ಕೊರೋನಾ ಬಾಧೆ ಕನ್ನಡ ಚಿತ್ರರಂಗವನ್ನು ಅದ್ಯಾವ ಪರಿಯಾಗಿ ಹಣಿದು ಹಾಕಿದೆಯೆಂದರೆ, ಆ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿಯೇ ಅನ್ನ ಕಂಡುಕೊಂಡಿದ್ದ ಬಹುತೇಕ ಮಂದಿ ಪಡಿಪಾಟಲು ಪಟ್ಟಿದ್ದರು. ಅದೆಷ್ಟೋ ಮಂದಿಯ ಕನಸುಗಳು ಮಿಸುಕಾಡಲೂ ಸಾಧ್ಯವಾಗದೆ ಅಸುನೀಗಿದ್ದವು. ಅರ್ಧಂಬರ್ಧ ಚಿತ್ರೀಕರಣವಾಗಿದ್ದ ಚಿತ್ರಗಳು ಮುಂದುವರೆಯಲಾರದೆ ಮುಗ್ಗರಿಸಿದವು. ನಿಖರವಾಗಿ ಹೇಳಬೇಕೆಂದರೆ, ಕೊರೋನಾ ಎಂಬುದು ಜೀವದ ಜೊತೆಗೆ ಕನಸುಗಳನ್ನೂ ಕೂಡಾ ಕೊಂದು ಕೆಡವಿತ್ತು. ಇಂಥಾ ವಿಷಮ ವಾತಾವರಣದಲ್ಲಿಯೂ ಉಸಿರುಳಿಸಿಕೊಂಡ, ಸಾವರಸಿಕೊಂಡು ಮೇಲೆದ್ದು ನಿಂತ ಒಂದಷ್ಟು ಸಿನಿಮಾಗಳೀಗ ಬಿಡುಗಡೆಯ ಹಾದಿಯಲ್ಲಿವೆ. ಹಾಗೆ ಸಂದಿಗ್ಧ ವಾತಾವರಣದ ಎಲ್ಲ ಪ್ರಹಾರಗಳನ್ನೂ ದಕ್ಕಿಸಿಕೊಂಡು, ಮೇಲೆದ್ದು ನಿಂತು ಹ್ಞೂಂಕರಿಸಲು ಅಣಿಯಾಗಿರುವ ಚಿತ್ರ ‘ಮರ್ದಿನಿ’!
ಹೀಗೆ ಸಾಗಿ ಬಂದು ಇದೇ ಸೆಪ್ಟೆಂಬರ್ ಹದಿನಾರರಂದು ಬಿಡುಗಡೆಗೊಳ್ಳುತ್ತಿರುವ ಮರ್ದಿನಿ, ಕಿರಣ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಹೊಸಬರ ಆಗಮನವಾದರೆ, ಅದರೊಂದಿಗೆ ಹೊಸತನದ ಆಗಮನವೂ ಆಗುತ್ತದೆಂಬ ನಂಬಿಕೆ ಇದೆಯಲ್ಲಾ? ಅದನ್ನು ಮತ್ತೆ ನಿಜವಾಗಿಸುವಂತೆ ಕಿರಣ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಮರ್ದಿನಿ ಎಂಬ ಹೆಸರಿನಲ್ಲಿಯೇ ಒಂದು ರಗಡ್ ಫೀಲ್ ಇದೆ. ಅದುವೇ ಕಥೆಯ ಬಗ್ಗೆಯೂ ಒಂದಷ್ಟು ಕಲ್ಪನೆಗೆ ಭೂಮಿಕೆ ಒದಗಿಸಿಕೊಡುವಂತಿದೆ. ಆದರೆ, ಸಲೀಸಾಗಿ ಯಾವ ಕಲ್ಪನೆಗೂ ನಿಲುಕದಂಥಾ ಚೆಂದದ ಕಥೆ ಈ ಚಿತ್ರದಲ್ಲಿ ಅಡಕವಾಗಿದೆಯಂತೆ. ಅದು ಎಲ್ಲಾ ವರ್ಗಗಳ ಪ್ರೇಕ್ಷಕರನ್ನೂ ಖಂಡಿತವಾಗಿಯೂ ಸಂಪ್ರೀತಗೊಳಿಸುತ್ತದೆ ಎಂಬ ಗಾಢ ನಂಬಿಕೆ ನಿರ್ದೇಶಕರಲ್ಲಿದೆ.
ಶೀರ್ಷಿಕೆಗೆ ತಕ್ಕುದಾದಂತೆ, ಮಹಿಳಾ ಪ್ರಧಾನ ಕಥಾನಕವನ್ನೊಳಗೊಂಡಿರುವ ಚಿತ್ರ ಮರ್ದಿನಿ. ಸಕಲೇಶಪುರದ ಹುಡುಗಿ ರಿತನ್ಯಾ ಹೂವಣ್ಣ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಚಾಲೆಂಜಿಂಗ್ ಆದ, ಒಂದೊಳ್ಳೆ ಪಾತ್ರ ಸಿಕ್ಕ ಖುಷಿ ರಿತನ್ಯಾಗಿದೆ. ಇದೊಂದು ನಾಯಕಿಪ್ರಧಾನವಾದ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಹೆಣ್ಣಿನ ಮೇಲಾಗೋ ದೌರ್ಜನ್ಯದ ವಿರುದ್ಧ ತಿರುಗಿಬಿದ್ದು ಹೋರಾಡುವ ಹುಡುಗಿಯೊಬ್ಬಳ ರೋಚಕ ಕಥನ ಮರ್ದಿನಿಯದ್ದು. ಹಾಗಂತ, ಈ ಕಥೆಯನ್ನು ಸಿದ್ಧಸೂತ್ರಗಳ ಚೌಕಟ್ಟಿನಲ್ಲಿ ಅಂದಾಜಿಸಲು ಸಾಧ್ಯವಿಲ್ಲ. ಬಹುತೇಕ ಹೊಸಬರ ತಾರಾಗಣವನ್ನೇ ಹೊಂದಿರುವ ಮರ್ದಿನಿಯನ್ನು, ನಿರ್ದೇಶಕ ಕಿರಣ್ ಶೆಟ್ಟಿ ಹೊಸಾ ಬಗೆಯಲ್ಲಿಯೇ ರೂಪಿಸಿದ್ದಾರಂತೆ. ಈ ಮೂಲಕ ತನಗೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾದ ನೆಲೆ ಸಿಗಲಿದೆ ಎಂಬ ಭರವಸೆಯೂ ಅವರಲ್ಲಿದೆ.
ಈ ಚಿತ್ರವನ್ನು ಅಂಕಿತ್ ಫಿಲಂಸ್ ಬ್ಯಾನರಿನಡಿಯಲ್ಲಿ ಜಗದೀಶ್ ನಿರ್ಮಾಣ ಮಾಡಿದ್ದಾರೆ. ಜಗದೀಶ್ ಸಿನಿಮಾ ರಂಗದಲ್ಲಿ ಜಗ್ಗಿ ಅಂತಲೇ ಹೆಸರಾಗಿರುವವರು. ಕಿಚ್ಚಾ ಸುದೀಫ್ ಅಭಿಮಾನಿ ಸಂಘದ ರಾಜ್ಯ ಉಪಾಧ್ಯಕ್ಷರೂ ಆಗಿರುವ ಜಗ್ಗಿ, ಡಿಜಿಟಲ್ ಸ್ಟ್ಯಾಂಡಿ ಮೇಕರ್ ಆಗಿಯೂ ಹೆಸರುವಾಸಿಯಾಗಿದ್ದಾರೆ. ಹೀಗೆ ಸಿನಿಮಾ ವಾತಾವರಣದಲ್ಲಿ ಸಕ್ರಿಯರಾಗಿದ್ದ ಜಗ್ಗಿಗೆ ಕಿರಣ್ ಶೆಟ್ಟಿ ಪರಿಚಿತರು. ಜಗದೀಶ್ ಅವರ ಪಾಲಿಗೆ ತನ್ನ ಸುತ್ತ, ಯಾವುದೋ ಗಮ್ಯ ತಲುಪೋದಕ್ಕಾಗಿ, ಏನನ್ನೋ ಸಾಧಿಸೋದಕ್ಕಾಗಿ ಶ್ರಮ ವಹಿಸೋ ಹುಡುಗರಿಗೆಲ್ಲ ಅವಕಾಶ ಕಲ್ಪಿಸುವ ಮಹದಾಸೆಯಿತ್ತು. ಈ ಬಗ್ಗೆ ಕಿರಣ್ ಬಳಿಯೂ ಆಗಾಗ ಹೇಳಿಕೊಳ್ಳುತ್ತಿದ್ದರಂತೆ. ಅಂಥಾ ಮಹತ್ವಾಕಾಂಕ್ಷೆಯ ಭಾಗವಾಗಿಯೇ ಜಗದೀಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರರಂಗದ ಭಾಗವಾಗಿದ್ದ ಹೊಸಾ ಹುಡುಗರನ್ನೇ ತಾರಾಗಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
ಅಂದಹಾಗೆ, ನಿರ್ದೇಶಕ ಕಿರಣ್ ಶೆಟ್ಟಿ ಪಾಲಿಗಿದು ಎರಡನೇ ಚಿತ್ರ. ಈ ಹಿಂದೆ ಪ್ರಥಮ್ ನಾಯಕನಾಗಿ ನಟಿಸಿದ್ದ ದೇವ್ರಂಥಾ ಮನುಷ್ಯ ಚಿತ್ರವನ್ನು ಇದೇ ಕಿರಣ್ ನಿರ್ದೇಶನ ಮಾಡಿದ್ದರು. ಆದರೆ ಎರಡನೇ ಹೆಜ್ಜೆ ಅವರ ಪಾಲಿಗೆ ಅಕ್ಷರಶಃ ಸವಾಲಿನದ್ದಾಗಿತ್ತು. ಯಾಕೆಂದರೆ, ಕೊರೋನಾ ಕಾಲದಲ್ಲಿಯೇ ಚಿತ್ರೀಕರಣ ಮುಗಿಸಿಕೊಳ್ಳಬೇಕಾದ ಅನಿವಾಐತೆ ಎದುರಾಗಿತ್ತು. ಲಾಕ್ಡೌನ್ ಕೊಂಚ ಸಡಿಲವಾಗುತ್ತಲೇ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಆರಂಭಿಸಿದ್ದರಾದರೂ, ಅಲ್ಲಿನ ಲೊಕೇಶನ್ನುಗಳಲ್ಲಿ ಪರ್ಮಿಶನ್ ಪಡೆದುಕೊಳ್ಳೋದೇ ದೊಡ್ಡ ಸವಾಲಾಗಿತ್ತು. ಅಂಥಾ ಸಂದರ್ಭವನ್ನೆಲ್ಲ ಸಹ್ಯಗೊಳಿಸದ್ದವರು ಮ್ಯಾನೇಜರ್ ಮಧು. ಅವರು ಎಲ್ಲ ತೊಡಕುಗಳನ್ನೂ ಹಿಮ್ಮೆಟ್ಟಿಸಿ ನಿರಾಳವಾಗಿ ಚಿತ್ರೀಕರಣ ನಡೆಯುವಂತೆ ನೋಡಿಕೊಂಡಿದ್ದರಂತೆ. ಹೀಗೆ ಕಂಟಕವನ್ನೆಲ್ಲ ದಾಟಿ ಬಂದ ಮರ್ದಿನಿ ಬಿಡುಗಡೆಯ ಹಂತದಲ್ಲಿದೆ. ಇದೇ ಇಪ್ಪತೈದನೇ ತಾರೀಕಿನಂದಿ ಹಾಡೊಂದು ರಿಲೀಸ್ ಆಗಲಿದೆ. ಅದಾದ ನಂತರ ಸೆಪ್ಟೆಂಬರ್ ಹದಿನಾರರಂದು ಮರ್ದಿನಿ ನಿಮ್ಮ ಮುಂದೆ ಅವತರಿಸಲಿದೆ.