ಒಂದರೆಕ್ಷಣ ಮೊಬೈಲು ಕಾಣಿಸದಿದ್ದರೆ ದೇಹದ ಅಮೂಲ್ಯ ಅಂಗವೇ ಆದೃಷವಾದಂತೆ ಕಂಗಾಲಾಗಿ ಬಿಡುತ್ತೇವೆ. ಜೊತೆಯಲ್ಲಿ ಯಾರೆಂದರೆ ಯಾರೂ ಇಲ್ಲದ ಒಂಟಿ ಪಿಶಾಚಿಯಂಥ ಕ್ಷಣಗಳನ್ನೂ ನಾವು ಎಂಜಾಯ್ ಮಾಡಬಹುದೇನೋ. ಆದರೆ ಮೊಬೈಲೆಂಬ ಮಾಯಾವಿಯಿಲ್ಲದ ಕ್ಷಣಗಳನ್ನು ಬಹುತೇಕರು ಕಲ್ಪಿಸಿಕೊಳ್ಳಲೂ ಹಿಂಜರಿಯುತ್ತಾರೆ. ಮೊಬೈಲಿನ ಅನಾಹುತಗಳ ಬಗ್ಗೆ ಮಣಗಟ್ಟಲೆ ಮಾತಾಡುವವರು, ಮೊಬೈಲಿನ ಸಂಗಕ್ಕೆ ಬಿದ್ದವರನ್ನು ಗೇಲಿ ಮಾಡುವವರೂ ಕೂಡಾ ಮೊಬೈಲಿಲ್ಲದೆ ಬದುಕೋದು ಕಷ್ಟವಿದೆ. ಹೀಗೆ ಇಡೀ ವಿಶ್ವವನ್ನೇ ಆವರಿಸಿಕೊಂಡಿರೋ ಮೊಬೈಲು ನಾನಾ ಕಾಯಿಲೆಗಳಿಗೆ, ಗೀಳುಗಳಿಗೆ ಕಾರಣವಾಗಿದೆ ಅನ್ನೋದು ಗೊತ್ತಿರುವಂಥಾದ್ದೇ. ಆದರೆ ಸದಾ ನಮ್ಮ ಅಂಗೈಯನ್ನು ಆಲಂಗಿಸಿಕೊಳ್ಳುವ ಮೊಬೈಲು ಅದೆಷ್ಟು ಗಲೀಜಿನ ಕೊಂಪೆ ಅನ್ನೋದು ಮಾತ್ರ ಹೆಚ್ಚಿನ ಮಂದಿಗೆ ಗೊತ್ತಿರಲಿಕ್ಕಿಲ್ಲ!
ಮೊಬೈಲಿಂದಾಗೋ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಚರ್ಚೆಯಾಗುತ್ತಲೇ ಇದ್ದಾವೆ. ಅವೆಲ್ಲವೂ ಮೊಬೈಲುಗಳ ಮೂಲಕವೇ ಹರಿದಾಡುತ್ತಿವೆ ಅನ್ನೋದು ಮಾತ್ರ ನಿಜಕ್ಕೂ ವಿಕಟ ವಾಸ್ತವ. ದಿನಾ ಬೆಳಗೆದ್ದು ಶುರುಹಚ್ಚಿಕೊಂಡರೆ ರಾತ್ರಿ ಹಾಸಿಗೆಗೆ ಒರಗಿಕೊಳ್ಳುವಾಗಲೂ ಮೊಬೈಲು ಜೊತೆಗೇ ಇರುತ್ತೆ. ಅದೊಂಥರಾ ದುಬಾರಿ ವೆಚ್ಚ ಮಾಡಿ ಕೊಳೆತು ನಾರೋ ಪಾಯಿಖಾನೆಯನ್ನೇ ಎದೆ ಮೇಲಿಟ್ಟುಕೊಂಡಂತೆ ಅಂದ್ರೆ ಹೆಚ್ಚಿನವರಿಗೆ ಅರಗಿಸಿಕೊಳ್ಳಲು ಕಷ್ಟವಾದೀತೇನೋ. ಆದರೆ ಒಂದಷ್ಟು ಮಂದಿ ಕಷ್ಟಪಟ್ಟು ಈ ಬಗೆಗೊಂದು ಸಂಶೋಧನೆ ನಡೆಸಿದ್ದಾರೆ. ಅದರ ಫಲಿತಾಂಶ ಮೇಲ್ಕಂಡ ವಾಸ್ತವವನ್ನು ಸಾಕ್ಷಿ ಸಮೇತ ಋಜುವಾತುಪಡಿಸಿದೆ.
ಬಹಿರ್ದೆಸೆಗೆ ಬಳಸೋ ಟಾಯ್ಲೆಟ್ಟಿನ ಸೀಟ್ನಲ್ಲಿ ಅಂಸಂಖ್ಯಾತ ಬ್ಯಾಕ್ಟೀರಿಯಾಗಳಿರುತ್ತವೆ. ಪ್ರತೀ ನಿತ್ಯ ನಿಯಮಿತವಾಗಿ ಶುಚಿಯಾಗಿಟ್ಟುಕೊಂಡರೆ ಪಿತಗುಡುವ ಬ್ಯಾಕ್ಟೀರಿಯಾಗಳ ಸಂಖ್ಯೆ ತುಸು ಇಳಿಮುಖವಾದೀತೇನೋ. ಹಾಗೆ ಶುಚಿತ್ವವಿಲ್ಲದ ಟಾಯ್ಲೆಟ್ ಅಂದಾಕ್ಷಣ ಸುಲಭ ಶೌಚಾಲಯಗಳು ನೆನಪಾಗಿ ಮುಖ ಕಿವುಚುವಂತಾಗುತ್ತೆ. ಅಂಥಾ ಸಾರ್ವಜನಿಕ ಶೌಚಾಲಯವನ್ನೇ ನಾವು ಅಂಗೈನಲ್ಲಿಟ್ಟುಕೊಂಡು, ಕಿಸೆಗಿಳಿಸಿಕೊಂಡು, ಕಡೇಗೆ ನಾವು ಮಲಗೋ ಹಾಸಿಗೆಯಲ್ಲಿಯೂ ಅದಕ್ಕೊಂದು ಜಾಗ ಕಲ್ಪಿಸಿದ್ದೇವೆ. ಅದು ಖಂಡಿತಾ ನಮ್ಮೆಲ್ಲರ ಅಚ್ಚುಮೆಚ್ಚಿನ ಮೊಬೈಲ್ ಅಲ್ಲದೆ ಬೇರೇನೂ ಅಲ್ಲ!
ಆರಿಜೋನಾ ಜೀವಶಾಸ್ತ್ರಜ್ಞರು ಇಂಥಾದ್ದೊಂದು ಭೀಕರ ಸತ್ಯವನ್ನು ಸಂಶೋಧನೆಗಳ ಮೂಲಕ ಪತ್ತೆಹಚ್ಚಿದ್ದಾರೆ. ನಾವು ಬಳಸೋ ಮೊಬೈಲಿನಲ್ಲಿ ಟಾಯ್ಲೆಟ್ ಸೀಟಿಗಿಂತಲೂ ಹತ್ತು ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆಂಬ ಭೀಕರ ಅಂಶವನ್ನು ಬಯಲಿಗೆಳೆದಿದ್ದಾರೆ. ನಾವು ಟಚ್ ಸ್ಕ್ರೀನ್ ಅನ್ನು ಜೀವವನ್ನೇ ಪಣಕ್ಕಿಟ್ಟಂತೆ ಸವರುತ್ತಾ ಕೂರುತ್ತೇವಲ್ಲಾ? ಅದು ಒಂದರ್ಥದಲ್ಲಿ ಅಸಂಖ್ಯಾತ ಬ್ಯಾಕ್ಟೀರಿಯಾಗಳಿಗೆ ಮಸಾಜು ಮಾಡಿದಂತೆ. ಸೆಲ್ ಫೋನುಗಳಲ್ಲಿ ಯಾಪಾಟಿ ಬ್ಯಾಕ್ಟೀರಿಯಾಗಳಿರುತ್ತವೆಂದರೆ, ಅದು ಮಲದಷ್ಟೇ ಅಸಹ್ಯವಾಗಿರುತ್ತವೆ. ಕಾಲ ಕಾಲಕ್ಕೆ ನಮ್ಮ ಮೊಬೈಲನ್ನು ಶುಚಿಗೊಳಿಸದೇ ಹೋದರೆ ಟಾಯ್ಲೆಟ್ಟನ್ನಲ್ಲ; ಮಲವನ್ನೇ ಅಂಗೈಲಿಟ್ಟುಕೊಂಡು ಮನೆ ಮಾರು ಸುತ್ತಾಡಿದಂತಾಗುತ್ತೆ. ಈ ವಿಚಾರ ಕೇಳಿ ಅಸಹ್ಯವಾದರೂ ನಾವು ಮೊಬೈಲನ್ನು ಎತ್ತೊಗೆಯದಷ್ಟು ಅಸಹಾಯಕರಾಗಿ ಬಿಟ್ಟಿದ್ದೇವೆ. ಆದರೆ ಕೊಂಚ ಸ್ವಚ್ಛತೆ ಕಾಪಾಡಿಕೊಂಡರೆ ಕೈಲಿರೋ ಅಸಹ್ಯದ ಪರಿಣಾಮ ಸ್ವಲ್ಪ ಮಟ್ಟಿಗೆ ತಗ್ಗಬಹುದೇನೋ…