ತಂದೆ, ತಾಯಿ, ಅಣ್ಣ ತಮ್ಮ, ಬಂಧು ಬಳಗ ಸೇರಿದಂತೆ ರಕ್ತ ಸಂಬಂಧಿಗಳು ಯಾವತ್ತಿದ್ದರೂ ಆಪ್ತ ಭಾವ ಮೂಡಿಸುತ್ತಾರೆ. ಈ ಜಗತ್ತೆಂಬ ಸಾವಿರ ಜೀವಗಳ ಸಂತೆಯಲ್ಲಿ ನಮ್ಮವರೆಂಬ ಬೆಚ್ಚಗಿನ ಭಾವ ಮೂಡಿಸೋ ಬಂಧಗಳು ಇವೇ. ಇದರಾಚೆಗೆ ನಮ್ಮನ್ನು ರಕ್ತ ಸಂಬಂಧಕ್ಕಿಂತಲೂ ಹೆಚ್ಚಾಗಿ ಹಬ್ಬಿಕೊಳ್ಳೋದು ಸ್ನೇಹ. ಒಡ ಹುಟ್ಟಿದವರು, ಹೆತ್ತವರ ಬಳಿಯೇ ಹೇಳಿಕೊಳ್ಳಲಾರದ ಸಂಗತಿಗಳನ್ನು ನಾವೆಲ್ಲ ಸ್ನೇಹಿತರ ಬಳಿ ಶೇರ್ ಮಾಡಿಕೊಳ್ಳುತ್ತೇವೆ. ಸಣ್ಣಗೊಂದು ಬೇಸರವಾದರೂ, ಮನಸು ಅಂಶಾಂತಿಗೀಡಾದರೂ ನಮಗೆಲ್ಲ ಸ್ನೇಹಿತರ ಹೆಗಲಿಗಾತುಕೊಂಡು ಎಲ್ಲವನ್ನೂ ಹೇಳಿಕೊಂಡರೇನೇ ಸಮಾಧಾನ.
ಈ ಕಾರಣದಿಂದಲೇ ಇಂದಿಗೂ ಸ್ನೇಹಕ್ಕೊಂದು ಪಾವಿತ್ರ್ಯ ಉಳಿದುಕೊಂಡಿದೆ. ನಮ್ಮ ದೇಶದಲ್ಲಿಯಂತೂ ಅದರೊಂದಿಗೆ ಭಾವುಕತೆಯೂ ಬೆರೆತುಕೊಂಡು ಸ್ನೇಹದ ಬಂಧ ಮತ್ತಷ್ಟು ಗಟ್ಟಿಯಾಗಿಯೇ ಬೆಸೆದುಕೊಂಡಿದೆ. ಹಾಗಾದ್ರೆ ಈ ಸ್ನೇಹ ಅನ್ನೋದು ನಮ್ಮ ಭಾವುಕತೆಯ ದೆಸೆಯಿಂದಲೇ ಇಷ್ಟೊಂದು ಆಪ್ಯಾಯವಾಗಿ ಕಾಣುತ್ತಾ ಅಥವಾ ಅದರ ಹಿಂದೇನಾದರೂ ಸೈನ್ಸ್ ಇದೆಯಾ ಅನ್ನೋ ಪ್ರಶ್ನೆ ಕೆಲವರನ್ನಾದ್ರೂ ಕಾಡಿರಬಹುದು. ಈ ಬಗ್ಗೆ ಮಾಡಿರೋ ಅಧ್ಯಯನವೊಂದು ತೀರಾ ಆಘಾತಕರ ವಿಚಾರವೊಂದನ್ನ ಬಯಲು ಮಾಡಿದೆ.
ಹಾರ್ವರ್ಡ್ ವಿಶ್ವ ವಿದ್ಯಾಲಯ ಸ್ನೇಹದ ಬಗ್ಗೆ ಒಂದು ಅಧ್ಯಯನ ನಡೆಸಿದೆ. ಅದರಲ್ಲಿ ಸ್ನೇಹಿತರೇ ಇಲ್ಲದೇ ಹೋದರೆ ಎಂತೆಂಥಾ ಅನಾಹುತಗಳಾಗಬಹುದೆಂಬುದರ ಬಗ್ಗೆ ಆಘಾತಕರ ಅಂಶಗಳನ್ನು ಹೊರ ಹಾಕಿದೆ. ಒಂದು ವೇಳೆ ಸ್ನೇಹಿತರನ್ನೇ ಹೊಂದಿರದೇ ಹೋದರೆ ಅದು ಮನುಷ್ಯನ ದೇಹದ ಮೇಲೆ ಧೂಮಪಾನ ಬೀರುವಂಥಾದ್ದೇ ಪರಿಣಾಮವನ್ನ ಉಂಟು ಮಾಡುತ್ತದೆಯಂತೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟಿ ಮಾರಣಾಂತಿಕ ಅನಾರೋಗ್ಯಕ್ಕೀಡಾಗಿ ಸಾಯೋ ಸಂದರ್ಭಗಳೂ ಬರಬಹುದಂತೆ.
ಈ ಅಂಶವೇ ಸ್ನೇಹ ಅನ್ನೋದು ಪ್ರತಿಯೊಬ್ಬರ ಬದುಕಿಗೂ ಹೇಗೆ ಮಹತ್ವದ್ದು ಅನ್ನೋದನ್ನ ಸಾರಿ ಹೇಳುವಂತಿದೆ. ಆ ಅಧ್ಯಯನದಲ್ಲಿ ನಿಜಕ್ಕೂ ಸತ್ಯ ಅಡಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಸಮಸ್ಯೆಗಳು ಬರುತ್ತವೆ. ಅದರಲ್ಲಿ ಕೆಲವು ಯಾರ ಬಳಿಯಾದರೂ ಹೇಳಿಕೊಂಡರೂ ನಿರಾಳವಾಗುತ್ತೆ. ಹಾಗಂತ ಯಾರ್ಯಾರ ಬಳಿಯೂ ಹೇಳಿಕೊಳ್ಳಲಾಗೋದಿಲ್ಲ. ಅದಕ್ಕೆ ಸ್ನೇಹಿತರೇ ಬೇಕು. ಒಂದು ಪಕ್ಷ ಸ್ನೇಹಿತರೇ ಇಲ್ಲದೆ ಹೋದರೆ ಯಾರ ಬಳಿಗೂ ಹೇಳಿಕೊಳ್ಳದೆ ಎಲ್ಲ ಬಾಧೆಗಳನ್ನೂ ಒಳಗೇ ಇಟ್ಟುಕೊಂಡು ಕೊರಗಬೇಕಾಗುತ್ತೆ. ಅದುವೇ ನಾನಾ ಅನಾರೋಗ್ಯಕ್ಕೂ ಈಡುಮಾಡುತ್ತೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಎಲ್ಲ ಸ್ನೇಹಿತರ ಬಳಿಯೂ ಹೇಳಿಕೊಳ್ಳಲಾಗೋದಿಲ್ಲ. ಯಾಕಂದ್ರೆ ಕೆಲವೊಮ್ಮೆ ಸ್ನೇಹಿತರ ರೂಪದಲ್ಲಿ ವಿಷ ಸರ್ಪಗಳೂ ಇರುತ್ತವೆ!