ಕೆಲವೊಮ್ಮೆ ಮನುಷ್ಯರೊಳಗಿನ ಕ್ರಿಯೇಟಿವಿಟಿ ಅಸಾಧ್ಯ ಹುಚ್ಚುತನವಾಗಿ ಅನಾವರಣಗೊಳ್ಳುತ್ತೆ. ಅದರಲ್ಲೊಂದಷ್ಟು ತೀರಾ ವಿಕೃತಿ ಅನ್ನಿಸಿ ವಾಕರಿಕೆ ಹುಟ್ಟುವಂತೆಯೂ ಇರುತ್ವೆ. ಈಗ ವಿವರಿಸ ಹೊರಟಿರೋ ಸ್ಟೋರಿ ಕೂಡಾ ಹೆಚ್ಚೂಕಮ್ಮಿ ಅದೇ ಸಾಲಿಗೆ ಸೇರುವಂಥಾದ್ದು. ಯಾಕಂದ್ರೆ, ತೈವಾನ್ನಲ್ಲಿರೋ ಆ ರೆಸ್ಟೋರಾಂಟ್ನ ಸ್ವರೂಪ, ರೂಪುರೇಷೆ, ಒಳಾಂಗಣ ಮತ್ತು ಆಹಾರವನ್ನು ಸರ್ವ್ ಮಾಡೋ ರೀತಿಯ ಕಥೆ ಕೇಳಿದ್ರೆ ತಿಂದಿದ್ದೆಲ್ಲವನ್ನೂ ಕಾರಿಕೊಳ್ಳುವಷ್ಟು ಹೇಸಿಗೆ ಹುಟ್ಟಿ ಬಿಡುತ್ತೆ.
ಆಹಾರ ಅಂದ್ರೇನೇ ದೈವಸ್ವರೂಪಿ ಎಂಬ ನಂಬಿಕೆ ನಮ್ಮಲ್ಲಿದೆ. ತಿನ್ನೋ ಅನ್ನವನ್ನು ಕಣ್ಣಿಗೊತ್ತಿಕೊಂಡು ಒಳಗಿಳಿಸುವ ಪರಿಪಾಠವೂ ನಮಗೆ ಪರಿಚಿತ. ಅಂತಾದ್ರಲ್ಲಿ ಅದನ್ನು ತಿಂದದ್ದನ್ನೆಲ್ಲ ವಿಸರ್ಜಿಸುವ ಪಾಯಿಖಾನೆಯೊಂದಿಗೆ ಸಮೀಕರಿಸಿದರೆ ಸಿಟ್ಟು ಮತ್ತು ವಾಕರಿಕೆ ಒಟ್ಟೊಟ್ಟಿಗೇ ಹುಟ್ಟುತ್ತೆ. ಆದ್ರೆ ತೈವಾನ್ನಲ್ಲಿರೋ ಆ ಪ್ರಸಿದ್ಧ ರೆಸ್ಟೋರಾಂಟ್ ಹುಟ್ಟಿಕೊಂಡಿರೋದೇ ಅಂಥಾ ಥೀಮ್ನ ತಳಹದಿಯಲ್ಲಿ. ಅದು ತೈವಾನ್ನ ಫೇಮಸ್ ರೆಸ್ಟೋರಾಂಟ್. ಅದರ ಹೆಸರೇ ಮಾಡರ್ನ್ ಟಾಯ್ಲೆಟ್. ನಮ್ಮಲ್ಲಿ ಪಬ್ಲಿಕ್ ಟಾಯ್ಲೆಟ್ಟುಗಳಿವೆಯಲ್ಲಾ? ಹಾಗೆಯೇ ಕಾಣಿಸೋ ಲೋಗೋ ಅದರ ಸೃಷ್ಟಿಕರ್ತನ ಪಾಲಿಗೆ ಭಲೇ ಲಕ್ಕಿ. ಅಂದಹಾಗೆ ಈ ರೆಸ್ಟೋರಾಂಟ್ ಬ್ರ್ಯಾಂಚಿನ ಮೇಲೆ ಬ್ರ್ಯಾಂಚು ತೆರೆದು ವ್ಯವಹಾರ ನಡೆಸುತ್ತಿರೋದಕ್ಕೆ ಮೂಲ ಕಾರಣ ಅದರೊಳಗಿರೋ ವಿಚಿತ್ರ ಲೋಕ.
ಆ ರೆಸ್ಟೋರಾಂಟ್ನ ಕುರ್ಚಿಗಳನ್ನು ಏಷ್ಯನ್, ಯೂರೋಪ್ ಶೈಲಿಯ ಟಾಯ್ಲೆಟ್ ಕಮೋರ್ಡ್ಗಳಂತೆ ವಿನ್ಯಾಸ ಮಾಡಲಾಗಿದೆ. ಅಲ್ಲಿ ಹೋಗಿ ನೀವೇನಾದ್ರೂ ಚಿಕನ್ ಐಟಮ್ ಆರ್ಡರ್ ಮಾಡಿದ್ರೆ ಟಾಯ್ಲೆಟ್ ಶೇಪಿನ ಬೌಲ್ನಲ್ಲಿಯೇ ಅದನ್ನ ಸರ್ವ್ ಮಾಡ್ತಾರೆ. ಬೇರೆ ಆಹಾರದೊಂದಿಗೆ ನೆಂಟಿಕೊಳ್ಳಲು ಜೇನು ತುಪ್ಪವನ್ನ ಮೂತ್ರ ಶೇಖರಿಸೋ ಕ್ಯಾನಿನಲ್ಲಿ ತಂದು ಕೊಡ್ಯಾರೆ. ನಸೀಬುಗೆಟ್ಟು ಐಸ್ ಕ್ರೀಮು ಆರ್ಡರ್ ಮಾಡಿದ್ರೆ ಅದು ಕೂಡಾ ಟಾಯ್ಲೆಟ್ ಶೇಪಿನ ಬೌಲ್ನಲ್ಲಿ, ಮಲದ ಡಿಸೈನಿನಲ್ಲಿ ನಿಮ್ಮೆದುರಿಗಿರುತ್ತೆ.
ಈ ವಿವರಗಳನ್ನ ಕೇಳಿದರೇನೇ ಒಂದೊತ್ತಿನ ಊಟ ಬಿಟ್ಟು ಬಿಡುವಷ್ಟು ಅಸಹ್ಯ ಯಾರಿಗಾದರೂ ಆಗೇ ಆಗುತ್ತೆ. ಆದ್ರೆ ಯಾವ ಮುಜುಗರವೂ ಇಲ್ಲದೇ ಆ ಭಾಗದ ಜನ ವೀಕೆಂಡುಗಳಲ್ಲಿ ಸದರಿ ರೆಸ್ಟೋರಾಂಟ್ಗೆ ಮುಗಿ ಬೀಳ್ತಾರೆ. ಇಷ್ಟದ ತಿನಿಸುಗಳನ್ನು ಟಾಯ್ಲೆಟ್ ಬೌಲುಗಳಲ್ಲಿ ಚಪ್ಪರಿಸಿ ತಿನ್ತಾರೆ. ಈ ವಿಚಿತ್ರ ಗುಣ ಲಕ್ಷಣಗಳಿಂದಲೇ ಈ ರೆಸ್ಟೋರಾಂಟ್ ಜಗತ್ಪ್ರಸಿದ್ಧಿ ಪಡೆದುಕೊಂಡಿದೆ. ಇದೆಲ್ಲ ಏನೇ ಇದ್ರೂ ಭಾರತದಲ್ಲಿ ಯಾರೊಬ್ಬರೂ ಈ ರೆಸ್ಟೋರಾಂಟ್ಗೆ ಹೋಗೋ ಧೈರ್ಯ ಮಾಡೋದು ಡೌಟು.