ಸೀರಿಯಲ್ ಹುಡುಗಿಯ ರಿಯಲ್ ಕಹಾನಿ!
ಜೊತೆಜೊತೆಯಲಿ ಅಂತೊಂದು ಧಾರಾವಾಹಿ ಕನ್ನಡ ಕಿರುತೆರೆ ಜಗತ್ತಿನಲ್ಲಿ ಮೂಡಿಸಿರುವ ಛಾಪು ನಿಜಕ್ಕೂ ಅಪರೂಪದ್ದು. ಅವಕಾಶವಿಲ್ಲದೆ ಅಂಡಲೆಯುತ್ತಿದ್ದ ಅನಿರುದ್ಧ ಈ ಸೀರಿಯಲ್ ಮೂಲಕ ಸ್ಟಾರ್ಗಿರಿ ಪಡೆದುಕೊಂಡಿದ್ದ. ಅತ್ತೆ ಸೊಸೆ ಜಗಳ, ಜಡೆಗಳ ನಡುವಿನ ಕಿತಾಪತಿ ಮತ್ತು ಬ್ಯಾರಲ್ಗಟ್ಟಲೆ ಕಣ್ಣೀರು… ಇವಿಷ್ಟರ ಸುತ್ತಲೇ ಸುತ್ತುತ್ತಿದ್ದ ಸೀರಿಯಲ್ ಜಗತ್ತಿಗೆ ಜೊತೆ ಜೊತೆಯಲಿ ಧಾರಾವಾಹಿ ಹೊಸಾ ಆವೇಗ ತಂದುಕೊಟ್ಟಿತ್ತು. ಇಂಥಾ ಧಾರಾವಾಹಿಯ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾಕೆ ಮಂಗಳೂರು ಸೀಮೆಯ ಹುಡುಗಿ ಮೇಘಾ ಶೆಟ್ಟಿ. ಹಾಗೆ ಈ ಹುಡುಗಿಗೆ ಅನು ಸಿರಿಮನೆ ಎಂಬ ಅಪರೂಪದ ಪಾತ್ರವೊಂದು ಸಿಕ್ಕಿಬಿಟ್ಟಿತ್ತು.
ಮೇಘಾ ಶೆಟ್ಟಿಗೆ ಮೊದಲ ಹೆಜ್ಜೆಯಲ್ಲಿಯೇ ಸಿಕ್ಕ ಪಾತ್ರದ ಕಿಮ್ಮತ್ತಿದೆಯಲ್ಲಾ? ಅದು ಅನೇಕರಿಗೆ ಹೊಟ್ಟೆ ಉರಿ ತರಿಸಿದ್ದರೂ ಅಚ್ಚರಿಯೇನಲ್ಲ. ಮಧ್ಯಮವರ್ಗದ ತಲ್ಲಣಗಳನ್ನು ಹೊದ್ದುಕೊಂಡೇ, ನಡುವಯಸ್ಸು ದಾಟಿದವನೊಂದಿಗೆ ಲವ್ವಲ್ಲಿ ಬೀಳೋ ಪಾತ್ರವದು. ಆ ಪಾತ್ರ ಏನು ಬೇಡುತ್ತದೋ, ಅದಕ್ಕೆ ಹೇಳಿಮಾಡಿಸಿದಂಥಾ ನಟನೆ, ಸ್ನಿಗ್ಧ ಸೌಂದರ್ಯ ಹೊಂದಿದ್ದಾಕೆ ಮೇಘಾ ಶೆಟ್ಟಿ. ನೋಡ ನೋಡುತ್ತಲೇ ಸದರಿ ಧಾರಾವಾಹಿ ಜನಪ್ರಿಯತೆಯ ಉತ್ತುಂಗಕ್ಕೇರಿತ್ತು. ಅನಿರುದ್ಧ ಆರ್ಯವರ್ಧನ್ ಆಗಿ ಫೇಮಸ್ ಆಗುತ್ತಲೇ, ಮೇಘಾ ಅನು ಸಿರಿಮನೆಯಾಗಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಳು.
ಜೊತೆಜೊತೆಯಲಿ ಧಾರಾವಾಹಿ ಹೀಗೆ ಪ್ರಸಿದ್ಧಿ ಪಡೆದಿದ್ದರ ಹಿಂದೆ ನಿರ್ದೇಶಕ ಆರೂರು ಜಗದೀಶ್ ಶ್ರಮವಿತ್ತು. ಪ್ರತಿಭೆಯಿತ್ತು. ಅದರಲ್ಲಿ ಪ್ರತಿಭಾನ್ವಿತರ ತಂಡವೊಂದರ ಪಾಲೂ ಕೂಡಾ ಇತ್ತು. ಆದರೆ, ಯಾವಾಗ ಅನಿರುದ್ಧ ಆರ್ಯವರ್ಧನ್ ಆಗಿ ಮಿಂಚಲಾರಂಭಿಸಿದನೋ, ಆಗ ಆತನ ತಿಮಿರು ಮೆಲ್ಲಗೆ ತಿಲ್ಲಾನವಾಡಲಾರಂಭಿಸಿತ್ತು. ಜೊತೆ ಜೊತೆಯಲಿ ಧಾರಾವಾಹಿಯಿಂದಲೇ ಕಲಾವಿದನಾಗಿ ಮರುಜನ್ಮ ಪಡೆದಿದ್ದವನು ಅನಿರುದ್ಧ. ಆದರೆ, ಬರಬರುತ್ತಾ ಆ ಧಾರಾವಾಹಿ ಬರಖತ್ತಾಗಿದ್ದೇ ತನ್ನಿಂದ ಎಂಬಂಥಾ ಅಹಮ್ಮಿಕೆಯನ್ನ ಪ್ರದರ್ಶಿಸಲಾರಂಭಿಸಿದ್ದ. ಆ ಮೇಲೆ ನಡೆದ ಪ್ರವರಗಳೆಲ್ಲವೂ ಕನ್ನಡಿಗರ ಕಣ್ಣಮುಂದಿದೆ.
ಗಮನೀಯ ವಿಚಾರವೆಂದರೆ, ಹಾಗೆ ಅಹಂ ಪ್ರದರ್ಶಿಸುತ್ತಾ ಮೆರೆಯಲಾರಂಭಿಸಿದ ಅನಿರುದ್ಧನ ಮಗ್ಗುಲಲ್ಲಿ ಈ ಹುಡುಗಿ ಮೇಘಾ ಶೆಟ್ಟಿ ಕೂಡಾ ಕಾಣಿಸಿಕೊಂಡಿದ್ದಳು. ಆ ಹೊತ್ತಿಗೆಲ್ಲ ಅನು ಸಿರಿಮನೆಯಾಗಿ ಸಿಕ್ಕ ಗೆಲುವಿನ ನಶೆ ಆಕೆಯ ನೆತ್ತಿಗೇರಿಕೊಂಡಿತ್ತು. ಒಂದು ಹಂತದಲ್ಲಿ ನೇಮು, ಫೇಮು ತಂದುಕೊಟ್ಟಿದ್ದ ಆ ಧಾರಾವಾಹಿಗೆ ಬೆನ್ನು ಹಾಕಿ, ಚಿತ್ರರಂಗದತ್ತ ಹೊರಳಿಕೊಳ್ಳುವ ತಯಾರಿಯನ್ನೂ ನಡೆಸಿದ್ದಳು. ಆ ನಂತರ ನಾನಾ ರಂಪಾಟವಾಗಿ ಮತ್ತೆ ಧಾರಾವಾಹಿಗೆ ಮರಳಿದ್ದಳು. ಹೀಗೆ ಮೊದಲ ಹೆಜ್ಜೆಯಲ್ಲಿಯೇ ಗೆಲುವಿನ ಅಮಲಿನಲ್ಲಿ ಮಿಂದೆದ್ದಿದ್ದ ಮೇಘಾ ಶೆಟ್ಟಿ ಇದೀಗ ಚಿತ್ರರಂಗದಲ್ಲಿಯೂ ನಾಯಕಿಯಾಗಿ ಬ್ಯುಸಿಯಾಗಿದ್ದಾಳೆ.
ಈಕೆ ಗೋಲ್ಡನ್ ಸ್ಟಾರ್ ಗಣೇಶ್ಗೆ ನಾಯಕಿಯಾಗಿ ನಟಿಸಿರೋ ತ್ರಿಬಲ್ ರೈಡಿಂಗ್ ಚಿತ್ರ ಬಿಡುಗಡೆಗೊಂಡಿದೆ. ಗಣೇಶನ ಮಾಮೂಲಿ ವರಸೆಯ ಸಿನಿಮಾಗಳಲ್ಲೊಂದಾಗಿ ಅದು ದಾಖಲಾಗಿದ್ದೂ ಆಗಿದೆ. ಸಿದ್ಧಸೂತ್ರಗಳ ಪರಿಧಿಯಲ್ಲಿ ರೂಪುಗೊಂಡಿರುವ ಈ ಚಿತ್ರ ಪ್ರೇಕ್ಷಕರಿಗೆ ಅಷ್ಟಾಗಿ ಹಿಡಿಸಿದಂತಿಲ್ಲ. ನಾಯಕಿಯಾಗಿ ಆರಂಭಿಕ ಹೆಜ್ಜೆಯಲ್ಲಿಯೇ ಹೀಗೆ ಮುಗ್ಗರಿಸಿಸಿದ್ದರೂ ಕೂಡಾ ಮೇಘಾ ಶೆಟ್ಟಿಯ ಮೆರೆದಾಟ ಮಾತ್ರ ಜೋರಾಗಿದೆ ಅಂತೊಂದು ಆರೋಪ ಗಾಂಧಿನಗರದ ಗಲ್ಲಿಯಗುಂಟ ಇಟ್ಟಾಡುತ್ತಿದೆ. ಇದು ಮೇಘಾ ಪಾಲಿಗೆ ಮೊದಲ ಚಿತ್ರ. ಅದು ಹೇಳಿಕೊಳ್ಳುವಂಥಾ ಗೆಲುವನ್ನೂ ಕಂಡಿಲ್ಲ. ಆದರೆ, ಈ ಮೇಘಾ ಮಾತ್ರ ಹತ್ತಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ ನಟಿಯರನ್ನೂ ಸೈಡು ಹೊಡೆಯುವಂತೆ ಪೋಸು ಕೊಡುತ್ತಿದ್ದಾಳೆಂಬ ಅಸಹನೆಯೂ ಗಾಂಧಿ ನಗರದಲ್ಲೀಗ ಹಬೆಯಾಡುತ್ತಿದೆ.
ಹಾಗೆ ನೋಡಿದರೆ, ತ್ರಿಬಲ್ ರೈಡಿಂಗ್ ಸ್ಕಿಡ್ ಆದ ನಂತರವೂ ಮೇಘಾ ಶೆಟ್ಟಿಯ ಮುಂದೆ ಒಂದಷ್ಟು ಅವಕಾಶಗಳಿದ್ದಾವೆ. ಈಗಾಗಲೇ ಡಾರ್ಲಿಂಗ್ ಕೃಷ್ಣ ನಾಯಕನಾಗಿರೋ ದಿಲ್ ಪಸಂದ್ ಸೇರಿದಂತೆ ಮೂರ್ನಾಲಕ್ಕು ಸಿನಿಮಾಗಳಲ್ಲಿ ಆಕೆ ನಾಯಕಿಯಾಗಿ ನಟಿಸಿದ್ದಾಳೆ. ಇನ್ನೊಂದಷ್ಟು ಆಫರ್ಗಳೂ ಆಕೆಯ ಮುಂದೆ ಎಡತಾಕುತ್ತಿವೆ. ನಿಖರವಾಗಿ ಹೇಳಬೇಕೆಂದರೆ, ನಟಿಯಾಗಿ ಬೆಳೆಯಬಹುದಾದ ವಿಫುಲ ಅವಕಾಶಗಳು ಮೇಘಾ ಮುಂದಿವೆ. ಆದರೆ, ಅದಕ್ಕೆಲ್ಲ ಆಕೆಯೊಳಗಿರೋ ಅಹಮ್ಮಿಕೆಯೇ ಅಡ್ಡಗಾಲಾಗೋ ಲಕ್ಷಣಗಳೂ ಕೂಡಾ ದಟ್ಟವಾಗಿಯೇ ಗೋಚರಿಸುತ್ತಿವೆ!
ಯಾಕೆಂದರೆ, ಸೋಲಿನ ಸವಾಲಿಗೆ ಎದೆಗೊಟ್ಟು ಮೇಲೆದ್ದು ನಿಲ್ಲೋದು ಎಷ್ಟು ಕಷ್ಟವೋ, ಗೆಲುವೊಂದನ್ನು ಸಂಭಾಳಿಸೋದೂ ಕೂಡಾ ಅಷ್ಟೇ ರಿಸ್ಕಿನ ವಿಚಾರ. ಅದು ಕೆಲವರಿಗೆ ಮಾತ್ರವೇ ಸಿದ್ಧಿಸಬಹುದಾದ ಕಲೆ ಎಂದರೂ ಅತಿಶಯವೇನಲ್ಲ. ಅದರಲ್ಲಿಯೂ ಪವಾಡವೆಂಬಂತೆ ಅವಕಾಶ ಪಡೆದು, ಪ್ರಸಿದ್ಧರಾದ ಮೇಘಾಳಂಥಾ ಎಳಸು ಮನಸ್ಥಿತಿಗಂತೂ ಆ ಕಲೆ ಸುಲಭಕ್ಕೆ ನಿಲುಕುವಂಥಾದ್ದಲ್ಲ. ಅಲ್ಲಿ ಶುಭ್ರ ವಿಧೇಯತೆ ಮಿನುಗಬೇಕಾದ ಜಾಗವನ್ನು, ನಿಗಿನಿಗಿಸೋ ಅಹಮ್ಮಿಕೆ ಆವರಿಸಿಕೊಳ್ಳುತ್ತೆ. ಅದುವೇ ತಾನು ಸೀಮೆಗಿಲ್ಲದ ಸೆಲೆಬ್ರಿಟಿ ಎಂಬ ಭಾರದ ಕರೀಟವನ್ನು ಹೊತ್ತು ತಿರುಗುವಂತೆ ಮಾಡುತ್ತೆ. ಹಾಗೆ ಸುತ್ತಾಡಿ ಸುಸ್ತಾಗಿ ವಿಶ್ರಾಂತಿ ಪಡೆಯಲು ಕೂತಾಗ, ಸುತ್ತಲ ಜಗತ್ತು ಎದ್ದು ಗಾವುದ ದೂರ ಹೆಜ್ಜೆ ಹಾಕಿರುತ್ತೆ. ಅವಕಾಶಗಳೆಲ್ಲವೂ ಯಾರದ್ದೋ ಪಾಲಾಗಿ ಮನೆ ಸೇರಿಕೊಳ್ಳುವ ಅವಸ್ಥೆ ಬಂದರೂ ಅಚ್ಚರಿಯೇನಿಲ್ಲ.
ಯಾಕೋ ಮೇಘಾ ಶೆಟ್ಟಿ ಅಂಥಾದ್ದೊಂದು ಅಪಾಯದ ಅಂಚಿನಲ್ಲಿ ನಿಂತಿಕರುವಂತೆ ಭಾಸವಾಗುತ್ತಿದೆ. ಹೀಗೆ ಗೆಲುವಿನ ನಶೆಯನ್ನು ನೆತ್ತಿಗಡರಿಸಿಕೊಂಡ ಅದೆಷ್ಟೋ ನಟ ನಟಿಯರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಅವಕಾಶವೆಂಬ ಮಾಯೆ ಅಂಥವರನ್ನು ಕೈಗೆಟುಕದೆ ಸತಾಯಿಸಿದೆ. ಹಾಗಿರುವಾಗ ಧಾರಾವಾಹಿ ಗೆಲುವಿನ ಭ್ರಮೆಯಲ್ಲಿರುವ ಮೇಘಾಳಿಗೂ ಅಂಥಾ ಅಪಾಯ ತಪ್ಪಿದ್ದಲ್ಲ. ಆಕೆ ಕಿರೀಟವನ್ನು ಕೆಳಗಿಳಿಸಿ, ಗೆಲುವಿನ ಭ್ರಮೆ ಕಳಚಿ ಮುಂದುವರೆದರೆ ಭವಿಷ್ಯ ಉಜ್ವಲವಾದೀತೇನೋ. ಇದೇ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಅದಿತಿ ಕೂಡಾ ನಾಯಕಿಯಾಗಿ ನಟಿಸಿದ್ದಾರೆ. ಆಕೆ ಅದಾಗಲೇ ಅಪರೂಪದ ನಟಿಯಾಗಿ ಗುರುತಿಸಿಕೊಂಡಿರುವವರು. ಅದೇ ಹೊತ್ತಿನಲ್ಲಿ ಯಾವುದಕ್ಕೂ ಉಬ್ಬದ ಪ್ರೌಢಿಮೆಯನ್ನೂ ರೂಡಿಸಿಕೊಂಡಿರುವಾಕೆ. ಅದಿತಿಯ ವರ್ತನೆಗೂ, ಮೇಘಾಳ ವರಸೆಗೂ ಅಜಗಜಾಂತರ ವ್ಯತ್ಯಾಸವಿದೆ. ಒಂಚೂರು ಎಚ್ಚರ ತಪ್ಪಿದರೂ ಅನಿರುದ್ಧನಿಗೆ ಜೋಡಿಯಾಗಿ ಮತ್ಯಾವುದೋ ಧಾರಾವಾಹಿಯಲ್ಲಿ ನಟಿಸೋ ಅವಕಾಶವೊಂದೇ ಮೇಘಾ ಪಾಲಿಗುಳಿದರೂ ಅಚ್ಚರಿಯೇನಿಲ್ಲ. ಹಾಗಾಗದಿರಲೆಂಬುದು ಹಾರೈಕೆ!