ಈಗೊಂದಷ್ಟು ವರ್ಷಗಳಿಂದೀಚೆಗೆ ಕಿಚ್ಚಾ ಸುದೀಪ್ ಅಭಿಮಾನಿ ಪಡೆಯ ನಡುವೆ ಅದೊಂದು ತೆರೆನಾದ ಅಸಮಾಧಾನ ಹೊಗೆಯಾಡುತ್ತಿದೆ. ಅದೊಂಥರಾ ಪ್ರೀತಿಪೂರ್ವಕ ಅಸಹನೆ ಅಂದರೂ ತಪ್ಪೇನಿಲ್ಲ. ಯಾವ ನಟನ ಅಭಿಮಾನಿಗಳೇ ಆದರೂ, ಒಂದರ ಹಿಂದೊಂದರಂತೆ ಸಿನಿಮಾಗಳು ತೆರೆಗಂಡು, ಅವೆಲ್ಲವೂ ಹಿಟ್ ಆಗಿ, ಸಂಭ್ರಮ ಹಬ್ಬಿಕೊಳ್ಳಬೇಕೆಂದೇ ಬಯಸುತ್ತಾರೆ. ಈ ನಿಟ್ಟಿನಲ್ಲಿ ನೋಡೋದಾದರೆ, ಕಿಚ್ಚನ ಅಭಿಮಾನಿಗಳು ಕೊಂಚ ಕಸಿವಿಸಿಗೊಂಡಿರೋದರಲ್ಲಿ ಯಾವ ಅತಿಶಯವೂ ಇಲ್ಲ. ಯಾಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಬಿಗ್ ಬಾಸ್ ಶೋಗಳಲ್ಲಿ ಕಳೆದು ಹೋಗಿದ್ದಾರೆ. ಅದರ ನಡುವಲ್ಲೊಂದಷ್ಟು ಬಿಡುವು ಸಿಕ್ಕ ಘಳಿಗೆಯಲ್ಲಿ ಸಿನಿಮಾ ಮಾಡುತ್ತಾ ಎಂಬಂತಾಗಿ ಬಿಟ್ಟಿದೆ.
ಈ ವರ್ಷ ಸುದೀಪ್ ಮತ್ತೆ ಹಳೇ ಆವೇಗದೊಂದಿಗೆ ಆಕ್ಟೀವ್ ಆಗುತ್ತಾರೆಂಬ ನಿರೀಕ್ಷೆ ಇತ್ತು. ಆದರದು ಸಿನಿಮಾಗಳ ವಿಚಾರದಲ್ಲಿ ನಿಜವಾಗಿಲ್ಲ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ತೆರೆಗಂಡು, ಒಂದು ಮಟ್ಟದಲ್ಲಿ ಗೆಲುವು ದಾಖಲಿಸಿದೆಯಾದರೂ, ಅದೇನು ಸಮ್ಮೋಹಕ ಗೆಲುವೇನಲ್ಲ. ಆ ಸಿನಿಮಾ ಬಗ್ಗೆ ಹೊತ್ತಿಕೊಂಡಿದ್ದ ಕ್ರೇಜ್ಗೂ, ಅದು ಮೂಡಿ ಬಂದಿದ್ದ ರೀತಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಅದೇಕೋ, ಅನೂಪ್ ಭಂಡಾರಿ ದೊಡ್ಡ ಮಟ್ಟದಲ್ಲಿ ಗೆಲುವು ಕಾಣೋ ಅವಶಾವನ್ನು ಸ್ವಲ್ಪದರಲ್ಲಿಯೇ ಮಿಸ್ ಮಾಡಿಕೊಂಡಿದ್ದರು. ಸುದೀಪ್ ಕೂಡಾ ಅವರ ಸಾಮಥ್ರ್ಯಕ್ಕೆ ತಕ್ಕುದಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಾಧ್ಯವಾಗಿಲ್ಲ.
ಹಾಗಂತ, ಅದನ್ನು ಕಿಚ್ಚನಿಗೆದುರಾದ ಹಿನ್ನಡೆ ಅಂತ ಭಾವಿಸಲು ಸಾಧ್ಯವಿಲ್ಲ. ಯಾಕೆಂದರೆ, ಓರ್ವ ನಟನಾಗಿ, ನಿರ್ದೇಶಕನಾಗಿ ಅಚ್ಚರಿದಾಯಕವಾಗಿ ಕಮಾಲ್ ಮಾಡಬಲ್ಲ ಶಕ್ತಿ ಖಂಡಿತಾ ಅವರಲ್ಲಿದೆ. ಇದೆಲ್ಲದರಾಚೆಗೆ ಇದೀಗ ಮುಂಬರುವ ವರ್ಷದಿಂದ ಕಿಚ್ಚಾಭಿಮಾನಿಗಳಿಗೆ ಅಕ್ಷರಶಃ ಹಬ್ಬವಾಗಬಲ್ಲ ಮುನ್ಸೂಚನೆಗಳು ಸಿಗಲಾರಂಭಿಸಿವೆ. ಇನ್ನೇನು ಈ ಸೀಜನ್ನಿನ ಬಿಗ್ಬಾಸ್ ಶೋ ಮುಗಿಯುತ್ತಾ ಬಂದಿದೆ. ಆ ಬ್ಯುಸಿ ಶೆಡ್ಯೂಲಿನ ನಡುವೆಯೂ ಕಿಚ್ಚಾ ತಮ್ಮ ಸಿನಿಮಾ ಬದುಕಿನತ್ತ ಗಂಭೀರವಾಗಿಯೇ ದೃಷ್ಟಿ ನೆಟ್ಟಿದ್ದಾರೆ. ಅದರ ಫಲವಾಗಿ ಇದೀಗ ಅಭಿಮಾನಿ ಬಳಗವೆಲ್ಲ ಖುಷಿಗೊಳ್ಳುವಂಥಾ ಸುದ್ದಿಯೊಂದು ಹೊರಬಿದ್ದಿದೆ. ಅದರನ್ವಯ ಹೇಳೋದಾದರೆ, ಮುಂದಿನ ವರ್ಷದಿಂದ ಕಿಚ್ಚ ಅಭಿಮಾನಿಗಳ ಮನದಾಸೆಯಂತೆಯೇ ಮೈ ಕೊಡವಿಕೊಂಡು ಅಬ್ಬರಿಸಲಿದ್ದಾರೆ. ಅದು ಖಂಡಿತವಾಗಿಯೂ ಪ್ಯಾನಿಂಡಿಯಾ ಮಟ್ಟದಲ್ಲಿ ಮಾರ್ಧನಿಸಲಿದೆ!
ಸುದೀಪ್ ಮುಂದ್ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆಂಬುದೇ ಸದ್ಯಕ್ಕೆ ಪ್ರಶ್ನೆಯಾಗಿ ಉಳಿದುಕೊಂಡಿತ್ತು. ಆ ಉತ್ತರಕ್ಕಾಗಿ ಅಭಿಮಾನಿಗಳೆಲ್ಲ ಕಾತರದಿಂದ ಕಾದು ಕೂತಿದ್ದಾರೆ. ಈಗ ಹರಿದಾಡುತ್ತಿರೋ ಸುದ್ದಿ ಮತ್ತು ಅದರ ಹಿಂಚುಮುಂಚಿನಲ್ಲಿನ ಪಲ್ಲಟಗಳು ಒಂದು ಮಟ್ಟಿಗೆ ಉತ್ತರವಾಗಿ ನಿಲ್ಲುವಂತಿವೆ. ತಮಿಳಿನಲ್ಲಿ ಖ್ಯಾತಿವೆತ್ತಿರುವ ಪ್ರಸಿದ್ಧ ಸಂಸ್ಥೆಯೊಂದು ಸುದೀಪ್ ಸಿನಿಮಾ ನಿರ್ಮಾಣ ಮಾಡೋದು ಪಕ್ಕಾ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಪೊನ್ನಿಯಿನ್ ಸೆಲ್ವನ್ ಸೇರಿದಂತೆ, ಅನೇಕ ಹಿಟ್ ಸಿನಿಮಾಗಳನ್ನು ಈ ನಿರ್ಮಾಣ ಸಂಸ್ಥೆ ರೂಪಿಸಿದೆ. ತಮಿಳುನಾಡಿನ ಮಟ್ಟಿಗೆ ಲೈಕಾ ಪ್ರೊಡಕ್ಷನ್ಸ್ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ. ಅದರ ಕಡೆಯಿಂದ ಪ್ಯಾನಿಂಡಿಯಾ ಸಿನಿಮಾವೊಂದರಲ್ಲಿ ನಟಿಸಲು ಸುದೀಪ್ ಒಪ್ಪಿಗೆ ಸೂಚಿಸಿದ್ದಾರೆ. ಕನ್ನಡ ತಮಿಳು ಸೇರಿದಂತೆ ಒಂದಷ್ಟು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ.
ಒಂದು ಮೂಲದ ಪ್ರಕಾರ, ಈ ಚಿತ್ರಕ್ಕೆ ಹೊಸಾ ವರ್ಷದ ಮೊದಲ ಭಾಗದಲ್ಲಿಯೇ ಅಧಿಕೃತ ಸ್ವರೂಪ ಸಿಗಲಿದೆ. ನಿರ್ದೇಶಕರ್ಯಾರು ಎಂಬುದೂ ಸೇರಿದಂತೆ, ಮತ್ತೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ. ಇನ್ನೇನು ಬಿಗ್ ಬಾಸ್ ಶೋ ಮುಗಿಯುತ್ತಾ ಬಂದಿದೆ. ಒಂದಷ್ಟು ಕಾಲ ರೆಸ್ಟ್ ತೆಗೆದುಕೊಂಡು, ಹೊಸಾ ವರ್ಷದ ಆರಂಭದಲ್ಲಿಯೇ ಕಿಚ್ಚ ಹೊಸಾ ಸಿನಿಮಾದತ್ತ ಹೊರಳಿಕೊಳ್ಳಲಿದ್ದಾರೆ. ಹಾಗೆಂದಾಕ್ಷಣ ಸುದೀಪ್ ನಟಿಸುತ್ತಿರೋದು ಇದೊಂದೇ ಸಿನಿಮಾದಲ್ಲಿ ಅಂದುಕೊಳ್ಳಬೇಕಿಲ್ಲ. ಇನ್ನೂ ಒಂದಷ್ಟು ಚಿತ್ರಗಳ ಮಾತುಕತೆಗಳು ಚಾಲ್ತಿಯಲ್ಲಿವೆ. ಅವೆಲ್ಲದರ ವಿವರಗಳು ಮುಂದಿನ ವರ್ಷದಲ್ಲಿ ಹಂತ ಹಂತವಾಗಿ ಪ್ರೇಕ್ಷಕರನ್ನು ಎದುರುಗೊಳ್ಳಲಿವೆ.
ಸುದೀಪ್ ಬಿಗ್ಬಾಸ್ ಶೋನತ್ತಲೇ ಹೆಚ್ಚು ಗಮನ ಹರಿಸೋದನ್ನು ಬಿಟ್ಟು ಸಿನಿಮಾದತ್ತ ಮರಳಬೇಕೆಂಬುದು ಬಹುತೇಕರ ಆಸೆಯಾಗಿತ್ತು. ಅದಕ್ಕೆ ಸರಿಯಾಗಿ ಬಿಗ್ಬಾಸ್ ಶೋಗಳು ಕೂಡಾ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿವೆ. ಅದಿನ್ನೂ ಕೊಂಚ ಚಾಲ್ತಿಯಲ್ಲಿದೆ ಅಂದರೆ, ಅದಕ್ಗಕೆ ಪ್ರಧಾನ ಕಾರಣ ಸುದೀಪ್ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ, ಅವರು ಆ ಶೋನಲ್ಲಿಯೇ ಮುಂದುವರೆಯೋದು ಅಭಿಮಾನಿಗಳಿಗೂ ಅಷ್ಟಾಗಿ ಇಷ್ಟವಾದಂತಿಲ್ಲ. ಮುಂದಿನ ವರ್ಷದಿಂದ ಸುದೀಪ್ ಅಭಿಮಾನಿಗಳ ಮನದಿಂಗಿತಕ್ಕೆ ತಕ್ಕುದಾಗಿ ನಡೆದುಕೊಳ್ಳುತ್ತಾರಾ? ನಟನೆಯ ಜೊತೆಗೆ ನಿರ್ದೇಶನಕ್ಕೂ ಮರಳಲಿದ್ದಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲಿಯೇ ಉತ್ತರ ಸಿಗಲಿದೆ. ಅಂತೂ ಸುದೀಪ್ ಕಡೆಯಿಂದ ಮುಂದಿನ ವರ್ಷವಿಡೀ ಅಭಿಮಾನಿಗಳಿಗೆ ಹಬ್ಬವಾಗೋದಂತೂ ಗ್ಯಾರೆಂಟಿ!