ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಮಾವು ಬೇವು’ (maavu bevu) ಚಿತ್ರ ಇದೇ ತಿಂಗಳ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಪ್ರಚಾರದ ಅಬ್ಬರಗಳಿಲ್ಲದೆ ತಾನೇತಾನಾಗಿ ಪ್ರೇಕ್ಷಕರ ಮನಸಿನಲ್ಲಿ ಪ್ರತಿಷ್ಟಾಪನೆಗೊಂಡಿರುವ ಈ ಸಿನಿಮಾ (movie) ಬಗ್ಗೆ ಗಾಂಧಿನಗರದಲ್ಲಿಯೇ ಬೆರಗು ಮೂಡಿಕೊಂಡಿದೆ. ಒಂದು ಕಡೆಯಲ್ಲಿ ಪ್ಯಾನಿಂಡಿಯಾ ಸಿನಿಮಾಗಳ ಜಪ ಜೋರಾಗಿರುವಾಗಲೇ, ಮತ್ತೊಂದು ದಿಕ್ಕಿನಿಂದ ಈ ಕಾಲಘಟ್ಟದ ತುರ್ತಿಗನುಗುಣವಾದ ಪ್ರಯತ್ನಗಳೂ ಆಗುತ್ತಿವೆ. ಅದು ಚಿತ್ರರಂಗವನ್ನು ಸಂಪನ್ನಗೊಳಿಸಬಲ್ಲ ಸಕಾರಾತ್ಮಕ ಚಲನೆ. ಈ ನಿಟ್ಟಿನಲ್ಲಿ ನೋಡಹೋದರೆ, (suchendra prasad) ಸುಚೇಂದ್ರ ಪ್ರಸಾದ್ `ಮಾವು ಬೇವು’ ಮೂಲಕ ಮಹತ್ವದ್ದೊಂದು ಹೆಜ್ಜೆಯಿಟ್ಟಿದ್ದಾರೆ. ವಾರದೊಪ್ಪೊತ್ತಿನಲ್ಲಿಯೇ ಆ ಭಿನ್ನ ಪ್ರಯತ್ನ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ!
ಒಂದು ಹುಮ್ಮಸ್ಸಿನ ಪ್ರವಾಹವೆದ್ದಿರುವಾಗ, ಅದರ ಜೊತೆ ಜೊತೆಯಾಗಿ ಸಾಗುವ ಜಾಣ ನಡೆಯನ್ನು ಅನೇಕರು ಅನುಸರಿಸುತ್ತಾರೆ. ಆದರೆ, ಪ್ರವಾಹಕ್ಕೆದುರಾಗಿ ಈಜುವ ಧೈರ್ಯ ಪ್ರದರ್ಶಿಸುವವರ ಸಂಖ್ಯೆ ಕಡಿಮೆ. ಅಂಥಾದ್ದೊಂದು ಧೈರ್ಯ ಇದ್ದರೂ ಬಂಡವಾಳ ಹೂಡಿ ಸಾಥ್ ಕೊಡಬಲ್ಲ ಸದಭಿರುಚಿಯ ನಿರ್ಮಾಪಕರ ಸಂಖ್ಯೆಯೂ ವಿರಳವಾಗಿದೆ. ಒಂದೊಳ್ಳೆ ಕಥೆ, ಬದುಕಿಗೆ ಹತ್ತಿರಾದ ಚಹರೆಗಳು, ಪ್ರತಿಭಾನ್ವಿತ ನಿರ್ದೇಶಕರು, ಅದಕ್ಕೊಪ್ಪುವ ತಾರಾಗಣ ಮತ್ತು ಅದೆಲ್ಲದರ ಮೇಲೆ ನಂಬಿಕೆಯಿಟ್ಟು ಕಾಸು ಹೂಡಿದ ನಿರ್ಮಾಪಕ ಎಸ್ ರಾಜಶೇಖರ್ ಅವರ ಸಾಥ್… ಇಷ್ಟೆಲ್ಲವೂ ಏಕಕಾಲದಲ್ಲಿಯೇ ಸಂಧಿಸಿದ ಪರಿಣಾಮವಾಗಿಯೇ ಮಾವು ಬೇವು ಎಂಬ ದೃಷ್ಯ ಕಾವ್ಯವೊಂದು ಜೀವ ಪಡೆಯಲು ಸಾಧ್ಯವಾಗಿದೆ.
ಒಂದು ಅಮೋಘವಾದ ಕನಸು ಸಾಕಾರಗೊಳ್ಳುವುದಕ್ಕೆ ಸಾಕಷ್ಟು ಸಮಯ ಹಿಡಿಯೋದಿದೆ. ಮಾವು ಬೇವು ವಿಚಾರದಲ್ಲಿಯೂ ಈ ಮಾತು ನೂರಕ್ಕೆ ನೂರರಷ್ಟು ನಿಜವಾದ ಸಂಗತಿ. ಯಾಕೆಂದರೆ, ಎಪ್ಪತ್ತು ಎಂಭತ್ತರ ದಶಕದಲ್ಲಿಯೇ ಕನ್ನಡದ ಮೇರು ಕವಿ ದೊಡ್ಡರಂಗೇಗೌಡರು, ಪ್ರಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಮತ್ತು ಜನಪ್ರಿಯ ಸಂಗೀತ ನಿರ್ದೇಶಕರುಗಳಾದ ಅಶ್ವತ್ಥ್-ವೈದಿ ಜೋಡಿ `ಮಾವು ಬೇವು’ ಎಂಬ ಗೀತ ಗುಚ್ಛವನ್ನು ಹೊರ ತಂದಿದ್ದರು. ಆ ಕಾಲಕ್ಕದು ಯಾವ ಪರಿಯಾಗಿ ಜನಪ್ರಿಯತೆ ಹೊಂದಿತ್ತೆಂದರೆ, ಎಲ್ಲರ ಮೈ ಮನಸುಗಳನ್ನೂ ಆವರಿಸಿಕೊಂಡಿತ್ತು. ಹಾಗೆ ನೋಡಿದರೆ, ಅದು ಸರ್ವ ಕಾಲಕ್ಕೂ ಸಲ್ಲುವ, ಈ ಕ್ಷಣ ಆಲಿಸಿದರೂ ಹಲವು ಭಾವಗಳನ್ನು ಸ್ಫುರಿಸುವ ಸಾರ್ವಕಾಲಿಕ ಗೀತ ಗುಚ್ಛ. ಅದಕ್ಕೆ ಸಿನಿಮಾ ರೂಪ ಕೊಡಬೇಕೆಂಬುದು ಅಶ್ವತ್ಥ್ ಮತ್ತು ತಂಡದ ಮಹಾ ಕನಸಾಗಿತ್ತು.
ಆ ಕಾಲದಲ್ಲಿಯೇ ಈ ಬಳಗದ ಕಡೆಯಿಂದ ಆ ದಿಸೆಯಲ್ಲಿ ಪ್ರಯತ್ನಗಳಾಗಿದ್ದವು. ಬಳಿಕ ಅವರಲ್ಲೊಬ್ಬೊಬ್ಬರೇ ಮರೆಯಾಗಿ, ದೊಡ್ಡರಂಗೇಗೌಡರೆಂಬ ಕವಿ ಜೀವ ಒಂಟಿತನ ಅನುಭವಿಸಿತ್ತು. ಜೊತೆಗಾರರು ಎದ್ದು ನಡೆದ ನಂತರವೂ, ಆ ಜೀವಗಳ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಸರ್ವ ರೀತಿಯಲ್ಲಿಯೂ ಪ್ರಯತ್ನಿಸಿದ್ದರು. ಈಗ್ಗೆ ಹತ್ತು ವರ್ಷಗಳ ಹಿಂದೆ ಖುದ್ದು ಸುಚೇಂದ್ರ ಪ್ರಸಾದ್ರನ್ನೂ ಆ ಪ್ರಯತ್ನ ತಾಕಿತ್ತು. ಆ ಕ್ಷಣದಿಂದಲೇ ಅವರ ಮನಸಲ್ಲೊಂದು ಗುಂಗೀಹುಳ ಕೆಲಸ ಶುರುವಿಟ್ಟುಕೊಂಡಿತ್ತು. ಬಳಿಕ ವರ್ಷಗಳ ಹಿಂದೆ ಗಂಭೀರವಾಗಿ ಅಖಾಡಕ್ಕಿಳಿದಿದ್ದ ಸುಚೇಂದ್ರಪ್ರಸಾದ್, ದೊಡ್ಡರಂಗೇಗೌಡರ ಮಾರ್ಗದರ್ಶನದೊಂದಿಗೆ ಮಾವು ಬೇವು ಗೀತ ಗುಚ್ಛಕ್ಕ ದೃಷ್ಯ ರೂಪ ನೀಡಲು ನಿರ್ಣಾಯಕವಾಗಿ ಪ್ರಯತ್ನಿಸಿದ್ದರು. ಅದರ ಫಲವಾಗಿಯೇ ಇದೀಗ ಮಾವು ಬೇವು ಪ್ರೇಕ್ಷಕರನ್ನು ಮುಖಾಮುಖಿಯಾಗಲು ಸನ್ನದ್ಧವಾಗಿದೆ!
ಯಾವುದೋ ಮಾಯಾ ಜಿಂಕೆಯ ಬೆಂಬತ್ತಿ ಬದುಕುವವರೇ ಹೆಚ್ಚಾಗಿರುವ ಕಾಲಮಾನವಿದು. ಇಂಥಾ ಘಳಿಗೆಯಲ್ಲಿ ಖಾಸಗೀ ಬದುಕಿನ ಗೋಜಲುಗಳಿಂದ ಬಹುತೇಕರು ಬಸವಳಿದಿದ್ದಾರೆ. ಅಂಥಾ ಸಿಕ್ಕುಗಳನ್ನು ಬಿಡಿಸುವ ಪ್ರಯತ್ನ, ವಿನೂತನ ಯತ್ನ ಈ ಚಿತ್ರದಲ್ಲಿದೆ. ಸಾಮಾನ್ಯವಾಗಿ, ಯಾವುದೇ ಸಿನಿಮಾಗಳಲ್ಲಿ ಕಥೆ ಮತ್ತು ಸನ್ನಿವೇಶಗಳಿಗೆ ತಕ್ಕುದಾಗಿ ಹಾಡು ಸೃಷ್ಟಿಸೋದು ಮಾಮೂಲು. ಆದರೆ, ಜನಪ್ರಿಯ ಹಾಡುಗಳಿಗಾಗಿಯೇ ಕಥೆಯೊಂದು ಸಿದ್ಧಗೊಂಡ ಅಪರೂಪದ ವಿದ್ಯಮಾನಕ್ಕೆ ಮಾವು ಬೇವು ಸಾಕ್ಷಿಯಾಗಿದೆ. ಎಲ್ಲರ ಬದುಕಿಗೂ ಹತ್ತಿರಾಗುತ್ತಲೇ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಕಾಡುವ ಗುಣಗಳಿಂದ ಮಾವು ಬೇವು ಸಮೃದ್ಧವಾಗಿದೆ. ಅದರ ಅಸಲೀ ಸ್ವಾದ ಏನೆಂಬುದು ಇದೇ ಇಪ್ಪತ್ತೊಂದರಂದು ಪ್ರೇಕ್ಷಕರ ಅರಿವಿಗೆ ಬರಲಿದೆ.
ಮಾವು ಬೇವು ಕನ್ನಡ ಚಿತ್ರರಂಗದಲ್ಲಿ ಹೊಸಾ ಮೈಲಿಗಲ್ಲಾಗುವಂಥಾ ಗುಣ ಲಕ್ಷಣಗಳನ್ನು ಹೊಂದಿರುವ ಚಿತ್ರ. ಇದರ ಬಗ್ಗೆ ಪ್ರೇಕ್ಷಕ ವಲಯದಲ್ಲೊಂದು ಅವರ್ಣನೀಯ ಸೆಳೆತ ಮೂಡಿಕೊಂಡಿದೆ. ಅದುವೇ ಅಮೋಘ ಗೆಲುವಾಗಿ ರೂಪಾಂತರಗೊಳ್ಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ಮೂಲಕ ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿರುವ ಸುಚೇಂದ್ರ ಪ್ರಸಾದ್ರ ಪ್ರತಿಭೆಯ ಮತ್ತೊಂದು ಮಗ್ಗುಲಿನ ಅನಾವರಣವೂ ಆಗಲಿದೆ. ಅಂದಹಾಗೆ, ಹಿರಿಯ ನಟ ಶ್ರೀನಿವಾಸ ಮೂರ್ತಿ, ಸುಂದರಶ್ರೀ, ನೀನಾಸಂ ಸಂದೀಪ್, ಚೈತ್ರ ಎಚ್.ಜಿ, ಡ್ಯಾನಿ ಕುಟ್ಟಪ್ಪ, ಸುಪ್ರಿಯಾ ಎಸ್ ರಾವ್, ರಂಜಿತಾ ಎಚ್, ಸಿತಾರಾ, ಚಕ್ರವರ್ತಿ ದಾವಣಗೆರೆ, ರಂಜನ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.