ಬೆಂಗಳೂರಿನ ತುಂಬಾ ಹರಡಿಕೊಂಡಿರುವ ಬಹುತೇಕ ಪಾರ್ಲರ್ ಹಾಗೂ ಸ್ಪಾಗಳ (massage parlour) ಅಸಲೀ ರೂಪವೇ ಬೇರೆಯದ್ದಿದೆ. ಹೊರಗೆ ಸೌಂದರ್ಯ ಕಾಳಜಿಯ ರಂಗು ರಂಗಿನ ಬೋರ್ಡು, ಒಳಗೆ ಕಾಮದ ಕಥಕ್ಕಳಿ… ಇದು ಬೆಂಗಳೂರಿನ ತುಂಬಾ ಹಬ್ಬಿಕೊಂಡಿರುವ ಮಸಾಜ್ ಸೆಂಟರ್ ಅರ್ಥಾತ್ ಸ್ಪಾಗಳ ಅಸಲಿ ಅಂತರಾಳ. ಐಟಿ ಸಿಟಿಯ ನಿಯಾನ್ ದೀಪಗಳಾಚೆಗಿನ ಮಿಣುಕು ಕತ್ತಲಲ್ಲಿ ನಡೆಯುವ ವೇಶ್ಯಾ ದಂಧೆಯದ್ದೇ ಒಂದು ತೂಕವಾದರೆ, ಬೃಹತ್ ಮಹಲುಗಳಲ್ಲಿ ನಡೆಯುವ ಇಂಥಾ ಮಸಾಜ್ ಪಾರ್ಲರುಗಳಲ್ಲಿ ಚಾಲ್ತಿಯಲ್ಲಿರುವ ಸೆಕ್ಸ್ ರ್ಯಾಕೆಟ್ಟಿನದ್ದೇ ಮತ್ತೊಂದು ತೂಕ. ಇತ್ತೀಚೆಗಂತೂ ನಗರದ ತುಂಬಾ ಇಂಥಾ ಹೈಟೆಕ್ ವೇಶ್ಯಾ (sex racket) ಅಡ್ಡೆಗಳು ಎಗ್ಗಿಲ್ಲದೆ ದಂಧೆ ನಡೆಸುತ್ತಿವೆ. ಪಿಂಪ್ಗಳಂತೂ ಯಾವುದೇ ಭಯವಿಲ್ಲದೆ ಗಿರಾಕಿ ಹುಡುಕಿ ಕಾಸು ಪೀಕುವ ಕೆಲಸದಲ್ಲಿ ಫುಲ್ ಬ್ಯುಸಿ.
ಬೆಂಗಳೂರಿನ ಸಖಲ ಏರಿಯಾಗಳಲ್ಲಿಯೂ ಇಂಥಾ ಮಸಾಜ್ ಸೆಂಟರುಗಳು ತಲೆಯೆತ್ತಿವೆ. ಅದರಲ್ಲಿ ಬಹುತೇಕ ವೇಶ್ಯಾ ದಂಧೆಯ ಕಾರಸ್ಥಾನಗಳಾಗಿ ಬದಲಾಗಿವೆ. ಮರ್ಯಾದಸ್ಥರು ವಾಸಿಸುವ ಪ್ರದೇಶಗಳಲ್ಲಿ ಇಂಥಾ ಅಡ್ಡೆಗಳು ತಲೆಯೆತ್ತಿ ನೆಮ್ಮದಿಯಾಗಿ ಓಡಾಡಲೂ ಆಗದ ಪರಿಸ್ಥಿತಿ ಇದೆ. ಇಂಥಾ ಅಡ್ಡೆಗಳ ಸುತ್ತ ಪುಂಡ ಪೋಕರಿಗಳು ಎಣ್ಣೆ ಹೊಡೆದು ಓಲಾಡಿದರೂ, ಅಲ್ಲಿ ಬೇರೆ ದಂಧೆ ನಡೆಯುತ್ತಿದೆ ಅಂತ ಮೇಲು ನೋಟಕ್ಕೇ ಗೊತ್ತಾದರೂ ಪೊಲೀಸ್ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಏಕೆ ತೆಪ್ಪಗಿದ್ದಾರೆ ಅಂತ ನೋಡ ಹೋದರೆ, ಪೊಲೀಸ್ ಇಲಾಖೆಎಯ ವಿವಿಧ ವಿಭಾಗಗಳ ಪೊಲೀಸರೇ ಇಂಥಾ ದಂಧೆಗಳಿಂದ ಕಾಸು ಕಿತ್ತು ನೆರಳಾಗಿದ್ದಾರೆಂಬ ದುರಂತ ಸತ್ಯಗಳು ಹೊರ ಬೀಳುತ್ತವೆ.
ಕೆಲ ವರ್ಷಗಳ ಹಿಂದೆ ಪ್ರತಿಷ್ಟಿತ ಏರಿಯಾಗಳಿಗೆ ಮಾತ್ರ ಸೀಮಿತವಾಗಿದ್ದ ಇಂಥಾ ಬಾಡಿ ಮಸಾಜ್ ಸೆಂಟರ್ಗಳು ಈವತ್ತು ಗಲ್ಲಿ ಗಲ್ಲಿಗಳಲ್ಲಿಯೂ ಪಿತಗುಡಲಾರಂಭಿಸಿದೆ. ಹಾದಿ ಬಿಟ್ಟ ಹೈವಾನ್ಗಳ ಪಾಲಿಗಿದು ಅಕ್ಷರಶಃ ಲಾಭದಾಯಕ ದಂಧೆ. ಸದ್ಯ ಈ ದಂಧೆಯಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಸಕ್ರಿಯರಾಗಿದ್ದಾರಾದರೂ, ಇದರ ಡಾನ್ಗಳಂತಿರುವ ಹಳೇ ಖದೀಮರೇ ಇಂದಿಗೂ ಮೆರೆಯುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ತಲೆ ಎತ್ತಿರುವ ಬಹುತೇಕ ಮಸಾಜ್ ಸೆಂಟರುಗಳು ವೇಶ್ಯಾವಾಟಿಕೆಯ ಬಲದಿಂದಲೇ ಮೆರೆದಾಡುತ್ತಿವೆ. ಆದರೆ ಇಲ್ಲಿ ನಡೆಯುವ ಮಸಾಜ್ ಆಗಲಿ, ಇತರೇ ಸೌಂದರ್ಯವರ್ಧಕ ಚಿಕಿತ್ಸೆಗಳಾಗಲಿ ಯಾವ ರೀತಿಯಿಂದಲೂ ಸೇಫ್ ಅಲ್ಲ. ಸಾವಿರಾರು ರೂಪಾಯಿ ಸುರಿದು ಇಂಥಾ ಅಡ್ಡಾಗಳಿಗೆ ಎಡತಾಕಿ ಬರಬಾರದ ಕಾಯಿಲೆ ಅಂಟಿಸಿಕೊಂಡು ಹೇಳಿಕೊಳ್ಳಲಾರದೆ ಒದ್ದಾಡುವ ಅನೇಕರಿದ್ದಾರೆ. ಇಲ್ಲಿನ ‘ಕಾಮ ಚಿಕಿತ್ಸೆ’ ಅನುಭವಿಸಿ ಏಡ್ಸ್ನಂಥಾ ಮಹಾಮಾರಿ ಅಂಟಿಸಿಕೊಂಡು ಲೆಕ್ಕವಿಲ್ಲದಷ್ಟು ಮಂದಿ ಗೋಣು ಚೆಲ್ಲಿದ್ದಾರೆ.
ಕೆಲ ಬಾರಿ ಇಂಥಾ ಸ್ಪಾಗಳ ಅನಾಚಾರಗಳು ಗಿರಾಕಿಗಳಿಂದಲೇ ಹೊರಬೀಳುವುದೂ ಇದೆ. ಅದೇ ರೀತಿಯದ್ದೊಂದು ಪ್ರಕರಣ ಕೆಲ ತಿಂಗಳ ಹಿಂದೆ ನಡೆದಿತ್ತು. ಖಾಸಗಿ ಕಂಪೆನಿಯೊಂದರ ನೌಕರನೊಬ್ಬ ಈ ಸ್ಟೋರಿಯ ದುರಂತ ನಾಯಕ. ಈತ ಹೈಪ್ರೊಫೈಲ್ ಜನರಂತೆ ತೆವಲಿಗೆ ಬಿದ್ದು ದೊಮ್ಮಲೂರಿನ ಕುಖ್ಯಾತ ಮಸಾಜು ಸೆಂಟರ್ ಬ್ರಿಗೇಡ್ ಸ್ಪಾಗೆ ಎಂಟ್ರಿ ಕೊಟ್ಟಿದ್ದ. ಇದು ಮಸಾಜಿನ ಹೆಸರಲ್ಲಿ ತೊಗಲೋದ್ಯಮ ನಡೆಸುವ ಕುಖ್ಯಾತ ಅಡ್ಡೆ. ಇಂಥಾದ್ದರ ಒಳ ಹೋದವನನ್ನು ಅರೆಬೆತ್ತಲು ಮಲಗಿಸಿ ಎಣ್ಣೆ ನೀವಿದಾಕೆಯೇ ಕೆಡವಿಕೊಂಡಿದ್ದಳು.
ಈ ಆಸಾಮಿಯೂ ಯಾವ ಖಬರೂ ಇಲ್ಲದೆ ಸುಖ ಸಾಗರದಲ್ಲಿ ಮಿಂದೆದ್ದಿದ್ದ. ಹಾಗೆ ಬ್ರಿಗೇಡ್ ಸ್ಪಾದ ಟ್ರೀಟ್ಮೆಂಟ್ ಅನುಭವಿಸಿ ಅದೇ ಮತ್ತಲ್ಲಿ ಕೆಲಸಕ್ಕೆ ಹೋಗುತ್ತಿದ್ದೆವನಿಗೆ ಆಫೀಸಿನಲ್ಲಿಯೇ ಸಣ್ಣಗೆ ಜ್ವರ ಕಾಣಿಸಿಕೊಂಡಿತ್ತು. ವಾರಗಟ್ಟಲೆ ಟ್ರೀಟ್ಮೆಂಟ್ ತೆಗೆದುಕೊಂಡರೂ ಜ್ವರ ಮಾತ್ರ ಬಿಡಲಿಲ್ಲ. ಇದೇ ತಿಂಗಳಾರಭ್ಯ ಮುಂದುವರೆದು ಕಡೆಗೊಂದು ದಿನ ರಕ್ತ ಪರೀಕ್ಷೆ ನಡೆಸಿದರೆ ಮಹಾ ಶಾಕ್ ಕಾದಿತ್ತು. ಆ ರಿಪೋರ್ಟು ಹೆಚ್ಐವಿ ಪಾಸಿಟಿವ್ ಎಂಬುದನ್ನು ಸಾರಿ ಹೇಳುತ್ತಿತ್ತು. ಈ ಮಹಾಶಯನಿಗೆ ಇದು ಬ್ರಿಗೇಡ್ ಸ್ಪಾದ ಕೊಡುಗೆ ಎಂಬುದು ಪಕ್ಕಾ ಆದೇಟಿಗೆ ಪೊಲೀಸ್ ಕಮಿಷನರ್ಗೆ ಪತ್ರ ಬರೆದು ಈ ಸ್ಪಾದ ಅಸಲಿ ಕಥೆ ತೆರೆದಿಟ್ಟಿದ್ದ. ಆಯುಕ್ತರು ತಕ್ಷಣ ಈ ಕೇಸನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದರು.
ಹಾಗೆ ಸಿಸಿಬಿ ಪೊಲೀಸರು ರೇಡು ಬೀಳುತ್ತಲೇ ಬ್ರಿಗೇಡ್ ಸ್ಪಾದ ಅಕರಾಳ ವಿಕರಾಳ ರೂಪ ಜಾಹೀರಾಗಿತ್ತು. ಅಂದಹಾಗೆ ಈ ಸ್ಪಾಗೆ ಗಿರಾಕಿ ಹುಡುಕಿ ಕೊಡುವ ಕಸುಬು ಮಾಡುತ್ತಿದ್ದ ಝಕೌಲಾ ಹಾಗೂ ಸಮೀರ್ ಲಾಮಾ ಎಂಬಿಬ್ಬರು ಉತ್ತರಪ್ರದೇಶ ಮೂಲದ ಪಿಂಪ್ಗಳೂ ತಗುಲಿಕೊಂಡಿದ್ದರು. ಈವತ್ತು ಬೆಂಗಳೂರಿನ ಬಹುತೇಕ ಸ್ಪಾಗಳು ಮತ್ತು ಪಾರ್ಲರುಗಳು ಖಂಡಿತಾ ಸೇಫ್ ಅಲ್ಲ. ಗಂಡಸರ ಬಲಹೀನತೆಯನ್ನೇ ಬಳಸಿಕೊಂಡು ಚೆಂದದ ಹುಡುಗೀರನ್ನು ಬಿಟ್ಟು ಬಲೆಗೆ ಕೆಡವಿಕೊಳ್ಳುವ ಐನಾತಿ ದಂಧೆಯನ್ನೇ ಸ್ಪಾ ಮಾಲೀಕರು ನಡೆಸುತ್ತಿದ್ದಾರೆ. ಕೆಲವೊಮ್ಮೆ ಅಂಥಾ ಸ್ಪಾಗಳಲ್ಲಿ ಕೆಲಸ ಮಾಡುವವವರೇ ಅಕ್ಕಿಂಳಂತೆ ದಂಧೆ ನಡೆಸುತ್ತಾರೆ. ಯಾಕೋ ಪೊಲೀಸ್ ಇಲಾಖೆ ಇಂಥಾ ದಂಧೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕರಲ್ಲಿದೆ.