ಜಯತೀರ್ಥ ನಿರ್ದೇಶನದ ಬನಾರಸ್ ಇದೀಗ ಮಾಯಗಂಗೆಯ ಮೂಲಕ ಪ್ರೇಕ್ಷಕರನ್ನೆಲ್ಲ ಮೆಲುವಾಗಿ ಮುಟ್ಟಿದೆ. ಒಂದೊಳ್ಳೆ ಹಾಡು ಅದೆಷ್ಟು ಬೇಗ ಎಲ್ಲೆಡೆ ಪಸರಿಸಿಕೊಂಡು ಮೋಡಿ ಮಾಡಲಾದೀತೋ ಅದೆಲ್ಲವನ್ನೂ ಮಾಯಗಂಗೆ ಹಾಡು ಮಾಡಿ ಬಿಟ್ಟಿದೆ. ಆ ಹಾಡಿನಲ್ಲಿರುವ ದೃಷ್ಯ ವೈಭವ, ಕಾಡುವ ಸಾಲುಗಳು ಮತ್ತು ಕಥೆಯ ಬಗ್ಗೆ ಮೂಡಿಕೊಂಡಿರುವ ಕ್ಯೂರಿಯಾಸಿಟಿ… ಇದೆಲ್ಲವನ್ನೂ ಕಂಡು ಚಿತ್ರತಂಡ ಖುಷಿಗೊಂಡಿದೆ. ಅದರಲ್ಲಿಯೂ ವಿಶೇಷವಾಗಿ, ನವನಾಯಕ ಝೈದ್ ಖಾನ್ ಬಗ್ಗೆಯೂ ವ್ಯಾಪಕ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಇದೆಲ್ಲವನ್ನೂ ಕಂಡ ಪ್ರೇಕ್ಷಕರು ನಿರ್ದೇಶಕ ಜಯತೀರ್ಥ ಈ ಬಾರಿ ಬನಾರಸ್ ಮೂಲಕ ಮತ್ತೆ ಮೋಡಿ ಮಾಡೋದು ಗ್ಯಾರೆಂಟಿ ಎಂಬಂಥಾ ಭವಿಷ್ಯ ಹೇಳಲಾರಂಭಿಸಿದ್ದಾರೆ.
ಹಾಗಾದರೆ ಈ ಸಿನಿಮಾದ ಹಾಡಿನ ಪ್ರಭಾವಳಿ ಕರ್ನಾಟಕಕ್ಕೆ ಮಾತ್ರ ಸೀಮಿತವಾ? ಮಾಯಗಂಗೆ ಹಾಡು ಹಿಟ್ ಆಗಿರೋದು ಬರೀ ನಮ್ಮ ರಾಜ್ಯದಲ್ಲಿ ಮಾತ್ರವಾ? ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನಸಲ್ಲಿರಬಹುದು. ಅದಕ್ಕುತ್ತರವಾಗಿ ಜಾಹೀರಾಗುವ ಒಂದಷ್ಟು ಸಂಗತಿಗಳು ಅಕ್ಷರಶಃ ರೋಮಾಂಚಕವಾಗಿವೆ. ಮಾಯಗಂಗೆ ಹಾಡು ನಮ್ಮಲ್ಲಿ ಮಾತ್ರವಲ್ಲ; ಬೇರೆ ಭಾಷೆಗಳಲ್ಲಿಯೂ ಸೂಪರ್ ಹಿಟ್ಟಾಗಿದೆ. ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಒಂದೇ ಸಲಕ್ಕೆ ಬಿಡುಗಡೆಯಾಗಿದ್ದ ಮಾಯಗಂಗೆ ನಂತರದಲ್ಲಿ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆಗೊಂಡಿತ್ತು. ಆ ಎಲ್ಲ ಭಾಷೆಗಳಲ್ಲಿಯೂ ಮಾಯಗಂಗೆ ಕನ್ನಡದಂಥಾದ್ದೇ ಪ್ರಭಾವ ಬೀರಿದೆ.
ತೆಲುಗು ಹಾಡನ್ನು ಹೈದರಾಬಾದಿನಲ್ಲಿ ನಿರ್ದೇಶಕ ಸುಕುಮಾರನ್, ಚೆನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳು ಹಾಡನ್ನು ಖ್ಯಾತ ನಟ ವಿಶಾಲ್ ಹಾಗೂ ಮುಂಬೈನಲ್ಲಿ ಅದ್ದೂರಿಯಾಗಿ ನಡೆಸ ಈವೆಂಟಿನಲ್ಲಿ ನಿರ್ದೇಶಕ ಮಧುರ್ ಬಂಡಾರ್ಕರ್ ಹಿಂದಿ ವರ್ಷನ್ನಿನ ಮಾಯಗಂಗೆ ಹಾಡನ್ನು ಬಿಡುಗಡೆಗೊಳಿಸಿದ್ದರು. ಗಣ್ಯರೆಲ್ಲ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅದೀಗ ಪ್ರೇಕ್ಷಕರ ವಲಯಕ್ಕೂ ಹಬ್ಬಿಕೊಂಡಿದೆ. ಇತ್ತೀಚಿನ ದಿನಮಾನದಲ್ಲಿ ತಾವು ಕೇಳಿದ ಅದ್ಭುತವಾದ ಹಾಡು ಮಾಯಗಂಗೆ ಎಂಬಂಥಾ ಅಭಿಪ್ರಾಯಗಳೇ ಈ ಎಲ್ಲ ಭಾಷೆಗಳಲ್ಲಿಯೂ ಕೇಳಿ ಬರುತ್ತಿವೆ. ಅಂದಹಾಗೆ ಈ ಎಲ್ಲ ಭಾಷೆಗಳಲ್ಲಿಯೂ ನಾಯಕ ಝೈದ್ ಬಗ್ಗೆಯೂ ಸದಭಿಪ್ರಾಯಗಳು ಹರಿದಾಡುತ್ತಿವೆ. ಈ ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ.