ಈ ಸೃಷ್ಟಿಯ ವೈಚಿತ್ರ್ಯಗಳೇ ಊಹಾತೀತ. ಈವತ್ತಿಗೆ ಎಲ್ಲವನ್ನೂ ಕೂಡಾ ವಿಜ್ಞಾನದ ಒರೆಗೆ ಹಚ್ಚಿ ನೋಡುವಷ್ಟು ಜನ ಅಪ್ಡೇಟ್ ಆಗಿದ್ದಾರೆ. ನಂಬಿಕೆ ಮತ್ತು ಮೂಢ ನಂಬಿಕೆಗಳ ಗೆರೆ ಒಂದಷ್ಟು ಸ್ಪಷ್ಟವಾಗಿಯೇ ಗೊತ್ತಾಗಲಾರಂಭಿಸಿದೆ. ಆದರೆ ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ಬಗೆಹರಿಯದಂಥಾ ಅದೆಷ್ಟೋ ಕಗ್ಗಂಟುಗಳಿದ್ದಾವೆ. ವಿಜ್ಞಾನಕ್ಕೆ ನೇರ ಸವಾಲೆಸೆಯುವಂಥಾ ಘಟನಾವಳಿಗಳು ಆಗಾಗ ವಿಶ್ವದ ಮೂಲೆ ಮೂಲೆಗಳಲ್ಲಿಯೂ ಕೇಕೆ ಹಾಕುತ್ತಿರುತ್ತವೆ. ಅಂಥಾ ಘಟನಾವಳಿಗಳು ಮಾತ್ರವಲ್ಲ; ಸಜೀವ ಉದಾಹರಣೆಗಳೇ ಸಾಕಷ್ಟಿವೆ. ಅದರಲ್ಲಿ ಮೆಕ್ಸಿಕೋದ ಪ್ರಸಿದ್ಧ ಸೈಲೆಂಟ್ ಜ಼ೋನ್ ಕೂಡಾ ಒಂದಾಗಿ ಸೇರಿಕೊಂಡಿದೆ.
ಮೆಕ್ಸಿಕೋದ ಡುರಾಂಗೋದಲ್ಲಿರೋ ಬೊಲ್ಸೋನ್ ಡಿ ಮ್ಯಾಪಿಮೋದಲ್ಲಿ ಈ ಸೈಲೆಂಟ್ ಜಷೋನ್ ಇದೆ. ಅಲ್ಲಿನ ಮರುಭೂಮಿಯ ತುಂಬೆಲ್ಲ ಮೈ ಚಾಚಿಕೊಂಡಿರೋ ಈ ಪ್ರದೇಶದ ಚಹರೆಗಳೇ ಒಂದು ವಿಸ್ಮಯ. ಯಾಕೆಂದರೆ, ಇಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಆಧುನೀಕರಣ ತಾಂಡವವವಾಡಲು ಶುರುವಿಟ್ಟು ಅದೆಷ್ಟೋ ವರ್ಷಗಳು ಕಳೆದಿವೆ. ಆದರೆ ಸದರಿ ಪ್ರದೇಶದಲ್ಲಿ ಮಾತ್ರ ಮೊಬೈಲು, ರೇಡಿಯೋ, ಸ್ಯಾಟಿಲೈಟ್ ಸೇರಿದಂತೆ ಎಲ್ಲ ಸಿಗ್ನಲ್ಲುಗಳೂ ಸ್ತಬ್ಧವಾಗಿವೆ. ಅದೇನೇ ತಾಂತ್ರಿಕವಾಗಿ ಪ್ರಯತ್ನ ಪಟ್ಟರೂ ಕೂಡಾ ಈ ಪ್ರದೇಶದಲ್ಲಿ ಸಿಗ್ನಲ್ಲುಗಳನ್ನು ಪಸರಿಸಲು ಈ ಕ್ಷಣಕ್ಕೂ ಸಾಧ್ಯವಾಗಿಲ್ಲ.
ಇದೀಗ ವಿಶ್ವದ ಅದೆಂಥಾ ಬಡತನ ಹೊಂದಿರೋ ದೇಶಗಳನ್ನೂ ಮೊಬೈಲ್ ಸಿಗ್ನಲ್ಗಳು ಆವರಿಸಿಕೊಂಡಿವೆ. ಬೇರೆಲ್ಲೂ ಬೇಡ; ಭಾರತವನ್ನೇ ತೆಗೆದುಕೊಂಡರೆ ಇಲ್ಲಿನ ಹಳ್ಳಿ ಹಳ್ಳಿ, ಕುಗ್ರಾಮಗಳಲ್ಲಿಯೂ ಕೂಡಾ ಸಿಗ್ನಲ್ಲುಗಳ ಅಗೋಚರ ಜಾಲ ವ್ಯಾಪಿಸಿಕೊಂಡಿದೆ. ಆದರೆ ಸೈಲೆಂಟ್ ಜ಼ೋನಿನಲ್ಲಿ ಮಾತ್ರವೇ ಅದರ ಸುಳಿವಿಲ್ಲ ಅಂದರೆ ಅದಕ್ಕೇನು ಕಾರಣ ಅಂತ ಯಾರಿಗೇ ಆದರೂ ತಲೆಗೆ ಹುಳ ಹೊಕ್ಕಂತಾಗುತ್ತೆ. ಅದರ ಸುತ್ತ ನಾನಾ ವಿಶ್ಲೇಷಣೆಗಳಿವೆಯಾದರೂ ಅದೆಲ್ಲವೂ ಏಲಿಯನ್ನುಗಳ ಕಾಟ ಎಂಬ ಸುದ್ದಿ ಮಾತ್ರ ವೇಗವಾಗಿ ಪಸರಿಸಿಕೊಂಡಿದೆ. ಸೈಲೆಂಟ್ ಜ಼ೋನ್ ಏಲಿಯನ್ಗಳ ಸುಪರ್ಧಿಯಲ್ಲಿರೋದರಿಂದಲೇ ಅಲ್ಲಿ ಅಂಥಾ ವೈಚಿತ್ರ್ಯಗಳು ನಡೆಯುತ್ತಿವೆ ಎಂದೂ ಒಂದಷ್ಟು ಮಂದಿ ನಂಬಿಕೊಂಡಿದ್ದಾರೆ.