೀವಿತದಲ್ಲಿ ಒಂದು ಬಾರಿಯಾದರೂ ಅದೆಷ್ಟೋ ಜನರ ಮಹಾ ಕನಸು. ಸಾಹಸ ಪ್ರವೃತ್ತಿಯ ಚಾರಣಪ್ರಿಯರನ್ನಂತೂ ಈ ಪರ್ವತ ಪದೇ ಪದೆ ಕೈಬೀಸಿ ಕರೆಯುತ್ತಿರುತ್ತೆ. ಹಾಗಂತ ಹಿಮಾಲಯವನ್ನು ಏರೋದಂದ್ರೆ ಅದೇನು ಮಕ್ಕಳಾಟದ ಮಾತಲ್ಲ. ಅಲ್ಲಿ ಸೊಗಸಾಗಿ ಪರ್ವತದ ಮೈತುಂಬಾ ತಣ್ಣಗೆ ಹರಡಿಕೊಂಡಿರೋ ಹಿಮದ ನಡುವೆ ಸಾವೆಂಬುದು ಕಣ್ಣೆವೆ ಮುಚ್ಚದೆ ಹೊಂಚಿ ಕೂತಿರುತ್ತೆ. ಕೊಂಚ ಮೈ ಮರೆತರೂ ಹಣ್ಣಗಿನ ಸಾವು ಬಂದು ಬಿಡಿಸಿಕೊಳ್ಳಲಾರದಂತೆ ತಬ್ಬಿಕೊಂಡು ಬಿಡುತ್ತೆ.
ಅಲ್ಲಿನ ಸಾವಿನ ಕೇಕೆ ಅದೆಷ್ಟು ಭೀಕರವಾಗಿದೆ ಅಂದ್ರೆ, ಈ ಕ್ಷಣಕ್ಕೂ ಹಿಮಾಲಯದ ಹಾದಿಯಲ್ಲಿ ಇನ್ನೂರಕ್ಕೂ ಹೆಚ್ಚು ಶವಗಳು ಅನಾಥವಾಗಿ ಬಿದ್ದಿರುತ್ತವಂತೆ. ಪ್ರಾಕೃತಿಕ ಶೀತಲೀಕರಣವಾಗೋದರಿಂದ ಅಲ್ಲಿ ಶವಗಳು ಕೊಳೆಯೋದಾಗಲಿ, ವಿಕಾರವಾಗೋದಾಗಲಿ ಇಲ್ಲ. ಆದ್ದರಿಂದಲೇ ಚಾರಣಪ್ರಿಯರು ತಾವು ನಡೆಯೋ ಹಾದಿಯನ್ನು ಕಂಡು ಹಿಡಿಯಲು ಇಂಥಾ ಶವಗಳನ್ನೇ ದಿಕ್ಸೂಚಿಯಂತೆ ಬಳಸಿಕೊಂಡು ಮುಂದೆ ಸಾಗ್ತಾರಂತೆ. ಅಂದಹಾಗೆ ಹಾಗೆ ಹಿಮದ ಮೇಲೆ ಉರುಳಿರೋ ಹೆಣಗಳಲ್ಲಿ ಚಾರಣಿಗರ ಪಾಲು ಮಾತ್ರವೇ ಇದೆ ಅಂದುಕೊಳ್ಳಬೇಕಿಲ್ಲ. ಅದರಲ್ಲಿ ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿರುವವರ ಪಾಲೂ ಸಾಕಷ್ಟಿದೆ.