ಮನುಷ್ಯ ಭಯಂಕರವಾಗಿ ತಲೆಕೆಡಿಸಿಕೊಳ್ಳೋ ಸಿಲ್ಲಿ ಸಂಗತಿಗಳಲ್ಲಿ ಮೈ ಬಣ್ಣದ್ದು ಪ್ರಧಾನ ಪಾತ್ರ. ಕಪ್ಪಗಿನ ಮೈ ಬಣ್ಣ ಹೊಂದಿರುವ ಅನೇಕರು ಅದನ್ನೇ ಕೀಳರಿಮೆಯಾಗಿಸಿಕೊಂಡು ಕೊರಗೋದಿದೆ. ಇಂಥಾ ಮೈ ಬಣ್ಣ ಈ ಕಾಲಕ್ಕೆ ಸಿಲ್ಲಿ ಅನ್ನಿಸಿದರೂ ಅದರ ಹಿಂದೆ ಜನಾಂಗೀಯ ಅಂಶಗಳಿವೆ. ಬಣ್ಣದ ಆಧಾರದಲ್ಲಿಯೇ ಜನ ವಿಂಗಡನೆಯಾಗಿ ಅದುವೇ ಮಾರಾಮಾರಿಗೆ ಕಾರಣವಾಗಿದ್ದೂ ಇದೆ. ಇದೆಲ್ಲ ಏನೇ ಇದ್ರೂ ಮೈಬಣ್ಣದ ವಿಚಾರದಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳು ಕಾಮನ್. ಅದು ಮನುಷ್ಯ ಸಹಜ ಅಂಶ.
ಆದ್ರೆ ಈ ಜಗತ್ತಿನಲ್ಲಿ ನೀಲಿ ಮೈ ಬಣ್ಣ ಹೊಂದಿರೋ ಜನರೂ ಇದ್ದಾರಂದ್ರೆ ನಂಬೋಕೆ ತುಸು ಕಷ್ಟವಾಗಬಹುದು. ಆದರೆ ಅದು ನಿಜ. ಮನುಷ್ಯರ ಮೈ ಬಣ್ಣ ನೀಲಿಯಾಗಿಯೂ ಇರುತ್ತೆ ಅಂದ್ರೆ ಒಪ್ಪಲು ಕಷ್ಟವಾದ್ರೂ ಅದನ್ನ ಒಪ್ಪಿಕೊಳ್ಳಲೇ ಬೇಕು. ಯಾಕಂದ್ರೆ ಒಂದಷ್ಟು ತಲೆಮಾರುಗಳಿಂದ ನೀಲಿ ಮೈ ಬಣ್ಣ ಧರಿಸಿಕೊಂಡಿರೋ ಜನ ಸಮೂಹವೊಂದು ಕೆಂಟುಕಿಯಲ್ಲಿದೆ. ಅಲ್ಲಿನ ಆ ಕುಟುಂಬದ ಪ್ರತಿಯೊಬ್ಬರದ್ದೂ ನೀಲಿ ಬಣ್ಣ. ಹಾಗಂತ ಅದರಲ್ಲೇನೋ ಪವಾಡವಿದೆ ಅಂದುಕೊಳ್ಳಬೇಕಿಲ್ಲ. ಆ ನೀಲಿಯ ಹಿಂದಿರೋದು ಜಗತ್ತಿನಲ್ಲಿಯೇ ಅತ್ಯಂತ ಅಪರೂಪದ ಖಾಯಿಲೆ.
ಸದರಿ ಕುಟುಂಬದ ಪುರುಷನ ಮೈ ಬಣ್ಣ ನೀಲಿಗಟ್ಟಿತ್ತಂತೆ. ಅದೇನೋ ಕಾಯಿಲೆ ಇದ್ದಿರಬಹುದೆಂದುಕೊಂಡ್ರೇ ಆತನ ಮಡದಿ ಜನ್ಮ ನೀಡಿದ ಮಗುವಿನ ಮೈ ಬಣ್ಣವೂ ನೀಲಿಯಾಗಿತ್ತು. ಆ ನಂತರದಲ್ಲಿ ಆ ಕುಟುಂಬಕ್ಕೆ ನೀಲಿ ಬಣ್ಣವೇ ಖಾಯಮ್ಮಾಗಿತ್ತು. ಆ ಕುಟುಂಬಿಕರು ಇದಕ್ಕಾಗಿ ತೆಗೆದುಕೊಳ್ಳದ ಔಷದೋಪಚಾರಗಳೇ ಇಲ್ಲ. ಆದರೂ ನೀಲಿಯಿಂದ ಪಾರಾಗಿ ಸಹಜ ಮೈ ಬಣ್ಣ ಪಡೆಯೋದು ಈ ಪೀಳಿಗೆಗೂ ಸಾಧ್ಯವಾಗಿಲ್ಲ.
ಇದು ಮೆಥೆನೋಗ್ಲೋಬಿನೇಮಿಯಾ ಎಂಬ ರಕ್ತ ಸಂಬಂಧಿ ಕಾಯಿಲೆಯ ಪರಿಣಾಮ ಅಂತ ವೈದ್ಯ ಜಗತ್ತು ಹೇಳುತ್ತಿದೆ. ಆದರೆ ಅದಕ್ಕೆ ಪರಿಹಾರ ಮಾತ್ರ ಇಂದಿಗೂ ಕಂಡಿಲ್ಲ. ಸಾಮಾನ್ಯವಾಗಿ ವಿಷ ದೇಹ ಹೊಕ್ಕಾಗ ಮೈ ನೀಲಿಗಟ್ಟೋ ಸಾಧ್ಯತೆಗಳಿರುತ್ತೆ. ಆದ್ರೆ ಈ ಖಾಯಿಲೆ ಆ ಕುಟುಂಬವನ್ನು ಇಡೀ ಸಮಾಜದಲ್ಲಿ, ವಿಶ್ವದಲ್ಲಿಯೇ ಬೇರೆಯದ್ದಾಗಿ ನಿಲ್ಲಿಸಿದೆ. ಈ ಕ್ಷಣಕ್ಕೂ ಆ ಕುಟುಂಬಿಕರು ಈ ಖಾಯಿಲೆಯಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿದೆ. ವೈದ್ಯ ಲೋಕವೂ ಆ ಪ್ರಯತ್ನದಲ್ಲಿದೆ.