ರೀಮೇಕೆಂಬ ಸತ್ಯ ಮುಚ್ಚಿಡಲು ಕಾರಣವೇನು?
ಮಾನ್ಸೂನ್ ರಾಗ… ಹೀಗೊಂದು ಸಿನಿಮಾ ಅಣಿಗೊಳ್ಳುತ್ತಿರುವ ವಿಚಾರ ಕೇಳಿಯೇ ಪ್ರೇಕ್ಷಕರೆಲ್ಲ ಥ್ರಿಲ್ ಆಗಿ ಹೋಗಿದ್ದರು. ನಂತರ ಹೆಸರಿಗೆ ತಕ್ಕುದಾದ ಆರ್ಧ್ರ ಛಾಯೆ ಹೊಂದಿದ್ದ ಪೋಸ್ಟರುಗಳು ಕಂಡ ಮೇಲಂತೂ ಪ್ರೇಕಲ್ಷಕರು ನಿರೀಕ್ಷೆಯ ಅಗ್ಗಿಷ್ಠಿಕೆಯ ಮುಂದೆ ನಿಂತು ಬೆಚ್ಚಗಾಗಲಾರಂಭಿಸಿದ್ದರು; ಈ ಸಿನಿಮಾ ಬಗ್ಗೆ ಇನ್ನೂ ಹೆಚ್ಚೆಚ್ಚು ಮಾಹಿತಿ ಪಡೆಯಲು ಕಾತರರಾಗಿದ್ದರು. ಅದರಲ್ಲಿಯೂ ವಿಶೇಷವಾಗಿ, ವಿಲನ್ ಆಗಿ ಅಬ್ಬರಿಸಿ ಸದ್ದು ಮಾಡಿದ್ದ ಡಾಲಿ ಧನಂಜಯ್ ಹೀರೋ ಆಗಿ, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಸುಳಿವು ಸಿಕ್ಕಿದ್ದೇ ಮಾನ್ಸೂನಿನ ಹನಿಗಳು ಪ್ರತೀ ಮನಸುಗಳಲ್ಲಿಯೂ ತೊಟ್ಟಿಕ್ಕಲು ಶುರುವಿಟ್ಟುಕೊಂಡಿತ್ತು. ಒಟ್ಟಾರೆಯಾಗಿ ಇದೊಂದು ಭಿನ್ನ ಕಥಾನಕ, ಮಾನ್ಸೂನಿನಲ್ಲಿ ತೋಯ್ದ ಗಹನವಾದ ಕಥೆ ಇದರೊಳಗಿದೆ ಎಂಬೆಲ್ಲ ನಂಬಿಕೆಗಳು ತಂತಾನೇ ಮೂಡಿಕೊಂಡಿದ್ದವು. ಆದರೆ ಮಾನ್ಸೂನಿನ ಮೊದಲ ಮಳೆಯ ಮಣ್ಣ ಘಮಲಿನಂಥಾದ್ದೇ ತಾಜಾ ಅನುಭೂತಿಯ ನಿರೀಕ್ಷೆಯೊಂದಿಗೆ ಸಿನಿಮಾ ಮಂದಿರ ಹೊಕ್ಕ ಮಂದಿಗೆ ಎದುರಾಗಿರೋದು, ಮುಗ್ಗಲು ಹಿಡಿದ ಕಮಟು ಮತ್ತು ಲಯ ತಪ್ಪಿದ ರಾಗ!
ನಿಮಗೆಲ್ಲ ಗೊತ್ತಿಲ್ಲದಿರುವುದೇನಲ್ಲ; ಮಳೆ ಅಂದರೇನೇ ವಿಭಿನ್ನ ಅನುಭೂತಿ. ಆದರೆ ಒಂದೇ ಸಮನೆ ಬಿಟ್ಟೂಬಿಡದಂತೆ ಮಳೆ ಜಿಬುರುತ್ತಲೇ ಇದ್ದರೆ ಅದೂ ಕೂಡಾ ಒಂದು ಹಂತದಲ್ಲಿ ರೇಜಿಗೆ ಮೂಡಿಸುತ್ತೆ. ಮನಸು ಮಂಕಾಗಿ ಮುಗ್ಗಲು ಹಿಡಿದಂತಾಗುತ್ತೆ. ಎಸ್.ರವೀಂದ್ರನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರುವ, ಇಂದು ಬಿಡುಗಡೆಗೊಂಡಿರುವ ಮಾನ್ಸೂನ್ ರಾಗದ್ದೂ ಕೂಡಾ ಅದೇ ಕಥೆ. ಇದರೊಳಗೆರ ಮಳೆಯ ಹಿಮ್ಮೇಳದಲ್ಲಿ ನಾಲಕ್ಕು ಮಧುರವಾದ ಪ್ರೇಮ ಕಥಾನಕಗಳಿವೆ. ಅವು ಒಂದಕ್ಕೊಂದು ಭಿನ್ನವಾಗಿಯೂ, ಪೂರಕವಾಗಿರುವ ಸ್ಥಿತಿಯಲ್ಲಿ ಹಿಡಿಸುವಂತಿವೆ. ಮಾನ್ಸೂನಿನ ಮಾಯೆಯೊಂದಿಗೇ ತೆರೆದುಕೊಳ್ಳುವ ಇಡೀ ಸಿನಿಮಾವನ್ನು ಮಳೆಯ ಇರುವಿಕೆಯಲ್ಲಿಯೇ ಸೆರೆ ಹಿಡಿಯ.ಲಾಗಿದೆ. ಇಂಥಾ ಜಿಟಿ ಜಿಟಿ ಮಳೆಯ ಹಿಮ್ಮೇಳದಲ್ಲಿ ಮಂಧ್ರವಾಗಿ ಕದಲುವ ಕಥೆ ಪ್ರೇಮದ ನಾನಾ ಮಜಲುಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.
ನಟನೆಯ ವಿಚಾರಕ್ಕೆ ಬಂದರೆ ಡಾಲಿಯದ್ದು ಎಂದಿನಂತೆಯೇ ಅದ್ಭುತ ಅನ್ನಿಸುವಂಥಾ ಪ್ರದರ್ಶನ. ಹಾಗೆ ನೋಡಿದರೆ, ಈವರೆಗೆ ನಿರ್ವಹಿಸಿದ್ದ ಅಷ್ಟೂ ಪಾತ್ರಗಳಿಗಿಂತಲೂ ಭಿನ್ನವಾದ ಛಾಯೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಇನ್ನು ವೇಶ್ಯೆಯ ಪಾತ್ರವನ್ನು ತನ್ಮಯತೆಯಿಂದ ನಿಭಾಯಿಸಿರುವ ರಚಿತಾ ರಾಮ್ಳನ್ನು ಕೂಡಾ ಮೆಚ್ಚಿಕೊಳ್ಳದಿರಲಾಗೋದಿಲ್ಲ. ಇದರೊಂದಿಗೆ ಅಚ್ಚಯುತ್ ಕುಮಾರ್, ಸುಹಾಸಿನಿ ಅವರ ಪಾತ್ರಗಳೂ ಕೂಡಾ ಪೂರಕವಾಗಿ ಮೂಡಿ ಬಂದಿವೆ. ಆದರೆ, ಕಥೆ ತೆರೆದುಕೊಳ್ಳುತ್ತಾ ಹೋದಂತೆಲ್ಲ ಇದು ತೆಲುಗಿನ ಕೇರಾಫ್ ಕಂಚಾಲಪಾಲೆಂ ಚಿತ್ರದ ನಕಲೆಂಬುದು ಕೂಡಾ ನಿಖರವಾಗಿಯೇ ಜಾಹೀರಾಗುತ್ತಾ ಹೋಗುತ್ತದೆ. ಗಮನೀಯ ಅಂಶವೆಂದರೆ, ಆರಂಭದಿಂದ ಇಲ್ಲಿಯವರೆಗೂ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಇದೊಂದು ರೀಮೇಕ್ ಚಿತ್ರ ಅಂತ ಅಪ್ಪಿತಪ್ಪಿಯೂ ಹೇಳಿರಲಿಲ್ಲ. ಅದೇಕೇ ಹಾಗೆ ಮಾಡಿದರೆಂಬುದನ್ನು ಚಿತ್ರತಂಡವೇ ವಿವರಿಸಬೇಕಿದೆ.
ಒಂದುವೇಳೆ ರೀಮೇಕ್ ಸೂತ್ರಗಳಿಗನುಗುಣವಾಗಿ, ಅದಕ್ಕೆ ತಕ್ಕುದಾಗಿ ಭಟ್ಟಿ ಇಳಿಸಿದ್ದರೂ ಮಾನ್ಸೂನ್ ರಾಗಕ್ಕೊಂದು ಬೇರೆಯದ್ದೇ ಮುದ ಇರುತ್ತಿತ್ತೇನೋ. ಆದರೆ ನಿರ್ದೇಶಕರು ಅದನ್ನು ಬೇರೊಂದು ಸ್ವರೂಪದಲ್ಲಿ ಕಟ್ಟಿ ಕೊಡಲು ಹೆಣಗುತ್ತಾ, ಒರಿಜಿನಲ್ ಪರಿಣಾಮಗಳನ್ನು ಮುಸುಕಾಗಿಸಿದ್ದಾರೆ; ಈ ಮೂಲಕ ಆ ಸರ್ಕಸ್ಸಿನಲ್ಲಿ ಸೋತಿದ್ದಾರೆ. ಅಂಥಾ ಹಳವಂಡದಲ್ಲಿಯೇ ಕಟ್ಟಿರುವ ದೃಷ್ಯಗಳೆಲ್ಲವೂ ಒಂದಷ್ಟು ಶ್ರೀಮಂತಿಕೆಯಾಚೆಗೂ ಬಡಕಲಾದಂತೆ ಗೋಚರಿಸುತ್ತವೆ. ಪ್ರೇಮ ಮತ್ತು ಮಳೆ ಎಂಬುದಿದೆಯಲ್ಲಾ? ಅದೊಂದು ಸಾರ್ವಕಾಲಿಕವಾದ ಅದ್ಭುತ ಕಾಂಬಿನೇಷನ್ನು. ಅದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ನಿಸ್ಸಂದೇಹವಾಗಿ ಸೋತಿದ್ದಾರೆ. ಆದ್ದರಿಂದಲೇ ಪರಿಣಾಮಕಾರಿಯಾಗಬಹುದಾದ ದೃಷ್ಯಗಳೂ ಅದರಿಂದ ವಂಚಿತವಾಗಿವೆ. ಇದೆಲ್ಲದರಿಂದಾಗಿ, ಬೇಕಿಲ್ಲದಾಗ ಹನಿಯೋ ಒಲ್ಲದ ಮಳೆಯಲ್ಲಿ ನೆಂದಾಗ ನೆತ್ತಿಗೇರಿಕೊಳ್ಳೋ ಅತೃಪ್ತ ಭಾವವೊಂದು ಮಾತ್ರವೇ ಸಿನಿಮಾ ನೋಡಿದವರಲ್ಲಿ ಉಳಿದು ಹೋಗುತ್ತದೆ.
ಇದು ರೀಮೇಕ್ ಎಂಬ ವಿಚಾರ ಫಸ್ಟ್ ಶೋ ಪ್ರದರ್ಶನಗೊಂಡಾಗಲೇ ಎಲ್ಲರಿಗೂ ಗೊತ್ತಾಗಿದೆ. ಒಂದು ವೇಳೆ ಮೊದಲೇ ಈ ಬಗ್ಗೆ ಪ್ರಸ್ತಾಪಿಸಿದ್ದರೂ ಅಂಥಾ ಪರಿಣಾಮವೇನೂ ಬೀರುತ್ತಿರಲಿಲ್ಲವೇನೋ. ಆದರೂ ನಿರ್ದೇಶಕರು ಯಾಕೆ ಅದನ್ನು ಬಚ್ಚಿಟ್ಟರೆಂಬ ವಿಚಾರ ಇನ್ನೂ ನಿಗೂಢ. ಯಾವಾಗ ಇದು ರೀಮೇಕ್ ಅಂತ ಪ್ರೇಕ್ಷಕರಿಗೆ ಗೊತ್ತಾಯ್ತೋ, ಆಗಲೇ ಕೆಲ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಗುಲ್ಲೆದ್ದಿದೆ. ನಿರ್ದೇಶಕರು ಮೂಲ ಕಥೆಯನ್ನು ನೇಟಿವಿಟಿಗೆ ಹೊಂದಿಸುವ ಹೆಸರಲ್ಲಿ, ಅದನ್ನು ಸ್ವಂತದ್ದೆಂದು ಬಿಂಬಿಸಿಕೊಳ್ಳಲು ನೋಡಿದರಾ? ಹೇಗೋ ಮಾಡಿ ಇದು ಸರ್ವಂತದ್ ಪ್ರಶ್ ಕಥೆ ಅಂತ ಮೈಲೇಜು ಗಿಟ್ಟಿಸಿಕೊಳ್ಳುವ ಅಂದಾಜು ಹಾಕಿದ್ದಾರಾ ಗೊತ್ತಿಲ್ಲ. ಆದರೆ ಈ ನಕಲು ಸರಕೂ ಕೂಡಾ ಎಲ್ಲ ಇದ್ದೂ ಏನೂ ಇಲ್ಲದಂತಿರೋದೇ ದುರಂತದ ವಿಚಾರ!