ನಾನಾ ದಿಕ್ಕಿನಿಂದ, ಹಲವಾರು ಆಲೋಚನೆಗಳು ಹರಿಉ ಬಂದು ಸಂಗಮಿಸಿರೆ ಮಾತ್ರವೇ ಯಾವುದೇ ಚಿತ್ರರಂಗದ ಗೆಲುವಿನ ಹಿವಿಗೊಂದು ಹೊಸಾ ಓಘ ಸಿಗುತ್ತದೆ. ಕನ್ನಡ ಚಿತ್ರರಂಗವೀಗ ಅದರ ಪರ್ವಕಾಲವೊಂದನ್ನು ಸಂಭ್ರಮಿಸುತ್ತಿದೆ. ಭೂತಾರಾಧನೆಯ ಅಸ್ಮಿತೆ ಹೊಂದಿರುವ ತುಳುನಾಡ ಕಥನವನ್ನೊಳಗೊಂಡಿದ್ದ ಕಾಂತಾರವೀಗ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಆ ಚಿತ್ರದ ಮೂಲಕ ಪಂಜುರ್ಲಿ ದೈವದ ಕಾರಣೀಕ ಜಗದಗಲ ಹಬ್ಬಿಕೊಂಡಿದೆ. ಅದೇ ತುಳುನಾಡಮಣ್ಣಿನಲ್ಲಿ ಜೀವಪಡೆದು, ಇದೀಗ ನಾನಾ ದಿಕ್ಕುಗಳತ್ತ ಪ್ರಭೆ ಬೀರಿರುವ ಮತ್ತೊಂದು ಕಾರಣೀಕದ ದೈವ ಕೊರಗಜ್ಜ. ಈಗ ಕೊರಗಜ್ಜನ ರೋಚಕ ಕಥನ ಚಿತ್ರರೂಪ ಧರಿಸಿಕೊಂಡಿದೆ. ಅದು ಕರಿ ಹೈದ ಕರಿ ಅಜ್ಜ ಚಿತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ.
ಸರಿಸುಮಾರು ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ಕೊರಗಜ್ಜ ದೈವದ ಬಗ್ಗೆ ಈಗ ನಾನಾ ದಿಕ್ಕುಗಳಲ್ಲಿ ಚರ್ಚೆಗಳಾಗುತ್ತಿವೆ. ಕರುನಾಡಿನ ನಾನಾ ದಿಕ್ಕುಗಳಿಂದ ಭಕ್ತರು ಕೊರಗಜ್ಜನ ದರ್ಶನಕ್ಕಾಗಿ ದಕ್ಷಿಣಕನ್ನಡದತ್ತ ಬಂದು ಹೋಗಲಾರಂಭಿಸಿದ್ದಾರೆ. ಇದೇ ಹೊತ್ತಿನಲ್ಲಿ ಮೈಸೂರು ಮುಂತಾದೆಡೆಗಳಲ್ಲಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿ ಕಾಸು ಗೆಬರುವ ದಂಧೆಗಳೂ ಕೂಡಾ ಜೋರಾಗಿಯೇ ನಡೆಯುತ್ತಿವೆ. ಈ ಕುರಿತಾದ ಪರ ವಿರೋಧದ ಚರ್ಚೆಗಳೂ ಕೂಡಾ ವ್ಯಾಪಕವಾಗಿ ನಡೆಯುತ್ತಿವೆ. ಈ ಎಲ್ಲ ವಿಯಮಾನಗಳಿಂದಾಗಿ ನಿಜಕ್ಕೂ ಕೊರಗಜ್ಜ ಯಾರು? ಆ ದೈವದ ಹಿನ್ನೆಲೆಗಳೇನು ಅಂತೆಲ್ಲ ಜನ ಕುತೂಹಲಗೊಂಡಿದ್ದಾರೆ. ಅದೆಲ್ಲದಕ್ಕೂ ಅಧಿಕೃತವಾಗಿ ಉತ್ತರವೆಂಬಂತೆ, ಕೊರಗಜ್ಜನ ಅಸಲೀ ಕಥಾನಕದೊಂದಿಗೆ ರೂಪುಗೊಂಡಿರುವ ಚಿತ್ರ ಕರಿ ಹೈದ ಕರಿ ಅಜ್ಜ!
ಈಗಾಗಲೇ ಹಂಟರ್ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವವರು ತ್ರಿವಿಕ್ರಮ್ ಸಾಫಲ್ಯ. ಮೂಲತಃ ತುಳುನಾಡಿನವರೇ ಆದ ಅವರಿಗೆ, ಕೊರಗಜ್ಜನ ಅಸಲೀ ಕಥಾನಕವನ್ನು ಚಿತ್ರವಾಗಿಸಬೇಕೆಂಬುದು ಬಹುಕಾಲದ ಕನಸಾಗಿತ್ತಂತೆ. ಹಾಗಂತ ಅದೇನು ಸಲೀಸಿನ ಸಂಗತಿಗಾಯಿರಲಿಲ್ಲ. ಅದಕ್ಕೆ ಕೊರಗತನಿಯನ ಮೂಲ ಹುಡುಕಿಕೊಂಡು ಹೋಗಬೇಕಿತ್ತು. ಹಾಗೆ ಸಿಕ್ಕ ಮಾಹಿತಿಯನ್ನು ಸತ್ಯ ಮುಕ್ಕಾಗದಂತೆ ಒರೆಗೆ ಹಚ್ಚಿ ಪರಾಮರ್ಶಿಸಬೇಕಿತ್ತು. ಆ ಸಲುವಾಗಿ, ಖುದ್ದು ಕೊರಗ ಸಮುದಾಯದ ಹಿರೀಕರನ್ನು, ಪಂಡಿತರನ್ನು ಭೇಟಿಯಾಗಿ, ಮಾತುಕತೆ ನಡೆಸಿ, ಕೊರಗಜ್ಜನ ಕಥನವನ್ನು ಸಿದ್ಧಗೊಳಿಸಲಾಗಿದೆ. ಕಳೆದ ವರ್ಷದ ಡಿಸೆಂಬರಿನ ಹೊತ್ತಿಗೆಲ್ಲ ಈ ಕಥೆ ಪೂರ್ಣವಾಗಿ ತಯಾರಾಗಿತ್ತಂತೆ.
ಈ ಚಿತ್ರವನ್ನು ತುಳುನಾಡ ಸೀಮೆಯಲ್ಲಿ ಹೆಸರುವಾಸಿಯಾಗಿರುವ ಸುಧೀರ್ ಅತ್ತಾವರ ನಿರ್ದೇಶನ ಮಾಡಿದ್ದಾರೆ. ಇದರ ಪ್ರತೀ ಪಾತ್ರಗಳಿಗೂ ಕೂಡಾ ಅಳೆದೂ ತೂಗಿ, ಅದಕ್ಕೊಪ್ಪುವ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕೊರಗಜ್ಜನಾಗಿ ಭರತ್ ಸೂರ್ಯ ನಟಿಸಿದ್ದಾರೆ. ಅದೆಷ್ಟೋ ಹುಡುಕಾಟದ ನಂತರ ಅವರು ಸದರಿ ಪಾತ್ರಕ್ಕೆ ನಿಕ್ಕಿಯಾಗಿದ್ದಾರೆ. ಅದರಲ್ಲಿನ ಅರಸನ ಪಾತ್ರ ಪ್ರಧಾನವಾದದ್ದು. ಅದಕ್ಕೆ ಹಾಲಿವುಡ್, ಬಾಲಿವುಡ್ ಮಟ್ಟದಲ್ಲಿ ಹೆಸರು ಮಾಡಿರುವ ಕಬೀರ್ ಬೇಡಿಯೇ ಸೂಕ್ತ ಎಂಬ ನಿರ್ದಾರಕ್ಕೆ ನಿರ್ಮಾಪಕರು ಬಂದಿದ್ದರು. ಅಪ್ರೋಚ್ ಮಾಡಿದಾಗ, ಖುದ್ದು ಕಬೀರ್ ಖುಷಿಪಟ್ಟು ಒಪ್ಪಿಕೊಂಡಿದ್ದಾರೆ. ಆ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ.
ಇನ್ನುಳಿದಂತೆ ಕೊರಗಜ್ಜನ ಸಾಕುತಾಯಿಯಾದ ಪಂಜದಾಯೆ ಎಂಬ ಪಾತ್ರವನ್ನು ಶ್ರುತಿ ನಿರ್ವಹಿಸಿದ್ದಾರೆ. ರಾಣಿಯಾಗಿ ಹಿರಿಯ ನಟಿ ಭವ್ಯ ಬಣ್ಣ ಹಚ್ಚಿದ್ದಾರೆ. ನವೀನ್ ಪಡೀಲ್ ಕೂಡಾ ಪ್ರಧಾನ ಪಾತ್ರದಲ್ಲಿ ಕಾನಿಸಿಕೊಂಡಿದ್ದಾರೆ. ಕಾಂತಾರ ಖ್ಯಾತಿಯ ದೀಪಕ್ ರೈ, ಪ್ರತಿಮಾ ನಾಯಕ್ ಮುಂತಾದವರೂ ತಾರಾಗಣದಲ್ಲಿದ್ದಾರೆ. ಬಾಲಿವುಡ್ ಮಟ್ಟದಲ್ಲಿ ಹೆಸರಾಗಿರುವ ಸಂದೀಪ್ ಸೊಡಾರ್ಕರ್ ಗುಳಿಗನಾಗಿ ಅಬ್ಬರಿಸಿದ್ದರೆ, ಸಿಕೆ ಕುಡ್ಲ ಪಂಜುರ್ಲಿಯಾಗಿ ಮೋಡಿ ಮಾಡಲಿದ್ದಾರೆ. ಈ ಚಿತ್ರ ಶೀಘ್ರದಲ್ಲಿಯೇ ತೆರೆಗಾಣಲಿದೆ.