ಚಿತ್ರರಂಗದಲ್ಲಿ ಹಣಕಾಸಿಗೆ ಸಂಬಂಧಿಸಿದಂಥಾ ರಂಕಲುಗಳು ಸಂಭವಿಸೋದು ಮಾಮೂಲು. ಅದಕ್ಕೆ ಭಾಷೆಯ ಗಡಿಗಳ ಹಂಗಿಲ್ಲ. ಎಂತೆಂಥಾ ಕ್ರಿಯಾಶೀಲರೂ ಕೂಡಾ ಇಂಥಾ ಹಣಕಾಸಿನ ಲಫಡಾಗಳಲ್ಲಿ ತಗುಲಿಕೊಂಡು, ಹೆಸರು ಕೆಡಿಸಿಕೊಂಡಿದ್ದಿದೆ. ಇದೀಗ ಆ ಸಾಲಿನಲ್ಲಿ ಒಂದಷ್ಟು ವಿವಾದ ಹುಟ್ಟುಹಾಕುವ ಸರದಿ ತಮಿಳಿನಲ್ಲಿ ನಿರ್ದೇಶಕನಾಗಿ ಪ್ರಖ್ಯಾತಿ ಪಡೆದುಕೊಂಡಿರುವ ಲಿಂಗುಸ್ವಾಮಿ ಅಲಿಯಾಸ್ ನಮ್ಮಾಳ್ವರ್ ಲಿಂಗುಸ್ವಾಮಿ ಅವರದ್ದು. ಸಿನಿಮಾ ಒಂದರ ನಿರ್ಮಾಣಕ್ಕೆಂದು ೧.೩ ಕೋಟಿ ಲೋನ್ ಪಡೆದು ಕೈಯೆತ್ತಿದ್ದ ಲಿಂಗುಸ್ವಾಮಿ ವಿರುದ್ಧ ಚೆಕ್ ಬೌನ್ಸ್ ಕೇಸು ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್ ಹತ್ತು ಸಾವಿರ ದಂಡ ಪಾವತಿ ಅಥವಾ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ತಾಕೀತು ಮಾಡಿತ್ತು. ಕಡೆಗೂ ಲಿಂಗುಸ್ವಾಮಿ ಹತ್ತು ಸಾವಿರ ಫೈನ್ ಕಟ್ಟಿ ಜೈಲು ವಾಸದಿಂದ ತಪ್ಪಿಸಿಕೊಂಡಿದ್ದಾರೆ.
ಲಿಂಗುಸ್ವಾಮಿ ಕಾರ್ತಿ ಮತ್ತು ಸಮಂತಾ ನಟನೆಯ ಎನ್ನಿ ಏಜು ನಾಲ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ತಿರುಪತಿ ಬ್ರದರ್ಸ್ ಎಂಬ ಬ್ಯಾನರಿನ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದ ಲಿಂಗುಸ್ವಾಮಿ, ಅದಕ್ಕಾಗಿ ಪಿವಿಪಿ ಕ್ಯಾಪಿಟಲ್ಸ್ ಎಂಬ ಫೈನಾನ್ಸ್ ಕಂಪೆನಿಯಿಂದ ೧.೩ ಕೋಟಿ ಸಾಲ ತೆಗೆದುಕೊಂಡಿದ್ದರು. ಆದರೆ ಸಾಲದ ಕಂತುಗಳನ್ನು ಸರಿಯಾಗಿ ಕಟ್ಟಿರಲಿಲ್ಲ. ಈ ಬಗ್ಗೆ ಫೈನಾನ್ಸ್ ಸಂಸ್ಥೆಯವರು ಎಚ್ಚರಿಕೆ ರವಾನಿಸಿದರೂ ಕೇರು ಮಾಡದೆ ಚಿತ್ರೀಕರಣದಲ್ಲಿ ಮಗ್ನರಾಗಿದ್ದರು.
ಇದರಿಂದ ರೊಚ್ಚಿಗೆದ್ದ ಕಂಪೆನಿಯ ಅಧಿಕಾರಿಗಳು ತಿರುಪತಿ ಬ್ರದರ್ಸ್ ಪ್ರೊಡಕ್ಷನ್ ಹೌಸ್ ವಿರುದ್ಧ ಸರಿಯಾದ್ದೊಂದು ಕೇಸು ದಾಖಲಿಸಿದ್ದರು. ಈ ಸಂಬಂಧವಾಗಿ ಮದ್ರಾಸ್ ಹೈಕೋರ್ಟಿನಲ್ಲಿ ವಿಸ್ತೃತವಾದ ವಿಚಾರಣೆಯೂ ನಡೆದಿತ್ತು. ಹೀಗೆ ಎಲ್ಲವನ್ನೂ ಪರಾಮರ್ಶೆ ನಡೆಸಿದ್ದ ನ್ಯಾಯಪೀಠ, ಪ್ರೊಡಕ್ಷನ್ನು ಹೌಸ್ ಸಾಲ ಪಡೆದಿದ್ದ ೧.೩ ಕೋಟಿ ಮೊತ್ತವನ್ನು ಕೂಡಲೇ ಪಾವತಿಸುವಂತೆ ತಾಕೀತು ಮಾಡಿತ್ತು. ಬೇರೆ ನಿರ್ವಾಹವಿಲ್ಲದೆ ಲಿಂಗುಸ್ವಾಮಿ ೧.೩ ಕೋಟಿ ರೂಪಾಯಿಗಳ ಚೆಕ್ ಅನ್ನು ಫೈನಾನ್ಸ್ ಕಂಪೆನಿಗೆ ನೀಡಿದ್ದರು. ಕೆಲವೇ ದಿನಮಗಳಲ್ಲಿ ಅಲ್ಲಿಯೂ ಮತ್ತೊಂದು ಅನಾಹುತ ಸಂಭವಿಸಿತ್ತು.
ಫೈನಾನ್ಸ್ ಕಂಪೆನಿ ನಿಗಧಿತ ದಿನದಂದು ಹಣ ಪಡೆಯಲು ಮುಂದಾದಾಗ ಚೆಕ್ ಬೌನ್ಸ್ ಆಗಿತ್ತು. ತಿರುಪತಿ ಬ್ರದಸ ಖಾತೆಯಲ್ಲಿ ಅಷ್ಟೊಂದು ಹಣವೇ ಇರಲಿಲ್ಲ. ಇದೊಂದು ರೀತಿಯಲ್ಲಿ ಕೋರ್ಟಿಗೆ ಅವ ಮರ್ಯಾದೆ ತೋರಿಸಿದಂಥಾ ಘಟನೆ. ಯಾವಾಗ ಲಿಂಗುಸ್ವಾಮಿ ಚೆಕ್ ಕೊಟ್ಟು ಯಾಮಾರಿಸಿದ್ದಾರೆಂದು ಖಾತರಿಯಾಯ್ತೋ, ಆ ಕ್ಷಣವೇ ಆ ಫೈನಾನ್ಸ್ ಸಂಸ್ಥೆ ಲಿಂಗು ಸ್ವಾಮಿ ವಿರುದ್ಧ ಚೆಕ್ ಬೌನ್ಸ್ ಕೇಸು ದಾಖಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟು ಇದೊಂದು ಫ್ರಾಡ್ ಕೇಸೆಂಬುದನ್ನು ಮನಗಂಡು ನಿರ್ದಾಕ್ಷಿಣ್ಯವಾಗಿ ಶಿಕ್ಷೆ ಪ್ರಕಟಿಸಿದೆ. ಕೊಂಚ ಯಾಮಾರಿದ್ದರೂ ಲಿಂಗುಸ್ವಾಮಿ ತನ್ನ ಸಹೋದರನ ಸಮೇತ ಜೈಲುಪಾಲಾಗಬೇಕಾಗುತ್ತಿತ್ತು. ಸದ್ಯ ಆತ ಹತ್ತು ಸಾವಿ ಫೈನು ಕಟ್ಟಿ ಪಾರಾಗಿದ್ದಾರೆ. ಕೆಲವೇ ದಿನಗಳಲ್ಲಿ ಕೋಟಿ ಮೊತ್ತವನ್ನು ವಾಪಾಸು ಮಾಡದಿದ್ದರೆ ಜೈಲು ಪಾಲಾಗೋದು ಖಾಯಂ!