ಮಂಗಳೂರು ಮೂಲದ ಹುಡುಗಿಯರು ಈಗಾಗಲೇ ನಾನಾ ಭಾಷೆಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ ಮತ್ತು ಇತ್ತೀಚಿನ ತಲೆಮಾರಿನ ಪೂಜಾ ಹೆಗ್ಡೆಯ ತನಕ ಆ ಪಟ್ಟಿ ಮುಂದುವರೆಯುತ್ತದೆ. ಆ ಸಾಲಿಗೆ ಬಹು ಹಿಂದೆಯೇ ಸೇರ್ಪಡೆಯಾಗಿರೋ ಹೊಸಾ ಹುಡುಗಿ ಕೃತಿ ಶೆಟ್ಟಿ. ಕೆಲವೊಮ್ಮೆ ಕೆಲ ನಟಿಯರು ಅದೇನೇ ಸರ್ಕಸ್ಸು ನಡೆಸಿದರೂ ಯಾವುದೇ ಭಾಷೆಗಳಲ್ಲಿಯೂ ಬರಖತ್ತಾಗೋದಿಲ್ಲ. ಮತ್ತೆ ಕೆಲ ನಟಿಯರಿಗೆ ಲಕ್ಕೆಂಬುದು ಮೊದಲ ಹೆಜ್ಜೆಯಿಂದಲೇ ಬಲವಾಗಿ ಕುದುರಿಕೊಳ್ಳುತ್ತೆ. ಅದಕ್ಕೆ ತಕ್ಕುದಾದ ಪ್ರತಿಭೆ ಇದ್ದರಂತೂ ಯಶಸ್ಸಿನ ನಾಗಾಲೋಟವನ್ನು ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಾಗುವುದಿಲ್ಲ. ಆ ಸಾಲಿಗೆ ಸೇರಿಕೊಳ್ಳುವಾಕೆ ಕೃತಿ ಶೆಟ್ಟಿ. ಈಗಾಗಲೇ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ದೊಡ್ಡ ಹೆಸರು ಮಾಡಿರುವ ಕೃತಿ, ಇದೀಗ ಸೂರ್ಯನಿಗೆ ಜೋಡಿಯಾಗಿ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದಾಳೆ.
ಸೂರ್ಯನ ಹೊಸಾ ಚಿತ್ರದ ಬಗ್ಗೆ ತಮಿಳು ಚಿತ್ರ ಪ್ರೇಮಿಗಳ ನಡುವೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಆ ಚಿತ್ರವನ್ನು ಸೂರ್ಯ ೪೧ ಎಂದೇ ಈವರೆಗೂ ಗುರುತಿಸಲಾಗುತ್ತಿತ್ತು. ಕಡೆಗೂ ಈಗ ಅದಕ್ಕೆ ವನಂಗಾನ್ ಎಂಬ ನಾಮಕರಣ ಮಾಡಲಾಗಿದೆ. ಖ್ಯಾತ ನಿರ್ದೇಶಕ ಬಾಲಾ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾಕ್ಕೆ ಸರ್ವ ರೀತಿಯಿಂದಲೂ ತಯಾರಿ ನಡೆಯುತ್ತಿದೆ. ಸೂರ್ಯನ ಸಿನಿಮಾವೊಂದು ಘೋಶಣೆಯಾದಾಗ ಪ್ರಧಾನವಾಗಿ ನಾಯಕಿ ಯಾರಾಗುತ್ತಾರೆಂಬುದರ ಸುತ್ತಲೂ ಒಂದಷ್ಟು ಊಹಾಪೋಹಗಳು ಹರಿದಾಡುತ್ತವೆ. ಈ ದಿಸೆಯಲ್ಲಿ ಒಂದಷ್ಟು ನಾಯಕಿಯರ ಹೆಸರುಗಳು ಹರಿದಾಡಿ ಕಡೆಗೂ ಕೃತಿ ಶೆಟ್ಟಿಯ ಹೆಸರು ನಿಕ್ಕಿಯಾಗಿದೆ.
ಸೂರ್ಯ ಇಲ್ಲಿ ಎರಡು ಶೇಡ್ಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿಗೂ ಕೂಡಾ ತಾಜಾತನ ಹೊಂದಿರುವ, ಅಭಿನಯಕ್ಕೆ ಅವಕಾಶವಿರುವ ಮಹತ್ವದ ಪಾತ್ರವೇ ಸಿಕ್ಕಿದೆ. ಇಂಥಾ ಪಾತ್ರದ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟು ತೆಲುಗಿನಂತೆಯೇ ನಾಯಕಿಯಾಗಿ ಮೆರೆಯುವ ಮಹಾ ಕನಸು ಈ ಹುಡುಗಿಯಲ್ಲಿದೆ. ನಿರ್ದೇಶಕ ಬಾಲಶಾ ಸಿನಿಮಾಗಳಲ್ಲಿ ನಟಿಸಬೇಕೆಂಬುದು ಕೃತಿಯ ಕನಸಾಗಿತ್ತಂತೆ. ಇದೀಗ ಆಕೆಯ ಇಷ್ಟದ ನಟ ಸೂರ್ಯನೊಂದಿಗೆ ನಟಿಸುವ ಖುಷಿಯೂ ಕೃತಿಯ ಕೈ ಹಿಡಿದಿದೆ. ಇನ್ನೇನು ಸದ್ಯದಲ್ಲಿಯೇ ಈ ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಲಿದೆ.
ಕೃತಿ ಶೆಟ್ಟಿ ಎಂಬ ಹೆಸರು ನಕಿವಿ ಸೋಕಿದಾಕ್ಷಣ ತೆಲುಗಿನ ಸೂಪರ್ ಹಿಟ್ ಚಿತ್ರ ಉಪ್ಪೇನಾವನ್ನು ಸಿನಿಪ್ರಿಯರು ನೆನಪು ಮಾಡಿಕೊಳ್ಳುತ್ತಾರೆ. ಮೂಲತಃ ಮಂಗಳೂರಿನ ಕೃತಿ ಶೆಟ್ಟಿ ವರ್ಷಾಂತರಗಳ ಹಿಂದೆ ಹಿಂದಿ ಸಿನಿಮಾದಲ್ಲೊಂದು ಪಾತ್ರ ಮಾಡಿದ್ದಳು. ಆ ನಂತರ ಕೂಡಿ ಬಂದಿದ್ದದ್ದು ಉಪ್ಪೇನಾ ಚಿತ್ರದ ನಾಯಕಿಯಾಗೋ ಅವಕಾಶ. ಅದರಲ್ಲಿ ಮೊದಲ ಅನುಭವ ಎಂಬುದನ್ನೇ ಮರೆಮಾಚುವಂತೆ ಕೃತಿ ಅದ್ಭುತವಾಗಿ ನಟಿಸಿದ್ದಳು. ಆ ಚಿತ್ರ ಸೂಪರ್ ಹಿಟ್ ಆಗಿ ನೂರು ಕೋಟಿಗಳಷ್ಟು ಕಲೆಕ್ಷನ್ನು ಮಾಡುವ ಮೂಲಕ ದಾಖಲೆ ಬರೆದಿತ್ತು. ಆ ನಂತರ ಮತ್ತೊಂದಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಕೃತಿ ಈ ಹಿಂದೆ ಒಂದೆರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದಳಾದರೂ ನಿರೀಕ್ಷಿತ ಗೆಲುವು ಸಿಕ್ಕಿರಲಿಲ್ಲ. ಈ ಬಾರಿ ಸೂರ್ಯನ ಸಾಥಿಯಾಗಿ ಮಹಾ ಗೆಲುವು ದಕ್ಕಿಸಿಕೊಳ್ಳುವ ಮಹತ್ವಾಕಾಂಕ್ಷೆ ಕೃತಿಗಿದೆ.