ದುನಿಯಾ ಸೂರಿ ನಿರ್ದೇಶನದ `ಕೆಂಡಸಂಪಿಗೆ’ ಚಿತ್ರದ ಮೂಲಕ ನಟಿಯಾಗಿ ಆಗಮಿಸಿದ್ದವರು ಮಾನ್ವಿತಾ. ಅದು ಪಕ್ಕಾ ಸೂರಿ ಫ್ಲೇವರಿನ ಚಿತ್ರ. ಚೆಂದದ ನಿರೂಪಣೆ, ಎಲ್ಲರಿಗೂ ತಾಕುವ ಕಥೆ ಮತ್ತು ಬಹುಕಾಲ ಮನಸಲ್ಲುಳಿಯುವ ಪಾತ್ರಗಳೊಂದಿಗೆ ಕೆಂಡಸಂಪಿಗೆ ಕಂಪು ಬೀರಿತ್ತು. `ಇಂತಿ ನಿನ್ನ ಪ್ರೀತಿಯ’ ಎಂಬ ನವಿರಾದ ಕಥನದ ನಂತರದಲ್ಲಿ ಹಳೇ ಪಾತ್ರ ಹಳೇ ಕಬುಣ ಎಂಬಂಥಾ ಜಾಡು ಹಿಡಿದಿದ್ದ ಸೂರಿ, ಕೆಂಡಸಂಪಿಗೆ ಮೂಲಕ ಮತ್ತೆ ಹಳೇ ಜಾಡು ಹಿಡಿದಿದ್ದರು. ಈ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿ, ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದ್ದಾಕೆ ಮಾನ್ವಿತಾ ಕಾಮತ್!
ಅದೇಕೋ, ಆ ನಂತರದಲ್ಲಿ ಹೇಳಿಕೊಳ್ಳುವಂಥಾ ಗೆಲುವು ಆಕೆಯ ಕೈ ಹಿಡಿದಿರಲಿಲ್ಲ. ಮಂಗಳೂರು ಸೀಮೆಯಲ್ಲಿ ಒಂದು ಕಾಲಕ್ಕೆ ರೇಡಿಯೋ ಜಾಕಿಯಾಗಿದ್ದ ಮಾನ್ವಿತಾಗೆ, ಮತ್ತದೇ ವೃತ್ತಿ ಗಟ್ಟಿ ಎಂಬಂಥಾ ಸ್ಥಿತಿಯೂ ನಿರ್ಮಾಣಗೊಂಡಿತ್ತು.Á ನಂತರದಲ್ಲಿ ಅದೇ ಸೂರಿ `ಟಗರು’ ಮೂಲಕ ಮತ್ತೆ ಮಿಂಚಿದ್ದರಲ್ಲಾ? ಆ ಸಿನಿಮಾದ ನಾಯಕಿಯಾಗಿ ಮಾನ್ವಿತಾಗೆ ಮತ್ತೊಂದು ಬ್ರೇಕ್ ಸಿಕ್ಕಿತ್ತು. ಆದರೆ, ಅಂಥಾದ್ದೊಂದು ಗೆಲುವಿನ ಬಳಿಕವೂ ಆಕೆಯ ವೃತ್ತಿ ಬದುಕು ಟೇಕಾಫ್ ಆಗಲೇ ಇಲ್ಲ. ಅದೇನೂ ದುರಾದೃಷ್ಟವೋ, ವೈಯಕ್ತಿಕ ಬದುಕಿನ ಸಮಸ್ಯೆಯೋ ಗೊತ್ತಿಲ್ಲ; ಮಾನ್ವಿತಾ ಈಗೊಂದಷ್ಟು ವರ್ಷಗಳಿಂದ ನೇಪಥ್ಯಕ್ಕೆ ಸರಿದು ಬಿಟ್ಟಿದ್ದರು. ಇದೀಗ ಸುದೀರ್ಘ ವನವಾಸದ ನಂತರ ಆಕೆ ಮತ್ತೊಂದು ಗೆಟಪ್ಪಿನ ಮೂಲಕ ಸದ್ದು ಮಾಡಿದ್ದಾರೆ!
ಲಕ್ಷಣವಾಗಿ ಸೀರೆಯುಟ್ಟು, ಕೈಲಿ ಪುಸ್ತಕ ಹಿಡಿದುಕೊಂಡು ಮಕ್ಕಳಿಗೆ ಪಾಠ ಮಾಡೋ ಗೆಟಪ್ಪಿನ ಮಾನ್ವಿತಾರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಈಕೆ ಏನಾದರೂ ಅವಕಾಶ ಸಿಗದೆ ಹೊಸಾ ವೃತ್ತಿ ಆರಂಭಿಸಿದರಾ ಅಂದರೆ, ಅದು ಹೊಸಾ ಸಿನಿಮಾವೊಂದಕ್ಕಾಗಿನ ಗೆಟಪ್ಪೆಂಬ ವಿಚಾರ ಜಾಹೀರಾಗುತ್ತದೆ. ಒಂದು ಮೂಲದ ಪ್ರಕಾರ ಮಾನ್ವಿತಾ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಬಾರಿ ಆಕೆಗೆ ಇದುವರೆಗಿನ ಅಷ್ಟೂ ಪಾತ್ರಗಳಿಗಿಂತ ಭಿನ್ನವಾದ ಪಾತ್ರವೇ ಸಿಕ್ಕಿದೆ. ಸದ್ಯಕ್ಕೆ ಈ ಫೋಟೋಗಳ ಸುತ್ತ ಊಹಾಪೋಹಗಳು ಚಾಲ್ತಿಯಲ್ಲಿವೆ. ಇಷ್ಟರಲ್ಲಿಯೇ ಆ ಸಿನಿಮಾ ಬಗೆಗಿನ ನಿಖರ ಮಾಹಿತಿಗಳು ಜಾಹೀರಾಗಲಿವೆ.