ಹುಡುಗೀರೇ ಹುಷಾರ್… ಅಲ್ಲಿ ವಂಚಕರು, ಕಾಮುಕರಿದ್ದಾರೆ!
ಮ್ಯಾಟ್ರಿಮೊನಿ ಹೆಸರಲ್ಲಿ ಎಂತೆಂಥಾ ದಂಧೆಗಳು ನಡೆದಿವೆ ಗೊತ್ತಾ?
ಇದು ಚಪ್ಪಲಿಯಿಂದ ಹಿಡಿದು ಪಾಯಿಖಾನೆ ತೊಳೆಯುವ ದ್ರವದವರೆಗೆ ಎಲ್ಲವನ್ನೂ ಆನ್ಲೈನ್ನಿಂದಲೇ ಪೂರೈಸಿಕೊಳ್ಳುವ ಜಮಾನ. ಹೀಗೆ ಜನ ಅಂತರ್ಜಾಲಕ್ಕೆ ಮುಗಿ ಬಿದ್ದಿರೋದರಿಂದಲೇ ವಂಚನೆಯ ಅಡ್ಡಾಗಳೂ ಅಲ್ಲಿಗೆ ಶಿಫ್ಟ್ ಆಗಿವೆ. ಹೀಗೆ ಗುಂಡಿ ಅಮುಕಿದರೆ ಮನೆಮುಂದೆ ಬಂದು ಬೀಳುವ ವಸ್ತುಗಳಿಗೇ ಗ್ಯಾರೆಂಟಿ ಇಲ್ಲ. ಅಂಥಾದ್ದರಲ್ಲಿ ಆನ್ಲೈನಿನಲ್ಲಿ ಕುದುರುವ ಸಂಬಂಧಗಳಿಗೆ ಗ್ಯಾರೆಂಟಿ ಏನಿದ್ದೀತು? ಇಂಥಾದ್ದೊಂದು ಸರಳ ಸತ್ಯದ ಅರಿವಿಲ್ಲದ ಮಂದಿ ಅನಾಯಾಸವಾಗಿ ವಂಚನೆಯ ಅಲಗಿಗೆ ಗೋಣು ಕೊಟ್ಟು ಸಂಕಟ ಪಡುತ್ತಾರೆ. ಪೊಲೀಸ್ ದಾಖಲೆಗಳ ಪ್ರಕಾರ ನೋಡಿದರೆ ಇಂಥಾ ಆನ್ಲೈನ್ ಲಫಡಾಗಳಿಗೆ ಈ ಮ್ಯಾಟ್ರಿಮೋನಿಯಲ್ ವೆಬ್ಸೈಟುಗಳಷ್ಟು ಮತ್ಯಾವುವೂ ಬಳಕೆಯಾಗಿಲ್ಲ. ಅಂಥಾ ನಿಸ್ಸಂತು ವಧುವರಾನ್ವೇಷಣಾ ಸೈಟುಗಳಲ್ಲಿ ಭಾರತ್ ಮ್ಯಾಟ್ರಿಮೊನಿಯಲ್ ಭಲೇ ಫೇಮಸ್ಸು. ಈ ವೆಬ್ಸೈಟಿನ ಗೋಡೆ ಮೇಲೆ ವರನ ಗೆಟಪ್ಪಿನಲ್ಲಿ ಫೋಟೋ ತಗುಲಿಸಿದ ಖದೀಮರನೇಕರು ಹುಡುಗೀರ ಬದುಕನ್ನೇ ಹಾಳುಗೆಡವಿದ ಉದಾಹರಣೆಗಳಿವೆ.
ಇತ್ತೀಚೆಗಂತೂ ಹುಡುಗ, ಹುಡುಗಿ ಹುಡುಕೋ ವಿಧಾನವೇ ಬದಲಾಗಿ ಬಿಟ್ಟಿದೆ. ಹೆಣ್ಣುಮಕ್ಕಳೂ ಕೂಡಾ ಮ್ಯಾಟ್ರಿಮೊನಿಯಲ್ ವೆಬ್ಸೈಟ್ಗಳಲ್ಲಿ ಡಿಟೇಲುಗಳನ್ನ ಅಪ್ಲೋಡ್ ಮಾಡಿ ನಿರಾಳವಾಗ್ತಾರೆ. ಆದರೆ ಹೆಣ್ಣುಮಕ್ಕಳ ಪಾಲಿಗೆ ಇಂಥಾ ಆನ್ಲೈನ್ ವರಾನ್ವೇಷಣಾ ಸಂಸ್ಥೆಗಳು ಖಂಡಿತಾ ಸೇಫ್ ಅಲ್ಲ. ಯಾಕಂದ್ರೆ ಅಲ್ಲಿಯೇ ಕಾಮ ಪಿಪಾಸುಗಳು, ಧನದಾಹಿಗಳ ಗ್ಯಾಂಗುಗಳು ಗಾಳ ಹಿಡಿದು ಕಾದು ಕೂತಿರುತ್ತವೆ. ಇದುವರೆಗೂ ಇಂಥಾ ವಂಚಕರ ಸುಳಿಗೆ ಸಿಕ್ಕು ಅನೇಕ ಯುವತಿಯರು ಕಂಗಾಲಾಗಿದ್ದಾರೆ. ನೀವು ಇಂಥಾ ಸೈಟುಗಳಲ್ಲಿ ವರಾನ್ವೇಷಣೆಗಿಳಿಯೋ ಮುನ್ನ ಅಲ್ಲಿನ ಒಂದಷ್ಟು ವಂಚನೆಯ ಸ್ಟೋರಿಯನ್ನು ಕೇಳಿ ನೋಡಿ. ಆ ನಂತರವೂ ಆನ್ಲೈನ್ ವರಾನ್ವೇಷಣೆಗೆ ಮನಸು ಮಾಡಿದರೆ ಅದು ನಿಮ್ಮಿಚ್ಚೆ…
ಆತ ಹರಿವಾಸು, ಹರಿದಾಸ, ಕಿಶೋರ್ ಹೀಗೆ ಇನ್ನೇನೇನೋ ಹೆಸರು ಹೊಂದಿರುವ ಸರ್ವಾಂತರ್ಯಾಮಿ ಜಾನಿರೆಕ್ಸ್. ಈ ಹಲಾಲುಕೋರನನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಾಳೇಗೌಡರು ತಮ್ಮ ತಂಡದೊಂದಿಗೆ ಚೆನೈನಿಂದ ಹಿಡಿದು ತಂದು ಕೆಡವುತ್ತಲೇ ಅದೆಷ್ಟೋ ಯುವತಿಯರು ನಿಟ್ಟುಸಿರಾಗಿರಬಹುದು. ಈತ ಮಾಡಿರುವ ಮಹಾ ವಂಚನೆಯೇ ಅಂಥಾದ್ದಿದೆ!
ಆಂದ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಹುಡುಗಿಯರಿಗೆ ಭಾರತ್ ಮ್ಯಾಟ್ರಿಮೊನಿ ಮೂಲಕ ಕಾಳು ಹಾಕುತ್ತಿದ್ದ ಈತ ಈ ಅಡ್ಡಕಸುಬಿನಿಂದಲೇ ಲಕ್ಷಾಂತರ ರೂಪಾಯಿ ಕಮಾಯಿಸಿದ್ದ. ಈ ರಾಜ್ಯಗಳ ಒಳ ಪ್ರದೇಶಗಳಲ್ಲಿಯೂ ಕೈಚಳಕ ತೋರಿಸಿದ್ದಾನೆಂದರೆ ಈತ ಅದಿನ್ನೆಂಥಾ ಐನಾತಿ ಆಗಿರಬಹುದೆಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಅದೆಲ್ಲೋ ದೂರದ ಚೆನೈ ನಗರದಲ್ಲಿ ಕೂತು ಅನ್ಯಭಾಷೆಯ ಗುರುತು ಪರಿಚಯವಿಲ್ಲದ ಹುಡುಗೀರನ್ನ ಪರಿಚಯಿಸಿಕೊಂಡು ಅವರಿಂದಲೇ ಕಾಸು ಕೀಳುವುದು ಈತ ನಡೆಸಿರುವ ವಂಚನೆಗಳ ಸ್ಪೆಷಾಲಿಟಿ. ಹೆಣ್ಣುಮಕ್ಕಳ ಸೆಂಟಿಮೆಂಟ್ ಮತ್ತು ಬಲಹೀನತೆಗಳನ್ನೇ ಆದಾಯಮೂಲವಾಗಿಸಿಕೊಂಡಿದ್ದ ಜಾನಿ ಅದೆಷ್ಟೋ ಹೆಣ್ಣು ಮಕ್ಕಳ ಬದುಕಿಗೆ ಅಮವಾಸೆಯಂತೆ ಅಮರಿಕೊಂಡಿದ್ದ. ಒಂದಿಡೀ ಕುಟುಂಬದ ನೆಮ್ಮದಿಗೇ ಕೊಳ್ಳಿಯಿಟ್ಟಿದ್ದ. ಸುಂದರ ಬದುಕನ್ನೇ ಹೊಸಕಿ ಹಾಕಿದ್ದ.
ಇಂಥಾ ಜಾನಿ ಅಲಿಯಾಸ್ ಜಾನೆರೆಕ್ಸ್ನ ಜನ್ಮಜಾತಕಗಳೂ ಕೊಂಚ ಕುತೂಹಲಕಾರಿಯಾಗಿದೆ. ಚೆನೈ ನಗರದಲ್ಲಿದ್ದುಕೊಂಡು ಇಂಥಾದ್ದೊಂದು ಹಡೆಬಿಟ್ಟಿ ಕೆಲಸ ಮಾಡುತ್ತಿದ್ದ ಈತ ಮೂಲತಃ ಸೀಮಾಂಧ್ರ ರಾಜ್ಯದ ಗುಂಟೂರು ಜಿಲ್ಲೆಯ ತೆನಾಲಿಯವನು. ಈಗೊಂದಷ್ಟು ವರ್ಷಗಳ ಹಿಂದೆ ಚೆನೈಗೆ ಹೋಗಿ ನೆಲೆಗೊಂಡಿದ್ದ ಜಾನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಹೇಗಾದರೂ ಮಾಡಿ ಕೈತುಂಬಾ ಕಾಸು ಮಾಡಬೇಕೆಂಬ ಆಸೆಯಿತ್ತಲ್ಲಾ? ಅದಕ್ಕಾಗಿ ಬೇರೆ ದಾರಿ ಹುಡುಕಲಾರಂಭಿಸಿದ ಜಾನಿ ಆರಿಸಿಕೊಂಡಿದ್ದು ಭಾರತ್ ಮ್ಯಾಟ್ರಿಮೊನಿ ವೆಬ್ಸೈಟನ್ನು. ವಿದ್ಯಾವಂತನಾದ ಈತನಿಗೆ ಈ ಸೈಟಿನ ಆಳ ಅಗಲದ ಪರಿಚಯವಿತ್ತು. ಇಲ್ಲಿ ಸಾವಿರಾರು ಹುಡುಗೀರ ಪ್ರೊಫೈಲುಗಳನ್ನೇ ತನ್ನ ಆದಾಯದ ಮೂಲವಾಗಿಸಿಕೊಂಡ ಜಾನಿ ಭಾರತ್ ಮ್ಯಾಟ್ರಿಮೊನಿ ಸೈಟಿನಲ್ಲಿ ತನ್ನದೊಂದು ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಅಲ್ಲಿ ತಾನು ಅವಿವಾಹಿತನೆಂದು ನಮೂದಿಸಿ ಹೆಸರನ್ನು ಹರಿವಾಸು ಅಂತ ಬದಲಿಸಿಕೊಂಡಿದ್ದ. ಆನಂತರ ಜಾನಿಯ ನಿಜವಾದ ಬೇಟೆ ಆರಂಭವಾಗಿತ್ತು.
ಭಾರತ್ ಮ್ಯಾಟ್ರಿಮೊನಿ ಸೇರಿದಂತೆ ಈ ಟೈಪಿನ ಯಾವುದೇ ವೆಬ್ಸೈಟುಗಳಲ್ಲಿಯೂ ಪ್ರೊಫೈಲು ಹಾಕಿದ ಹುಡುಗೀರನ್ನು ಸಂಪರ್ಕಿಸುವುದು ಸಲೀಸು. ಇಲ್ಲಿ ಹೆಣ್ಣುಮಕ್ಕಳು ಮತ್ತು ಅವರ ಹೆತ್ತವರ ಎಚ್ಚರ ಮಾತ್ರವೇ ಅನಾಹುತಗಳಾಗದಂತೆ ತಡೆಯುತ್ತವೆ. ಆದರೆ ಜಾನಿ ಎಂಥಾ ಐನಾತಿಯೆಂದರೆ ವರನ ಗೆಟಪ್ಪಿನಲ್ಲಿ ಸ್ಕೆಚ್ಚು ಹಾಕಿದ ಹುಡುಗಿಯರನ್ನು ಸಂಪರ್ಕಿಸಿದ್ದ. ಮಾತಿನಲ್ಲಿ ಬಲು ಚಾಲಾಕಿಯಾದ ಈತ ನಯಸ್ಸು ಮಾತುಗಳಿಂದ ಸೆಳೆಯಲೆತ್ನಿಸುತ್ತಿದ್ದ. ತುಸು ಸೂಕ್ಷ್ಮ ಮನಸ್ಥಿತಿಯ ಹೆಣ್ಣುಮಕ್ಕಳು ಇವನ ಮಾತಿನ ಒನಪಿನಲ್ಲಿ ಬೆರೆತಿರುವ ವಂಚನೆಯ ಕಮಟಿನಿಂದಲೇ ಕಳಚಿಕೊಳ್ಳುತ್ತಿದ್ದರು. ಆದರೆ ತುಸು ಮೆದು ಹುಡುಗಿಯರು ಮೆಲ್ಲಗೆ ಜಾನಿಯ ಖೆಡ್ಡಾಕ್ಕೆ ಬೀಳುತ್ತಿದ್ದರು. ಇದರಲ್ಲಿಯೂ ಎಚ್ಚರವಹಿಸುತ್ತಿದ್ದ ಜಾನಿ ತುಸು ವಯಸಾದ, ಬೇಗನೆ ಮದುವೆಯಾಗುವ ಅನಿವಾರ್ಯತೆಗೆ ಬಿದ್ದಿರುವವರನ್ನೇ ಆರಿಸುತ್ತಿದ್ದ. ಹಾಗೆ ಬಲೆಗೆ ಬಿದ್ದ ಹುಡುಗಿಯ ಹಿನ್ನೆಲೆಯಲ್ಲಿ ಶ್ರೀಮಂತಿಕೆ ಇದ್ದರೆ ಮಾತ್ರ ಆಕೆಯೊಂದಿಗೆ ಮಾತುಕತೆ ಮುಂದುವರೆಸುತ್ತಿದ್ದ.
ಹಾಗೆ ಹುಡುಗಿಯೊಬ್ಬಳನ್ನು ಭಾರತ್ ಮ್ಯಾಟ್ರಿಮೊನಿ ಮೂಲಕ ಪರಿಚಯಿಸಿಕೊಂಡು ಮೊಬೈಲಿನಲ್ಲಿಯೇ ಪಳಗಿಸಿಕೊಂಡ ನಂತರ ಭೇಟಿಗೊಂದು ದಿನ ನಿಗಧಿಪಡಿಸುತ್ತಿದ್ದ. ಹಾಗೆ ಹುಡುಗಿ ಎದುರು ಸಿಕ್ಕೇಟಿಗೆ ಈತನ ಅಸಲೀ ವರಸೆ ಆರಂಭವಾಗುತ್ತಿತ್ತು. ಭಾರೀ ಸೆಂಟಿಮೆಂಟ್ ಸೀನು ಕ್ರಿಯೇಟ್ ಮಾಡುತ್ತಿದ್ದ ಎದುರು ನಿಂತ ಹುಡುಗಿಯೆದುರು ತನ್ನನ್ನು ತಾನು ತುಂಬಾ ನೊಂದವನಂತೆ, ಬದುಕಲ್ಲಿ ಭಾರೀ ಕಷ್ಟನಷ್ಟ ಅನುಭವಿಸಿದವನಂತೆ, ಕಳೆದುಕೊಳ್ಳಬಾರದ್ದನ್ನು ಕಳೆದುಕೊಂಡವನಂತೆ ಪೋಸು ಕೊಡುತ್ತಿದ್ದ. ಹೇಗೆಲ್ಲಾ ಸಾಧ್ಯವೋ ಹಾಗೆಲ್ಲಾ ಮರುಳು ಮಾಡಿ ಮೆಲ್ಲಗೆ ಟ್ರಾಕಿಗೆ ಬರುತ್ತಿದ್ದ ಜಾನಿ ತನಗೆ ಭಾರೀ ಹಣಕಾಸಿನ ಮುಗ್ಗಟ್ಟಿರುವಂತೆ ನಟಿಸುತ್ತಿದ್ದ. ಇವನ ಸುಳ್ಳ ಸಂಕಟಗಳಿಗೆ ಮರುಕ ಪಟ್ಟು ಅನೇಕ ಹುಡುಗೀರು ಒಂದಷ್ಟು ಕಾಸು ಹೊಂದಿಸಿ ಕೊಡಲಾರಂಭಿಸುತ್ತಿದ್ದರು. ಆದರೆ ಹಾಗೆ ಕೊಟ್ಟಾಗಲೆಲ್ಲಾ ಇವನ ಹುಸಿ ಸಂಕಟಗಳೂ ಅತಿಯಾಗಿ ಲಕ್ಷಗಳ ಲೆಕ್ಕದಲ್ಲಿ ಹಣ ಸುಲಿಯುತ್ತಿದ್ದ.
ಈ ವಂಚನೆ ಶುರುವಿಟ್ಟ ಆರಂಭದ ದಿನಗಳಲ್ಲಿ ಜಾನಿ ಹೆಚ್ಚಾಗಿ ತಮಿಳುನಾಡಿನ ಕಡೆಯ ಹುಡುಗೀರನ್ನೇ ಪಳಗಿಸಿಕೊಂಡು ವಂಚಿಸುತ್ತಿದ್ದ. ಅಲ್ಲಿ ಒಂದಷ್ಟು ಹುಡುಗೀರಿಗೆ ಕೈಯೆತ್ತಿದ ಬಳಿಕ ಈ ಆನ್ಲೈನ್ ವಂಚನೆಯ ಬಗ್ಗೆ ತುಸು ಗುಲ್ಲೆದ್ದಿತ್ತು. ಆಗ ಅಲರ್ಟ ಆದ ಜಾನಿಗೆ ತಗುಲಿಕೊಳ್ಳುವ ಭಯ ಆವರಿಸಿಕೊಂಡಿತ್ತು. ಆದರೆ ಪುಗಸಟ್ಟೆ ಸಿಕ್ಕ ಕಾಸಿನ ರುಚಿ ಸುಮ್ಮನೆ ಕೂರಲು ಬಿಡಬೇಕಲ್ಲ? ಆದುದರಿಂದಲೇ ಪಕ್ಕಾ ಕ್ರಿಮಿನಲ್ ಐಡಿಯಾ ಉಪಯೋಗಿಸಿ ತನ್ನ ತವರು ನೆಲವಾದ ಆಂಧ್ರಪ್ರದೇಶ ಸೀಮೆಯ ಹುಡುಗೀರಿಗೆ ಗಾಳ ಹಾಕಲಾರಂಭಿಸಿದ್ದ. ಅಲ್ಲೂ ಕೂಡಾ ಜಾನಿ ಹುಡುಗೀರನ್ನು ಸೆಳೆದು ಸುಲಿಯಲು ಉಪಯೋಗಿಸಿದ್ದು ತಮಿಳುನಾಡಿನ ಹಳೇ ತಂತ್ರವನ್ನೇ. ಹೇಗೂ ಹುಟ್ಟಿದ್ದು ಆಂದ್ರಪ್ರದೇಶದ ತೆನಾಲಿಯಲ್ಲಾಗಿದ್ದರಿಂದ ಲೀಲಾಜಾಲವಾಗಿ ತೆಲುಗು ಬರುತ್ತಿತ್ತಲ್ಲಾ? ಅದರ ಬಲದಿಂದಲೇ ಅದೆಷ್ಟೋ ಹುಡುಗೀರನ್ನು ಬಲಿ ಬೀಳಿಸಿದ್ದ. ಹಾಗೆ ಒಂದಷ್ಟು ಕಾಲ ಕಳೆಯುತ್ತಲೇ ಆಂಧ್ರಪ್ರದೇಶದಲ್ಲಿಯೂ ಕೂಡಾ ಈತ ತಗುಲಿಕೊಳ್ಳುವ ಭಯಕ್ಕೆ ಬಿದ್ದಿದ್ದ. ಆದರೆ ತಮಿಳುನಾಡು ಮತ್ತು ಆಂದ್ರಪ್ರದೇಶಗಳಲ್ಲಿ ಇವನಿಂದ ನೊಂದ ಯಾವ ಹೆಣ್ಮಕ್ಕಳೂ ಮರ್ಯಾದೆಗಂಜಿ ಪೊಲೀಸ್ ಠಾಣೆಗಳತ್ತ ಸುಳಿಯಲಿಲ್ಲ. ಈ ಹಲಾಲುಕೋರನ ಪಾಲಿಗೆ ಅದುವೇ ವರದಂತಾಗಿತ್ತು.
ಹಾಗೆ ತಮಿಳುನಾಡು ಮತ್ತು ಆಂದ್ರಪ್ರದೇಶದ ಮುಗ್ಧ ಹೆಣ್ಣುಮಕ್ಕಳೊಂದಿಗೆ ಚಿಲ್ಲಾಟವಾಡಿ ಕಾಸು ಕಿತ್ತ ಜಾನಿ ಪಕ್ಕಾ ಕ್ರಿಮಿನಲ್. ಒಂದೇ ಪ್ರದೇಶದಲ್ಲಿ ಪದೇ ಪದೇ ಕಸುಬು ಮಾಡುವುದು ಸೇಫಲ್ಲ ಎಂಬುದು ಆತನಿಗೆ ಗೊತ್ತಿತ್ತು. ಆದುದರಿಂದಲೇ ಆಂದ್ರಪ್ರದೇಶದಿಂದಲೂ ಕಾಲ್ಕಿತ್ತ. ಆದರೆ ಆತನಿಗೆ ಬೇರೆ ಆಪ್ಷನ್ನು ಇರಲಿಲ್ಲ. ಹಾಗೆ ತಬ್ಬಿಬ್ಬುಗೊಂಡವನ ಕಣ್ಣಿಗೆ ಬಿದ್ದದ್ದು ಕರ್ನಾಟಕ. ಇಲ್ಲಿನ ಕೋಲಾರ, ತುಮಕೂರು ಮುಂತಾದೆಡೆಗಳಲ್ಲಿ ತೆಲುಗೇ ಮಾತೃಭಾಷೆಯಾಗಿರುವ ಕುಟುಂಬಗಳಿದ್ದಾವೆ. ಈ ವಿಚಾರ ತಿಳಿದ ಐನಾತಿ ಜಾನಿ ಭಾರತ್ ಮ್ಯಾಟ್ರಿಮೊನಿಯಲ್ಲಿ ಮತ್ತೊಮ್ಮೆ ಹೆಸರು ಬದಲಿಸಿ ತಲಾಶು ಆರಂಭಿಸಿದ್ದ. ಬಳಿಕ ಕೋಲಾರ, ಹೊಸೂರು ಮತ್ತು ಚಿಕ್ಕಮಗಳೂರಿನ ಹುಡುಗೀರನ್ನು ಇದೇ ರೀತಿ ಸುಲಿದಿದ್ದ. ಅದೆಲ್ಲ ಮುಗಿಸಿಕೊಂಡ ಈತನಿಗೆ ಭಾರತ್ ಮ್ಯಾಟ್ರಿಮೊನಿಯಲ್ಲಿ ಪರಿಚಯವಾದವಳು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಹುಡುಗಿ!
ಈಕೆಯನ್ನು ಬಹುಬೇಗನೆ ಪಳಗಿಸಿಕೊಂಡಿದ್ದ ಜಾನಿ ಭೇಟಿಯಾಗಿದ್ದ. ಈ ಹುಡುಗಿಯ ಮನೆಯಲ್ಲಿ ಶ್ರೀಮಂತಿಕೆಯಿರೋದನ್ನು ಖಚಿತಪಡಿಸಿಕೊಂಡ ಆತ ಸರಿಯಾಗಿಯೇ ಕಾಸು ಕೀಳಲು ಸ್ಕೆಚ್ಚು ಹಾಕಿದ್ದ. ತಾನು ಸಾಚಾನಂತೆ ಪೋಸು ಕೊಡಲಾರಂಭಿಸಿದ ಜಾನಿ ಮದುವೆಯಾಗುವುದಾಗಿ ನಂಬಿಸಿದ್ದ. ತದನಂತರ ತನ್ನ ಕಷ್ಟ ಹೇಳಿಕೊಂಡು ಮೊದಲಿಗೆ ಆ ಯುವತಿಯಿಂದ ನಾಲ್ಕು ಲಕ್ಷ ಪಡೆದಿದ್ದ. ನಂತರ ಮತ್ತೊಮ್ಮೆ ಎರಡು ಲಕ್ಷ ರೂ. ಪಡೆದಿದ್ದ. ಹೊತ್ತಿಗಾಗಲೇ ಆ ಹುಡುಗಿ ಜಾನಿಯನ್ನು ವಿಪರೀತ ಹಚ್ಚಿಕೊಂಡಿದ್ದಳು. ಅದು ತಿಳಿಯುತ್ತಲೇ ಇನ್ನೂ ಎರಡು ಲಕ್ಷ ಕೊಟ್ಟರಷ್ಟೇ ಮದುವೆಯಾಗುತ್ತೇನೆ ಅಂತ ಬ್ಲ್ಯಾಕ್ಮೇಲ್ ಮಾಡಿದ್ದ. ಇವನ ವರ್ತನೆ ಕಂಡು ಯುವತಿ ಕಂಗಾಲಾಗಿ ಗ್ರಹಚಾರ ಬಿಡಿಸಿದ್ದಳು. ಪಕ್ಕಾ ಕೇಡಿಯಾದ ಜಾನಿ ಆಕೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದ. ಇದರಿಂದ ಮಾನಸಿಕವಾಗಿ ಕಂಗಾಲಾದ ಆ ಯುವತಿ ಮನೆಯವರಿಗೆ ವಿಷಯ ತಿಳಿಸಿದವಳೇ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ತೆರಳಿ ವಂಚಕ ಜಾನಿಯ ವಿರುದ್ಧ ದೂರು ಸಲ್ಲಿಸಿದ್ದಳು.
ಪೊಲೀಸರ ತಂಡ ಬಹು ಬೇಗನೆ ಚೆನ್ನೈನಲ್ಲಿದ್ದ ಜಾನಿಯ ಬುಡಕ್ಕೊದ್ದು ಎಳೆ ತಂದಿದ್ದರು. ಆರಂಭಿಕ ಹಂತದಲ್ಲಿಯೇ ಈತ ಬಾಯ್ಬಿಟ್ಟ ಸಂಗತಿಗಳನ್ನು ಕೇಳಿ ಖಾಕಿಗಳೇ ಕಂಗಾಲಾಗಿದ್ದರು. ಇದುವರೆಗೆ ಜಾನಿ ಕಡಿಮೆಯೆಂದರೂ ಇಪ್ಪತೈದರಿಂದ ಮೂವತ್ತು ಹುಡುಗಿಯರಿಗೆ ವಂಚಿಸಿದ್ದಾನೆ. ಅಚ್ಚರಿಯ ಸಂಗತಿಯೆಂದರೆ ಇವನ ಮಾತಿಗೆ ಮರುಳಾದ ಯುವತಿ ಸೇರಿದಂತೆ ಎಲ್ಲರೂ ವಿದ್ಯಾವಂತರೇ. ಆನ್ಲೈನ್ನಲ್ಲಿ ವರಾನ್ವೇಷಣೆಯಲ್ಲಿ ಬ್ಯುಸಿಯಾಗಿರುವ ಯುವತಿಯರೆಲ್ಲರಿಗೂ ಇದು ಎಚ್ಚರಿಕೆಯಂಥಾ ಪ್ರಕರಣ. ಇನ್ನಾದರೂ ಇಂಥಾ ಪ್ರಕರಣಗಳು ನಡೆಯದಿರಲಿ. ಮ್ಯಾಟ್ರಿಮೊನಿಯಲ್ ಸಂಸ್ಥೆಗಳಲ್ಲಿ ಸಕ್ರಿಯರಾಗೋ ಮುನ್ನ ಸಾವಿರ ಬಾರಿ ಯೋಚಿಸೋದೊಳಿತು.