ಆವಿಷ್ಕಾರಗಳು ಹೆಚ್ಚಾದಂತೆಲ್ಲ ನಿಷ್ಟ ಪ್ರವೃತ್ತಿಗಳೂ ಮೇರೆ ಮೀರುತ್ತಿವೆ. ಇದರಿಂದಾಗಿ ಜನ ಸಾಮಾನ್ಯರ ಖಾಸಗೀ ಬದುಕೂ ಕೂಡಾ ಸೇಫ್ ಅಲ್ಲ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿ ಬಿಟ್ಟಿದೆ. ಅದರಲ್ಲಿಯೂ ವಿಶೇಷವಾಗಿ ಸ್ಮಾರ್ಟ್ ಆದ ಸ್ಪೈ ಕ್ಯಾಮೆರಾಗಳನ್ನು ಬಳಸಿ, ಮಹಿಳೆಯರ ಖಾಸಗೀ ದೃಷ್ಯಗಳನ್ನು ಸೆರೆ ಹಿಡಿದು ಬ್ಲಾಕ್ಮೇಲ್ ಮಾಡುವ ದುಷ್ಟ ಮನಃಸ್ಥಿತಿ ದೇಶಾದ್ಯಂತ ಮೇರೆ ಮೀರುತ್ತಿದೆ. ಅದೆಷ್ಟೇ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡರೂ ಇಂಥಾ ವಿಕೃತಿ ವಿಜೃಂಭಿಸುತ್ತಲೇ ಇದೆ. ಅದರ ಭಾಗವಾಗುವಂಥಾ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸ್ನೇಹಿತೆಯನ್ನೇ ಇಂಥಾದ್ದೊಂದು ವಿಕೃತಿಯ ಮೂಲಕ ವ್ಯಕ್ತಿಯೋರ್ವ ಕಾಡಿದ್ದಾನೆ. ಮೂವತ್ತು ವರ್ಷದ ಆ ಆಸಾಮಿಗೆ ಉದ್ಯೋಗದ ಸ್ಥಳದಲ್ಲಿಯೇ ಮಹಿಳೆಯೊಬ್ಬರು ಸ್ನೇಹಿತೆಯಾಗಿದ್ದರು. ಬೆಳ್ಳೂರಿನಲ್ಲಿ ವಾಸಜವಿದ್ದ ಆ ಮಹಿಳೆ ಕೂಡಾ ಅವನನ್ನು ಗೆಳೆಯ ಎಂದೇ ಹಚ್ಚಿಕೊಂಡಿದ್ದರು ಹಾಗೆ ಕೊಟ್ಟ ಸಲುಗೆಯನ್ನೇ ದುರುಪಯೋಗಪಡಿಸಿಕೊಂಡಿದ್ದ ಆ ಕ್ರಿಮಿ, ಮೊಬೈಲ್ ಚಾರ್ಜರಿನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ, ಆ ಮೂಲಕ ಆ ಮಹಿಳೆಯ ಖಾಸಗೀ ವೀಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ನಂತರ ಅದನ್ನಿಟ್ಟುಕೊಂಡು ಪರಿ ಪರಿಯಾಗಿ ಕಾಡಿದ್ದಾನೆ.
ಇಂಥಾದ್ದೊಂದು ವೀಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಲಾರಂಭಿಸಿದ ಆತ, ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸಿದ್ದಾನೆ. ಒಂದಷ್ಟು ಕಾಲ ಅಂಥಾ ಕಾಟವನ್ನೆಲ್ಲ ಸಹಿಸಿಕೊಂಡಿದ್ದ ಆ ಮಹಿಳೆ ಕಡೆಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಬಟ್ಟೆ ಬದಲಿಸುತ್ತಿದ್ದ ವೀಡಿಯೋವನ್ನಿಟ್ಟುಕೊಂಡು ಕಾಟ ಕೊಡುತ್ತಿದ್ದ ಆ ವ್ಯಕ್ತಿಯನ್ನು ಪೊಲೀಸರು ಹೆಡೆಮುರಿ ಹೊತ್ತು ತಂದು ಜೈಲಿಗೆ ತಳ್ಳಿದ್ದಾರೆ. ಈ ಬಗ್ಗೆ ಪ್ರತೀ ಮಹಿಳೆಯರು, ಹೆಣ್ಣುಮಕ್ಕಳೂ ಕೂಡಾ ಎಚ್ಚರ ವಹಿಸಬೇಕಿದೆ. ವಿಕೃತಿ ಎಂಬುದು ಯಾವ ರೂಪದಲ್ಲಿಯಾದರೂ ನೆಮ್ಮದಿಗೆ ಕಂಟಕವಾಗಬಹುದು.